ರಾಷ್ಟ್ರೀಯ ಸುದ್ದಿ

ಝೀ ನ್ಯೂಸ್ ಕಚೇರಿಯಲ್ಲಿ 28 ಜನರಿಗೆ ಕೊರೋನಾ ಪಾಸಿಟಿವ್!!

‘ಕೊರೋನಾ ಜಿಹಾದ್’ ಎಂದು ಸುಳ್ಳು ಸುದ್ದಿ ಹರಡುವ ಭರದಲ್ಲಿ, ತನ್ನದೇ ಕಚೇರಿಯಲ್ಲಿ ಕೊರೋನಾ ತಡೆಯುವಲ್ಲಿ ವಿಫಲವಾಯಿತೇ ಝೀ ನ್ಯೂಸ್?

ಸರಕಾರದ ಮಾರ್ಗಸೂಚಿಗಳನ್ನು ಝೀ ನ್ಯೂಸ್ ಪಾಲಿಸಲಿಲ್ಲವೇ?

ವರದಿಗಾರ(ಮೇ.19): 2013ರಿಂದ ಬಿಜೆಪಿಯ ಅನಧಿಕೃತ ಪ್ರಚಾರಕರೆಂದೇ ಕರೆಯಲ್ಪಡುವ ಝೀ ನ್ಯೂಸ್ ಕಚೇರಿಯಲ್ಲಿ 28 ಜನರು ಕೊರೋನಾ ಪಾಸಿಟಿವ್ ಆಗಿದ್ದಾರೆಂದು ವರದಿಯಾಗಿದೆ.

ಈ ಬಗ್ಗೆ ಟ್ವೀಟ್ ಮಾಡಿದ, ಝೀ ನ್ಯೂಸ್ ‘ಎಡಿಟರ್ ಇನ್-ಚೀಫ್’ ಸುಧೀರ್ ಚೌಧರಿ, ಕಳೆದ ವಾರ ತಮ್ಮ ಕಚೇರಿಯಲ್ಲಿ ಓರ್ವನು ಕೊರೋನಾ ಪಾಸಿಟಿವ್ ಆಗಿದ್ದು ಬೆಳಕಿಗೆ ಬಂದಾಗ, ಆತನ ಸಂಪರ್ಕದಲ್ಲಿದ್ದವರನ್ನೆಲ್ಲಾ ಟೆಸ್ಟಿಂಗ್’ಗೆ ಒಳಪಡಿಸಲಾಯಿತು. ಆ ಕಾರಣ, 28 ಜನರು ಕೊರೋನಾ ಪಾಸಿಟಿವ್ ಆಗಿದ್ದಾರೆಂದು ತಿಳಿದು ಬಂದಿದೆ. ಇದರಲ್ಲಿ ಹೆಚ್ಚಿನವರು, ವೈರಸ್’ನ ಯಾವುದೇ ಲಕ್ಷಣಗಳನ್ನು ತೋರಿಸಲಿಲ್ಲ ಎಂದು ತಿಳಿಸಿದ್ದಾನೆ.

ಝೀ ಮೀಡಿಯಾ ಕಾರ್ಪೊರೇಷನ್ ನಲ್ಲಿ 2500 ಉದ್ಯೋಗಿಗಳಿದ್ದು, ಇದೀಗ ಅವರ ಸುರಕ್ಷತೆಗೆ ಪ್ರಾಮುಖ್ಯತೆ ನೀಡಲಾಗಿದೆ ಎಂದೂ ಅವನು ತನ್ನ ಟ್ವೀಟ್ ನಲ್ಲಿ ತಿಳಿಸಿದ್ದಾನೆ.

ದೆಹಲಿಯ ತಬ್ಲೀಗ್ ಜಮಾಅತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೆಲವರು ಕೊರೋನಾ ಪಾಸಿಟಿವ್ ಎಂದು ತಿಳಿದು ಬಂದಾಗ, ಝೀ ನ್ಯೂಸ್ ಪ್ರತೀ ದಿನ ತನ್ನ ಚಾನೆಲ್ ನಲ್ಲಿ ‘ಕೊರೋನಾ ಜಿಹಾದ್’ ಎಂದು ಕಾರ್ಯಕ್ರಮ ನಡೆಸಿ, ದೇಶದೆಲ್ಲೆಡೆ ಇಸ್ಲಾಮೋಫೋಬಿಯಾ ಹರಡುವಂತೆ ಮಾಡಿತ್ತು. ದ್ವೇಷ ಹರಡಿದ್ದಕ್ಕಾಗಿ ಝೀ ನ್ಯೂಸ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇಂದು ಝೀ ನ್ಯೂಸ್ ಕಚೇರಿಯಲ್ಲಿ ಕೊರೋನಾ ಪಾಸಿಟಿವ್ ವರದಿ ಬೆಳಕಿಗೆ ಬಂದಾಗ, ಅಂದು ಝೀ ನ್ಯೂಸ್ ತಬ್ಲೀಗ್ ಜಮಾಅತ್ ವಿರುದ್ಧ ಉಪಯೋಗಿಸಿದ್ದ ತಲೆಬರಹಗಳನ್ನುಪಯೋಗಿಸಿ ನೆಟ್ಟಿಗರು ಝೀ ನ್ಯೂಸ್ ಗೆ ವರದಿಗಾರಿಕೆಯ ಪಾಠವನ್ನು ನೀಡಿದರು.

