ತಮಿಳುನಾಡು ದೇಶ ವಿರೋಧಿಗಳ ಆಶ್ರಯ ತಾಣವಾಗಿದೆ : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

ವರದಿಗಾರ (ಆ.25): ತಮಿಳುನಾಡು, ದೇಶ ವಿರೋಧಿಗಳ ಆಶ್ರಯತಾಣವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿಕೆ ನೀಡಿದ್ದಾರೆ.
ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುವ ಜನರಿಗೆ ರಾಜ್ಯ ಸರ್ಕಾರ ಮತ್ತು ಡಿಎಂಕೆ ಆಶ್ರಯ ನೀಡುತ್ತಿದೆ ಎಂದು ಜೆ ಪಿ ನಡ್ಡಾ ಆರೋಪಿಸಿದ್ದಾರೆ.
ದೇಶದ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿರುವಂತಹ ಜನರಿಗೆ ತಕ್ಕ ಪಾಠ ಕಲಿಸಲು ನಾವು ಮುಂದಾಗಬೇಕು ಎಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಜೆಪಿ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯನ್ನುದ್ದೇಶಿಸಿ ನಡ್ಡಾ ಹೇಳಿದರು.
ಡಿಎಂಕೆ ವಿರುದ್ಧದ ವಾಗ್ದಾಳಿ ನಿರೀಕ್ಷಿತವಾಗಿದ್ದರೂ ಎಐಎಡಿಎಂಕೆ ಸರ್ಕಾರದ ವಿರುದ್ಧದ ಟೀಕೆ ಆಶ್ಚರ್ಯಕರವಾಗಿದೆ. ಮಾತ್ರವಲ್ಲ ಇದು ಹಲವು ವ್ಯಾಖ್ಯಾನಗಳಿಗೆ ಕಾರಣವಾಗಿದೆ. ಮುಂಬರುವ ಚುನಾವಣೆಯಲ್ಲಿ ಎಐಎಡಿಎಂಕೆ ಮೈತ್ರಿ ಕಡಿದು ಬಿಜೆಪಿ, ಸ್ವತಂತ್ರವಾಗಿ ಸ್ಪರ್ಧಿಸುವ ಇರಾದೆಯಲ್ಲಿದೆ. ಮಾತ್ರವಲ್ಲ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾ ಮಲೈ ಬಿಜೆಪಿ ಸೇರಿದ ಬೆನ್ನಲ್ಲೇ ಎಐಎಡಿಎಂಕೆ ವಿರುದ್ಧ ಟೀಕೆ ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಮುಂಬರುವ ಚುನಾವಣೆಯಲ್ಲಿ ಎಐಎಡಿಎಂಕೆ ಮೈತ್ರಿ ಕಡಿದುಕೊಂಡು ಅಣ್ಣಾ ಮಲೈ ನೇತೃತ್ವದಲ್ಲಿ ಚುನಾವಣೆ ಎದುರಿಸುವ ಸೂಚನೆ ಕಂಡುಬರುತ್ತಿದೆ.
ಮುರುಗ ಭಗವಾನ್ ವಿರುದ್ಧ ಕರುಪ್ಪರ್ ಕೂಟಮ್ ನೀಡಿರುವ ವಿವಾದಾತ್ಮಕ ಹೇಳಿಕೆಯ ವಿಡಿಯೋವನ್ನು ಪ್ರಸ್ತಾಪಿಸಿದ ಅವರು, ಪಕ್ಷದ ರಾಜ್ಯ ಘಟಕವು ಶಾಂತಿಯುತವಾಗಿ ಪ್ರತಿಭಟಿಸುವ ಮೂಲಕ ರಾಷ್ಟ್ರೀಯತಾವಾದಿ ಭಾವನೆಗಳನ್ನು ಪ್ರತಿನಿಧಿಸುತ್ತದೆ. ಮಾತ್ರವಲ್ಲ ಸಮಾಜಕ್ಕೆ ಎದುರಾಗುವ ಬೆದರಿಕೆಯ ಬಗ್ಗೆ ರಾಜ್ಯದ ಜನರಿಗೆ ತಿಳಿಸುವ ಕೆಲಸ ಮಾಡಲಿದೆ ಎಂದು ಹೇಳಿದರು.
ಕರುಪ್ಪರ್ ಕೂಟ್ಟಂ ಕಾರ್ಯಕರ್ತರ ವಿರುದ್ಧ ಕ್ರಮಕೈಗೊಳ್ಳಲು ಹಿಂದೇಟು ಹಾಕಿರುವ ರಾಜ್ಯ ಸರ್ಕಾರದ ಕ್ರಮ ಸರಿಯಲ್ಲ. ಇದು ಬಿಜೆಪಿ ನಾಯಕತ್ವದೊಂದಿಗೆ ಸರಿಹೊಂದುವುದಿಲ್ಲ ಎಂದು ಹೇಳುವ ಮೂಲಕ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ತಮಿಳುನಾಡು ಕ್ರಾಂತಿಕಾರಿಗಳ ನೆಲಬೀಡು. ದೇಶದ ಪ್ರಸಿದ್ಧ ಉದ್ಯಮಿಗಳು ಮತ್ತು ರಾಷ್ಟ್ರದ ಬೆಳವಣಿಗೆಗೆ ಕೊಡುಗೆ ನೀಡಿದ ಕೈಗಾರಿಕೆಗಳ ತಾಣ ಇದಾಗಿದೆ ಎಂದು ಅವರು ಹೇಳಿದರು.
“ರಾಜ್ಯದ ಆಡಳಿತ ಮತ್ತು ರಾಜಕೀಯ ಪಕ್ಷಗಳು ವಿಭಜಕ ಶಕ್ತಿಗಳ ವಿರುದ್ಧ ಜಾಗರೂಕರಾಗಿರಬೇಕು. ಈ ಶಕ್ತಿ ಬಲಗೊಳ್ಳದಂತೆ ತಡೆಯಬೇಕಾಗಿದೆ ಎಂದು ಹೇಳಿದರು.
ಡಿಎಂಕೆ ಯಾವಾಗಲೂ ದೇಶ ವಿರೋಧಿ ಶಕ್ತಿಗಳಿಗೆ ಬೆಂಬಲ ನೀಡಿದೆ ಮತ್ತು ಅದು ಅಭಿವೃದ್ಧಿ ವಿರೋಧಿಯೂ ಆಗಿದೆ ಎಂದು ಅವರು ಡಿಎಂಕೆ ವಿರುದ್ಧ ಹರಿಹಾಯ್ದರು.
