
ಖಮೀಶ್ ಮುಷಾಯತ್; ಮೃತಪಟ್ಟ ವ್ಯಕ್ತಿಯ ಧಫನ ಕಾರ್ಯ ನಿರ್ವಹಿಸಿದ ISF
ವರದಿಗಾರ (ಮೇ.12): ಕೊರೋನ ಮಹಾಮಾರಿಯಿಂದ ವಿಶ್ವವೇ ಇಂದು ಲಾಕ್ ಡೌನ್ ನಲ್ಲಿದ್ದು, ಅದರ ಮಧ್ಯೆ ಇಂಡಿಯನ್ ಸೋಶಿಯಲ್ ಫೋರಮ್ ಮಾನವೀಯ ಸೇವೆಯಲ್ಲಿ ತೊಡಗಿಸಿಕೊಂಡು ಮೆಚ್ಚುಗೆಗೆ ಪಾತ್ರವಾಗಿದೆ.
2020ರ ಮಾರ್ಚ್ 03 ರಂದು ಸೌದಿ ಅರೇಬಿಯಾದ ಅಶೀರ್ ಪ್ರಾಂತ್ಯದ ಖಮೀಶ್ ಮುಷಾಯತ್ ಬಳಿಯ ಖಾಲಿದೀಯ ಎಂಬಲ್ಲಿ ಫುಟ್ಬಾತ್ ಬಳಿ ತನ್ನ ಸಹೋದರ ಸಮದ್ ಅಲಿ ಜೊತೆ ನಿಂತಿದ್ದಾಗ ಚಾಲಕನ ನಿರ್ಲಕ್ಷ್ಯದಿಂದಾಗಿ ನಿಯಂತ್ರಣ ತಪ್ಪಿದ ಕಾರು ಫುಟ್ಬಾತ್ ಬಳಿ ನಿಂತಿದ್ದ ಉತ್ತರ ಪ್ರದೇಶದ ಗಾಝಿಯಾಬಾದ್ ನಿವಾಸಿ ಸಲ್ಮಾನ್ ಅಲಿಗೆ ಡಿಕ್ಕಿ ಹೊಡೆದಿದೆ. ಅಪಘಾತದಿಂದ ತೀವ್ರ ಸ್ವರೂಪ ಗಾಯಗೊಂಡಿದ್ದ ಅವರು ನಿಧನ ಹೊಂದಿದ್ದರು.
ಸಂತ್ರಸ್ತ ಕುಟುಂಬದ ಕಣ್ಣೀರಿಗೆ ಆಸರೆಯಾದ ಇಂಡಿಯನ್ ಸೋಶಿಯಲ್ ಫೋರಮ್, ಮೃತದೇಹದ ಧಫನ ಕಾರ್ಯವನ್ನು ನೆರವೇರಿಸುವ ನಿಟ್ಟಿನಲ್ಲಿ ಸಲ್ಮಾನ್ ಅಲಿಯವರ ಸೌದಿ ಅರೇಬಿಯಾದ ಪ್ರಾಯೋಜಕ ಸೌದಿ ಪ್ರಜೆಯ ಸಹಾಯದಿಂದ ಕಡತಗಳನ್ನು ಸರಿಪಡಿಸುವಲ್ಲಿ ಮೃತರ ಸಹೋದರನಾದ ಶಮದ್ ಅಲಿ ಇಂಡಿಯನ್ ಸೋಶಿಯಲ್ ಫೋರಮ್ ಕರ್ನಾಟಕ ಕಮೀಸ್ ಮುಶಾಯ್ತ್ ಘಟಕದ ಅಧ್ಯಕ್ಷ, ಭಾರತೀಯ ರಾಯಭಾರಿ ಕಚೇರಿ ಜೆದ್ದ ಇದರ ಸಿ ಡಬ್ಲ್ಯೂ ಸಿ ಸದಸ್ಯರಾಗಿರುವ ಹನೀಫ್ ಮಂಜೇಶ್ವರ ಕುಟುಂಬಕ್ಕೆ ನೆರವಾದರು.
