ರಾಜ್ಯ ಸುದ್ದಿ

ಶೃಂಗೇರಿ ಶಂಕರಾಚಾರ್ಯ ಗೋಪುರದ ಮೇಲೆ ಧ್ವಜ ಹಾಕಿ ಗಲಭೆಗೆ ಯತ್ನ; ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸರಿಂದ ಹಿಂದೇಟು: ಎಸ್.ಡಿ.ಪಿ.ಐ ಆರೋಪ

ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಸವಾಲು ಹಾಕಿದ ಜೀವರಾಜ್ ಹಾಗೂ ಇನ್ನಿತರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯ

ವರದಿಗಾರ (ಆ.19): ಶೃಂಗೇರಿಯಲ್ಲಿ ಶಂಕರಾಚಾರ್ಯ ಗೋಪುರದ ಮೇಲೆ ಧ್ವಜವನ್ನು ಹಾಕಿ ಅ ಮೂಲಕ ಗಲಭೆ ಸೃಷ್ಟಿಸಲು ಪ್ರಯತ್ನಿಸಿ ಘಟನೆಯನ್ನು ಎಸ್.ಡಿ.ಪಿ.ಐ ಪಕ್ಷ ಮತ್ತು ಸ್ಥಳೀಯ ಮುಸ್ಲಿಂ ಸಮುದಾಯದ ತಲೆಗೆ ಕಟ್ಟಲು ಪ್ರಯತ್ನಿಸಿರುವ ಘಟನೆಯು ಅತ್ಯಂತ ಕಳವಳಕಾರಿಯಾಗಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ – ಎಸ್.ಡಿ.ಪಿ.ಐ ಪಕ್ಷವು ಹೇಳಿದೆ.

ಘಟನೆಯ ಬಗ್ಗೆ ಇಂದು ಚಿಕ್ಕಮಗಳೂರಿನಲ್ಲಿ ಪತ್ರಿಕಾಗೋಷ್ಠಿಯನ್ನು ಹಮ್ಮಿಕೊಂಡಿದ್ದ ಎಸ್.ಡಿ.ಪಿ.ಐ ಪಕ್ಷವು, ‘ಆಗಸ್ಟ್ 12ರಂದು ರಾತ್ರಿ ನಡೆದ ಈ ಘಟನೆಯ ಮರುದಿನ ಬೆಳಗ್ಗೆ ಸ್ಥಳೀಯ ಮಾಜಿ ಶಾಸಕ ಜೀವರಾಜ್ ತನ್ನ ಸಂಗಡಿಗರ ಕೂಟವನ್ನು ಕಟ್ಟಿಕೊಂಡು ಸಾರ್ವಜನಿಕರ ಮುಂದೆ ಪೋಲೀಸ್ ಅಧಿಕಾರಿಯನ್ನು ಕೆಲಮಟ್ಟದಲ್ಲಿ ಚಿತ್ರಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿ ಘಟನೆಯನ್ನು ಬೇರೆಡೆಗೆ ತಿರುಗಿಸುವ ಸಲುವಾಗಿ “ಇದು ಎಸ್.ಡಿ.ಪಿ.ಐ ಪಕ್ಷದವರ ಕೃತ್ಯ. ಅವರನ್ನು ತಕ್ಷಣವೇ ಬಂಧಿಸಬೇಕು. ಬೆಂಗಳೂರಿನಲ್ಲಿ ನವೀನ್ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದು ಸರಿಯಾಗಿಯೇ ಇದೆ. ಧ್ವಜ ಹಾಕಿದ ಎಸ್.ಡಿ.ಪಿ.ಐ ಯವರನ್ನು ತಕ್ಷಣವೇ ಬಂಧಿಸದಿದ್ದರೆ ಮುಂದಿನ ಅನಾಹುತಗಳಿಗೆ ನೀವೇ ಜವಾಬ್ದಾರರು” ಎಂದು ಪೊಲೀಸ್ ಇಲಾಖೆಗೆ ಬೆದರಿಕೆಗಳನ್ನು ಹಾಕಿದ್ದಲ್ಲದೆ ಅತ್ಯಂತ ಅವಾಚ್ಯವಾಗಿ ಮುಸ್ಲಿಮ್ ಸಮುದಾಯವನ್ನು ಹಾಗೂ ಎಸ್.ಡಿ.ಪಿ.ಐ ಪಕ್ಷವನ್ನು ನಿಂದಿಸುತ್ತಾ ಶೃಂಗೇರಿಯ ಮುಸ್ಲಿಮರನ್ನು ಗಡಿಪಾರು ಮಾಡಬೇಕೆಂದೂ ಇಲ್ಲದಿದ್ದಲ್ಲಿ ಮುಂದಿನ ಅನಾಹುತಗಳನ್ನು ಎದುರಿಸಬೇಕೆಂದೂ ಭಾಷಣವನ್ನು ಮಾಡಿದ್ದಾರೆ. ಇದು ಸಮಾಜದಲ್ಲಿ ಮುಸ್ಲಿಮರ ಬಗ್ಗೆ ದ್ವೇಷ ಹುಟ್ಟಿಸುವ ಉದ್ದೇಶಪೂರ್ವಕ ಕೃತ್ಯವಾಗಿದೆ ಹಾಗೂ ಕೋಮು ಸೌಹಾರ್ದತೆಯನ್ನು ಕೆಡಿಸಿ ಸಮಾಜದ ಶಾಂತಿ ಹಾಗೂ ನೆಮ್ಮದಿ ಕೆಡಿಸುವ ಷಡ್ಯಂತ್ರವಾಗಿದೆ ಎಂದು ಎಸ್.ಡಿ.ಪಿ.ಐ ಪಕ್ಷದ ರಾಜ್ಯ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಹೇಳಿದ್ದಾರೆ.

