ಜಿಲ್ಲಾ ಸುದ್ದಿ

ಅಡ್ಯನಡ್ಕ : ತುರ್ತು ಸೇವೆಗಳಿಗೂ ಕಡಿವಾಣವಿದ್ದ ಕೇರಳ-ಕರ್ನಾಟಕ ಗಡಿಯಲ್ಲಿ ಮದ್ಯ ಸಾಗಾಣಿಕೆ ನಿರಾಯಾಸ..!

ವರದಿಗಾರ – ವಿಟ್ಲ (07-05-2020): ಕೇರಳ ಕರ್ನಾಟಕ ಗಡಿ ಪ್ರದೇಶವಾದ ಅಡ್ಯನಡ್ಕದ ನಿವಾಸಿಗಳಿಗೆ ಇತ್ತೀಚಿನ ದಿನಗಳಲ್ಲಿ ಲಾಕ್ ಡೌನ್ ಕಾರಣದಿಂದ ತುರ್ತು ಸಂದರ್ಭಗಳಲ್ಲಿಯೂ ಕರ್ನಾಟಕವನ್ನು ಸಂಪರ್ಕಿಸಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಇದೀಗ ಕರ್ನಾಟಕದ ಕೇಪು ಗ್ರಾಮ ಪಂಚಾಯತ್ ವ್ಯಾಪ್ತಿಯ ಮರಕ್ಕಿಣಿಯಲ್ಲಿ ಕಾರ್ಯಾಚರಿಸುತ್ತಿರುವ ವೈನ್ ಶಾಪ್ ತೆರೆಯಲು ಕರ್ನಾಟಕ ಸರಕಾರದಿಂದ ಅನುಮತಿ ದೊರಕಿದ್ದು, ಕೇರಳ ಗಡಿ ಭಾಗದ ಪೆರ್ಲ, ನಲ್ಕ, ಕಾಟುಕುಕ್ಕೆ ಮುಂತಾದ ಸ್ಥಳಗಳಿಂದ ಹೆಚ್ಚಿನ ಜನರು ಸುಲಭವಾಗಿ ಕರ್ನಾಟಕವನ್ನು ಪ್ರವೇಶಿಸುತ್ತಿದ್ದಾರೆ.

ಕಳೆದ ಕೆಲವು ದಿನಗಳಿಂದ ತುರ್ತು ಸೇವೆಗೆ ಕೂಡಾ ಅಲಭ್ಯವಾಗಿದ್ದ ಆಟೋ ರಿಕ್ಷಾಗಳು ಇದೀಗ ಕರ್ನಾಟಕ ಸರಕಾರದ ಅನುಮತಿಯೊಂದಿಗೆ ಬಾಡಿಗೆಗೆ ತೆರಳುತ್ತಿದೆ. ಆದರೆ ಅದೇ ರಿಕ್ಷಾಗಳಲ್ಲಿ ಇದೀಗ ಸುಲಭವಾಗಿ ಕೇರಳಿಗರು ವೈನ್‌ಶಾಪ್ಗೆ ಬರುತ್ತಿದ್ದು, ಮದ್ಯವು ಕೇರಳವನ್ನು ತಲುಪುತ್ತಿದೆ. ಕೇಪು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಸರಕಾರೀ ಪ್ರಾಥಮಿಕ ಆಸ್ಪತ್ರೆಯು ಮರಕ್ಕಿಣಿಯಲ್ಲೇ ಇದ್ದು ಅಡ್ಯನಡ್ಕ ಪರಿಸರದ ಸ್ಥಳೀಯರಿಗೆ ಕೂಡಾ ಕೇರಳ ಭೂಪ್ರದೇಶದವರೆಂಬ ನೆಪವನ್ನೊಡ್ಡಿ ಸೇವೆಯನ್ನೂ ನಿರಾಕರಿಸಲಾಗಿ, ಸದ್ಯಕ್ಕೂ ಅದೇ ಸ್ಥಿತಿ ಮುಂದುವರಿಯುತ್ತಿದೆ.

