ಅಭಿಪ್ರಾಯ

ಕೇಂದ್ರ ಸರಕಾರದ ಬೇಜವಾಬ್ದಾರಿ ನಡೆ ಹಾಗೂ ಕರ್ತವ್ಯ ಮರೆತ ಮಾಧ್ಯಮಗಳು!

ವರದಿಗಾರ (ಎ.27): COVID ಅನ್ನುವ ಮಹಾಮಾರಿ ಡಿಸಂಬರ್ ತಿಂಗಳಲ್ಲಿ ಚೈನಾ ದೇಶದಲ್ಲಿ ಕಾಣಿಸಿಕೊಂಡಾಗ ಎಚ್ಚೆತ್ತುಕೊಳ್ಳದ ನಮ್ಮ ಭಾರತ ಸಾವಿರಾರು ಜನ ಸೇರುವ ಹಲವು ಕಾರ್ಯಕ್ರಮಗಳನ್ನು ಮಾಡುತ್ತಿತ್ತು. ಅದರ ಸಂಪೂರ್ಣ ಮಾಹಿತಿ ಮತ್ತು ಪಟ್ಟಿ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು ಕೂಡ.  Covid ಅನ್ನು ಗಂಭೀರವಾಗಿ ಪರಿಗಣಿಸದೆ “ನಮಸ್ತೆ ಟ್ರಂಪ್” ಕಾರ್ಯಕ್ರಮದ ಜೊತೆ ಜೊತೆಗೆ ವಿಮಾನಗಳಲ್ಲಿ ಬಂದಂತಹ ವಿದೇಶಿಗರು ಸೇರಿದಂತೆ ನಮ್ಮದೇ ದೇಶದ ಪ್ರಜೆಗಳು ಅಲ್ಲಿಂದ ಇಲ್ಲಿಗೆ ಬರುವಾಗ ಸರಿಯಾದ ತಪಾಸಣೆ ಮಾಡದೇ ಅವರನ್ನು ಸರ್ಕಾರಿ ಕ್ವಾರಂಟೇನ್ ಮಾಡದೇ ನೇರ ಮನೆಗೆ ಕಳುಹಿಸಿ ಮತ್ತೊಂದು ತಪ್ಪು ಮಾಡಿಬಿಟ್ಟರು. ಇಷ್ಟೆಲ್ಲಾ ಆಗುವ ಹೊತ್ತಿಗೆ ಮಾರ್ಚ್ ತಿಂಗಳು ಬಂದೇ ಬಿಟ್ಟಿತ್ತು. ಡಿಸಂಬರ್ ನಿಂದ ಫೆಬ್ರವರಿ ತನಕ ಯಾವುದೇ ಕ್ರಮ ಕೈಗೊಳ್ಳದ ಕೇಂದ್ರ ಸರ್ಕಾರವನ್ನು ವಿರೋಧ ಪಕ್ಷದ ನಾಯಕ ಶ್ರಿ ರಾಹುಲ್ ಗಾಂಧಿ ಅವರು ಎಚ್ಚರಿಸಿದರು. ಇದಕ್ಕೆ ಕ್ಯಾರೇ ಅನ್ನದ ಕೇಂದ್ರ ಸರ್ಕಾರ ಯುದ್ದ ಕಾಲದಲ್ಲಿ ಶಸ್ತ್ರಾಭ್ಯಾಸ ಎಂಬಂತೆ ಕುತ್ತಿಗೆಗೆ ಬಂದಾಗ ತತ್ ಕ್ಷಣಕ್ಕೆ ಅಂದರೆ ನಾಲ್ಕು ಘಂಟೆಗಳ ಸಮಯಾವಕಾಶ ನೀಡಿ ದೇಶ ಲಾಕ್ ಡೌನ್ ಆಗುತ್ತದೆ ಎಂಬ ಬಾಂಬ್ ಸಿಡಿಸಿದ್ದು ನಿಜವಾಗಿಯೂ ಒಂದು ದೇಶದ ಪರಿಸ್ಥಿತಿ ಅರಿಯದೆ ಮತ್ತು ಅದರ ಆರ್ಥಿಕ ಪರಿಸ್ಥಿತಿ ಅರಿಯದೆ ತೆಗೆದುಕೊಂಡ ಮೂರ್ಖ ನಿರ್ಧಾವಾಗಿದ್ದು ಸುಳ್ಳಲ್ಲ.

