ಅಭಿಪ್ರಾಯ

ಭಾರತಕ್ಕೆ ದುಬಾರಿಯಾಗುತ್ತಾ ಗಲ್ಫ್ ರಾಷ್ಟ್ರಗಳಲ್ಲಿನ ‘ಕೋಮು ವೈರಸ್’ ?

ವರದಿಗಾರ (ಎ.27): ತಳ ಸೇರಿದ್ದ ಆರ್ಥಿಕ ಪ್ರಗತಿಯ ಪರಿಣಾಮಗಳಿಂದ ರೊಚ್ಚಿಗೇಳತೊಡಗಿದ್ದ ಜನ ಸಾಮಾನ್ಯರ ಧೃಷ್ಟಿಗೆ, ಚೀನಾದಿಂದ ಹೊರಗೆ ಕೊರೋನ ವೈರಸ್ ಸೋಂಕು ಹರಡತೊಡಗಿದಾಗಲೇ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಜರುಗಿಸದ ಮೋದಿ ಸರ್ಕಾರದ ವೈಫಲ್ಯಗಳೂ ಬಿದ್ದರೆ ಮೋದಿಯ ಇಮೇಜಿಗೆ ಬಹು ದೊಡ್ಡ ಹೊಡೆತ ಬೀಳುವುದು ಖಚಿತವಾಗಿತ್ತು. ಇದನ್ನು ತಡೆದು ಜನರ ಗಮನವನ್ನು ಬೇರೆಡೆ ಸೆಳೆಯಲೆಂದೇ ಮುಖ್ಯವಾಹಿನಿ ಮಾಧ್ಯಮಗಳ ಮೂಲಕ ಹರಡಿದ ಮುಸ್ಲಿಂ ದ್ವೇಷದ ಅಡ್ಡ ಪರಿಣಾಮಗಳು ಸ್ವೇದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ಧ್ವನಿಸತೊಡಗಿದೆ.

ಕೆಲವು ಅಂತರರಾಷ್ಟ್ರೀಯ ಮಾನವ ಹಕ್ಕು ಹೋರಾಟಗಾರರು, ವಕೀಲರು ಭಾರತದಲ್ಲಿ ಮುಸ್ಲಿಮರನ್ನು ಗುರಿಯಾಗಿಸಿ ಸಂಘ ಪರಿವಾರ ನಡೆಸುತ್ತಿರುವ ಸರಣಿ ಪೀಡನೆಗಳಗಳ ವಿರುದ್ಧ ‘ಅಂತರರಾಷ್ಟ್ರೀಯ ಕ್ರಿಮಿನಲ್ ಕೋರ್ಟಿ’ನಲ್ಲಿ ಭಾರತದ ವಿರುದ್ಧ ಮೊಕದ್ದಮೆ ಹೂಡಲು ಸಂಘಟಿತವಾಗಿ ಸನ್ನದ್ಧರಾಗುತ್ತಿದ್ದಾರೆ. ಮತ್ತೆ ಮುಸ್ಲಿಂ ರಾಷ್ಟ್ರಗಳ ಪ್ರಮುಖ ವ್ಯಕ್ತಿಗಳು, ಸಂಘ ಪರಿವಾರವು ಮುಸ್ಲಿಮರ ವಿರುದ್ಧ ನಡೆಸುತ್ತಿರುವ ಆಟಾಟೋಪಗಳಿಗೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸಂಘ ಪರಿವಾರದ ಅಂಗಪಕ್ಷವಾದ ಬಿಜೆಪಿಯ ಹಾಲಿ ಸರ್ಕಾರವು ಪರೋಕ್ಷವಾಗಿ ಬೆಂಬಲಿಸುತ್ತಿದ್ದಾರೆಂದು ಆಪಾದಿಸಿ UN ನಲ್ಲಿ ಧ್ವನಿಯೆತ್ತಲು ಮುಂದಾಗಿದ್ದಾರೆ.

ಇಸ್ಲಾಂ ಧರ್ಮ, ಪ್ರವಾದಿ, ಕುರಾನ್ ಮತ್ತು ಮುಸ್ಲಿಮರ ವಿರುದ್ಧ ಸೋಶಿಯಲ್ ಮೀಡಿಯಾಗಳಲ್ಲಿ ಅವಹೇಳನಕಾರಿ ಪೋಸ್ಟುಗಳನ್ನು ಹಾಕುವ ಅನಿವಾಸಿ ಭಾರತೀಯರ ಮೇಲೆ ತೀವ್ರ ನಿಗಾ ಇಟ್ಟು, ಅಂಥವರು ಕಂಡು ಬಂದ ಕೂಡಲೇ ಕೆಲಸದಿಂದ ವಜಾ ಮಾಡಿ ಅಲ್ಲಿಯ ಕಾನೂನಿನ ಅನ್ವಯ ಶಕ್ತವಾದ ಕ್ರಮ ಜರುಗಿಸುವಂತೆ ಗಲ್ಫ್ ರಾಷ್ಟ್ರಗಳ ಪ್ರಜೆಗಳು ವ್ಯಾಪಕವಾಗಿ ಅವರ ಪ್ರಭುತ್ವಗಳ ಮೇಲೆ ಒತ್ತಡ ಹೇರುತ್ತಿದ್ದಾರೆ.

