ಅಭಿಪ್ರಾಯ

ಕೊರೊನಾ ಮತ್ತು ಕೋಮು ರಾಜಕೀಯದ ಸುತ್ತಮುತ್ತ..!

ವರದಿಗಾರ (ಎ.26): ಕೊರೊನಾ ಕೋವಿಡ್ -19 ಪರದೇಶಗಳಿಂದ ಭಾರತಕ್ಕೆ ಹಲವು ಮೂಲಗಳ ಮೂಲಕ ಲಗ್ಗೆಯಿಟ್ಟಿದೆ.  2020ರ ಜನವರಿ ಕೊನೆಯ ವಾರದಿಂದಲೇ ನಿಧಾನ ಗತಿಯಿಂದ ಪ್ರಾರಂಭವಾದ ಕೋವಿಡ್ -19 ರ ಆಗಮನವನ್ನು ಮೊದಲು ಕೇಂದ್ರ ಸರಕಾರವು ಉಪೇಕ್ಷಿಸಿದ ಪರಿಣಾಮ, ದೇಶದ ಮೂಲೆ ಮೂಲೆಗಳಿಗೆ ಈ ಕಾಯಿಲೆ ಪಸರಿಸಿತು.  2019ರ ದಶಂಬರ ತಿಂಗಳ ಕೊನೆಯ ವಾರದಲ್ಲೇ ನೆರೆಯ ಚೀನಾ ದೇಶದ ವ್ಯೂಹಾನ್ ನಲ್ಲಿ ಮೊದಲಿಗೆ ಕಾಣಿಸಿಕೊಂಡು ಅಗಾಧ ಸಂಖ್ಯೆಯಲ್ಲಿ ಅಲ್ಲಿನ ಜನರನ್ನು ಬಲಿ ತೆಗೆದುಕೊಂಡ  ಈ ಮಹಾ ಮಾರಿಯ ಬಗ್ಗೆ ಕೇಂದ್ರ ಸರಕಾರಕ್ಕೆ ಅದಾಗಲೇ ಸಾಕಷ್ಟು ಮಾಹಿತಿಯಿತ್ತು. ನಂತರದ ದಿನಗಳಲ್ಲಿ ಕೋವಿಡ್ -19  ಚೀನಾದ ಗಡಿಯನ್ನು ದಾಟಿ ಹತ್ತಿರದ ಕೊರಿಯಾ, ಕೊಲ್ಲಿ ರಾಷ್ಟ್ರಗಳು, ಯುರೋಪಿನ ಇಟಲಿ, ಫ್ರಾನ್ಸ್, ಸ್ಪೆಯಿನ್ ಇತ್ಯಾದಿ ಶ್ರೀಮಂತ ರಾಷ್ಟ್ರಗಳಿಗೂ ಮತ್ತು ಜಗತ್ತಿನ ಅತಿ ಶ್ರೀಮಂತ ದೇಶ ಅಮೇರಿಕಾಕ್ಕೂ ಲಗ್ಗೆಯಿಟ್ಟು ದಾಂಧಲೆ ನಡೆಸಿತು. ಆಗಲೂ ಎಚ್ಚರಗೊಳ್ಳದ ನಮ್ಮ ಕೇಂದ್ರ ಸರಕಾರ ಟ್ರಂಪ್ ಮಹಾಶಯರನ್ನು ಯಾವ ರೀತಿ ದೇಶಕ್ಕೆ ಬರಮಾಡಿ ಖುಷಿಪಡಿಸಬೇಕೆಂಬ ಹುಚ್ಚು ಲೆಕ್ಕಾಚಾರದಲ್ಲೇ ಮುಳುಗಿ ಗುಜರಾತ್ ಗೋಡೆಯ ನಿರ್ಮಾಣದ ಸಿದ್ಧತೆಗಳಲ್ಲೇ ತಲ್ಲೀನವಾಯಿತು. ಫೆಬ್ರವರಿ 24 ರಂದು ಅಹಮದಾಬಾದಿನಲ್ಲಿ ಸುಮಾರು ಒಂದೂವರೆ ಲಕ್ಷದಷ್ಟು (ಹತ್ತು ಸಾವಿರಕ್ಕಿಂತಲೂ ಮಿಕ್ಕಿದ ವಿದೇಶಿಗರನ್ನೂ ಸೇರಿಸಿ) ಜನರ ಸಮಾವೇಶ ನಡೆಸಿ ಮೋದಿಜಿ ಮತ್ತು ಟ್ರಂಪ್ ಪರಸ್ಪರ ಆಲಿಂಗನದಲ್ಲಿ ಭಾವಪರವಶರಾದ ಸಮಯ ಕೊರೊನಾ ವೈರಸ್ ಭಾರತಕ್ಕೆ ಪ್ರವೇಶಿಸಿ ತನ್ನ ಹೆಡೆಯೆತ್ತಿತ್ತು.

