ಅಭಿಪ್ರಾಯ

ಮಹೇಂದ್ರ ಕುಮಾರ್ ಅಸ್ತಂಗತ; ಕನಸುಗಾರನ ಕಣ್ಮರೆ..!: ಧ್ವಾರಕನಾಥ್

ವರದಿಗಾರ (ಎ.25): ಮಹೇಂದ್ರ ಕುಮಾರ್ ಅಕಾಲಿಕ ಸಾವು ನನ್ನಲ್ಲಿ ಅಪಾರ ನೋವಿನೊಂದಿಗೆ ಒಂದು ರೀತಿಯ ಅವ್ಯಕ್ತ ಯಾತನೆ ಆವರಿಸಿದೆ.

ನನಗಿನ್ನೂ ನೆನಪಿದೆ..‌ ಮಂಗಳೂರಿನ ಚರ್ಚ್ ಮೇಲಿನ ದಾಳಿ ಪ್ರಕರಣದ ವಿಚಾರಣೆ ನಡೀತಿತ್ತು. ನನ್ನ ಆಪ್ತ ಮತ್ತು ವಕೀಲರಾದ ಬ್ಯಾತ ಜಗದೀಶ್ ಕೇಸ್ ನಡೆಸುತಿದ್ದರು. ಕೇಸಿರುವ ದಿನ ಮಹೇಂದ್ರ ಕುಮಾರ್ ಜತೆ ಮಾತಾಡಿ ಆ ವಿಷವೃತ್ತದಿಂದ ಹೊರಬರುವಂತೆ ಮನ ಒಲಿಸುತಿದ್ದರು. ಆ ಸಂಧರ್ಭದಲ್ಲಿ ನಾನೂ ಪ್ರತ್ಯಕ್ಷವಾಗೋ ಪರೋಕ್ಷವಾಗೋ ಮಾತಾಡುತಿದ್ದೆ. ಅವರು ಅಲ್ಲಿದ್ದರೂ ನಮ್ಮಂತವರ ಬಗ್ಗೆ ಯಾವ ಕಾರಣಕ್ಕೋ ಏನೋ ಪ್ರೀತಿ, ಗೌರವಗಳನ್ನಿಟ್ಟುಕೊಂಡಿದ್ದರು. ಮಹೇಂದ್ರಕುಮಾರ್ ಕೂಡ ಅಲ್ಲಿನ ವಂಚನೆ, ವಿಷಗಳನ್ನು ನೋಡಿ ಹೊರಬರುವ ಕಾತರದಲ್ಲಿದ್ದರು. ಬಹಳಷ್ಟು ‘ಪ್ಯೂರಿಟೇರಿಯನ್’ ಆಗಿದ್ದ ಮಹೇಂದ್ರಕುಮಾರ್ ಗೆ ಅತ್ಮವಂಚನೆ ಯ ನಡುವಳಿಕೆಗಳು ಸಹಿಸಲಾಗುತ್ತಿರಲಿಲ್ಲ. “ಹೊರಬರುವುದು ಸರಿ ಹೊರಬಂದು ಏನು ಮಾಡುವುದು?” ಎಂಬ ಪ್ರಶ್ನೆ ಗಳು ಅವರ ಮುಂದಿದ್ದವು. ಅಲ್ಲಿ ತೀರ ಆಕ್ಟಿವ್ ಆಗಿದ್ದ ಮಹೇಂದ್ರ ಕುಮಾರ್ ಗೆ ಹೊರ ಬಂದು ಸುಮ್ಮನೇ ಕೂರುವ ಮನಸ್ಸಿರಲಿಲ್ಲ. ಅಲ್ಲಿನ ವಿಷವರ್ತುಲದಲ್ಲಿ ಇನ್ನಷ್ಟು ಕಾಲ ಉಸಿರುಕಟ್ಟಿ ಇರಲಾರದೆ , ಯಾವ ಪೂರ್ವ ಸಿದ್ದತೆಗಳೂ ಇಲ್ಲದೆ ಕಡೆಗೆ ಹೊರಕ್ಕೆ ಬಂದೇಬಿಟ್ಟರು.

ತಕ್ಷಣಕ್ಕೆ ಜೆಡಿಎಸ್ ಸೇರಿದರು, ಅಲ್ಲೂ ಅವರ ಪಕ್ಷದ ನಡುವಳಿಕೆಗಳು ಇಷ್ಟವಾಗಲಿಲ್ಲ. ಅಲ್ಲಿಂದಲೂ ಹೊರಬಂದರು.

ಬಹಳ ದಿನ ಏನು ಮಾಡುವುದೆಂದು ತೊಳಲಾಡುತಿದ್ದರು. ಸತತವಾಗಿ ನಮ್ಮಂತವರೊಂದಿಗೆ ಚರ್ಚೆಯಲ್ಲಿದ್ದರು. ಒಂದು ದಿನ “ನಮ್ಮ ದ್ವನಿ” ಕಟ್ಟಿದರು. ನಮ್ಮ ಅನೇಕ ಪ್ರಗತಿಪರರ ಬೂಟಾಟಿಕೆಗಳು ಅವರಿಗೆ ಇಷ್ಟವಾಗುತ್ತಿರಲಿಲ್ಲ! ಕೆಲವರನ್ನು ದೂರದಿಂದ ನೋಡಿ ಇಷ್ಟಪಟ್ಟು ಹತ್ತಿರದಿಂದ ನೋಡಿ ಬೇಸರಪಟ್ಟು ದೂರವಾಗಿದ್ದರು.

