ರಾಜ್ಯ ಸುದ್ದಿ

ಬಳ್ಳಾರಿಯ ಅನಾಗರಿಕ ಘಟನೆಯು ಮಾನವೀಯತೆಗೆ ಕಳಂಕ: ಸರಕಾರದ ವಿರುದ್ಧ ಎಸ್.ಡಿ.ಪಿ.ಐ ಆಕ್ರೋಶ

‘ಕೋವಿಡ್ ನಿಯಂತ್ರಿಸಲು ಸರಕಾರ ಸಂಪೂರ್ಣ ವಿಫಲವಾಗಿದೆ’

ವರದಿಗಾರ (ಜು.01): ಬಳ್ಳಾರಿಯಲ್ಲಿ ಕೋವಿಡ್ ರೋಗದಿಂದ ಮರಣ ಹೊಂದಿದ ಮೃತದೇಹಗಳನ್ನು ಅಗೌರವದಿಂದ ಹೂಳಿರುವುದನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ- ಎಸ್.ಡಿ.ಪಿ.ಐ ಕರ್ನಾಟಕ ರಾಜ್ಯ ಸಮಿತಿಯು ತೀವ್ರವಾಗಿ ಖಂಡಿಸಿದ್ದು, ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆಗೊಳಿಸಿದ್ದು, ‘ಇದು ಮಾನವೀಯತೆಗೆ ಕಳಂಕ ತರುವ ಘಟನೆಯಾಗಿದೆ. ಇಂತಹ ಅನಾಗರಿಕ ರೀತಿಯ ವರ್ತನೆಯ ಘಟನೆಯು ಸಮಾಜದಲ್ಲಿ ತೀವ್ರ ಆತಂಕ ಹುಟ್ಟಿಸಿದ್ದು, ಬಳ್ಳಾರಿ ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರ ಆಡಳಿತ ನಡೆಸಲು ಅಸಮರ್ಥವೂ – ಅನರ್ಹವೂ ಆಗಿದೆ’ ಎಂದು ಎಸ್.ಡಿ.ಪಿ.ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹನ್ನಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾನವ ಮೃತದೇಹಕ್ಕೆ ಕಿಂಚಿತ್ತು ಗೌರವ ಕೊಡದ ಇಂತಹ ವ್ಯವಸ್ಥೆಯ ವಿರುದ್ಧ ಜನ ಒಂದಾಗಿ ಪ್ರತಿಭಟಿಸಬೇಕು ಎಂದು ಅವರು ಕರೆ ನೀಡಿದ್ದಾರೆ.