ಮಾರ್ಚ್ ತಿಂಗಳ ಮೂರನೇ ವಾರಾಂತ್ಯದವರೆಗೂ ಜಾಗತಿಕ ಆರೋಗ್ಯ ಸಂಸ್ಥೆಯ ಸಕಾಲಿಕ ಎಚ್ಚರಿಕೆಯ ಮಾತುಗಳಿಗೆ ಕೇಂದ್ರ ಸರಕಾರ ಜಾಣ ಕಿವುಡು ಪ್ರದರ್ಶಿಸುತ್ತಾ ಕೋವಿಡ್ ನಿಯಂತ್ರಣದ ಯಾವುದೇ ಗಂಭೀರ ಸಿದ್ಧತೆಗಳನ್ನು ನಡೆಸದೆ ಬರೇ ಆಮೆಗತಿಯಲ್ಲಿ ಸಾಗುತ್ತಿತ್ತು.  ನಂತರ ಏಕಾಏಕಿ ದೇಶದುದ್ದಕ್ಕೂ ಲಾಕ್ ಡೌನ್ ಹೇರಿತು. ಇದೀಗ ಕೋವಿಡ್ -19 ನಿಯಂತ್ರಿಸಲು  ಸದ್ಯಕ್ಕೆ ಮೇ 3 ರವರೆಗೆ ದೇಶ ಸಾಮಾಜಿಕ‌ ಅಂತರದ ಮೊರೆ ಹೊಕ್ಕಿ ಸಂಪೂರ್ಣ ಲಾಕ್ ಡೌನ್ ಸ್ಥಿತಿಯಲ್ಲಿದ್ದು ಸರಕಾರ ಮತ್ತು ಜನತೆ ಈ ಮಹಾ ಸಾಂಕ್ರಾಮಿಕ ಕಾಯಿಲೆಯ ವಿರುದ್ಧ ಸತತ ಹೋರಾಟ ನಡೆಸುತ್ತಿದ್ದಾರೆ. ಸರಕಾರದ ಈ ಲಾಕ್ ಡೌನ್ ಕ್ರಮವನ್ನು ಸಮರ್ಥಿಸುತ್ತಾ, ಇದರ ಸಾಧಕ ಬಾಧಕಗಳ ಬಗ್ಗೆ ಚರ್ಚಿಸುವ ಗೋಜಿಗೆ ಹೋಗದೆ , ಸರಕಾರ ಮತ್ತು ಮಾಧ್ಯಮಗಳು ಈ ಮಹಾಮಾರಿಯ ನಿಯಂತ್ರಣದ ನೆಪದಲ್ಲಿ  ಎಸಗುತ್ತಿರುವ ಕೋಮು ರಾಜಕೀಯದ  ಬಗ್ಗೆ  ಮಾತ್ರ ಬೆಳಕು ಚೆಲ್ಲುವ ಪ್ರಯತ್ನವಿದು.

ದೇಶ ನಿರುದ್ಯೋಗ, ಬಡತನ, ಬೆಲೆ ಏರಿಕೆ, ಶೈಕ್ಷಣಿಕ ಮತ್ತು ಆರೋಗ್ಯ ಸಮಸ್ಯೆಗಳಿಂದ ಕಂಗೆಟ್ಟು ತೀರಾ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದಾಗ  ಕೇಂದ್ರ ಸರಕಾರ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಸಿ.ಎ.ಎ. ಮತ್ತು ಎನ್.ಆರ್.ಸಿ. ಕಾಯ್ದೆಯನ್ನು ಜ್ಯಾರಿಗೊಳಿಸಿ, ನುಸುಳುಕೋರರನ್ನು ಸದೆಬಡಿಯಲು ಪೌರತ್ವ (citizenship)ದ ಭೂತವನ್ನು ಸೃಷ್ಟಿಸಿತು. ಧರ್ಮ, ಭಾಷೆ, ಪ್ರದೇಶಗಳ ಭೇದವಿಲ್ಲದೆ ಇಡೀ ದೇಶವೇ ಈ ಕಾಯ್ದೆಯನ್ನು ಪ್ರತಿಭಟಿಸಿ ಉಗ್ರ ಚಳವಳಿಯಲ್ಲಿ ತೊಡಗಿತು. ಕಾಯ್ದೆಯು ಮುಸ್ಲಿಮ್ ಸಮುದಾಯವನ್ನು ನಿರ್ಲಕ್ಷಿಸಿದ ಕಾರಣ ಸಹಜವಾಗಿಯೇ ದೇಶದುದ್ದಕ್ಕೂ ನಡೆದ ಪ್ರತಿಭಟನೆಗಳಲ್ಲಿ ಮುಸ್ಲಿಮರ ರೋಷ ಮತ್ತು ಪಾತ್ರ ಎದ್ದು ಕಾಣುತ್ತಿತ್ತು. ದಿಲ್ಲಿಯ ಶಾಹಿನ್ ಬಾಗ್ ಪ್ರತಿಭಟನೆ ಚರಿತ್ರಾರ್ಹವಾಗಿತ್ತು. ಈ ನ್ಯಾಯಯುತ ಪ್ರತಿಭಟನೆಗಳಿಂದ ಕಂಗೆಟ್ಟ ಕೇಂದ್ರ ಸರಕಾರ ಈ ಸಿ.ಎ.ಎ. ವಿರೋಧಿ ಪ್ರತಿಭಟನೆಗಳಿಗೆ ಕೋಮು ಬಣ್ಣ ಹಚ್ಚುವ ಹುಚ್ಚು ಸಾಹಸಕ್ಕೆ ಕೈ ಹಾಕಿತು. ಮುಸ್ಲಿಮ್ ಸಮುದಾಯವನ್ನು ಹಳಿಯುವ ಹಳೆಯ ಚಾಳಿಯನ್ನು ಮುಂದುವರೆಸಿ ಧರ್ಮದ ಹೆಸರಲ್ಲಿ ದೇಶ ಒಡೆಯುವ ಹುನ್ನಾರ ನಡೆಸಿತು.   ಇದ್ಯಾವುದಕ್ಕೂ ಜಗ್ಗದ ದೇಶದ ಜನತೆ ಒಕ್ಕೊರಲಿನಿಂದ ಈ ಅಸಾಂವಿಧಾನಿಕ ಸಿ.ಎ.ಎ. ಕಾಯ್ದೆಯ ವಿರುದ್ಧ ತಿರುಗಿ ಬಿದ್ದು ಚಳವಳಿಗಳು ಎರಡನೆಯ ಸ್ವಾತಂತ್ರ್ಯ ಸಂಗ್ರಾಮದ ಸ್ವರೂಪವನ್ನು ಪಡೆದುಕೊಳ್ಳಲಾರಂಭಿಸಿತು. ತನ್ನ ಬಲಪ್ರಯೋಗದ ನೀತಿಗಳು, ಕೋಮು ಅಜೆಂಡಾಗಳು ಫಲಪ್ರದವಾಗದೆ ಕೇಂದ್ರ ಸರಕಾರ ಕಂಗೆಟ್ಟಿತು. ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳು ಕೇಂದ್ರ ಸರಕಾರವನ್ನು ಬೆಂಬಲಿಸಿ ಸಿ.ಎ.ಎ.ವಿರೋಧಿ ಚಳವಳಿಗೆ ಕೋಮು ಬಣ್ಣವನ್ನು ಹಚ್ಚಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಕೇಂದ್ರ ಸರಕಾರದ ಹತಾಶೆಯ ಸ್ಥಿತಿ ಅದು ಆಯೋಜಿಸಿದ ಸಿ.ಎ.ಎ.ಬೆಂಬಲಿತ ಸಮಾವೇಶಗಳಲ್ಲಿ ಎದ್ದು ಕಾಣುತ್ತಿತ್ತು.

