
ವರದಿಗಾರ (ಜು.01): ಮಹಾಮಾರಿ ಕೊರೋನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ನಿಯಮಾನುಸಾರ ಮಾಡುವ ಬದಲು ತ್ಯಾಜ್ಯದ ಗುಂಡಿಗೆ 8 ಶವಗಳನ್ನು ಕಸ ಎಸೆದಂತೆ ಬೇಕಾಬಿಟ್ಟಿ ಎಸೆದು ಮಣ್ಣು ಮುಚ್ಚಿರುವ ಅಮಾನವೀಯ ಘಟನೆ ಬಳ್ಳಾರಿಯ ಹೊರವಲಯದಿಂದ ವರದಿಯಾಗಿದೆ. ಅತ್ಯಂತ ಅಮಾನವೀಯ ನಡೆದುಕೊಂಡ ಈ ಘಟನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಶವಗಳನ್ನು ತ್ಯಾಜ್ಯ ಗುಂಡಿಗೆ ಎಸೆಯುವಂತಹ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಮೃತರ ಕುಟುಂಬಸ್ಥರ ಮತ್ತು ಸಾರ್ವಜನಿಕರ ಕ್ಷಮೆ ಯಾಚಿಸಿರುವ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಪ್ರಕರಣದ ತನಿಖೆಗೆ ಆದೇಶಿಸಿದ್ದಾರೆ. ಮಾತ್ರವಲ್ಲದೆ ಅಂತ್ಯಸಂಸ್ಕಾರದಲ್ಲಿ ನಿರ್ಲಕ್ಷ್ಯ ತೋರಿದ ಸಿಬ್ಬಂದಿಯನ್ನು ಬದಲಾಯಿಸಿ ನುರಿತ, ತರಬೇತಿ ಪಡೆದ ಸಿಬ್ಬಂದಿಯನ್ನು ನೇಮಿಸುವುದಾಗಿ ಅವರು ಹೇಳಿಕೆ ನೀಡಿ ಕೈ ತೊಳೆದುಕೊಳ್ಳುವ ಪ್ರಯತ್ನ ಮಾಡಿದ್ದಾರೆ.
ಘಟನೆಯ ವೀಡಿಯೋ ವೀಕ್ಷಿಸಿ:
ಕೋವಿಡ್ ನಿಯಮದ ಪ್ರಕಾರ ಒಂದೊಂದೇ ಶವವನ್ನು ಪ್ರತ್ಯೇಕವಾಗಿ ದಫನ್ ಮಾಡಬೇಕು. ಆದರೆ ವಿಡಿಯೋದಲ್ಲಿ ತೋರಿಸಿರುವಂತೆ ವಿಮ್ಸ್ ಮತ್ತು ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟ8 ಸೋಂಕಿತರ ಶವಗಳನ್ನು ಹೂಳಲು ನಗರದ ಹೊರವಲಯದಲ್ಲಿ 3 ಗುಂಡಿಗಳನ್ನಷ್ಟೇ ತೋಡಲಾಗಿತ್ತು. ಇನ್ನುಳಿದ ಎರಡು ಗುಂಡಿಗಳು ನಾಳೆ ಮತ್ತೆ ಶವ ಹೂಳಲು ಬೇಕಾಗುತ್ತದೆ ಎಂಬ ತೀರ್ಮಾನಕ್ಕೆ ಬಂದ ಪಿಪಿಇ ಕಿಟ್ ಧರಿಸಿದ್ದ ಆರೋಗ್ಯ ಇಲಾಖೆ ಸಿಬ್ಬಂದಿ ಮೃತಪಟ್ಟವರ ಶವಗಳಿಗೆ ಕನಿಷ್ಠ ಗೌರವವನ್ನೂ ತೋರದೆ ಒಂದೇ ಗುಂಡಿಯಲ್ಲಿ ಎಂಟು ಶವಗಳನ್ನು ಹಾಕಿ ಮಣ್ಣು ಮುಚ್ಚಿದ್ದಾರೆ. ಗುಂಡಿಗೆ ಸುರಿಯಲ್ಪಟ್ಟ ಶವಗಳು ಭಾನುವಾರ ಮತ್ತು ಸೋಮವಾರ ಮೃತಪಟ್ಟವರದ್ದೆಂದು ತಿಳಿದುಬಂದಿದೆ.
