ಜಿಲ್ಲಾ ಸುದ್ದಿ

ದಕ್ಷಿಣ ಕನ್ನಡ : ಕೊರೋನಾ ಪೀಡಿತರ ದಫನ ಕಾರ್ಯಗಳನ್ನು ನೆರವೇರಿಸಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ

ಮಂಗಳೂರು ಜೂ.28: ಕೋವಿಡ್ 19 (ಕೊರೋನ) ಸೋಂಕಿಗೆ ಮೃತಪಟ್ಟ ದಕ್ಷಿಣ ಕನ್ನಡ ಜಿಲ್ಲೆಯ ಮೂರು ಮಂದಿಯ ದಫನ ಕಾರ್ಯಗಳನ್ನು ಅಂತಿಮ ವಿಧಿ ವಿಧಾನಗಳೊಂದಿಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರು ರವಿವಾರ ನೆರವೇರಿಸಿದರು. ಬಂಟ್ವಾಳ ತಾಲೂಕಿನ ಲೊರೆಟ್ಟೊ ಪದವು ಹಾಗೂ ಮಂಗಳೂರು ತಾಲೂಕಿನ ಜೋಕಟ್ಟೆಯಲ್ಲಿ ನಡೆದ ದಫನ ಕಾರ್ಯಗಳನ್ನು ಪಿಎಫ್ಐ ಕಾರ್ಯಕರ್ತರು ನೇರವಾಗಿ ಪಾಲ್ಗೊಂಡು ನಡೆಸಿದರಲ್ಲದೆ, ಇಡ್ಯಾ ನಿವಾಸಿಯೊಬ್ಬರ ದಫನ ಕಾರ್ಯ ಮಂಗಳೂರಿನ ಬೋಳಾರ ಮಸೀದಿಯಲ್ಲಿ ನಡೆದಿದ್ದು, ಇದನ್ನು ಮಸೀದಿ ಆಡಳಿತ ಸಮಿತಿಯ ಸದಸ್ಯರು ನೆರವೇರಿಸಿದ್ದು, PFI ಕಾರ್ಯಕರ್ತರು ಸಹಕರಿಸಿದ್ದರು.

ಲೊರೆಟ್ಟೊ ಪದವು ಜುಮಾ ಮಸೀದಿಯ ದಫನ ಭೂಮಿಯಲ್ಲಿ ನಡೆದ ಅಂತ್ಯಸಂಸ್ಕಾರದ ವೇಳೆ ಇಲ್ಲಿನ ಬದ್ರ್ ಜುಮಾ ಮಸೀದಿಯ ಖತೀಬ್ ಶರೀಫ್ ಅರ್ಶದಿ ಮುಂದಾಳತ್ವದಲ್ಲಿ ನಮಾಝ್ ನಿರ್ವಹಿಸಲಾಯಿತು. ಪಿಎಫ್ಐ ಜಿಲ್ಲಾ ಸಮಿತಿ ಸದಸ್ಯ ನಿಸಾರ್ ವಳವೂರು ನೇತೃತ್ವದಲ್ಲಿ ದಫನ ಕಾರ್ಯಗಳನ್ನು ನೆರವೇರಿಸಲಾಯಿತು. ಜೋಕಟ್ಟೆ ಈದ್ಗಾ ಮಸೀದಿ ದಫನ ಭೂಮಿಯಲ್ಲಿ ನಡೆದ ಮೃತರ ಅಂತ್ಯ ಸಂಸ್ಕಾರದಲ್ಲಿ ಮೃತರ ಮಗ ನಮಾಝ್ ನಿರ್ವಹಿಸಿದ್ದು, ಪಿಎಫ್ಐ ಜಿಲ್ಲಾ ಸಮಿತಿ ಸದಸ್ಯ ಯಹ್ಯಾ ಅಂಗರಗುಂಡಿ ನೇತೃತ್ವದಲ್ಲಿ ಅಂತಿಮ ವಿಧಿ ವಿಧಾನಗಳೊಂದಿಗೆ ದಫನ ಕಾರ್ಯವನ್ನು ನೆರವೇರಿಸಲಾಯಿತು.