ಈ ಮಧ್ಯೆ ನಡೆದ ಅನೇಕ ರಾಜ್ಯ ವಿಧಾನ ಸಭಾ ಚುನಾವಣೆಗಳ ಸಮಯದಲ್ಲಿ ಕೇಂದ್ರ ಸರಕಾರದ ಕೋಮು ಅಜೆಂಡಾಗಳೆಲ್ಲವೂ ನೆಲಕಚ್ಚಿರುವುದಂತೂ ಸತ್ಯ. ದೆಹಲಿ ಚುನಾವಣೆಯ ವೇಳೆ ಕೇಂದ್ರ ಸರಕಾರದ ಮಂತ್ರಿ ವರೇಣ್ಯರ ಅಬ್ಬರದ ಕೋಮು ಪ್ರಚಾರದ ಹೊರತಾಗಿಯೂ ಆಪ್ ಪಕ್ಷ ಅಧಿಕಾರ ಗಳಿಸಿತು. ಅದರ ಬೆನ್ನಿಗೇ ಅಮೇರಿಕಾದ ಅಧ್ಯಕ್ಷರ ಭಾರತ ಭೇಟಿಯ ವೇಳೆಯೇ ದೆಹಲಿಯಲ್ಲಿ ಕೇಂದ್ರ ಸರಕಾರ ಪ್ರಾಯೋಜಿತ ಕೋಮು ದಂಗೆಗಳು ನಡೆದು ಅನೇಕ ಮುಸ್ಲಿಮ್ ನಾಗರಿಕರ ಹತ್ಯೆಗೈಯಲಾಯಿತು, ಆಸ್ತಿ ಪಾಸ್ತಿಗಳನ್ನು ನಾಶ ಪಡಿಸಲಾಯಿತು.  ತಮ್ಮ ಸಾಂವಿಧಾನಿಕ ಕರ್ತವ್ಯಗಳನ್ನು ಮರೆತ ದೆಹಲಿ ಪೋಲೀಸರು ಈ ದುಷ್ಕೃತ್ಯಗಳಿಗೆಲ್ಲಾ ಬರೇ ಮೂಕಪ್ರೇಕ್ಷಕರಾದರು. ಪೋಲೀಸ್ ಇಲಾಖೆಯ  ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ ದೆಹಲಿ ಹೈಕೋರ್ಟಿನ ನ್ಯಾಯಾಧೀಶರಾದ ಎಸ್.ಮುರಲೀಧರ್ ರವರನ್ನೇ ಎತ್ತಂಗಡಿ ಮಾಡಲಾಯಿತು. ಈ ರೀತಿ ಭಾರತದ ಸಂವಿಧಾನದ ಆಶಯಗಳನ್ನೆಲ್ಲಾ ಗಾಳಿಗೆ ತೂರಲಾಯಿತು. ಈ ಎಲ್ಲಾ ಬೆಳವಣಿಗೆಗಳು ಮೂರು ಅಂಶಗಳನ್ನು ಸ್ಪಷ್ಟ ಪಡಿಸಿತ್ತು. ಒಂದನೆಯದಾಗಿ, ಮಾಧ್ಯಮದ ಬೆಂಬಲದ ಹೊರತಾಗಿಯೂ ಕೇಂದ್ರದ ಆಳುವ ಸರಕಾರದ ಕೋಮು ರಾಜಕೀಯವು ಹಳಸಲಾಗಿ ಶಕ್ತಿಗುಂದಿತ್ತು. ಎರಡನೆಯದಾಗಿ, ಸಂವಿಧಾನವನ್ನು ನಾಶಪಡಿಸುವ ಕೇಂದ್ರ ಸರಕಾರದ ಹುನ್ನಾರಗಳಿಗೆ ಸಿ.ಎ.ಎ. ವಿರೋಧಿ ಚಳವಳಿ ಕೊಡಲಿಯೇಟು ನೀಡಿತ್ತು. ದೇಶದ ಜನತೆ ಸಂವಿಧಾನದ ಆಶಯಗಳ ಬಗ್ಗೆ ಹೆಚ್ಚೆಚ್ಚು ಪ್ರಜ್ಞಾವಂತರಾದರು. ಮೂರನೆಯದಾಗಿ, ಕೇಂದ್ರ ಸರಕಾರದ ಜನವಿರೋಧಿ, ಕಾರ್ಪೊರೇಟ್ ಶ್ರೀಮಂತ ಪರ ನೀತಿಯಿಂದಾಗಿ ದೇಶದ ಆರ್ಥಿಕತೆ ಸಂಪೂರ್ಣ ನೆಲಕಚ್ಚಿತ್ತು.