ಇವೆಲ್ಲ ಹೀಗೇ ಮುಂದುವರೆದು ಅಲ್ಲಿಯ ಸರ್ಕಾರಗಳು ಅನಿವಾಸಿ ಭಾರತೀಯರಿಗೆ ನೀಡುವ ಉದ್ಯೋಗಗಳ ಮೇಲೆ ನಿಯಂತ್ರಣ ಹೇರ ತೊಡಗಿದರೆ, ಗಲ್ಫ್ ರಾಷ್ಟ್ರಗಳಲ್ಲಿ ಉದ್ಯೋಗದಲ್ಲಿರುವ ಅನೇಕ ಭಾರತೀಯರ ಬದುಕು ಮೂರಾಬಟ್ಟೆಯಾಗಲಿದೆ. ಈಗಲೇ ನಮ್ಮ ದೇಶದಲ್ಲಿ ಕಳೆದ ನಾಲ್ಕುದಶಕಗಳಲ್ಲಿ ಕಾಣದಂಥಹ ನಿರುದ್ಯೋಗ ತಾಂಡವವಾಡುತ್ತಿದೆ. ಈ ಲಕ್ಷಣದಲ್ಲಿ ಗಲ್ಫ್ ರಾಷ್ಟ್ರಗಳಲ್ಲಿ ಉದ್ಯೋಗ ಕಳೆದುಕೊಂಡು ಲಕ್ಷಾಂತರ ಮಂದಿ ಭಾರತಕ್ಕೆ ಹಿಂದಿರುಗ ತೊಡಗಿದರೆ ಸೃಷ್ಟಿಯಾಗಬಹುದಾದ ಸಮಸ್ಯೆಯ ಅಗಾಧತೆಯ ಅರಿವು ಮಾಧ್ಯಮಗಳು ಹರಡುವ ಸುಳ್ಳುಗಳನ್ನು ನಂಬುವ ಸಾಮಾನ್ಯ ಜನರಿಗೆ ಇರಲಿಕ್ಕಿಲ್ಲ. ತಮ್ಮ ನೆಲದಲ್ಲಿ ಜಾತಿ ಕಾರಣಕ್ಕೆ ಸಾಮಾಜಿಕ-ಆರ್ಥಿಕ ಅಸಮಾನತೆಯಿಂದ ನಲುಗಿದ ಲಕ್ಷಾಂತರ ಮಂದಿ ಶೂದ್ರ ಮತ್ತು ದಲಿತ ಸಮುದಾಯಗಳ ಯುವಕರು ತಮ್ಮ ದುಡಿಮೆಗೆ ಸ್ವದೇಶಕ್ಕಿಂತಲೂ ಹಲವು ಪಟ್ಟು ಹೆಚ್ಚು ಕೂಲಿ ಮತ್ತು ಸೌಲಭ್ಯಗಳನ್ನು ನೀಡುವ ಗಲ್ಫ್ ರಾಷ್ಟ್ರಗಳಲ್ಲಿ ಕಳೆದು ಹೋಗಿದ್ದ ತಮ್ಮ ಸ್ವಾಭಿಮಾನವನ್ನು ಕಂಡು ಕೊಂಡರು. ದೇಶದ ಕೆಲವೇ ಜಾತಿಗಳಿಗೆ ಸೀಮಿತವಾಗಿದ್ದ ಉನ್ನತ ವಿದ್ಯಾಭ್ಯಾಸ, ದೊಡ್ಡ ದೊಡ್ಡ ಮನೆಗಳು, ವಾಹನಗಳು, ಆಧುನಿಕ ಸೌಲಭ್ಯಗಳು, ಬ್ರಾಂಡೆಡ್ ಉಡುಗೆ-ತೊಡುಗೆಗಳ ಮತ್ತಿತರೆ ಕನಸುಗಳು ಈ ಸಮುದಾಯಗಳಿಗೂ ದಕ್ಕುವಂತಾಗಿದ್ದು ಗಲ್ಫ್ ರಾಷ್ಟ್ರಗಳ ಉದ್ಯೋಗಗಳೇ. ಅವೇ ಇಲ್ಲವಾದರೆ, ಮುಂದಿನ ದಶಕಗಳಲ್ಲಿ ಶೂದ್ರ ಮತ್ತು ದಲಿತ ಸಮುದಾಯ ಮತ್ತದೇ ಸನಾತನಿ ಊಳಿಗಮಾನ್ಯ ಶಕ್ತಿಗಳ ಮುಂದೆ ಕೈಕಟ್ಟಿ ಮಂಡಿಯೂರಬೇಕಾದ ದುರವಸ್ಥೆಗೆ ಹಿಂದಿರುಗಿದರೆ ಆಶ್ಚರ್ಯಪಡಲೇನೂ ಇಲ್ಲ. ಎತ್ತ ಕಡೆಯಿಂದ ನೋಡಿದರೂ ಇವೆಲ್ಲ ಹುನ್ನಾರಗಳ ಲಾಭ ಈ ಜಾತಿವ್ಯವಸ್ಥೆಯ ಉಚ್ಛ ಹಂತದಲ್ಲಿರುವವರಿಗೆ ಮಾತ್ರ, ಅದೇ ಸಮಯ ಎಂದಿನಂತೆ ಬಲಿಪಶುಗಳಾಗುವವರು ಈ ದೇಶದ ಶೂದ್ರ ಮತ್ತು ದಲಿತ ಸಮುದಾಯ.

ಲೇಖನ: ದಾದಾ ಕಲಂದರ್ 

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group