‘ಪೊಲೀಸರು ಸ್ಥಳೀಯ ಮೂವರು ಮುಸ್ಲಿಂ ಯುವಕರ ಮೇಲೆ ಎಫ್ಐಆರ್ ದಾಖಲಿಸಿ ಅಂದು ರಾತ್ರಿ ಇಡೀ ಠಾಣೆಯಲ್ಲಿ ಕೂಡಿಹಾಕಿದ್ದರು. ಆ ಬಾವುಟವು ಎಸ್.ಡಿ.ಪಿ.ಐ ಪಕ್ಷದ್ದಾಗಿರಲಿಲ್ಲ. ಅದು ಶೃಂಗೇರಿಯ ಮಸೀದಿಯಲ್ಲಿ ಕಟ್ಟಿದ ಬಾವುಟವಾಗಿತ್ತು. ಮಸೀದಿಯ ಸಿಸಿಟಿವಿಯನ್ನು ಪರಿಶೀಲಿಸಿದಾಗ ಮನೋಹರ್ ಯಾನೆ ಮಿಲಿಂದ್ ಎಂಬಾತನು ಕೃತ್ಯವನ್ನು ಎಸಗಿರುವುದಾಗಿ ಸಾಬೀತಾಗಿದೆ. ಒಂದು ವೇಳೆ ಮಸೀದಿಯಲ್ಲಿ ಸಿಸಿಟಿವಿ ಇಲ್ಲದಿದ್ದಲ್ಲಿ ಆ ಕೃತ್ಯ ಮುಸ್ಲಿಂ ಹುಡುಗರು ಮಾಡಿದ್ದೆಂದು ಮತ್ತು ಅದರಿಂದ ಶೃಂಗೇರಿಯಲ್ಲಿ ಅಶಾಂತಿಗೆ ಕಾರಣವಾಗುವ ಸಾಧ್ಯತೆ ಇತ್ತು. ಮನೋಹರನ ಮೇಲೆ ಸ್ವಯಂ ಪ್ರಕರಣ ದಾಖಲಿಸಬೇಕಾದ ಪ್ರಕರಣ ಇದಾಗಿದ್ದರೂ ಪ್ರಕರಣ ದಾಖಲಾಗಲಿಲ್ಲ. ಆಶ್ಚರ್ಯವೆಂದರೆ ಮನೋಹರನ ಮೇಲೆ ಮುಸ್ಲಿಮ್ ಬಾಂಧವರಿಂದ ದೂರು ನೀಡಲಾಗಿದ್ದರೂ ಈವರೆಗೆ ಪೋಲೀಸರು ಎಫ್ಐಆರ್ ದಾಖಲಿಸಲಿಲ್ಲ . ಪೋಲೀಸರಿಗೆ ಧಮಕಿ ಹಾಕಿದ ಹಾಗೂ ಸಮಾಜದಲ್ಲಿ ಅಶಾಂತಿ ಸೃಷ್ಟಿಗೆ ಯತ್ನಿಸದ ಜೀವರಾಜ್ ಹಾಗೂ ಆತನ ಸಂಗಡಿಗರ ಮೇಲೆ ದೂರು ನೀಡಿದರೂ ಪೊಲೀಸರು ಎಫ್ಐಆರ್ ದಾಖಲಿಸಲಿಲ್ಲ. ಇದು ಅನ್ಯಾಯ ಮಾತ್ರವಲ್ಲದೆ ಕಾನೂನು ಸುವ್ಯವಸ್ಥೆಯ ಬಗ್ಗೆ ಜನರಲ್ಲಿ ಅಭದ್ರತೆಯನ್ನು ಹಾಗೂ ಹಲವಾರು ಪ್ರಶ್ನೆಯನ್ನು ಮತ್ತು ಸಂಶಯಗಳನ್ನು ಹುಟ್ಟುಹಾಕಿದೆ’ ಎಂದು ಅವರು ಹೇಳಿದ್ದಾರೆ.