ಈ ಬಗ್ಗೆ ಕೇಪು ಗ್ರಾಮ ಪಂಚಾಯತ್ ಸಂಪೂರ್ಣವಾಗಿ ಮೌನ ವಹಿಸುತ್ತಿದ್ದು, ಒಂದು ಹಂತದಲ್ಲಿ ಕೊರೋನಾ ಅತಿಹೆಚ್ಚು ಬಾಧಿತ ಕೇರಳ ಕಾಸರಗೋಡು ಮೂಲದ ಮದ್ಯಪಾನಿಗಳಿಗೆ ವರವಾಗಿ ಪರಿಣಮಿಸಿದೆ. ಯಾವುದೇ ಇಲಾಖೆಯ ಅಡ್ಡಿಯಿಲ್ಲದೆ ರಿಕ್ಷಾಗಳಲ್ಲಿ ಐದಾರು ಜನರು ಪ್ರಯಾಣಿಸುತ್ತಾ, ಕರ್ನಾಟಕದಿಂದ ಕೇರಳಕ್ಕೆ ಮದ್ಯವೂ ಸಾಗಾಣಿಕೆಯಾಗುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಮದ್ಯಪಾನಿಗಳು ಅಡ್ಯನಡ್ಕವನ್ನು ಆಸರೆಯಾಗಿಸಿ, ಬಂಟ್ವಾಳ ತಾಲೂಕಿನ ಜನರನ್ನು ಮಹಾಮಾರಿಗೆ ತುತ್ತಾಗಿಸುವರೇ ಎಂದು ಸ್ಥಳೀಯ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಅದಲ್ಲದೆ ಹಿಂದೆ ಖಾಸಗಿ ವ್ಯಕ್ತಿಗಳ ಜಮೀನಿನಲ್ಲೂ ಮಣ್ಣು ಹಾಕಿಸಿ ಎಲ್ಲಾ ಒಳದಾರಿಗಳನ್ನು ಮುಚ್ಚಿಸಲು ಮುಂಪಕ್ತಿಯಲ್ಲಿದ್ದ ಕೆಲ ರಿಕ್ಷಾ ಚಾಲಕರುಗಳೇ ಇಂದು ಅದೇ ದಾರಿಗಳ ಮೂಲಕ ಜನರನ್ನು ಕರ್ನಾಟಕಕ್ಕೆ ಕರೆ ತರುತ್ತಿರುವುದು, ಸಂಬಂಧಪಟ್ಟವರು ಮೌನ ವಹಿಸಲು ಕಾರಣವೇ ಎನ್ನುವುದು ಸ್ಥಳೀಯರ ಪ್ರಶ್ನೆ.

‘ವರದಿಗಾರ’ ತಂಡ ಕೇಪು ಗ್ರಾಮ ಪಂಚಾಯತ್ ಅಧ್ಯಕ್ಷ ತಾರಾನಾಥ ಆಳ್ವ ಅವರನ್ನು ಸಂಪರ್ಕಿಸಿದಾಗ, “ನನಗೆ ಈ ಕುರಿತು ಯಾವುದೇ ಮಾಹಿತಿ ಇಲ್ಲ” ಎಂದವರು ಹೇಳಿದ್ದಾರೆ.

ಇದೇ ವೇಳೆ ತನ್ನ ಹೆಸರು ಹೇಳಲಿಚ್ಚಿಸದ ಮತ್ತು ಆ ಪ್ರದೇಶಕ್ಕೆ ಸಂಬಂಧಪಟ್ಟ ಪಂಚಾಯತ್ ಸದಸ್ಯರೋರ್ವರನ್ನು ‘ವರದಿಗಾರ’ ತಂಡ ಸಂಪರ್ಕಿಸಿದ್ದು, “ಪ್ರದೇಶದಲ್ಲಿ ನಡೆಯುತ್ತಿರುವ ಘಟನಾವಳಿಗಳು ವಾಸ್ತವ ಸಂಗತಿಯಾಗಿದ್ದು, ಇಲ್ಲಿನ ವೈನ್ ಶಾಪ್ ನಲ್ಲಿ ಕೇರಳದವರು ಬಂದು ಕುಡಿಯುವುದು ಮಾತ್ರವಲ್ಲದೆ, ಕೇರಳಕ್ಕೆ ಮದ್ಯವನ್ನು ಸಾಗಾಟ ಮಾಡಿ, ದುಪ್ಪಟ್ಟು ಬೆಲೆಗೆ ಅದನ್ನು ಅಲ್ಲಿ ಮಾರಾಟ ಮಾಡುತ್ತಿದ್ದಾರೆ” ಎಂದು ಹೇಳಿದ್ದಾರೆ.

ಕೇರಳದ ಮದ್ಯಪಾನಿ ನುಸುಳುಕೋರರು ಹಾಗೂ ಅವರಿಗೆ ಸಹಾಯ ಮಾಡುತ್ತಿರುವ ರಿಕ್ಷಾ ಚಾಲಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಆದಷ್ಟು ಬೇಗ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಶೀಘ್ರ ಕ್ರಮ ಜರುಗಿಸಿ ಕಾರ್ಯಪ್ರವೃತ್ತರಾದಲ್ಲಿ ದೊಡ್ಡದೊಂದು ಅನಾಹುತಕ್ಕೆ ತೆರೆ ಎಳೆಯಬಹುದಾಗಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group