ಹನೀಫ್ ಮಂಜೇಶ್ವರ ನೇತೃತ್ವದ ISF ತಂಡ ಮೃತದೇಹದ ದಫನ ಕಾರ್ಯದ ಪ್ರಕ್ರಿಯೆ ನಡೆಸಲು ಕಾರ್ಯಪ್ರವೃತ್ತರಾಯಿತು. ಇವರ ಸತತ ಪ್ರಯತ್ನದಲ್ಲಿ, ಸೌದಿ ಅರೇಬಿಯಾದ ಕಾನೂನಿನಂತೆ ದಫನಕ್ಕಾಗಿ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿ ವ್ಯವಸ್ಥೆಗೊಳಿಸಲಾಯಿತು. ಅಪಘಾತದಿಂದಾಗಿ ಮೃತಪಟ್ಟಿರುವುದರಿಂದ ಮೃತನ ಕುಟುಂಬಕ್ಕೆ ಬೇಕಾದ ಪರಿಹಾರ ಧನದ ಬಗ್ಗೆ ಸೌದಿ ಪ್ರಜೆಯೊಂದಿಗಿನ ಯಶಸ್ವಿ ಮಾತುಕತೆಯಲ್ಲಿ ಇಂಡಿಯನ್ ಸೋಶಿಯಲ್ ಫೋರಂ 75,000 ಸೌದಿ ರಿಯಾಲ್ (ಸುಮಾರು 15 ಲಕ್ಷ ರುಪಾಯಿ) ಹಣವನ್ನು ಮೃತರ ಕುಟುಂಬಕ್ಕೆ ದೊರಕಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿತು.
2020 ಮೇ 03ರ ಮಧ್ಯಾಹ್ನ ಖಮೀಶ್ ಮುಷಾಯತ್ ಮದೀನಾ ಅಸ್ಕರಿ ರಸ್ತೆ ಬಳಿಯ ಧಫನ ಭೂಮಿಯಲ್ಲಿ ಧಫನ ಮಾಡಲಾಯಿತು. ದಫನ ಕಾರ್ಯದಲ್ಲಿ ಹನೀಫ್ ಮಂಜೇಶ್ವರ ಸೇರಿದಂತೆ ಉತ್ತರಪ್ರದೇಶ, ಕರ್ನಾಟಕ, ಕೇರಳ ಇಂಡಿಯನ್ ಸೋಷಿಯಲ್ ಫೋರಂ ಕಾರ್ಯಕರ್ತರು ಹಾಗು ಸಲ್ಮಾನ್ ಅಲಿ ಕುಟುಂಬಿಕರು ಉಪಸ್ಥಿತರಿದ್ದರು.
ಲಾಕ್ ಡೌನ್ ಮಧ್ಯೆಯೂ ಕಾನುನು ಹೋರಾಟ ಮತ್ತು ಮೃತರ ದಫನ ಕಾರ್ಯದಲ್ಲಿ ಬಿಡುವಿಲ್ಲದೆ ಕಾರ್ಯವೆಸಗಿದ ಇಂಡಿಯನ್ ಸೋಶಿಯಲ್ ಫೋರಮ್ ಕರ್ನಾಟಕ ಕಮೀಸ್ ಮುಶಾಯ್ತ್ ಘಟಕದ ಅಧ್ಯಕ್ಷರೂ ಮತ್ತು ಭಾರತೀಯ ರಾಯಭಾರಿ ಕಚೇರಿ ಜೆದ್ದ ಇದರ ಸಿ ಡಬ್ಲ್ಯೂ ಸಿ ಸದಸ್ಯರಾಗಿರುವ ಹನೀಫ್ ಮಂಜೇಶ್ವರವರ ಕಾರ್ಯವೈಖರಿಗೆ ಸೌದಿ ಅರೇಬಿಯಾದ ಅನಿವಾಸಿ ಭಾರತೀಯರು ಮತ್ತು ಮೃತರ ಕುಟುಂಬಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಪ್ರಶಂಸಿದ್ದಾರೆ.