ಹಿಂದೂ ಮುಸ್ಲಿಮರು ಅನ್ಯೋನ್ಯತೆ ಹಾಗೂ ಸೌಹಾರ್ದತೆಯಿಂದ ಜೀವಿಸುವ ಶೃಂಗೇರಿಯಲ್ಲಿ ದ್ವೇಷ ಮತ್ತು ಅಶಾಂತಿಯನ್ನು ಸೃಷ್ಟಿಸಲು ಸಂಚು ಹೂಡಿದ ಮನೋಹರ ಯಾನೆ ಮಿಲಿಂದ್, ಜೀವರಾಜ್ ಮತ್ತು ಆತನ ಸಂಗಡಿಗರ ಮೇಲೆ ಪ್ರಕರಣ ದಾಖಲಿಸಲು ಪೊಲೀಸ್ ಇಲಾಖೆಗೆ ಅಡ್ಡಿಯಾಗಿರುವುದಾದರೂ ಏನು ಎನ್ನುವುದು ಸ್ಪಷ್ಟವಾಗಬೇಕಾಗಿದೆ. ಮನೋಹರ್, ಜೀವರಾಜ್ ಮತ್ತು ಸಂಗಡಿಗರ ಮೇಲೆ ಕೂಡಲೇ ಎಫ್ಐಆರ್ ದಾಖಲಿಸಬೇಕು ಹಾಗೂ ಅವರನ್ನು ಬಂಧಿಸಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲೆತ್ನಿಸಿದ ಅವರ ಸಂಚನ್ನು ಹಾಗೂ ಅವರ ಹಿಂದಿರುವ ಶಕ್ತಿಯನ್ನು ಪೊಲೀಸರು ಬಯಲಿಗೆಳೆಯಬೇಕೆಂದು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ- ಎಸ್.ಡಿ.ಪಿ.ಐ ರಾಜ್ಯ ಸಮಿತಿಯು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಎಸ್.ಡಿ.ಪಿ.ಐ ರಾಜ್ಯ ಸಮಿತಿ ಸದಸ್ಯ ರಿಯಾಝ್ ಫರಂಗಿಪೇಟೆ, ಎಸ್.ಡಿ.ಪಿ.ಐ ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಅಝ್ಮತ್ ಪಾಷಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿಕಂದರ್ ಪಾಷಾ ಉಪಸ್ಥಿತರಿದ್ದರು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group