ಈ ದುರವಸ್ಥೆಯಿಂದ ಪಾರಾಗಲು ಯಾವುದೇ ದಾರಿ ಕಾಣದ ಕೇಂದ್ರ‌ ಸರಕಾರದ ಕಥೆ ನೀಲಿ ಬಣ್ಣದ ನೀರಿನಲ್ಲಿ ಬಿದ್ದು ಎದ್ದ ನೀಲಿ ನರಿಯಂತಾಗಿತ್ತು. ಕಾಡಿನ ರಾಜ ತಾನೆಂದು ಘೋಷಿಸಿ ತನ್ನ ಖೋಟಾ ರಾಜತ್ವವನ್ನು ಉಳಿಸಲು ಹೆಣಗಾಡಿ ಸೋತು ಸುಣ್ಣವಾಗಿ ಕೊನೆಗೆ ಬಾನಿನ ಚಂದಿರನನ್ನು ನೋಡಿ ಕೂಗುವ ಹೊತ್ತಾಗಿತ್ತು. ಇನ್ನೇನು ತನ್ನ ಬಣ್ಣ ಬಯಲಾಗುತ್ತದೆ ಎನ್ನುವ ಹಂತದಲ್ಲಿ ಪರದೇಶದಿಂದ ಧೊತ್ ಎಂದು ಕೋವಿಡ್ 19ರ ಆಗಮನ…!!!

ನೀರಲ್ಲಿ ಮುಳುಗುವವನಿಗೆ ಒಂದು ಚಿಕ್ಕ ಹುಲ್ಲು ಕಡ್ಡಿ‌ ಆಸರೆಯಾದಂತೆ ಈ ಮಹಾಮಾರಿ ಕೊರೊನಾ19 ಕೇಂದ್ರ ಸರಕಾರದ ನೆರವಿಗೆ ಬಂತೇನೋ ನಿಜ. ಈ ಮಹಾ ಕಾಯಿಲೆಯನ್ನು ನಿಭಾಯಿಸುವ ತಂತ್ರ ಹೆಣೆಯಲು ವಿರೋಧ ಪಕ್ಷಗಳ ನೆರವನ್ನೂ ಪಡೆಯದೆ ಎಲ್ಲವನ್ನೂ ತಿಳಿದ ಮಹಾ ಪಂಡಿತನಂತೆ ವರ್ತಿಸುತ್ತಿರುವ ಕೇಂದ್ರ ಸರಕಾರದ ಸರ್ವಾಧಿಕಾರಿ ವರ್ತನೆಯು ಮಾತ್ರ ಪ್ರಜಾಸತ್ತೆಯ ನೀತಿಗಳಿಗೆ ತೀರಾ ವ್ಯತಿರಿಕ್ತವೆಂಬುದರಲ್ಲಿ ಅನುಮಾನವೇ ಇಲ್ಲ.

