ರಾಜ್ಯ ಸುದ್ದಿ

ಬೆಂಗಳೂರು ಗಲಭೆ; ನ್ಯಾಯಾಂಗ ತನಿಖೆಗೊಳಪಡಿಸಿ: ಎಸ್‍ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್

ವರದಿಗಾರ(ಆ.25): ಬೆಂಗಳೂರಿನ ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಗಲಭೆ ಪ್ರಕರಣದ ವಿಧ್ವಂಸಕ ಕೃತ್ಯವನ್ನು ಎಸ್‍ಡಿಪಿಐ ಪಕ್ಷದ ಮೇಲೆ ಗೂಬೆ ಕೂರಿಸುವ ಪ್ರಯತ್ನಗಳು ಘಟನೆಯ ಪ್ರಾರಂಭದಿಂದಲೇ ನಡೆಯುತ್ತಿದೆ. ಎಸ್‍ಡಿಪಿಐ ಅಹಿಂಸೆಯನ್ನು ಪ್ರತಿಪಾದಿಸುತ್ತದೆ. ದ್ವೇಷದಲ್ಲಿ ನಂಬಿಕೆಯಿಟ್ಟುಕೊಂಡ ಪಕ್ಷವಲ್ಲ ಎಸ್‍ಡಿಪಿಐ. ಘಟನೆಯ ಸತ್ಯಾಸತ್ಯತೆಗಾಗಿ ಪ್ರಕರಣವನ್ನು ನ್ಯಾಯಾಂಗ ತನಿಖೆಗೊಳಪಡಿಸುವಂತೆ ಎಸ್‍ಡಿಪಿಐ ಕರ್ನಾಟಕ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಸರಕಾರವನ್ನು ಆಗ್ರಹಿಸಿದ್ದಾರೆ.

ಅವರು ಬೆಂಗಳೂರಿನ ಎಸ್‍ಡಿಪಿಐ ಪಕ್ಷದ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ‘ಘಟನೆಯಲ್ಲಿ ತಪ್ಪಿತಸ್ಥರು ಯಾರೇ ಅಗಿದ್ದರೂ ಅವರಿಗೆ ಶಿಕ್ಷೆಯಾಗಲಿ. ರಾಜ್ಯದಲ್ಲಿ ಬಿಜೆಪಿಯು ದ್ವೇಷವನ್ನು ಬಿತ್ತುವ, ಅದಕ್ಕೆ ಪ್ರಚೋದಿಸುವ ಕೃತ್ಯದಲ್ಲಿ ನಿರತವಾಗಿದೆ. ಮತಗಳನ್ನು ಬೇಟೆಯಾಡುವುದಕ್ಕಾಗಿ ಬಿಜೆಪಿ ಜನರ ಮಧ್ಯೆ ಬೆಂಕಿಯಿಡುತ್ತಿದೆ’. ಬೆಂಗಳೂರು ಘಟನೆಯನ್ನು ನ್ಯಾಯಾಂಗ ತನಿಖೆಗೆ ಒಳಪಡಿಸುವಂತೆ ಈ ಸಂದರ್ಭ ಅವರು ಒತ್ತಾಯಿಸಿದ್ದಾರೆ.

ಇಲ್ಯಾಸ್ ತುಂಬೆ ಮಾತನಾಡುತ್ತಾ, ‘ಕೋವಿಡ್ ನಿರ್ವಹಣೆಯಲ್ಲಿ ಸರಕಾರವು ಸಂಪೂರ್ಣ ವೈಫಲ್ಯಗೊಂಡಿದ್ದು, ಅದನ್ನು ಮರೆಮಾಚುವ ಸಲುವಾಗಿ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನ ನಡೆಸಲಾಗುತ್ತಿದೆ. ಅದಲ್ಲದೆ ತೆರೆಮರೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರನ್ನು ಕೆಳಗಿಸುವ ಪ್ರಯತ್ನವೂ ನಡೆಯುತ್ತಿದೆ’ ಎಂದು ಹೇಳಿದ್ದಾರೆ.

ಬೆಂಗಳೂರು ಗಲಭೆಗೆ ಕಾರಣರಾಗಿರುವ ನವೀನ್ ಎಂಬಾತನನ್ನು ರಕ್ಷಿಸುವ ಪ್ರಯತ್ನ ನಡೆಸಲಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿರುವ ಇಲ್ಯಾಸ್ ಮುಹಮ್ಮದ್, ‘ಗಲಭೆಯ ಹಿಂದೆ ವ್ಯವಸ್ಥಿತವಾದ ಷಡ್ಯಂತ್ರವಿದೆ. ನವೀನನ್ನು ಅಮಾಯಕನೆಂದು ಚಿತ್ರೀಕರಿಸಲಾಗುತ್ತಿರುವುದರಿಂದ ಹಿಂದಿನ ಉದ್ದೇಶವೇನು?’ ಎಂದು ಪ್ರಶ್ನಿಸಿದ್ದಾರೆ.

ಇತ್ತೀಚೆಗೆ ರಾಜ್ಯದಲ್ಲಿ ಕೋಮು ವಿಷ ಬೀಜ ಬಿತ್ತುವ ಪ್ರಕರಣಗಳು ವರದಿಯಾಗುತ್ತಿದ್ದು ಅದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ ಶೃಂಗೇರಿ ಶಂಕರಾಚಾರ್ಯ ಪ್ರತಿಮೆಗೆ ಬಾವುಟ ಹಾಕಿರುವ ಘಟನೆ, ಮಂಗಳೂರು ಪಂಪ್ವೆಲ್ ಮಸೀದಿಗೆ ಕಲ್ಲು ತೂರಾಟ, ಮಂಗಳೂರು ವಕ್ಫ್ ಭವನಕ್ಕೆ ಕಲ್ಲು ತೂರಾಟ ಮುಂತಾದ ಪ್ರಕರಣಗಳು.

ಸರಕಾರವು ಜನರ ಹಿತಾಸಕ್ತಿಗಾಗಿ ಕೆಲಸ ನಿರ್ವಹಿಸುತ್ತಿಲ್ಲ. ಬೆಂಗಳೂರು ಘಟನೆಯ ಹಿಂದೆ ಕಾಣದ ಕೈಗಳ ಕೈವಾಡವಿದೆ. ಮತಗಳ ದ್ರುವೀಕರಣದ ಅಜೆಂಡಾವಿದೆ ಎಂದು ಅವರು ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ, ರಾಜ್ಯ ಸಮಿತಿ ಸದಸ್ಯ ಫಯಾಝ್ ಅಹ್ಮದ್, ಬಿಬಿಎಂಪಿ ಕಾರ್ಪೋರೇಟರ್ ಮುಜಾಹಿದ್ ಪಾಶಾ ಉಪಸಸ್ಥಿತರಿದ್ದರು.

ಎಸ್.ಡಿ.ಪಿ.ಐ ಪತ್ರಿಕಾಗೋಷ್ಠಿ:

ಮೋದಿ ಸರಕಾರವು ರೈತ ವಿರೋಧಿಯೇ?

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group