ರಾಷ್ಟ್ರೀಯ ಸುದ್ದಿ

ಎನ್ ಡಿಎ ನೇತೃತ್ವದ ಸರಕಾರವನ್ನು ಕಿತ್ತೊಗೆಯಲು ಬಿಹಾರ ಚುನಾವಣೆಯಲ್ಲಿ ಸ್ಪರ್ಧೆ: ಯಶವಂತ್ ಸಿನ್ಹಾ ಘೋಷಣೆ

ಮಾಜಿ ಬಿಜೆಪಿ ನಾಯಕನಿಂದ ನೂತನ ರಾಜಕೀಯ ಪಕ್ಷ ಸ್ಥಾಪಿಸಿ ಚುನಾವಣೆಯಲ್ಲಿ ಸ್ಪರ್ಧಿಸುವ ಸೂಚನೆ

ವರದಿಗಾರ (ಜೂ.29): ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ನೇತೃತ್ವದ ಸರಕಾರವನ್ನು ಕಿತ್ತೊಗೆಯಲು ನೂತನ ರಾಜಕೀಯ ಪಕ್ಷವನ್ನು ಸ್ಥಾಪಿಸುವುದಾಗಿ ಮಾಜಿ ಬಿಜೆಪಿ ನಾಯಕ ಯಶವಂತ್ ಸಿನ್ಹಾ ಶನಿವಾರ ಹೇಳಿಕೆ ನೀಡಿದ್ದು, ಈ ಮೂಲಕ ಮತ್ತೆ ಚುನಾವಣಾ ರಾಜಕೀಯದ ಅಖಾಡಕ್ಕೆ ಮರಳಿ ಬಿಜೆಪಿಯ ವಿರುದ್ಧ ಸೆಣಸಾಡುವ ಸೂಚನೆ ನೀಡಿದ್ದಾರೆ.

ಸಿನ್ಹಾ ರಾಜಕೀಯ ಸನ್ಯಾಸ ಪಡೆದು ‘ದೇಶದಲ್ಲಿ ಪ್ರಜಾಪ್ರಭುತ್ವ ರಕ್ಷಣೆಗೆ ಕೆಲಸ ಮಾಡುವುದಾಗಿ’ ಎರಡು ವರ್ಷಗಳ ಹಿಂದೆ ಘೋಷಿಸಿ, ಅದಕ್ಕಾಗಿ ‘ರಾಷ್ಟ್ರಮಂಚ’ ಎಂಬ ಸಂಸ್ಥೆಯೊಂದನ್ನು ಸ್ಥಾಪಿಸಿದ್ದರು. ಕಳೆದ ಶನಿವಾರ ನಡೆದ ಸಭೆಯಲ್ಲಿ ಹೊಸ ರಾಜಕೀಯ ಪಕ್ಷದ ಸ್ಥಾಪನೆಯ ನಿರ್ಧಾರ ಪ್ರಕಟಿಸಿದ್ದಲ್ಲದೆ ಪಕ್ಷಕ್ಕೆ ಸೇರ್ಪಡೆಯಾಗಲಿಚ್ಚಿಸುವ ಜನರನ್ನು ಮುಕ್ತವಾಗಿ ಸ್ವಾಗತಿಸಿದ್ದಾರೆ.

ತಮ್ಮ ಪಕ್ಷದ ಹೆಸರನ್ನು ಇನ್ನೂ ನಿರ್ಧರಿಸಿಲ್ಲ. ಬಿಹಾರ ಚುನಾವಣೆಯಲ್ಲಿ ತಮ್ಮ ಪಕ್ಷ ಸ್ಪರ್ಧಿಸಲಿದೆ. ತಾನು ಕೂಡಾ ಚುನಾವಣೆಯಲ್ಲಿ ಸ್ಪರ್ಧಿಸಬಹುದು. ಉತ್ತಮ ಬಿಹಾರ ಸ್ಥಾಪನೆಗೆ ನಮ್ಮ ಮೈತ್ರಿಕೂಟ ಶಕ್ತಿಮೀರಿ ಹೋರಾಡಲಿದೆ. ಬಿಹಾರದ ಹಲವು ಮುಖಂಡರು ಈ ವಿಷಯದಲ್ಲಿ ತಮ್ಮ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಸಿನ್ಹಾ ಹೇಳಿಕೆ ನೀಡಿದ್ದು, ಬಿಜೆಪಿಗೆ ಚುನಾವಣಾ ಪೂರ್ವದಲ್ಲೇ ಭಯದ ವಾತಾವರಣದಲ್ಲಿ ತೇಲಾಡುವಂತೆ ಮಾಡಿದ್ದಾರೆ.

ರಾಜ್ಯದಲ್ಲಿ ಕಳೆದ 15 ವರ್ಷಗಳಿಂದ ಅಧಿಕಾರದಲ್ಲಿದ್ದರೂ ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಸರಕಾರ ರಾಜ್ಯವನ್ನು ಪ್ರಗತಿ ಪಥದಲ್ಲಿ ಕೊಂಡೊಯ್ಯಲು ವಿಫಲವಾಗಿದೆ. “ಬೆಹ್ತರ್ ಬಿಹಾರ್ ಬನಾವೊ”(ಬಿಹಾರವನ್ನು ಅಭಿವೃದ್ಧಿಗೊಳಿಸಿ) ಎಂಬ ಧ್ಯೇಯವಾಕ್ಯದಡಿ ಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆ. ಎನ್‌ಡಿಎ ಸರಕಾರವನ್ನು ಕಿತ್ತೊಗೆಯುವುದು ಬಿಹಾರದ ಅಭಿವೃದ್ಧಿಯ ದಿಕ್ಕಿನಲ್ಲಿ ಇರಿಸುವ ಮೊದಲ ಹೆಜ್ಜೆಯಾಗಿದೆ ಎಂದು ರಾಜಕೀಯ ಬಗೆಗಿನ ನಡೆಯನ್ನು ಸ್ಪಷ್ಟಪಡಿಸಿದ್ದಾರೆ.

ಕಳೆದ 27 ವರ್ಷಗಳಿಂದ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಬಿಹಾರ ಕಡೆಯ ಸ್ಥಾನದಲ್ಲಿದೆ. ಜನತೆಗೆ ಆರೋಗ್ಯ ಸೌಲಭ್ಯ ನೀಡುವ ವಿಷಯದಲ್ಲೂ ಬಿಹಾರ ಕಡೆಯ ಸ್ಥಾನದಲ್ಲಿದ್ದು ರಾಜ್ಯದ ರೈತರು ದೇಶದಲ್ಲೇ ಅತ್ಯಂತ ಬಡವರಾಗಿದ್ದಾರೆ. ದೇಶದ ಕೈಗಾರಿಕೆಗಳಲ್ಲಿ ರಾಜ್ಯದ ಪಾಲು ಕೇವಲ 1.5% ಆಗಿದೆ. ತಟ್ಟೆ ಬಡಿಯುವುದು ಅಥವಾ ಚಪ್ಪಾಳೆ ಬಡಿಯುವುದರ ಬದಲು, ರಾಜ್ಯದ ಸ್ಥಿತಿಗತಿ ಹಾಗೂ ಜನತೆಯ ದೈನಂದಿನ ಬದುಕಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪ್ರತೀ ವಾರ ಮಾಧ್ಯಮಕ್ಕೆ ವಿವರಿಸುತ್ತೇವೆ ಎಂದು ಸಿನ್ಹಾ ಹೇಳಿದ್ದಾರೆ.

To Top
error: Content is protected !!
WhatsApp Join our WhatsApp group