ರಾಜ್ಯದಲ್ಲಿ ಕೋವಿಡ್ ಸಾಂಕ್ರಾಮಿಕ ರೋಗವು ತೀವ್ರಗತಿಯಲ್ಲಿ ವ್ಯಾಪಿಸುತ್ತಿದ್ದು, ಆಸ್ಪತ್ರೆಗಳು ರೋಗಿಗಳನ್ನು ದಾಖಲಿಸುವುದಕ್ಕೆ ನಿರಾಕರಿಸುವ ಘಟನೆಗಳು ಸಹ ವರದಿಯಾಗುತ್ತಿವೆ. ಸರಕಾರಿ ಆಸ್ಪತ್ರೆಗಳಲ್ಲಿ ಹಲವು ರೀತಿಯ ಅವ್ಯವಸ್ಥೆಯ ಘಟನೆಗಳು ವರದಿಯಾಗುತ್ತಿವೆ. ರೋಗ ನಿಯಂತ್ರಣ ಮತ್ತು ಚಿಕಿತ್ಸೆಯ ಬಗ್ಗೆ ಸರಕಾರದ ಗಮನ ಹಾಗೂ ಸಮರ್ಪಕತೆ ಏನೇನೂ ಸಾಲದಾಗಿದೆ.  ಸುಮಾರು ಏಳು ಕೋಟಿ ಜನಸಂಖ್ಯೆ ಇರುವಂತಹ ನಮ್ಮ ರಾಜ್ಯದಲ್ಲಿ  ಸಾಂಕ್ರಾಮಿಕವು ವ್ಯಾಪಿಸುತ್ತಿರುವಾಗ ಅದಕ್ಕೆ ಚಿಕಿತ್ಸೆ ನೀಡುವುದಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಆಸ್ಪತ್ರೆಗಳು,  ಬೆಡ್ ಗಳು, ವೈದ್ಯಕೀಯ ಸಲಕರಣೆಗಳು, ವೈದ್ಯಕೀಯ ಸಿಬ್ಬಂದಿಗಳು, ಇತ್ಯಾದಿಗಳನ್ನು ಸರ್ಕಾರ ವ್ಯವಸ್ಥೆ ಮಾಡಿರುವುದಿಲ್ಲ. ಸರ್ಕಾರಿ ಆಸ್ಪತ್ರೆಗಳ ಸಂಖ್ಯೆ ಕಡಿಮೆ ಇದ್ದು, ಹೆಚ್ಚಿನ ಚಿಕಿತ್ಸೆಯ ವ್ಯವಸ್ಥೆ, ಇತ್ಯಾದಿಗಳನ್ನು ಮಾಡುವುದರ ಬದಲಿಗೆ ಖಾಸಗಿ ಆಸ್ಪತ್ರೆಗಳಿಗೆ ರೋಗಿಗಳನ್ನು ಸಾಗಿಸುವ ಹಾಗೂ ಪರಾವಲಂಬನೆಯ ಅವ್ಯವಸ್ಥೆಗೆ ಸರ್ಕಾರ ಜೋತು  ಬಿದ್ದಿರುವುದು ಅದರ ತಪ್ಪು ನೀತಿಯಾಗಿದೆ.  ಇದರಿಂದ ಬಡ ಹಾಗೂ ಕೆಳಮಧ್ಯಮ ವರ್ಗದ ಜನರಿಗೆ ಅತ್ಯಂತ ಅನ್ಯಾಯವಾದಂತೆ ಆಗಿದೆ ಹಾಗೂ ಸಾಂಕ್ರಾಮಿಕ ರೋಗವು ನಿಯಂತ್ರಣ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಕೋವಿಡ್-19 ವಿರುದ್ಧದ ಹೋರಾಟಕ್ಕಾಗಿ ಮುಖ್ಯಮಂತ್ರಿ ನಿಧಿಗೆ ಈಗಾಗಲೇ ಸಾರ್ವಜನಿಕರಿಂದ ಸಂಗ್ರಹಿತ ರೂಪಾಯಿ 291 ಕೋಟಿ ಸಹಾಯಧನ ಸಂಗ್ರಹವಾಗಿದ್ದು ಇದನ್ನು ಕೋವಿಡ್ ಸಾಂಕ್ರಾಮಿಕ ರೋಗ ಚಿಕಿತ್ಸೆಗಾಗಿ ಸರ್ಕಾರ ಅದನ್ನು ಬಳಸಬೇಕೆಂದು ಅವರು ಒತ್ತಾಯಿಸಿದ್ದಾರೆ.  ಅದಲ್ಲದೆ ಜನರಿಗೆ ಉಚಿತ ಹಾಗೂ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ ನೀಡಬೇಕು. ಸರ್ಕಾರಿ ಆಸ್ಪತ್ರೆಗಳನ್ನು ಹಾಗೂ ಅದರ ಸಾಮರ್ಥ್ಯಗಳನ್ನು ಹೆಚ್ಚಿಸಬೇಕು. ಯಾವುದೇ ನಿರ್ಲಕ್ಷ್ಯ, ತಾರತಮ್ಯ, ಶೋಷಣೆ, ಬೆದರಿಕೆ ಮತ್ತು ಅಜಾಗ್ರತೆಗೆ ಎಳ್ಳಷ್ಟೂ ಅವಕಾಶ ಕೊಡಬಾರದು. ಪ್ರತಿಯೊಬ್ಬ ರೋಗಿಗಳೂ ಉಚಿತ ಹಾಗೂ ಉತ್ಕೃಷ್ಟ ಚಿಕಿತ್ಸೆ ಸರ್ಕಾರದಿಂದ ಲಭ್ಯವಾಗಬೇಕು ಎಂದು ಅಬ್ದುಲ್ ಹನ್ನಾನ್  ಸರ್ಕಾರವನ್ನು ಆಗ್ರಹಿಸಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group