ರಾಷ್ಟ್ರೀಯ ಸುದ್ದಿ

 ‘ಚೀನಾದಿಂದ ಪಿಎಂ ಕೇರ್ ಫಂಡ್ ಗೆ ದೇಣಿಗೆ ಸ್ವೀಕರಿಸಿದ ಪ್ರಧಾನಿ ಮೋದಿ ದೇಶ ರಕ್ಷಿಸಬಹುದೇ?’: ಅಭಿಷೇಕ್‌ ಮನು ಸಿಂಘ್ವಿ ಪ್ರಶ್ನೆ

‘ಚೀನಾವನ್ನು ಆಕ್ರಮಕಾರಿ ಎಂದು ಇನ್ನೂ ಏಕೆ ಕರೆದಿಲ್ಲ?’; ಪ್ರಧಾನಿಗೆ ಕಾಂಗ್ರೆಸ್ ಪ್ರಶ್ನೆ

ವರದಿಗಾರ (ಜೂ.29): ‘ಚೀನಾದಿಂದ ಪಿಎಂ ಕೇರ್ ಫಂಡ್ ಗೆ ದೇಣಿಗೆ ಸ್ವೀಕರಿಸಿದ ಪ್ರಧಾನಿ ಮೋದಿ ದೇಶ ರಕ್ಷಿಸಬಹುದೇ?’ ಎಂದು ಕಾಂಗ್ರೆಸ್ ನಾಯಕ ಅಭಿಷೇಕ್‌ ಮನು ಸಿಂಘ್ವಿ ಪ್ರಶ್ನಿಸಿದ್ದಾರೆ.

ರಾಜೀವ್ ಗಾಂಧಿ ಪ್ರತಿಷ್ಠಾನಕ್ಕೆ ಚೀನಾ ಮೂಲದ ಧನ ಸಹಾಯದ ವಿಷಯವನ್ನು ಎತ್ತಿದ ಬಿಜೆಪಿ ವಿರುದ್ಧ ಕಾಂಗ್ರೆಸ್‌ ದಾಳಿ ಮಾಡಿದೆ. ‘ಚೀನಾದ ಸಂಸ್ಥೆಗಳು ಪಿಎಂ ಕೇರ್ಸ್ ನಿಧಿಗೆ ಕೊಡುಗೆ ನೀಡಿವೆ,’ ಎಂದು ಆರೋಪಿಸಿರುವ ಕಾಂಗ್ರೆಸ್‌, ‘ಭಾರತ ಮತ್ತು ಚೀನಾ ಗಡಿ ಸಂಘರ್ಷದಲ್ಲಿ ತೊಡಗಿರುವಾಗ ಇಂತಹ ದೇಣಿಗೆಗಳನ್ನು ಏಕೆ ಸ್ವೀಕರಿಸಲಾಯಿತು?,’ ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

ಶನಿವಾರ ಪ್ರಧಾನಿ ನರೇಂದ್ರ ಮೋದಿ ತಮ್ಮ ‘ಮನ್ ಕಿ ಬಾತ್’ ರೇಡಿಯೋ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ‘ಲಡಾಖ್‌ನಲ್ಲಿ ಭಾರತದ ಭೂಪ್ರದೇಶದ ಮೇಲೆ ಕೆಟ್ಟ ಕಣ್ಣು ಹಾಕಿದವರಿಗೆ ಭಾರತ ಸೂಕ್ತ ಉತ್ತರ ನೀಡಿದೆ,’ ಎಂದು ಹೇಳಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ವಿಡಿಯೊ ಕಾನ್ಫರೆನ್ಸ್‌ ಮೂಲಕ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್‌ ವಕ್ತಾರ ಅಭಿಷೇಕ್‌ ಮನು ಸಿಂಘ್ವಿ, ಕಳೆದ ಆರು ವರ್ಷಗಳಲ್ಲಿ ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರೊಂದಿಗೆ ಮೋದಿ ನಡೆಸಿದ ’18 ಸಭೆ’ಗಳನ್ನೂ ಉಲ್ಲೇಖಿಸಿ ಬಿಜೆಪಿಯನ್ನು ಕುಟುಕಿದ್ದಾರೆ. ‘ಚೀನಾವನ್ನು ಆಕ್ರಮಕಾರಿ ಎಂದು ಇನ್ನೂ ಏಕೆ ಕರೆದಿಲ್ಲ,’ ಎಂದೂ ಅವರು ಪ್ರಶ್ನೆ ಮಾಡಿದ್ದಾರೆ. ‘ಚೀನಾವನ್ನು ಆಕ್ರಮಣಕಾರಿ ಎಂದು ಘೋಷಿಸಬೇಕು ಎಂದು ನಾನು ಪ್ರಧಾನಿ ಮೋದಿ ಅವರಲ್ಲಿ ಕೇಳಿಕೊಳ್ಳುತ್ತೇನೆ’. ‘ರಾಷ್ಟ್ರದ ಭದ್ರತೆ ವಿಚಾರದಲ್ಲಿ ಆಘಾತಕಾರಿ ಎನಿಸುವ ವಿಚಾರ ಎಂದರೆ, ಪ್ರಧಾನಿ ನಿಧಿಯಾಗಿರುವ ‘ಪಿಎಂ ಕೇರ್ಸ್‌’ಗೆ ಮೋದಿಯವರು ಚೀನಾದ ಕಂಪನಿಗಳಿಂದ ದೇಣಿಗೆ ಪಡೆದಿದ್ದಾರೆ. ಇದು ತೀವ್ರ ಆತಂಕಕಾರಿ ಸಂಗತಿ,’ ಎಂದು ಸಿಂಘ್ವಿ ಅತಂಕ ವ್ಯಕ್ತಪಡಿಸಿದ್ದಾರೆ.

