ರಾಷ್ಟ್ರೀಯ ಸುದ್ದಿ

ವಿದೇಶಿ ತಬ್ಲೀಗಿಗಳನ್ನು ಬಲಿಪಶು ಮಾಡಲಾಗಿದೆ; ಅವರ ವಿರುದ್ಧದ ಎಲ್ಲಾ ಎಫ್ಐಆರ್ ರದ್ದುಪಡಿಸಿ; ಬಾಂಬೆ ಹೈಕೋರ್ಟ್‌ನಿಂದ ಮಹತ್ವದ ಆದೇಶ

ವರದಿಗಾರ (ಆ.22): ಪ್ರವಾಸಿ ವೀಸಾದ ನಿಯಮಗಳನ್ನು ಉಲ್ಲಂಘಿಸಿ ನವದೆಹಲಿಯ ನಿಜಾಮುದ್ದೀನ್ ತಬ್ಲೀಗ್‌ ಜಮಾಅತ್ ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ ಎಂದು ಆರೋಪಿಸಿ 29 ವಿದೇಶಿಯರ ವಿರುದ್ಧ ವಿವಿಧ ಕಾಯ್ದೆಗಳಡಿ ದಾಖಲಿಸಿದ್ದ ಎಫ್‌ಐಆರ್ ಅನ್ನು ಬಾಂಬೆ ಹೈಕೋರ್ಟ್ ರದ್ದುಪಡಿಸಿದೆ.

ಮಾತ್ರವಲ್ಲ ವಿದೇಶಿ ತಬ್ಲೀಗ್ ಜಮಾಅತ್ ಸದಸ್ಯರನ್ನು ಬಲಿಪಶು ಮಾಡಲಾಗಿದೆ. ಅವರ ವಿರುದ್ಧದ ಎಲ್ಲಾ ಪ್ರಕರಣ ರದ್ದು ಪಡಿಸಿ ಎಂದು ಆದೇಶಿಸಿದೆ.

ಈ 29 ವಿದೇಶಿಯರ ವಿರುದ್ಧ ಸಾಂಕ್ರಾಮಿಕ ರೋಗ ಕಾಯ್ದೆ, ಮಹಾರಾಷ್ಟ್ರ ಪೊಲೀಸ್ ಕಾಯ್ದೆ, ವಿಪತ್ತು ನಿರ್ವಹಣಾ ಕಾಯ್ದೆ, ವಿದೇಶಿಯರ ಕಾಯ್ದೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಲಾಗಿತ್ತು.

ಇದಲ್ಲದೆ ತಬ್ಲೀಗಿಗಳಿಗೆ ವಸತಿ ಸೌಲಭ್ಯ ಕಲ್ಪಿಸಿದ್ದ  ಆರು ಮಂದಿ ಭಾರತೀಯರು ಮತ್ತು ಮಸೀದಿಯ ಟ್ರಸ್ಟೀಗಳ ವಿರುದ್ಧವೂ ಪ್ರಕರಣ ದಾಖಲಿಸಲಾಗಿತ್ತು.

ಐವರಿ ಕೋಸ್ಟ್, ಘಾನಾ, ತಾಂಜೇನಿಯಾ, ಜಿಬೌಟಿ, ಬೆನಿನ್ ಮತ್ತು ಇಂಡೋನೇಷ್ಯಾ ದೇಶಗಳಿಗೆ ಸೇರಿದ ಈ ಅರ್ಜಿದಾರರು ಸಲ್ಲಿಸಿದ ಮೂರು ಪ್ರತ್ಯೇಕ ಅರ್ಜಿಗಳನ್ನು ನ್ಯಾಯಮೂರ್ತಿ ಟಿ.ವಿ.ನಲವಾಡೆ ಮತ್ತು ನ್ಯಾಯಮೂರ್ತಿ ಎಂ.ಜಿ. ಸೆವ್ಲಿಕರ್ ಅವರನ್ನು ಒಳಗೊಂಡ ಔರಂಗಬಾದ್ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ವಿವಿಧ ಪ್ರದೇಶಗಳಲ್ಲಿರುವ ಮಸೀದಿಗಳಲ್ಲಿ ಇವರು ವಾಸವಾಗಿದ್ದು, ಲಾಕ್ ಡೌನ್ ಆದೇಶಗಳನ್ನು ಉಲ್ಲಂಘಿಸಿ ಪ್ರಾರ್ಥನೆ ಸಲ್ಲಿಸುತ್ತಿದ್ದರು ಎಂದು ಆರೋಪಿಸಿ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು.