ಕೊರೊನಾ ನಿಯಂತ್ರಣದಲ್ಲಿ ರಾಜಕೀಯ ಬೇಡವೆಂಬ ನಿಲುವು ಎಲ್ಲರೂ ಒಪ್ಪ ತಕ್ಕ ವಿಚಾರವೇ ಆಗಿದೆ. ಆದರೆ ಕೇಂದ್ರದ ಆಳುವ ಪಕ್ಷದ ಈ ನಿಲುವು ಕೇವಲ ಬೂಟಾಟಿಕೆಯದ್ದು ಎಂಬುದು ಸ್ಫಟಿಕದಷ್ಟೇ ಸತ್ಯ. ಮಾರ್ಚ್ ತಿಂಗಳ 22 ರ ಒಂದು ದಿನದ ಕೊರೊನಾ ಕರ್ಫ್ಯೂವಿನಿಂದ ತೊಡಗಿ ಲಾಕ್ ಡೌನ್ ಹೇರಿದಂದಿನಿಂದ ಇಂದಿನವರೆಗೂ  ಕೊರೊನಾ ನಿಯಂತ್ರಣದ ನೆವನದಲ್ಲಿ ಕೇಂದ್ರದ ಆಡಳಿತ ಪಕ್ಷವು ಕೋಮು ರಾಜಕೀಯವನ್ನೇ ಮಾಡುತ್ತಿದೆ ಎಂಬುದರಲ್ಲಿ ಅನುಮಾನವಿಲ್ಲ. ವಿರೋಧ ಪಕ್ಷಗಳ ಬಾಯಿ ಮುಚ್ಚಿಸಲು ಮಾತ್ರ “ಕೊರೊನಾದಲ್ಲಿ ರಾಜಕೀಯವಿಲ್ಲ” ಎಂಬ ನಿರಂತರ ಅಣಿಮುತ್ತುಗಳು ಕೇವಲ ಇವರ ಬೂಟಾಟಿಕೆಯಷ್ಟೆ!! ಹಾಗೆ ಸೂಕ್ಷ್ಮವಾಗಿ ಗಮನಿಸಿದರೆ ಮಾರ್ಚ್ 22ರ ಮೊದಲ ಕೊರೊನಾ ಕರ್ಫ್ಯೂವಿನ ಸಮಯ ಅನೇಕ ಮೋದಿ ಬೆಂಬಲಿಗರು ದೇಶದ ನಾನಾ ಕಡೆಗಳಲ್ಲಿ ಕರ್ಫ್ಯೂ ಮುರಿದು  ರಸ್ತೆಗೆ ಬಂದು ಬಟ್ಟಲು-ಜಾಗಟೆ ಪುಡಿಯಾಗುವವರೆಗೆ ಬಡಿದು, ಶಂಖ ಊದಿ ‘ವಂದೇ ಮಾತರಂ’ ಎಂದು ಬೊಬ್ಬಿಟ್ಟಾಗಲೇ ಈ ಸೂತ್ರದ ಹಿಂದಿನ ಇವರ ಕೋಮು ರಾಜಕೀಯದ ಗುಟ್ಟು ರಟ್ಟಾಗಿತ್ತು. ನಂತರದ ಲಾಕ್ ಡೌನ್ ಸಮಯ ಎಪ್ರಿಲ್ 5ರ ರಾತ್ರಿ 9.00 ಗಂಟೆಯ ಒಂಭತ್ತು ನಿಮಿಷದ ಮೊಂಬತ್ತಿ ಅಥವಾ ದೀಪ‌ ಹಚ್ಚುವ ಕಾರ್ಯಕ್ರಮವಂತೂ ಭಕ್ತರ ಕೋಮು ಉನ್ಮಾದಕ್ಕೆ ಕನ್ನಡಿ ಹಿಡಿದಿತ್ತು ಎಂದರೆ ತಪ್ಪಾಗದು. ಮೋದಿಯವರ ಮನವಿಗೆ (ಒಳಗಿನ ಗುಟ್ಟು ಶಿವನೇ ಬಲ್ಲ) ತದ್ವಿರುದ್ಧವಾಗಿ ಕರ್ಫ್ಯೂ ಉಲ್ಲಂಘಿಸಿದ ಭಕ್ತರು ಮನೆಯ ಹೊರಗೆ ಬಂದು ದೊಂದಿ ಹಿಡಿದು ‘ಭಾರತ್ ಮಾತಾ ಕಿ ಜೈ’,  ‘ವಂದೇ ಮಾತರಂ’ ಎಂದು ಆವೇಶಭರಿತ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ಮಾಡಿದ್ದಲ್ಲದೆ ಪಟಾಕಿ ಸಿಡಿಸಿ, ಅನೇಕ ಕಡೆ  ಕಟ್ಟಡ, ಮರ ಗಿಡಗಳಿಗೆ  ಬೆಂಕಿ ಹಚ್ಚಿ ದಾಂಧಲೆ ನಡೆಸಿದರು. ಈ ಕ್ರಿಮಿನಲ್ ಕೃತ್ಯ ಎಸಗಿದವರ ಮೇಲೆ ಕೇಸು ಜಡಿಯಲು ಪೋಲೀಸರು ಯಾವುದೇ ಮುತುವರ್ಜಿಯನ್ನು ಸಹಾ ತೋರಲಿಲ್ಲ.  ಪ್ರಧಾನಿಯವರ ಈ ಚಪ್ಪಾಳೆ ಮತ್ತು ದೀಪ ಹಚ್ಚುವಿಕೆಯ ಮನವಿ ಮತ್ತು ಭಾಷಣಗಳನ್ನು ದಿನದ 24 ಗಂಟೆ ವಿಜ್ರಂಭಿಸಿ ಎಡೆಬಿಡದೆ ಪ್ರಸಾರ ಮಾಡಿದ ದೇಶದ ಹೆಚ್ಚಿನ ಮಾಧ್ಯಮಗಳ ನಡತೆ  ತೀರಾ ಬೇಜವಾಬ್ದಾರಿತನ ಮತ್ತು ನಾಚಿಕೆಗೇಡಿನದ್ದಾಗಿದೆ. ಕೋವಿಡ್ 19 ರ ದಾಂಧಲೆ ಎದುರಿಸುವ ಅಂದಿನ ವಿಷಮ ಪರಿಸ್ಥಿತಿಯಲ್ಲಿ ಮಾಧ್ಯಮದ ಇಂತಹ ಮತಿಗೆಟ್ಟ ಹೀನ ವಿಜೃಂಭಣೆಯ ಪ್ರಚಾರದ ಅಗತ್ಯವಾದರೂ ಏನಿತ್ತು?

ಮಾಧ್ಯಮ ಮತ್ತು ಪ್ರಭುತ್ವದ ಈ ರೀತಿಯ ಶಾಮೀಲುತನದ ವರ್ತನೆ ಏನನ್ನು ಸೂಚಿಸುತ್ತದೆ?   ಕೊರೊನಾ ಕೋಮು ರಾಜಕೀಯ ಅದಾಗಲೇ ಪ್ರಾರಂಭವಾಗಿತ್ತು. ನಂತರದ ಬೆಳವಣಿಗೆಗಳೆಲ್ಲವೂ ಕೊರೊನಾದ ಹೆಸರಲ್ಲಿ ಪ್ರಭುತ್ವ ಮತ್ತು ಮಾಧ್ಯಮ ಜಂಟಿಯಾಗಿ ನಡೆಸಿದ ಕೋಮು ರಾಜಕೀಯವನ್ನು ಸಾರಿ ಸಾರಿ ಹೇಳುತ್ತದೆ. ಕೇಂದ್ರದ ಕೋಮು ರಾಜಕೀಯದ ಭಾಗವಾಗಿ ತಂದ ಸಿ.ಎ.ಎ. ಕಾಯ್ದೆಯ ವಿರುದ್ಧ ದೆಹಲಿಯ ಶಾಹೀನ್ ಬಾಗ್ ಪ್ರತಿಭಟನೆಯನ್ನು ಹತ್ತಿಕ್ಕಲು ಕೇಂದ್ರ ಸರಕಾರ ನಡೆಸಿದ ಶತಾಯಗತಾಯ ಪ್ರಯತ್ನಗಳು ( ಪೆಟ್ರೋಲ್ ಬಾಂಬು, ಪಿಸ್ತೂಲು ಸಹಿತ ಎಲ್ಲಾ ಬಲಾತ್ಕಾರದ ಭಯೋತ್ಪಾದನಾ ತಂತ್ರಗಳೂ ಸೇರಿ) ವಿಫಲವಾಗಿದ್ದವು. ಕೋಮುವಾದಿಗಳ ಹುಟ್ಟಡಗಿಸಿದ್ದ ಮಹಿಳೆಯರ 101 ದಿನಗಳ ಈ ಪ್ರತಿಭಟನೆಯನ್ನು ಕೊನೆಗೂ ಕೋರೊನಾ ನಿಯಂತ್ರಣದ ನೆಪದಲ್ಲಿ ಮಾರ್ಚ್ 23ರಂದು ಪೋಲೀಸರ ನೆರವಿನಿಂದ ಹತ್ತಿಕ್ಕಲಾಯಿತು. ಇದರ ಬೆನ್ನಿಗೆ ನಿಜಾಮುದ್ದೀನ್ ತಬ್ಲೀಗಿ  ಸಮಾವೇಶದ ಬಗ್ಗೆ ದೇಶದ ಕಾರ್ಪೊರೇಟ್ ನಿಯಂತ್ರಿತ ಮಾಧ್ಯಮಗಳು ಬಿರುಸಿನ ಕೋಮು ಪ್ರಚಾರಗಳನ್ನು ಪ್ರಾರಂಭಿಸಿದವು. ಈ ತಬ್ಲೀಗಿ ಸಮಾವೇಶವೇ ಕೊರೊನಾ ಹಬ್ಬುವ ಕೇಂದ್ರವೆಂದೂ ಮುಸ್ಲಿಮರೆಲ್ಲರೂ ಉಗುಳು ಹಚ್ಚಿಯೇ ದೇಶದುದ್ದಕ್ಕೂ ಕೊರೊನಾ ಕಾಯಿಲೆಯನ್ನು ಪ್ರಜ್ಞಾಪೂರ್ವಕವಾಗಿಯೇ ಹರಡುತ್ತಿದ್ದಾರೆಂದೂ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ನಡೆಸಿ ಇಡೀ ಮುಸ್ಲಿಮ್ ಸಮುದಾಯವನ್ನೇ ದೇಶದ್ರೋಹಿಗಳೆಂದು ಬಿಂಬಿಸಲಾಯಿತು.

