ರಾಷ್ಟ್ರೀಯ ಸುದ್ದಿ

ಶ್ರೀಶೈಲಂ ಬೆಂಕಿ ಅವಘಡದ ವೇಳೆ ಸಾವನ್ನಪ್ಪುವ ಮುನ್ನ ನಾಲ್ಕು ಜೀವ ರಕ್ಷಿಸಿದ ಉಝ್ಮಾ ಫಾತಿಮಾ; ಸಾವಿನಲ್ಲೂ ಸಾರ್ಥಕತೆ ಮೆರೆದ ಸಹಾಯಕ ಇಂಜಿನಿಯರ್

ವರದಿಗಾರ (ಆ.23): ಇತ್ತೀಚೆಗೆ ತೆಲಂಗಾಣದ ಶ್ರೀಶೈಲಂ ಜಲವಿದ್ಯುತ್ ಸ್ಥಾವರದಲ್ಲಿ ಬೆಂಕಿ ಅವಘಡದಲ್ಲಿ ಮೃತಪಟ್ಟ ಸಹಾಯಕ ಇಂಜಿನಿಯರ್ 26 ವರ್ಷ ವಯಸ್ಸಿನ ಉಝ್ಮಾ ಫಾತಿಮಾ ತಮಗೆ ಬೆಂಕಿ ತಗುಲುವ ಮುನ್ನ ನಾಲ್ವರನ್ನು ರಕ್ಷಿಸಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ಉಝ್ಮಾ ಫಾತಿಮಾ ಅವರ ತಂದೆ ಮುಹಮ್ಮದ್ ಝುಬೈರ್ ಹೈದರಾಬಾದ್‌ನ ಚಪ್ಪಲ್ ಬಝಾರ್‌ನಲ್ಲಿ ಚಪ್ಪಲಿ ವ್ಯಾಪಾರ ಮಾಡುತ್ತಾರೆ. ಅವರ ಮೂರು ಪುತ್ರಿಯರ ಪೈಕಿ ಉಝ್ಮಾ ಫಾತಿಮಾ ಎರಡನೇ ಪುತ್ರಿಯಾಗಿದ್ದು, ಅವಿವಾಹಿತರಾಗಿದ್ದರು.

ಉಝ್ಮಾ ಫಾತಿಮಾ ಅವರು ಕಳೆದ ನಾಲ್ಕು ವರ್ಷಗಳಿಂದ ಶ್ರೀಶೈಲಂ ವಿದ್ಯುತ್ ಸ್ಥಾವರದಲ್ಲಿ ಸಹಾಯಕ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಸ್ಥಾವರದಲ್ಲಿ ಗುರುವಾರ ರಾತ್ರಿ ಉಂಟಾದ ಬೆಂಕಿ ಅವಘಡದಲ್ಲಿ 9 ಮಂದಿ ನೌಕರರು ಸಾವನ್ನಪ್ಪಿದ್ದಾರೆ. ಇದರಲ್ಲಿ ಉಝ್ಮಾ ಕೂಡ ಒಬ್ಬರಾಗಿದ್ದಾರೆ. ದುರಂತದ ಸಂದರ್ಭದಲ್ಲಿ ಉಝ್ಮಾ ಫಾತಿಮಾ ನಾಲ್ವರು ನೌಕರರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಅಷ್ಟರಲ್ಲಿ ಬೆಂಕಿ ಅವರನ್ನು ಆವರಿಸಿತ್ತು. ಪರಿಣಾಮ ಅವರು ಹೊರಬರಲಾರದೆ ಅಲ್ಲೇ ಮೃತಪಟ್ಟಿದ್ದಾರೆ.

ಮಾಲಕ್‌ಪೇಟೆಯ ಅಝಂಪುರ ನಿವಾಸಿಯಾಗಿರುವ ಉಝ್ಮಾ ಫಾತಿಮಾ, ಚಿಕ್ಕವಳಿರುವಾಗಲೇ ಅತ್ಯಂತ ಧೈರ್ಯಶಾಲಿ ಹುಡುಗಿಯಾಗಿದ್ದಳು. ಬೆಂಕಿ ದುರಂತದ ಸಂದರ್ಭದಲ್ಲಿಯೂ ಆತ್ಮಸ್ಥೈರ್ಯ ಕಳೆದು ಕೊಳ್ಳದೆ  ನಾಲ್ಕು ಮಂದಿಯನ್ನು ರಕ್ಷಿಸಿದ್ದಾರೆ ಎಂದು ದುರ್ಘಟನೆಯಲ್ಲಿ ಬದುಕುಳಿದವರು ತಿಳಿಸಿದ್ದಾರೆ.

ಫಾತಿಮಾ ಅವರ ಅಂತ್ಯಸಂಸ್ಕಾರ ನಿನ್ನೆ ಸ್ವಗ್ರಾಮದ ಫತೇ ದರ್ವಾಜಾ ಜಬರಸ್ತಾನದಲ್ಲಿ ನಡೆದಿದೆ. ಸಂಸದ ಅಸದುದ್ದೀನ್ ಉವೈಸಿ ಸೇರಿದಂತೆ ಅನೇಕ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group