ಭಾರತ ಸರ್ಕಾರ ನೀಡಿದ ಮಾನ್ಯತೆಯ ವೀಸಾದ ಮೇಲೆ ನಾವು ಭಾರತಕ್ಕೆ ಬಂದಿದ್ದು, ಇಲ್ಲಿನ ಸಂಸ್ಕೃತಿ, ಸಂಪ್ರದಾಯ, ಆತಿಥ್ಯ ಮತ್ತು ಭಾರತೀಯ ಆಹಾರವನ್ನು ಅನುಭವಿಸಲು ಭೇಟಿ ನೀಡಿದ್ದೇವೆ. ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ, ತಮ್ಮನ್ನು ಕೋವಿಡ್ -19 ಪರೀಕ್ಷೆ ನಡೆಸಲಾಗಿದ್ದು, ವರದಿ ನೆಗೆಟಿವ್ ಬಂದಿದೆ. ಅದಾದ ಬಳಿಕವೇ ವಿಮಾನ ನಿಲ್ದಾಣದಿಂದ ಹೊರಹೋಗಲು ಅವಕಾಶ ನೀಡಲಾಯಿತು ಎಂದು ಅರ್ಜಿದಾರರು ವಾದಿಸಿದರು.

ಮಾತ್ರವಲ್ಲ ಅಹ್ಮದ್ ನಗರ ಜಿಲ್ಲೆಗೆ ಆಗಮಿಸಿದ ಬಗ್ಗೆ ಅಲ್ಲಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮಾಹಿತಿ ನೀಡಲಾಗಿತ್ತು. ಮಾರ್ಚ್ 23ರಿಂದ ದೇಶದಲ್ಲಿ ವಿಧಿಸಲಾದ ಲಾಕ್‌ಡೌನ್ ಕಾರಣದಿಂದ ವಾಹನ ಸಂಚಾರ ಸ್ತಬ್ಧಗೊಂಡಿತ್ತು. ಹೋಟೆಲ್‌ಗಳು, ವಸತಿಗೃಹ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಮುಚ್ಚಲಾಗಿತ್ತು. ಇದರ ಪರಿಣಾಮವಾಗಿ ನಾವು ಮಸೀದಿಗಳಲ್ಲಿ ಆಶ್ರಯ ಪಡೆದೆವು. ಜಿಲ್ಲಾಧಿಕಾರಿಯ ಆದೇಶ ಉಲ್ಲಂಘನೆ ಸೇರಿದಂತೆ ಯಾವುದೇ ಅಕ್ರಮ ಚಟುವಟಿಕೆಯಲ್ಲಿ ನಾವು ಭಾಗಿಯಾಗಿಲ್ಲ ಎಂದು ಅರ್ಜಿದಾರರು ವಾದಿಸಿದರು.

ವಾದ – ವಿವಾದ ಆಲಿಸಿದ ನ್ಯಾಯಪೀಠ, ವಿದೇಶಿ ತಬ್ಲೀಗಿ ಜಮಾಅತ್ ಗಳನ್ನು ‘ಬಲಿಪಶು’ ಮಾಡಲಾಗಿದೆ ಎಂದು ಹೇಳಿ ಅವರ ವಿರುದ್ಧದ ಎಲ್ಲಾ ಎಫ್ಐಆರ್‌ಗಳನ್ನು ರದ್ದುಪಡಿಸಿದೆ. ಮಾತ್ರವಲ್ಲ ಈ ವಿಷಯದಲ್ಲಿ ಮಾಧ್ಯಮಗಳ ವರದಿಗಳ ಬಗ್ಗೆ ಕಟು ವಿಮರ್ಶೆ ಮಾಡಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group