
ವರದಿಗಾರ (ಆ.21): ಚೀನಾ ರಾಜಧಾನಿ ಬೀಜಿಂಗ್ನಲ್ಲಿ ಸತತ 13 ದಿನಗಳಿಂದ ಹೊಸದಾಗಿ ಯಾವುದೇ ಕೊರೊನಾ ಸೋಂಕು ಪ್ರಕರಣ ಕಂಡುಬಾರದ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಬೇಕೆಂಬ ನಿಯಮವನ್ನು ಆರೋಗ್ಯ ಅಧಿಕಾರಿಗಳು ರದ್ದುಪಡಿಸಿದ್ದಾರೆ. ಮಾತ್ರವಲ್ಲ ಇನ್ನಷ್ಟು ನಿಯಮಗಳ ಸಡಿಲಿಕೆಗೆ ಮುಂದಾಗಿದ್ದಾರೆ.
ಆದರೆ ನಿಯಮ ಸಡಿಲಿಸಿದರೂ ಹೆಚ್ಚಿನ ಜನರು ಮಾತ್ರ ಬೀಜಿಂಗ್ನಲ್ಲಿ ಶುಕ್ರವಾರ ಮಾಸ್ಕ್ ಧರಿಸಿರುವುದು ಕಂಡುಬಂತು.
ಮುಖಗವಸು ಧರಿಸಿರುವುದರಿಂದ ಸುರಕ್ಷತಾ ಭಾವ ಉಂಟಾಗುತ್ತದೆ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಸಾಮಾಜಿಕ ಒತ್ತಡದಿಂದಾಗಿ ಮಾಸ್ಕ್ ಧರಿಸುತ್ತಿರುವುದಾಗಿ ತಿಳಿಸಿದರು.
ಯಾವಾಗ ಬೇಕಾದರೂ ಮಾಸ್ಕ್ ತೆಗೆಯಬಹುದೆಂದು ನಾನು ಭಾವಿಸುತ್ತೇನೆ, ಆದರೆ ಇತರರು ಅದನ್ನು ಒಪ್ಪುತ್ತಾರೆಯೇ, ಅವರು ಏನನ್ನುತ್ತಾರೋ ಎಂಬ ಆತಂಕ ನನಗಿದೆ. ಏಕೆಂದರೆ ನಾನು ಮಾಸ್ಕ್ ಧರಿಸದೆ ಇದ್ದುದನ್ನು ನೋಡಿದರೆ ಜನ ಭಯಗೊಳ್ಳಬಹುದು ಎಂದು 24 ವರ್ಷದ ಬೀಜಿಂಗ್ ನಿವಾಸಿ ಕಾವೊ ಎಂಬ ಮಹಿಳೆ ಹೇಳಿದ್ದಾರೆ.
ಬೀಜಿಂಗ್ನಲ್ಲಿ ಎರಡು ಹಂತದ ಲಾಕ್ಡೌನ್ ಜಾರಿಗೊಳಿಸಿದ ಬಳಿಕ ಅಲ್ಲಿ ಪರಿಸ್ಥಿತಿ ಸಾಮಾನ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಮಾರ್ಗಸೂಚಿ ನಿಯಮಗಳನ್ನು ಸಡಿಲಿಸಿದ್ದಾರೆ. ನಿಯಮ ಸಡಿಲಿಸುತ್ತಿರುವುದು ಇದು ಎರಡನೇ ಬಾರಿಯಾಗಿದೆ.
ಬೀಜಿಂಗ್ನ ಮುನ್ಸಿಪಲ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್, ಈ ಮೊದಲು ಏಪ್ರಿಲ್ ಅಂತ್ಯದ ವೇಳೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೆ ಹೋಗಬಹುದು ಎಂದು ಹೇಳಿತ್ತು. ಆದರೆ ನಗರದ ದಕ್ಷಿಣದ ಭಾಗದಲ್ಲಿರುವ ಬೃಹತ್ ಮಾರುಕಟ್ಟೆ ಪ್ರದೇಶದಲ್ಲಿ ಏಕಾಏಕಿ ಕೊರೊನಾ ಸೋಂಕು ಭಾರೀ ಪ್ರಮಾಣದಲ್ಲಿ ಕಂಡುಬಂದ ನಂತರ ಜೂನ್ನಲ್ಲಿ ನಿಯಮಗಳನ್ನು ಕಠಿಣಗೊಳಿಸಲಾಗಿತ್ತು.
ರಾಜಧಾನಿ ಬೀಜಿಂಗ್, ಕ್ಸಿನ್ಜಿಯಾಂಗ್ ಮತ್ತು ಇತರ ಸ್ಥಳಗಳಲ್ಲಿ ಕಂಡುಬಂದಿದ್ದ ಕೊರೊನಾ ಸೋಂಕನ್ನು ಯಶಸ್ವಿಯಾಗಿ ನಿಯಂತ್ರಿಸಲಾಗಿದ್ದು, ಚೀನಾದಲ್ಲಿ ಕಳೆದ ಐದು ದಿನಗಳಲ್ಲಿ ಸ್ಥಳೀಯವಾಗಿ ಯಾವುದೇ ಹೊಸ ಕೊರೊನಾ ಪ್ರಕರಣ ಕಂಡುಬಂದಿಲ್ಲ.