ಮಸೀದಿಗಳಲ್ಲಿ ವಿದೇಶಿಗರು ಅವಿತು ಕುಳಿತಿದ್ದಾರೆ ಎಂದು ಮಾಧ್ಯಮಗಳಲ್ಲಿ  ಸುಳ್ಳು ಪ್ರಚಾರ ಸತತವಾಗಿ ನಡೆಸಲಾಯಿತು. ಅಂತೂ ಕೊರೊನಾಕ್ಕೆ ಕೋಮು ಬಣ್ಣ ಬಳಿದು ಮುಸ್ಲಿಮ್ ಸಮುದಾಯವನ್ನೇ ಅಪರಾಧಿಗಳನ್ನಾಗಿಸುವ ಕೇಂದ್ರ ಸರಕಾರ ಮತ್ತು ಮಾಧ್ಯಮದ ಪ್ರಯತ್ನಗಳು ಎಗ್ಗಿಲ್ಲದೆ ಸಾಗುತ್ತಿವೆ. ಇವರ ಈ ಅನೀತಿಯಿಂದ ಸಿ.ಎ.ಎ.ಪ್ರತಿಭಟನೆಗಳ ಕಾವಿನಲ್ಲಿ ಒಂದೊಮ್ಮೆ ಆವಿಯಾದ ಕೋಮು ಕ್ರಿಮಿಗಳು ಈ ಪ್ರಜಾಪ್ರಭುತ್ವದ ಮಣ್ಣಿನಲ್ಲಿ ಮರುಹುಟ್ಟು ಪಡೆದು ಸಕ್ರಿಯವಾಗಲು ಹಪಹಪಿಸುತ್ತಿವೆ.  ಲಾಕ್ ಡೌನ್ ಸಂದರ್ಭದಲ್ಲಿ ದಾರಿ ಮಧ್ಯೆ ಸಿಲುಕಿದ ಶ್ರೀಮಂತ ಮುಸ್ಲಿಮೇತರ ಯಾತ್ರಾರ್ಥಿಗಳನ್ನು ದೂರದ ಅವರ ಊರುಗಳಿಗೆ ತಲಪಿಸಲು ಐಷಾರಾಮೀ ವಾಹನಗಳ ವ್ಯವಸ್ಥೆ ಕೇಂದ್ರ ಸರಕಾರದ ಘನವೆತ್ತ ಮಂತ್ರಿ ಮಹೋದಯರಿಗೆ ಸಾಧ್ಯವಾಯಿತು. ಆದರೆ ಯಾವುದೇ ಪೂರ್ವ ಸೂಚನೆ ನೀಡದೆ ಲಾಕ್ ಡೌನ್ ಘೋಷಿಸಿದ ಪರಿಣಾಮ  ದೂರದೂರಿಗೆ ನಡೆದೇ ಪ್ರಯಾಣ ಬೆಳೆಸಿದ ಬಡ ವಲಸೆಗಾರರನ್ನು ಮುಟ್ಟಿಸಲು ಈ ಮಂತ್ರಿವರ್ಯರಲ್ಲಿ ಯಾವುದೇ ವಾಹನಗಳ ವ್ಯವಸ್ಥೆಯಿಲ್ಲ. ಎಂತಹಾ ವಿಪರ್ಯಾಸವಿದು? ಇದು ಕೊಳಕು ರಾಜಕೀಯವಲ್ಲವೇ?!  ಮುಸ್ಲಿಮರ ಅಂಗಡಿಯ ಆಹಾರ ವಸ್ತುಗಳನ್ನು ಬಹಿಷ್ಕರಿಸಬೇಕೆನ್ನುವ ಮನುಷ್ಯವಿರೋಧಿ ಹಾಹಾಕಾರಗಳನ್ನು ಬಡಿದೆಬ್ಬಿಸಲು ಈ ಕೋಮು ಕ್ರಿಮಿಗಳು ಎಷ್ಟೇ ಪ್ರಯತ್ನಿಸಿದರೂ ಸಹೋದರತ್ವವನ್ನೇ ಜೀವಾಳವನ್ನಾಗಿಸಿದ ನಾಡಿನ ಪ್ರಜ್ಞಾವಂತರ ಸಮಯೋಚಿತ ಮಧ್ಯ ಪ್ರವೇಶಗಳಿಂದಾಗಿ ಕೋಮುವಾದಿಗಳ ಬೇಳೆ ಬೇಯುತ್ತಿಲ್ಲ.