ಕಳೆದ ವಾರ ಮೊದಲ ಕೇಸ್ ಪತ್ತೆಯಾಗಿದ್ದರೂ ಯಾವುದೇ ಸುರಕ್ಷಾ ಕ್ರಮಗಳನ್ನು ಕೈಗೊಂಡಿಲ್ಲ ಹಾಗೂ ಇನ್ನೂ ಹೆಚ್ಚು ಕೊರೋನಾ ಪಾಸಿಟಿವ್ ಪತ್ತೆಯಾಗಿವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಹೇಳಿದ್ದರೂ, ಎರಡು ದಿನಗಳ ಹಿಂದೆ ಝೀ ನ್ಯೂಸ್ ತನ್ನ ಪ್ರಕಟಣೆಯಲ್ಲಿ ಇದನ್ನು ಕೇವಲ ವದಂತಿ ಎಂದು ಹೇಳಿ ಅಲ್ಲಗಳೆದಿತ್ತು.

ಇದಲ್ಲದೆ, ಇಂದು ಮಾಹಿತಿ ಹೊರಬಂದಾಗ ಹಲವರು ಸುರಕ್ಷಾ ಕ್ರಮಗಳ ಬಗ್ಗೆ ಪ್ರಶ್ನಿಸಿದ್ದರು. ಅದಕ್ಕುತ್ತರಿಸುತ್ತಾ, ಸುಧೀರ್ ಚೌಧರಿ, ತಮ್ಮ ಉದ್ಯೋಗಿಗಳಿಗೆ ಮನೆಯಲ್ಲಿ ಕುಳಿತುಕೊಳ್ಳಬಹುದಾದ ಆಯ್ಕೆಯಿದ್ದರೂ, ನಾವೆಲ್ಲರೂ ವರದಿಗಾರಿಕೆಯಲ್ಲಿ ಮುಂದುವರಿದಿದ್ದೆವು ಎಂದು ಟ್ವೀಟ್ ಮಾಡಿದ್ದನು.

ಇದನ್ನು ಪ್ರಶ್ನಿಸಿದ ಹಲವರು ಝೀ ನ್ಯೂಸ್ ಕಚೇರಿಯಲ್ಲಿ ಕೊರೋನಾ ಲಾಕ್ ಡೌನ್ ಸಂಬಂಧಿತ ಸರಕಾರದ ಮಾರ್ಗಸೂಚಿಗಳನ್ನು ಪಾಲಿಸಲಾಗಿಲ್ಲವೇ ಎಂದು ಕೇಳಿದ್ದಾರೆ.

ಒಟ್ಟಿನಲ್ಲಿ, ತಬ್ಲೀಗ್ ಜಮಾಅತಿನ ಅಜಾಗರೂಕತೆಯನ್ನು, ‘ಕೊರೋನಾ ಜಿಹಾದ್’ ಎಂದು ವರ್ಣಿಸಿ ಮುಸ್ಲಿಂ ಸಮುದಾಯದ ಮೇಲೆ ಆರೋಪ ಹೊರಿಸುವ ಭರದಲ್ಲಿ, ಝೀ ನ್ಯೂಸ್ ತನ್ನ ಕಚೇರಿಯಲ್ಲೇ ಕೊರೋನಾ ಹರಡದಂತೆ ತಡೆಯುವಲ್ಲಿ ವಿಫಲವಾಯಿತೇ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

ಝೀ ನ್ಯೂಸ್ ಸುದ್ದಿಗಳನ್ನೇ ವೇದ ವಾಕ್ಯವೆಂದು ನಂಬುವ ಅಂಧ ಭಕ್ತರಿಗೆ ಇನ್ನೂ ಸತ್ಯ ತಿಳಿದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಅವರು ಇಂದಿಗೂ ತಬ್ಲೀಗ್ ಹೆಸರಿನಲ್ಲಿ ಕಿರುಚಾಡುತ್ತಿದ್ದಾರೆ. ‘ವರದಿಗಾರ’ ಫೇಸ್ಬುಕ್ ಪೇಜಿನಲ್ಲೂ ಈ ರೀತಿ ಕಮೆಂಟ್ ಮಾಡುವ ಕೆಲವು ಅಂಧ ಭಕ್ತರನ್ನೂ ನೀವು ಗಮನಿಸಿರಬಹುದು.

To Top
error: Content is protected !!
WhatsApp Join our WhatsApp group