ರಾಷ್ಟ್ರೀಯ ಸುದ್ದಿ

ಕೇಂದ್ರ ಸರಕಾರದ ವಿದ್ಯುತ್ ತಿದ್ದುಪಡಿ ಮಸೂದೆಗೆ ಎಸ್‌ಡಿಪಿಐ ತೀವ್ರ ವಿರೋಧ

ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸುವ ಉದ್ದೇಶ ಹೊಂದಿರುವ ಈ ಮಸೂದೆಯು ದೇಶದ ಜನರಿಗೆ ದೊಡ್ಡ ಸವಾಲಾಗಲಿದೆ’

‘ಕಾರ್ಪೊರೇಟ್ ವರ್ಗಕ್ಕೆ ಅನುಕೂಲ ಮಾಡಿಕೊಡಲು ಮೋದಿ ಸರ್ಕಾರವು ಮಸೂದೆಯನ್ನು ಅಂಗೀಕರಿಸುವ ಆತುರದಲ್ಲಿದೆ’

ವರದಿಗಾರ (ಮೇ.11): ಕೇಂದ್ರ ಸರ್ಕಾರದ ಪ್ರಸ್ತಾಪಿತ ವಿದ್ಯುತ್ (ತಿದ್ದುಪಡಿ) ಮಸೂದೆ ೨೦೨೦ ಅನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಎಸ್‌ಡಿಪಿಐ ಪಕ್ಷ ತನ್ನ ತೀವ್ರ ವಿರೋಧವನ್ನು ವ್ಯಕ್ತಪಡಿಸಿದೆ.

‘ವಿದ್ಯುತ್ ಕ್ಷೇತ್ರವನ್ನು ಸಂಪೂರ್ಣವಾಗಿ ಖಾಸಗೀಕರಣಗೊಳಿಸುವ ಉದ್ದೇಶ ಹೊಂದಿರುವ ಈ ಮಸೂದೆಯು ದೇಶದ ಜನರಿಗೆ ದೊಡ್ಡ ಸವಾಲಾಗಲಿದೆ’ ಎಂದು ಎಸ್‌ಡಿಪಿಐ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ. ಫೈಝಿ ಹೇಳಿದ್ದಾರೆ.

ದೇಶವು ಸಂಪೂರ್ಣ ಲಾಕ್‌ಡೌನ್ ಪರಿಸ್ಥಿತಿಯಲ್ಲಿರುವಾಗ, ಆಕ್ಷೇಪಣೆಗಳನ್ನು ಸಲ್ಲಿಸಲು ಕೇವಲ ಮೂರು ವಾರಗಳ ಕಾಲಾವಕಾಶ ನೀಡುವ ಮೂಲಕ ಮಸೂದೆಯನ್ನು ಜಾರಿಗೆ ತರಲು ಸರ್ಕಾರ ತರಾತುರಿಯಲ್ಲಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮಸೂದೆ ಜಾರಿಗೆ ಬರುತ್ತಿರುವಂತೆಯೇ ವಿದ್ಯುತ್ ದರ ತೀವ್ರ ಪ್ರಮಾಣದಲ್ಲಿ ಹೆಚ್ಚಾಗಲಿದೆ. ಆರ್ಥಿಕ ಬಿಕ್ಕಟ್ಟಿನಿಂದಾಗಿ ಈಗಾಗಲೇ ತೀವ್ರ ಸಂಕಷ್ಟದಲ್ಲಿರುವ ಜನರನ್ನು ಈ ವಿದ್ಯುತ್ ದರ ಏರಿಕೆ ಮತ್ತಷ್ಟು ಬಡತನಕ್ಕೆ ತಳ್ಳಲಿದೆ. ಒಂದೋ ಸಬ್ಸಿಡಿ ರದ್ದುಗೊಳಿಸಲಾಗುತ್ತದೆ ಅಥವಾ ಸಬ್ಸಿಡಿಯನ್ನು ರಾಜ್ಯ ಸರ್ಕಾರಗಳ ಮೇಲೆ ಹೊರಿಸಲಾಗುತ್ತದೆ. ಒಂದು ವೇಳೆ ರಾಜ್ಯ ಸರ್ಕಾರಗಳು ಗ್ರಾಹಕರಿಗೆ ಸಬ್ಸಿಡಿ ನೀಡಿದರೆ ರಾಜ್ಯ ಸರ್ಕಾರಗಳ ಬೊಕ್ಕಸಕ್ಕೆ ಹೆಚ್ಚುವರಿ ಹೊರೆಯಾಗುತ್ತದೆ ಎಂದು ಅವರು ಹೇಳಿದ್ದಾರೆ.

ಅಂತಿಮವಾಗಿ, ಈ ತಿದ್ದುಪಡಿಯು ಕಾರ್ಪೊರೇಟ್ ವರ್ಗಕ್ಕೆ ಅನುಕೂಲ ಮಾಡಿಕೊಡಲಿದೆ. ಈ ಉದ್ದೇಶವನ್ನು ಪೂರೈಸಲು ಮೋದಿ ಸರ್ಕಾರವು ಮಸೂದೆಯನ್ನು ಅಂಗೀಕರಿಸಲು ಆತುರದಲ್ಲಿದೆ. ಕಾರ್ಪೊರೇಟ್ ಹಿತಾಸಕ್ತಿಗಳನ್ನು ರಕ್ಷಿಸಲು ಕೇಂದ್ರ ಸರ್ಕಾರದ ಪ್ರಯತ್ನವು ದೇಶದ ಗ್ರಾಹಕರ ಮೇಲೆ, ವಿಶೇಷವಾಗಿ ರೈತರು ಮತ್ತು ಬಡವರ ಮೇಲೆ ದುಷ್ಪರಿಣಾಮ ಬೀರಲಿದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸಲು ಹಲವಾರು ಪ್ರಯತ್ನಗಳು ನಡೆದಿವೆ. ಈ ಲಾಕ್‌ಡೌನ್ ಅದನ್ನು ಪೂರ್ಣಗೊಳಿಸಲು ಉತ್ತಮ ಅವಕಾಶವೆಂದು ಅವರು ಭಾವಿಸಿದ್ದಾರೆ ಎಂದು ಫೈಝಿ ಹೇಳಿದರು.

ಈ ಕಾಯ್ದೆಗೆ ತಿದ್ದುಪಡಿ ತರುವ ಕ್ರಮದಿಂದ ಕೇಂದ್ರ ಸರ್ಕಾರ ತಕ್ಷಣ ಹಿಂದೆ ಸರಿಯಬೇಕು. ಸಂವಿಧಾನದ ಸಮವರ್ತಿ ಪಟ್ಟಿಯಡಿಯಲ್ಲಿ ಬರುವ ವಿದ್ಯುತ್ ಸರಬರಾಜಿನ ಮೇಲಿನ ರಾಜ್ಯ ಸರ್ಕಾರಗಳ ನಿಯಂತ್ರಣವನ್ನು ತೆಗೆದುಹಾಕುವ ಈ ಮಸೂದೆಯನ್ನು ಬಲವಾಗಿ ವಿರೋಧಿಸಲು ಬಿಜೆಪಿಯೇತರ ಪಕ್ಷಗಳು ಮುಂದೆ ಬರಬೇಕೆಂದು ಇದೇ ಸಂದರ್ಭದಲ್ಲಿ ಅವರು ಕರೆ ನೀಡಿದ್ದಾರೆ.

 

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group