ಪ್ರಜಾಪ್ರಭುತ್ವ ವ್ಯವಸ್ಥೆಯ ನಾಲ್ಕನೇ ಆಧಾರ ಸ್ಥಂಭ ಮಾಧ್ಯಮವೇ ಆಗಿದೆಯೆಂದು ದೇಶದ ಸರ್ವೋಚ್ಛ ನ್ಯಾಯಾಲಯವೇ ಅನೇಕ ತೀರ್ಪುಗಳಲ್ಲಿ ಹೇಳಿದೆ. ಸರಕಾರದ ನೀತಿಗಳನ್ನು ಕೂಲಂಕುಷವಾಗಿ ವಿಮರ್ಶೆಗೊಳಪಡಿಸಿ ಜನಹಿತಕ್ಕೆ ಅಗತ್ಯವಿರುವ ಸಲಹೆ ಸೂಚನೆಗಳನ್ನು ಕೊಡುವ ಘನ ಜವಾಬ್ದಾರಿ ಮಾಧ್ಯಮಗಳಿಗೂ ಇದೆ. ಅದರಲ್ಲೂ ವಿರೋಧ ಪಕ್ಷಗಳು ನಗಣ್ಯವಾಗಿರುವ ಇಂದಿನ‌ ದಿನಗಳಲ್ಲಿ ಆಳುವ ಸರಕಾರದ ತಪ್ಪುಗಳನ್ನು ಎತ್ತಿ ತೋರಿಸಿ ತಿದ್ದ ಬೇಕಾದ ವಿರೋಧ ಪಕ್ಷದ ಪಾತ್ರವನ್ನಾದರೂ ದೇಶದ ಮಾಧ್ಯಮ ವಹಿಸಬೇಕಾಗಿತ್ತು. ದುರದೃಷ್ಟವಶಾತ್ 2014 ರಿಂದೀಚೆಗೆ ನಮ್ಮ ದೇಶದ ಬಹುತೇಕ ಮಾಧ್ಯಮಗಳು ಕೇಂದ್ರ ಸರಕಾರದ ಭಟ್ಟಂಗಿಗಳಾಗಿ ಸುಳ್ಳಿನ ಸರದಾರರಾಗಿ ಬಿಟ್ಟಿದ್ದಾರೆ. ಸತ್ಯ ನುಡಿದು ಎಷ್ಟೋ ಕಾಲವಾಗಿದೆ. ಅವರಿಗೆ ಸುಳ್ಳೇ ಸತ್ಯ. 24×7 ನಿರಂತರ ಕೇಂದ್ರ ಸರಕಾರದ ಭಟ್ಟಂಗಿತನದಲ್ಲೇ ಇವರ ಹಿತ ಅಡಗಿದೆ. ಸರಕಾರೀ ಪ್ಯಾಕೇಜ್ ಗಳ ಪರಿಣಾಮವಿದು.