ಇನ್ನುಳಿದ ಹಾಗೆ ವಾರಕ್ಕೊಂದು ಟಾಸ್ಕ್ ಕೊಟ್ಟು ಹೋದ ದೇಶದ ಪ್ರಧಾನಿಯವರು ಇದರ ಮುಂದಿನ ಭಾಗ ಏನಾಗುತ್ತದೆ ಎಂಬ ಊಹೆಯೂ ಇಲ್ಲದೆ ಚಪ್ಪಾಳೆ ತಟ್ಟಿ ಅಂದರು ಅದನ್ನು ತಪ್ಪಾಗಿ ಅರ್ಥೈಸಿಕೊಂಡ ನಮ್ಮ ದೇಶದ ಕೆಲವು ಜನರು ಮಹಾ ಯುದ್ದ ಗೆದ್ದವರಂತೆ ತಟ್ಟೆ ಲೋಟ ಜೊತೆ ಜಾಗಟೆ ಬಾರಿಸಿಕೊಂಡು ನೂರಾರು ಜನ ಗುಂಪು ಕಟ್ಟಿ ಬೀದಿಗೆ ಬಂದದ್ದು ಇಡಿ ಪ್ರಪಂಚವೇ ಕೇಕೆ ಹಾಕುವಂತೆ ಇತ್ತು. ಇಷ್ಟೆಲ್ಲಾ ಆಗುವುದರೊಳಗೆ Covid ಅದಾಗಲೇ ದೇಶವ್ಯಾಪಿ ಹರಡಿತ್ತು ಅನ್ನುವ ಸತ್ಯ ಎಲ್ಲರಿಗೂ ತಿಳಿದಿದ್ದರೂ ಕೇಂದ್ರ ಸರ್ಕಾರದ ಬೇಜವಾಬ್ದಾರಿತನವನ್ನ ಜನರು ವಿರೋಧಿಸಲು ಟೀಕಿಸಲು ಆರಂಭಿಸುತ್ತಿದ್ದಂತೆಯೇ ಕೆಲವೊಂದಷ್ಟು ತಮ್ಮನ್ನು ಮಾರಿಕೊಂಡ ಮಾಧ್ಯಮಗಳು ಜನರ ಗಮನವನ್ನು ಬೇರೆಡೆ ಸೆಳೆಯಲು ಉಪಯೋಗಿಸಿದ ಅಸ್ತ್ರವೆ ತಬ್ಲಿಗ್ ಜಮಾಅತ್ ನ ಕಾರ್ಯಕ್ರಮ. ಇದನ್ನು ಮಾಧ್ಯಮಗಳು ಹೇಗೆ ಬಿಂಬಿಸಿದವು ಎಂದರೆ Covid ಸೋಂಕು ಚೀನಾದ ಮೂಲದಿಂದ ಬಂದದ್ದು ಎನ್ನುವುದನ್ನೇ ಭಾರತದ ಜನ ಮರೆಯುವಂತೆ ಮಾಡಿಬಿಟ್ಟರು !!