ಬೋಳಾರದಲ್ಲಿ ವಿರೋಧದ ನಡುವೆಯೂ ನೆರವೇರಿದ ದಫನ ಕಾರ್ಯ

ಇದೇ ವೇಳೆ ಸುರತ್ಕಲ್ ಸಮೀಪದ ಇಡ್ಯಾ ನಿವಾಸಿಯೊಬ್ಬರು ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದು, ಇಡ್ಯಾ ಜಮಾಅತಿಗೊಳಪಟ್ಟ ಮಸೀದಿಯಲ್ಲಿ ನೀರಿನ ಒರತೆ ಹೆಚ್ಚಿರುವ ಕಾರಣದಿಂದ ದಫನ ಕಾರ್ಯವನ್ನು ನೆರವೇರಿಸಲು ಕಷ್ಟಸಾಧ್ಯವಾಗಿದ್ದು, ನಗರದ ಬೋಳಾರ ಮಸೀದಿಯಲ್ಲಿ ದಫನ ಕಾರ್ಯವನ್ನು ನಡೆಸುವುದಾಗಿ ತೀರ್ಮಾನಿಸಲಾಗಿತ್ತು. ಅದರಂತೆ ಮೃತದೇಹ ಮಸೀದಿ ಆವರಣಕ್ಕೆ ಬಂದಾಗ ಸ್ಥಳೀಯ ಹಿಂದೂ ಬಾಂಧವರು ವಿರೋಧ ವ್ಯಕ್ತಪಡಿಸಿದ್ದರು. ಕೊನೆಯಲ್ಲಿ ಜಿಲ್ಲಾಡಳಿತದ ಮಧ್ಯಪ್ರವೇಶದೊಂದಿಗೆ ಪ್ರಕರಣ ಸುಖಾಂತ್ಯಗೊಂಡು, ಬೋಳಾರ ಮಸೀದಿ ಆವರಣದಲ್ಲೇ ದಫನ ಕಾರ್ಯವನ್ನು ನೆರವೇರಿಸಲಾಯಿತು. ಮಸೀದಿ ಆಡಳಿತ ಮಂಡಳಿಯ ಸದಸ್ಯರು ನಡೆಸಿದ ದಫನ ಕಾರ್ಯದಲ್ಲಿ ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರು ಸಹಕಾರ ನೀಡಿದರು.

ಪಾಪ್ಯುಲರ್ ಫ್ರಂಟ್ ಸಂಘಟನೆ ಇತ್ತೀಚೆಗೆ ದಕ್ಷಿಣ ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯ ಸಹಕಾರದೊಂದಿಗೆ 30 ಮಂದಿ ತನ್ನ ಕಾರ್ಯಕರ್ತರನ್ನು ದಫನ ಕಾರ್ಯಗಳನ್ನು ನಡೆಸುವುದಕ್ಕಾಗಿ ತರಬೇತಿಗೊಳಿಸಿತ್ತು. ಇಂದಿನ ಮೂರು ಪ್ರಕರಣಗಳೂ ಸೇರಿದಂತೆ ಈ ಹಿಂದೆ ಉಳ್ಳಾಲದಲ್ಲಿ ಹಾಗೂ ಬೋಳಾರದಲ್ಲಿ ನಡೆದಿದ್ದ ಕೊರೋನಾ ಪೀಡಿತರ ಅಂತ್ಯ ಸಂಸ್ಕಾರಗಳನ್ನು ಕೂಡಾ ಪಿಎಫ್ಐ ನಡೆಸಿತ್ತು. ಮಹಾರಾಷ್ಟ್ರ, ಪಾಂಡಿಚೇರಿ, ತಮಿಳುನಾಡು, ಕೇರಳ, ಕರ್ನಾಟಕ ಸೇರಿದಂತೆ ದೇಶದಾದ್ಯಂತ 300ಕ್ಕೂ ಹೆಚ್ಚು ಕೊರೋನಾ ಪೀಡಿತ ಮೃತದೇಹಗಳ ಅಂತಿಮ ಸಂಸ್ಕಾರಗಳನ್ನು ಇದೀಗಾಗಲೇ ಪಿಎಫ್ಐ ನೆರವೇರಿಸಿದೆ.

ವೀಡಿಯೋ ಕೃಪೆ : ಡೈಜಿ ವರ್ಲ್ಡ್

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group