ಈ ಕಾರ್ಪೊರೇಟ್ ಮಾಧ್ಯಮಗಳು ಮೊದ ಮೊದಲು ಕೊರೊನಾ ಚೀನಾದ ಸೃಷ್ಟಿಯೆಂದು ಬೊಬ್ಬಿಡುತ್ತಾ ದೇಶದ ಜನರ ಮಧ್ಯೆ ಚೀನಾ ದ್ವೇಷದ ಬೀಜ ಬಿತ್ತಲಾರಂಭಿಸಿದ್ದವು. ಈ ಚೀನಾ ವಿರೋಧಿ ಪ್ರಚಾರಗಳು ಕೊರೊನಾ ದೇಶಕ್ಕೆ ಕಾಲಿಟ್ಟನಂತರ ಹೊಸತಾಗಿ ನಡೆಯುತ್ತಿರುವುದೇನೂ ಅಲ್ಲ. ಜನರನ್ನು‌ ತಪ್ಪು ದಾರಿಗೆಳೆದು ಮೂಢರನ್ನಾಗಿಸಲು 2014 ರಿಂದಲೂ ಕಮ್ಯುನಿಸ್ಟ್ ವಿರೋಧಿಗಳು ಆಗಾಗ ಇಂತಹ ಪ್ರಹಸನಗಳನ್ನು ನಡೆಸುತ್ತಲೇ ಬಂದಿದ್ದಾರೆ. ಆದರೂ ಭಾರತ ಮತ್ತು ಚೀನಾ ದೇಶಗಳ ಮಧ್ಯೆ ಅಂತರ್ರಾಷ್ಟ್ರೀಯ ವ್ಯಾಪಾರ ವಹಿವಾಟುಗಳು ನಿರಾತಂಕವಾಗಿ ನಡೆಯುತ್ತಲೇ ಇವೆ, ಇದು ಬೇರೆ ಮಾತು. ತಾವು ಗುಟ್ಟಾಗಿ ಒಳಗೊಳಗೇ ಮಾಂಸಾಹಾರಿಗಳಾಗಿದ್ದರೂ ಈ ಮೂಢ ಜನರು, ಚೀನಾದವರು ಜಿರಳೆ, ಹಾವು, ಬಾವಲಿ, ನಾಯಿಗಳನ್ನು ಹಸಿ ಹಸಿ ತಿನ್ನುವ ಕೆಟ್ಟ ಮಾಂಸಾಹಾರಿಗಳೆಂದೂ ಅವರ ಆಹಾರ ಪದ್ಧತಿಯ ಕಾರಣದಿಂದಲೇ ಚೀನಾದಲ್ಲಿ ( ವ್ಯೂಹಾನ್ ನಲ್ಲಿ ಮಾತ್ರ ಎಂದು ಮರೆತು ಹೋಗಿದೆ) ಈ ಕೊರೊನಾ ಕಾಯಿಲೆ ಸೃಷ್ಟಿಯಾಯಿತೆಂದೂ ಬೊಗಳೆ ಬಿಡಲು ಪ್ರಾರಂಭಿಸಿದರು. ಅದೇ ಅಪಪ್ರಚಾರವನ್ನು ಈ ಭಟ್ಟಂಗಿ ಮಾಧ್ಯಮಗಳು  ಮುಂದುವರೆಸಿದವು. ಕ್ರಮೇಣ ಭಾರತದಲ್ಲೇ ಕೊರೊನಾ ಕಾಯಿಲೆ ಜಾಸ್ತಿಯಾಗ ತೊಡಗಿದಾಗ ಮಾಧ್ಯಮದವರು ಚೀನಾ ದ್ವೇಷವನ್ನು ಬದಿಗಿಟ್ಟು ಮುಸ್ಲಿಮ್ ದ್ವೇಷವನ್ನು ಆವಾಹಿಸಿ ಕೊಂಡರು. ಕಟ್ಟು ಕಥೆಗಳನ್ನು ಕಟ್ಟಿ, ಬಿಜೆಪಿ ಬೆಂಬಲಿಗರು ತಮ್ಮ ಕಾರ್ಖಾನೆಗಳಲ್ಲಿ ತಯಾರಿಸಿದ ಸುಳ್ಳು ವಿಡಿಯೋಗಳನ್ನು ಪಸರಿಸಿ ಮುಸ್ಲಿಮರ ಬಗ್ಗೆ ಭಯ ಹುಟ್ಟಿಸುವುದೇ ಈ ಮಾಧ್ಯಮದ‌ ಆದ್ಯ ಕರ್ತವ್ಯವಾಯಿತು. ಈ ಅಪಪ್ರಚಾರದ ಪೊಳ್ಳುತನ ದೇಶದ ಬಹುಜನತೆಗೆ ಅರಿವಾದರೂ ಮಾಧ್ಯಮಗಳು ಮಾತ್ರ ಇನ್ನೂ ತಮ್ಮ ಮುಸ್ಲಿಮ್ ವಿರೋಧಿ ಕೆಟ್ಟ ಚಾಳಿಯಿಂದ  ಹೊರ ಬಂದಿಲ್ಲ. ಮಾತ್ರವಲ್ಲ ಸರಕಾರ ಕೂಡಾ ಮಾಧ್ಯಮದವರ ಈ ದುರ್ನಡತೆಯ ಬಗ್ಗೆ ಯಾವುದೇ ಕಾನೂನಾತ್ಮಕ‌ ನಿರ್ಬಂಧದ ಕ್ರಮಗಳನ್ನೂ ಜರಗಿಸುತ್ತಿಲ್ಲ. ಸರಕಾರದ ಕೋಮು ಅಜೆಂಡಾಗಳಲ್ಲಿ ಮಾಧ್ಯಮ ಕೂಡಾ ಸಹಕರಿಸುತ್ತಿದೆ ಎಂಬುದನ್ನು ಇದು ಸೂಚಿಸುತ್ತದೆ.

ಕೊರೋನಾ ಕೋವಿಡ್ -19 ಧರ್ಮಾತೀತವಾದ ಒಂದು ವೈರಸ್. ಜಗತ್ತಿನ ಎಲ್ಲಾ ದೇಶದ ಎಲ್ಲಾ ಧರ್ಮದ ಜನರನ್ನು ಈ ಕಾಯಿಲೆ ಬಾಧಿಸುತ್ತಿರುವುದಂತೂ ಸತ್ಯ.  ಇಡೀ ಜಗತ್ತೇ ಒಗ್ಗಟ್ಟಾಗಿ ಈ ಮಹಾಮಾರಿಯ ವಿರುದ್ಧ ಯುದ್ಧ ಸಾರ ಬೇಕಾಗಿದೆ.  ಧರ್ಮ, ಭಾಷೆ, ಪ್ರದೇಶಗಳನ್ನೂ ಮೀರಿ ಎಲ್ಲರೂ ಒಗ್ಗಟ್ಟಾಗಿ ನಿಂತರೆ ಮಾತ್ರ ಈ ಕೊರೊನಾ ಪಿಡುಗನ್ನು ನಿಯಂತ್ರಿಸಲು ಸಾಧ್ಯವೆಂಬ ಸತ್ಯವನ್ನು ದೇಶದ ಜನತೆ ಮನಗಾಣುತ್ತಿದ್ದಾರೆ. ಕೊರೊನಾ ಮತ್ತು ಹಸಿವಿನಿಂದ ಜನತೆ ಕಂಗಾಲಾಗಿರುವ ವೇಳೆ ಇವೆರಡೂ ಸಮಸ್ಯೆಗಳನ್ನು ಎದುರಿಸಲು ಪ್ರಭುತ್ವದ ಕೋಮುವಾದಿ ನೀತಿಗಳು ಎಲ್ಲರಿಗೂ ತೊಡಕಾಗುತ್ತಿವೆ. ಕೊರೊನಾ ಮತ್ತು ಕೋಮುವಾದಗಳನ್ನು ಸೋಲಿಸುವುದು ಭಾರತದ ಜನತೆಯ ತುರ್ತು ಮತ್ತು ಆದ್ಯ ಕರ್ತವ್ಯವಾಗಿದೆ. ಇವೆರಡು ವೈರಸ್ ಗಳ  ಸೋಲಿನಲ್ಲಿ  ದೇಶದ ಗೆಲುವು ಅಡಗಿದೆ.

ಲೇಖನ: ಯಶವಂತ ಮರೋಳಿ

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group