
ವರದಿಗಾರ (ಜು.19): ಕೊರೋನಾ ಮಹಾಮಾರಿ ಉಡುಪಿ ಜಿಲ್ಲೆಯಲ್ಲಿ ಅಟ್ಟಹಾಸ ಮೆರಿಯುತ್ತಿದ್ದು, ಇಂದು ಕಾಪು ಪೊಲೀಸ್ ಠಾಣೆಯ ಮತ್ತೆ ನಾಲ್ಕು ಮಂದಿ ಪೊಲೀಸರಿಗೆ ಪಾಸಿಟಿವ್ ಬಂದಿರುವುದಾಗಿ ವರದಿಯಾಗಿದೆ. ಕಳೆದ ವಾರ ಎಎಸ್ ಐ ಹಾಗೂ ನಾಲ್ಕು ಮಂದಿ ಪೊಲೀಸ್ ಸಿಬ್ಬಂದಿಗೆ ಪಾಸಿಟಿವ್ ಕಂಡುಬಂದಿತ್ತು. ಪರಿಣಾಮ ಕಾಪು ಪೊಲೀಸ್ ಠಾಣೆಯನ್ನು ಸೀಲ್ಡೌನ್ ಮಾಡಿ ಪಕ್ಕದ ಸಭಾ ಭವನಕ್ಕೆ ಠಾಣೆಯನ್ನು ತಾತ್ಕಾಲಿಕವಾಗಿ ಸ್ಥಳಾಂತರ ಮಾಡಲಾಗಿತ್ತು.
ಆದರೆ, ಎರಡು ದಿನಗಳ ಬಳಿಕ ಠಾಣೆಯಲ್ಲಿ ಚಟುವಟಿಕೆ ಶುರುವಾಗಿದ್ದೇ ಇದೀಗ ಮತ್ತೆ ನಾಲ್ಕು ಮಂದಿ ಪೊಲೀಸರಲ್ಲಿ ಕೊರೋನಾ ಪಾಸಿಟಿವ್ ಕಂಡು ಬಂದಿದೆ. ಪರಿಣಾಮ ಇದೀಗ ಕಾಪು ಪೊಲೀಸ್ ಠಾಣೆಯಲ್ಲಿ ಒಟ್ಟು 9 ಮಂದಿ ಪೊಲೀಸರಲ್ಲಿ ಸೋಂಕು ದೃಢಪಟ್ಟಿದೆ. ಈ ಹಿನ್ನಲೆಯಲ್ಲಿ ಇದೀಗ ಇಡೀ ಪೊಲೀಸ್ ಠಾಣೆಯನ್ನು ಮತ್ತೊಮ್ಮೆ ಸೀಲ್ ಡೌನ್ ಮಾಡಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಒಟ್ಟು ಸೋಂಕಿತರ ಸಂಖ್ಯೆ ಎರಡು ಸಾವಿರ ಗಡಿ ದಾಟಿ ಜನರನ್ನು ಆತಂಕಕ್ಕೀಡು ಮಾಡಿವೆ.
ಎರಡು ದಿನಗಳ ಅಂತರದಲ್ಲೇ 200ಕ್ಕೂ ಹೆಚ್ಚು ಪ್ರಕರಣ ಉಡುಪಿ ಜಿಲ್ಲೆಯಲ್ಲಿ ವರದಿಯಾಗಿದೆ. ಹೀಗಾಗಿ ಜಿಲ್ಲೆಯ ಜನರು ಸಹಜವಾಗಿ ಆತಂಕಕ್ಕೆ ಒಳಗಾಗಿದ್ದಾರೆ. ಕೊರೋನಾ ಸಾಮೂದಾಯಿಕ ಹಂತಕ್ಕೆ ತಲುಪಿದೆಯಾ ಎಂಬ ಆತಂಕ ಇದೀಗ ಮನೆ ಮಾಡಿದೆ.
ದಯವಿಟ್ಟು ಲಾಕ್ ಡೌನ್ ನಿಯಮಗಳನ್ನು ಪಾಲಿಸಿ, ಮನೆಯಲ್ಲೇ ಸುರಕ್ಷಿತವಾಗಿರಿ. ಕೊರೋನಾ ವಿರುದ್ಧ ಹೋರಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