‘ವಿವಾದಾತ್ಮಕ ಮತ್ತು ಪಾರದರ್ಶಕವಲ್ಲದ ನೂರಾರು ಕೋಟಿ ರೂಪಾಯಿಗಳನ್ನು ಚೀನಾದ ಕಂಪನಿಗಳಿಂದ ಪಿಎಂ ಕೇರ್ಸ್‌ ನಿಧಿಗೆ ಪಡೆಯುವ ಮೂಲಕ ತಮ್ಮ ಸ್ಥಾನವನ್ನು ರಾಜಿ ಮಾಡಿಕೊಂಡಿರುವ ಪ್ರಧಾನಿ ಮೋದಿ ಅವರು ಚೀನಾದ ಆತಿಕ್ರಮಣ ಶೀಲ ನಡೆಯಿಂದ ದೇಶವನ್ನು ರಕ್ಷಿಸುವರೇ? ಇದಕ್ಕೆ ಮೋದಿ ಉತ್ತರಿಸಬೇಕು’ ಎಂದು ಸಿಂಘ್ವಿ ಒತ್ತಾಯಿಸಿದ್ದಾರೆ.

ಕೋವಿಡ್‌-19 ಸಾಂಕ್ರಾಮಿಕ ರೋಗದಿಂದ ಉಂಟಾಗುವ ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸುವ ಉದ್ದೇಶದಿಂದ ಈ ವರ್ಷದ ಮಾರ್ಚ್‌ನಲ್ಲಿ ಕೇಂದ್ರದ ಬಿಜೆಪಿ ಸರ್ಕಾರವು ‘ಪಿಎಂ ಕೇರ್ಸ್‌’ ನಿಧಿಯನ್ನು ಸ್ಥಾಪಿಸಿತು. ನಿಧಿಗೆ ಬಂದಿರುವ ದೇಣಿಗೆ ಮತ್ತು ಖರ್ಚು ವೆಚ್ಚವನ್ನು ಸಾರ್ವಜನಿಗೊಳಿಸಬೇಕು ಎಂದು ವಿರೋಧಪಕ್ಷಗಳು ಆಗ್ರಹಿಸುತ್ತಿವೆ. ಈ ಮಧ್ಯೆ, ಪಿಎಂ ಕೇರ್ಸ್‌ನ ವಿವರಗಳನ್ನು ನೀಡುವಂತೆ ಆರ್‌ಟಿಐ ಕಾರ್ಯಕರ್ತರು ಸಲ್ಲಿಸಿದ್ದ ಅರ್ಜಿಗಳಿಗೆ ಉತ್ತರ ನೀಡಿರುವ ಕೇಂದ್ರ ಸರ್ಕಾರ, ‘ಪಿಎಂ ಕೇರ್ಸ್‌’ ಆರ್‌ಟಿಐ ವ್ಯಾಪ್ತಿಗೆ ಬರುವುದಿಲ್ಲ’ ಎಂದು ಹೇಳಿ ಕೈ ತೊಳೆದುಕೊಂಡಿದ್ದು, ವಿವರಗಳನ್ನು ನೀಡಲು ನಿರಾಕರಿಸಿದೆ.

To Top
error: Content is protected !!
WhatsApp Join our WhatsApp group