ರಾಷ್ಟ್ರೀಯ ಸುದ್ದಿ

ಹಿಂದಿ ಗೊತ್ತಿಲ್ಲದವರು ಕಾರ್ಯಕ್ರಮದಿಂದ ಹೊರನಡೆಯಿರಿ ಎಂದ ಆಯುಷ್ ಅಧಿಕಾರಿ: ಹಿಂದಿ ಹೇರಿಕೆಗೆ ವ್ಯಾಪಕ ಆಕ್ರೋಶ

ವರದಿಗಾರ, (ಆ.23): ಹಿಂದಿ ಭಾಷೆ ಹೇರಿಕೆಗೆ ಕೇಂದ್ರ ಸರ್ಕಾರ ತೆರೆಮರೆಯ ಪ್ರಯತ್ನ ನಡೆಸುತ್ತಿರುವುದು ಗುಟ್ಟಾಗಿ ಏನು ಉಳಿದಿಲ್ಲ. ಇದೀಗ ಕೇಂದ್ರದ ಆಯುಷ್ ಇಲಾಖೆ ಕಾರ್ಯದರ್ಶಿ ವೈದ್ಯ ರಾಜೇಶ್ ಕೋಟೆಚಾ ಅವರು ದೇಶಾದ್ಯಂತ ವೈದ್ಯರೊಂದಿಗೆ ನಡೆಸಿದ ವೀಡಿಯೋ ಸಂವಾದದ ವೇಳೆ, ‘ತಾನು ಇಂಗ್ಲಿಷ್‌ನಲ್ಲಿ ಮಾತನಾಡುವುದಿಲ್ಲ, ಹಿಂದಿ ಅರ್ಥವಾಗದವರು ಕಾರ್ಯಕ್ರಮ ತೊರೆದು ಹೊರಗೆ ಹೋಗಿ’ ಎಂದು ಹೇಳಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.

ಅಧಿಕಾರಿಯ ಈ ವರ್ತನೆಗೆ ದೇಶಾದ್ಯಂತ ಅದರಲ್ಲೂ ವಿಶೇಷವಾಗಿ ದಕ್ಷಿಣ ರಾಜ್ಯಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.  ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ತಮಿಳುನಾಡಿನ ವೈದ್ಯರು ಘಟನೆಯನ್ನು ಖಂಡಿಸಿದ್ದು, ಇದು ತಾರತಮ್ಯದ ನೀತಿಯಾಗಿದೆ ಎಂದು ಟೀಕಿಸಿದ್ದಾರೆ.

ಕಾರ್ಯಕ್ರಮದ ಮೊದಲ ದಿನದಿಂದಲೇ ಕನಿಷ್ಠ ನಾಲ್ಕು ತರಗತಿಗಳು ಹಿಂದಿಯಲ್ಲಿ ನಡೆದವು. ಕೆಲವು ಭಾಷಣಕಾರರು ಹಿಂದಿ ಬಳಸಿದರೂ ಇಂಗ್ಲಿಷ್‌ನಲ್ಲಿಯೂ ವಿಷಯಗಳನ್ನು ಭಾಷಾಂತರಿಸಲು ಪ್ರಯತ್ನಿಸಿದರು. ಹಿಂದಿಯಲ್ಲಿ ನಮಗೆ ಅರ್ಥಮಾಡಿಕೊಳ್ಳಲು ತುಂಬಾ ಕಷ್ಟವಾಗಿತ್ತು. ನಾವು ಈ ವಿಷಯದ ಬಗ್ಗೆ ನಿರಂತರವಾಗಿ ಎತ್ತುತ್ತಿದ್ದೇವೆ “ಎಂದು ಸಮ್ಮೇಳನದಲ್ಲಿ ಭಾಗವಹಿಸಿದ ವೈದ್ಯರೊಬ್ಬರು ಹೇಳಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೇ ಹಿಂದಿ ಹೇರಿಕೆಯ ವಿರುದ್ಧ ತಮಿಳುನಾಡಿನ ಡಿಎಂಕೆ ಸಂಸದೆ ಕನಿಮೋಳಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಆಯುಷ್ ಕಾರ್ಯದರ್ಶಿ ವೈದ್ಯ ರಾಜೇಶ್ ಕೋಟೆಚಾ ಅವರನ್ನು ಅಮಾನತುಗೊಳಿಸುವಂತೆ ಕನಿಮೋಳಿ ಆಗ್ರಹಿಸಿದ್ದಾರೆ.

‘ಆಯುಷ್ ಕಾರ್ಯದರ್ಶಿ ವೈದ್ಯ ರಾಜೇಶ್ ಕೋಟೆಚಾ ಹಿಂದಿ ಭಾಷೆ ತಿಳಿಯದವರು ಸಚಿವಾಲಯದ ತರಬೇತಿ ಕಾರ್ಯಕ್ರಮದಿಂದ ಹೊರ ಹೋಗಬಹುದೆಂದು ಹೇಳಿದ್ದಾರೆ. ಇದು ಹಿಂದಿ ಹೇರಿಕೆಯಾಗುತ್ತಿರುವುದರ ಸ್ಪಷ್ಟ ನಿದರ್ಶನ. ಇಂತಹ ವರ್ತನೆ ಸಹಿಸಲು ಸಾಧ್ಯವಿಲ್ಲ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಕೊನಿಮೋಳಿ ಅವರ ಬೆಂಬಲಕ್ಕೆ ನಿಂತಿರುವ ಸಂಸದ ಕಾರ್ತಿ ಚಿದಂಬರಂ ಕೂಡ ಟ್ವೀಟ್ ಮಾಡಿ, ಆಯುಷ್ ತರಬೇತಿ ಹಿಂದಿಯಲ್ಲಿ ನೀಡುವ ಮೂಲಕ ತಮಿಳುನಾಡನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಇಂಗ್ಲೀಷ್ ಗೊತ್ತಿಲ್ಲ ಎಂಬುವುನ್ನು ಬಿಡಿ, ಆದರೆ ಹಿಂದಿ ಗೊತ್ತಿಲ್ಲದದವರು ಹೊರ ಹೋಗಬಹುದೆಂಬ ಉದ್ಧಟತನದ ಹೇಳಿಕೆ ಒಪ್ಪಲು ಸಾಧ್ಯವೇ ಇಲ್ಲ’ ಎಂದಿದ್ದಾರೆ.

ಸಂಸದೆ ಕನಿಮೋಳಿ ಅವರು ಹಿಂದಿ ಗೊತ್ತಿಲ್ಲ ಎಂದು ಹೇಳಿದ್ದಕ್ಕೆ ಚೆನ್ನೈ ವಿಮಾನ ನಿಲ್ದಾಣದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ -ಸಿಐಎಸ್‌ಎಫ್‌ ಅಧಿಕಾರಿಯೊಬ್ಬರು ‘ನೀವು ಭಾರತೀಯರಾ’ ಎಂದು ಕೇಳಿರುವುದು ತೀವ್ರ ವಿವಾದಕ್ಕೆ ಕಾರಣವಾಗಿತ್ತು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group