ಈ ಸುದ್ದಿಯನ್ನು ಕೇಳಿದಂತೆ ಜನರು ಇಸ್ಲಾಂ ಧರ್ಮವನ್ನು ಮತ್ತು ಮುಸ್ಲಿಮರನ್ನು ದ್ವೇಷಿಸುವ ರೀತಿ ಮಾಡಿಬಿಟ್ಟಿತು.  ಈ ರೀತಿ ಕೇಂದ್ರದ ಬೇಜವಾಬ್ದಾರಿತನ , ವೈಫಲ್ಯವನ್ನು ಪ್ರಶ್ನಿಸುವ ಧೈರ್ಯ ತೋರದ ಮಾಧ್ಯಮಗಳು ಒಂದು ಸಮುದಾಯವನ್ನು ಇದಕ್ಕೆ ಬಲಿ ಕೊಡಲು ಯತ್ನಿಸಿದ್ದು ಇಡೀ ಪತ್ರಿಕೋದ್ಯಮ ಮತ್ತು ಮಾಧ್ಯಮ ತಲೆ ತಗ್ಗಿಸುವಂತದ್ದು ಎಂದು ಹೇಳಲು ಯಾವುದೇ ಅಂಜಿಕೆಯೂ ಇಲ್ಲ. ಹಾಗೊಂದು ವೇಳೆ ಈ ಕಾರ್ಯಕ್ರಮದಿಂದ ಕೊರೋನಾ ಬಂದಿದ್ದೇ ಆದಲ್ಲಿ ಇದಕ್ಕೆ ಮುಂಚೆ ಆದಂತಹ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದವರು ಹೊಣೆಯಾಗುವುದಿಲ್ಲವೆ ಎಂಬುದನ್ನು ಪ್ರಜ್ಞಾವಂತರು ಪ್ರಶ್ನಿಸಬೇಕಾಗುತ್ತದೆ. ಡಿಸಂಬರ್ ನಲ್ಲಿ ಕಾಣಿಸಿಕೊಂಡ Covid  ಇದ್ದೂ ತಬ್ಲೀಗ್ ಜಮಾಅತ್ ಕಾರ್ಯಕ್ರಮ ನಡೆಸಲು ಅನುಮತಿ ಕೊಟ್ಟವರು ಯಾರು ?  ಕೊಟ್ಟ ನಂತರ ತಪಾಸಣೆ ಮಾಡದೇ ಅವರನ್ನು ಒಳಗಡೆ ಬಿಟ್ಟುಕೊಂಡದ್ದು ಯಾರು ಮತ್ತು ಯಾಕೆ ? ಅನ್ನುವ ಹಲವಾರು ಪ್ರಶ್ನೆಗಳು ಇಂದಿಗೂ ಉತ್ತರಕ್ಕಾಗಿ ಕಾಯುತ್ತಿದೆ. ಆದರೆ ಈ ಪ್ರಶ್ನೆಗಳನ್ನು ಕೇಳಬೇಕಾದ ಮಾಧ್ಯಮದವರು  ಒಂದು ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಅವರ ಮೇಲೆ ದ್ವೇಷ ಹುಟ್ಟುವಂತ ಸುದ್ದಿ ಪ್ರಸಾರ ಮಾಡಿದ್ದು ಅಕ್ಷಮ್ಯ ಅಪರಾಧ.

ಇದೇ ರೀತಿ ಮಧ್ಯಪ್ರದೇಶದ IAS ಅಧಿಕಾರಿಣಿ ಪಲ್ಲವಿ ಜೈನ್ ಅವರು ವಿದೇಶದಿಂದ ಮರಳಿದ್ದ ತಮ್ಮ ಮಗನಿಗೆ ಕೊರೋನಾ ಸೋಂಕು ಇರುವ ನಿಜವನ್ನು ಮುಚ್ಚಿಟ್ಟು ಆತ ಕ್ವಾರಂಟೈನ್ ಅನುಭವಿಸುವುದನ್ನು ತಪ್ಪಿಸಲು ಸುಳ್ಳು ಹೇಳಿ ಆತನನ್ನು ಮನೆಗೆ ಕರೆದುಕೊಂಡು ಹೋಗಿದ್ದರು. ಆತನಿಂದ ಇವರಿಗೂ ಸೋಂಕು ತಗುಲಿದರೂ ಸೆಲ್ಫ್ ಕ್ವಾರಂಟೈನ್ ಗೆ ಒಳಪಡದೆ ಒಂದು ಸಭೆ ನಡೆಸಿ ಆ ಸಭೆಯಲ್ಲಿ ನೆರೆದಿದ್ದ ಸುಮಾರು 100 ಜನ ಅಧಿಕಾರಿಗಳಿಗೆ ಸೋಂಕು ಹರಡಲು ಕಾರಣರಾಗಿದ್ದಾರೆ. ಈಗ ಅವರೆಲ್ಲರೂ ಕ್ವಾರಂಟೈನ್ ನಲ್ಲಿ ಇದ್ದಾರೆ. ಈ ವಿಷಯವನ್ನಾ ಯಾಕೆ ಮಾಧ್ಯಮ ಸುದ್ದಿ ಮಾಡಲಿಲ್ಲ , ಸುದ್ದಿ ಮಾಡಿದ್ರೂ ಇದಕ್ಕೆ ಯಾಕೆ ಧರ್ಮದ ಬಣ್ಣ ಬಳಿಯಲಿಲ್ಲ ಅನ್ನೋದನ್ನ ಯೋಚನೆ ಮಾಡಬೇಕಾಗುತ್ತದೆ.