ವೀಡಿಯೋದಲ್ಲಿರುವಂತೆ, ಕೋವಿಡ್ ನಿಯಮದಂತೆ ಪ್ಯಾಕ್ ಮಾಡಿ ಆ್ಯಂಬುಲೆನ್ಸ್ನಲ್ಲಿ ತರಲಾಗಿದ್ದ ಮೃತದೇಹಗಳನ್ನು ಪಿಪಿಇ ಕಿಟ್ ಧರಿಸಿದ್ದ ಆರೋಗ್ಯ ಇಲಾಖೆ ಸಿಬ್ಬಂದಿ ಎಳೆದು ತಂದು ಗುಂಡಿಗಳಿಗೆಸೆಯುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ವ್ಯಕ್ತಿಯೊಬ್ಬ ಕೈ ಬೆರಳುಗಳ ಮೂಲಕ ಒಟ್ಟು ಎಂಟು ಶವಗಳಿವೆ ಎಂಬುದನ್ನು ತೋರಿಸುತ್ತಾನೆ. ಒಂದು ಶವವನ್ನು ಆ್ಯಂಬುಲೆನ್ಸ್ನಿಂದ ತಂದು ಎಸೆದ ಬಳಿಕ ವಿಡಿಯೋ ಚಿತ್ರಿಸುತ್ತಿರುವ ವ್ಯಕ್ತಿ, ‘ಹಾಕಂಗಿದ್ರೆ ಒಂದೇ ಗುಂಡಿಯಲ್ಲೇ ಹಾಕ್ಬಿಡಿ ಅತ್ಲಾಗೆ, ಮುಚ್ಚಿಬಿಡೋಣ’ ಎನ್ನುವುದು ವಿಡಿಯೋದಲ್ಲಿ ಕೇಳಿಸುತ್ತದೆ. ಅದೇ ರೀತಿಯಲ್ಲಿ ಶವಗಳನ್ನು ಒಂದೊಂದಾಗಿ ತಂದು ಗುಂಡಿಗೆ ಹಾಕಲಾಗುತ್ತದೆ.
ಮೃತ ದೇಹಗಳಿಗೆ ಅಗೌರವ ತೋರದೆ ಶವಸಂಸ್ಕಾರ ನಡೆಸಬೇಕು ಎಂಬ ನಿಯಮವನ್ನು ಗಾಳಿಗೆ ತೂರಿರುವ ಆರೋಗ್ಯ ಇಲಾಖೆ ಸಿಬ್ಬಂದಿ, ಶವಗಳನ್ನು ಎಳೆದು ತಂದುಗುಂಡಿಗೆ ಎಸೆಯುತ್ತಿರುವ ದೃಶ್ಯ, ಸಾರ್ವಜನಿಕರಲ್ಲಿ ಬೆಚ್ಚಿಬೀಳುವಂತೆ ಮಾಡಿದ್ದು, ಅವರನ್ನು ಬಡಿದೆಬ್ಬಿಸಿದೆ. ಕೊರೋನಾ ವೈರಸ್ನಿಂದ ಮೃತಪಟ್ಟರೆ ಈ ರೀತಿಯ ಭೀಕರ ಶವಸಂಸ್ಕಾರದ ಸತ್ಕಾರ ಸಿಗಲಿದೆಯೇ ಎಂಬ ಆತಂಕವೂ ಸಾರ್ವಜನಿಕರಲ್ಲಿ ಮೂಡಿದೆ.
‘ಕೊರೋನಾ ಸೋಂಕಿತರ ಮೃತದೇಹಗಳನ್ನು ಅಂತ್ಯಸಂಸ್ಕಾರ ಮಾಡಿದ ರೀತಿ ಅಮಾನವೀಯವಾಗಿದೆ. ಈ ಪ್ರಕರಣ ಕುರಿತು ಎಡಿಸಿ ಮಂಜುನಾಥ್ ಅವರ ನೇತೃತ್ವದಲ್ಲಿ ತನಿಖೆಗೆ ಆದೇಶಿಸಲಾಗಿದೆ.
– ಎಸ್.ಎಸ್.ನಕುಲ್, ಬಳ್ಳಾರಿ ಜಿಲ್ಲಾಧಿಕಾರಿ
#COVID19 Recieved as forward. The msg claims to be from Ballari. Language heard in the background is Kannada. This is from karnataka. what’s happening? Is this mass burial? @sriramulubjp @DHFWKA @mla_sudhakar @bellaryvartha @BallariSp answers pl? @XpressBengaluru @santwana99 pic.twitter.com/3A0TwSyvvL
— Chetana Belagere (@chetanabelagere) June 30, 2020
https://twitter.com/chetanabelagere/status/1277986028771368961?s=19