ನೆನಪಿರಲಿ ತಬ್ಲಿಗ್ ಜಮಾತ್ ವಿರುದ್ಧ ಸುಳ್ಳು ಸುದ್ದಿ ಮಾಡಿದ ಝೀ ನ್ಯೂಸ್ ಕ್ಷಮೆ ಯಾಚಿಸಿದೆ. ನೆನಪಿರಲಿ ತಬ್ಲಿಗ್ ಜಮಾತ್ ಕಾರ್ಯಕ್ರಮ ಹಾಜರಾಗಿದ್ದ 100 ಜನ ಕಾಶ್ಮೀರ್ ಪ್ರಜೆಗಳಲ್ಲಿ 100 ಕೂಡ ನೆಗಟಿವ್ report ಬಂದಿದೆ. ನೆನಪಿರಲಿ ಕೊರೋನಾವನ್ನು ಭಾರತಕ್ಕೆ ಬರಲು ಅನುವು ಮಾಡಿಕೊಟ್ಟಿದ್ದು ಕೇಂದ್ರ ಸರ್ಕಾರದ ಬೇಜವಬ್ದಾರಿ ಹಾಗೂ ಅಸಡ್ಡೆಯೇ. ಅದೇ ರೀತಿ ವಿಶೇಷ ವಿಮಾನಗಳಲ್ಲಿ ಬಂದ ಅನಿವಾಸಿ ಭಾರತೀಯರು, ಏರ್ಪೋರ್ಟ್ ನಲ್ಲಿ ಸರಿಯಾದ ತಪಾಸಣೆ ಮಾಡದಿರುವ ಅಧಿಕಾರಿ ವರ್ಗ ಮತ್ತು ಕ್ವಾರಂಟೈನ್ ನಲ್ಲಿ ಇರಿಸಿಕೊಳ್ಳಬೇಕಾದವರನ್ನು ಕೇವಲ ಸೀಲ್ ಹೊಡೆದು ಮನೆಗೆ ಕಳುಹಿಸಿದ್ದು , ಸೀಲ್ ಹೊಡೆಸಿಕೊಂಡವರು ಮನೆಯಲ್ಲಿ ಕೂರದೆ ಬೀದಿ ಬೀದಿ ಸುತ್ತಿದ್ದು ಇದರಲ್ಲಿ ಹಿಂದೂ , ಮುಸ್ಲಿಂ , ಕ್ರೈಸ್ತ ಎಲ್ಲರೂ ಇದ್ದಾರೆ ಅನ್ನೋದನ್ನ ಮಾಧ್ಯಮ ಅರಿತುಕೊಳ್ಳಬೇಕಾಗಿತ್ತು. ತಪ್ಪು ಯಾರೇ ಮಾಡಿದ್ರೂ ತಪ್ಪೇ,  ಅದನ್ನ ಕೇವಲ ಧರ್ಮಾಧಾರಿತವಾಗಿ ಬಿಂಬಿಸುವುದು  ಅಥವಾ ಒಬ್ಬರು ಇಬ್ಬರು ಮಾಡಿದ ತಪ್ಪಿಗೆ ಇಡೀ ಸಮುದಾಯವನ್ನು ದೂಷಿಸುವುದು ತಪ್ಪು. ಕೊನೆಯದಾಗಿ, ಕೊರೋನಾ ದೇಶಕ್ಕೆ ಕಾಲಿಡಲು ಮೊದಲ ಕಾರಣ ಕೇಂದ್ರ ಸರ್ಕಾರದ ಬೇಜವಾಬ್ದಾರಿ ಅನ್ನೋದಂತು ಸುಳ್ಳಲ್ಲ. ಅದನ್ನು ಹಲವು ಸುಳ್ಳು ಸುದ್ದಿಗಳ ಮೂಲಕ ಮರೆಮಾಚಲೂ ಸಾಧ್ಯವಿಲ್ಲ ಅನ್ನೋದು ಸತ್ಯ.

ಲೇಖನ:  ಬಿಂದು (ರಾಜ್ಯ ಕಾರ್ಯದರ್ಶಿ, ಕೆಪಿಸಿಸಿ ಸಾಮಾಜಿಕ ಜಾಲತಾಣ)

 

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group