ಕಳೆದ ವರ್ಷ “ನಮ್ಮ ದ್ವನಿ” ಕಾರ್ಯಕ್ರಮಕ್ಕೆ ಹೋಗಿದ್ದೆ. ವೇದಿಕೆಯ ಮೇಲೆ ದೇವನೂರು ಮಹಾದೇವ, ಹನುಮಂತಯ್ಯ ಮತ್ತು ನಾನು ಇದ್ದೆವು. ಅಂದು ನನ್ನ ಹುಟ್ಟಿದ ದಿನ, ಹೇಗೋ ತಿಳಿದು ನನಗರಿವಿಲ್ಲದಂತೆ surprise ನೀಡಲು ಒಂದು ದೊಡ್ಡ ಹೂಗುಚ್ಚ ತರಿಸಿ ಎಲ್ಲರನ್ನೂ ವೇದಿಕೆಗೆ ಕರೆದರು. ಮುಂದಿನ ಸೆಷನ್ ನಲ್ಲಿ ಮಾತನಾಡುವ ಅತಿಥಿಗಳೂ ಬಂದಿದ್ದರು ಅವರನ್ನೂ ವೇದಿಕೆಗೆ ಕರೆದರು. ಅವರಲೊಬ್ಬರು ಎಷ್ಟೇ ಕರೆದರೂ ಬರಲಿಲ್ಲ! ಮಹೇಂದ್ರ ಕುಮಾರ್ ಅಂದು ಬಹಳ ಬೇಸರ ಪಟ್ಟುಕೊಂಡಿದ್ದರು.

ನನಗೆ ಆಗಾಗ ಪೋನ್ ಮಾಡುತಿದ್ದರು, ಬೆಟ್ಟಿಯಾಗುತ್ತಿದ್ದೆವು ಸಿಕ್ಕಾಗಲೆಲ್ಲ “ನೀವೆಲ್ಲಾ ಬನ್ನಿ ಸಾರ್.. ನಾವೊಂದು ರಾಜಕಾರಣ ಕಟ್ಟಿ ತೋರಿಸೋಣ..” ಎನ್ನುತಿದ್ದರು. ಮೊನ್ನೆ ಭಹುಶ್ಯ 21ರಂದು ಪೋನ್ ಮಾಡಿ ನಾನು ಪತ್ರಕರ್ತರಿಗೆ ಬರೆದಿದ್ದ ಭಹಿರಂಗ ಪತ್ರದ ಬಗ್ಗೆ ಸುದೀರ್ಘವಾಗಿ ಮಾತಾಡುತಿದ್ದರು. “ನಿಮ್ಮ ಪ್ರಗತಿಪರರು ಸರಿಯಿಲ್ಲ ಸರ್..” ಎಂದು “ನೋಡಿ ನಿಮ್ಮ ಹುಟ್ಟಿದಬ್ಬಕ್ಕೆ ಬಕೇ ಕೊಡಲು ಅವನು ವೇದಿಕೆಗೆ ಬರಲಿಲ್ಲ..ಎಂತಾ ನೀಚತನ..” ಎಂದು ಮತ್ತೇ ನೆನಪಿಸಿ ಬೇಸರಪಟ್ಟುಕೊಂಡರು.‌ “ಇಲ್ಲಿನ ದಲಿತರು, ರೈತರು, ಹಿಂದುಳಿದವರು, ಮುಸ್ಲಿಂ ರು ಒಟ್ಟಿಗೆ ಸೇರಬೇಕು ಸರ್.. ಅದಕ್ಕೆ ಏನಾದರೂ ಮಾಡಬೇಕಲ್ಲ” ಎಂದು ತೊಲಳಾಡುತಿದ್ದರು. “ನಿಮ್ಮಂತವರು ಆ ಮುಸ್ಲಿಂ ಹುಡುಗರಿಗೆ ತಪ್ಪು ಮಾಡಿದಾಗ ಮುಖಕ್ಕೆ ಉಗಿದು ಹೇಳಬೇಕು..” ಎಂದರು. “ನಾನು ಹೊಸ ಹುಡುಗರ ಪಡೆ ಕಟ್ತೀನಿ.. ಸಾಯೋದರೊಳಗೆ ಏನನ್ನಾದರೂ ಮಾಡೇ ಸಾಯ್ತೀನಿ…” ಅಂದರು. ಸುಮಾರು ಇಪ್ಪತ್ತು ನಿಮಷ ಮುಂದೆ ಏನು ಮಾಡಬಹುದೆಂದು ತಮ್ಮ ಕನಸುಗಳನ್ನು ಹೇಳುತ್ತಲೇ ಇದ್ದರು.

ನಿಜಕ್ಕೂ ಮಹೇಂದ್ರ ಕುಮಾರ್ ಈ ನಾಡಿಗೆ ಅವಶ್ಯಕವಾಗಿ ಈ ಸಂದರ್ಭದಲ್ಲಿ ಬೇಕಿದ್ದರು. ಅಪಾರ ಪ್ರಾಮಾಣಿಕರಾಗಿದ್ದ ಮಹೇಂದ್ರ ಕುಮಾರ್ ಸುಳ್ಳನ್ನು ಬೂಟಾಟಿಕೆಯನ್ನು ಸಹಿಸುತ್ತಿರಲಿಲ್ಲ. ಅವರಂತೂ ಅಪಾರ ಕನಸುಗಳನ್ನಿಟ್ಟುಕೊಂಡಿದ್ದರು. ನನಗಿಂತಲೂ ಬಹಳ ಚಿಕ್ಕವರಾದ ಮಹೇಂದ್ರ ಕುಮಾರ್, ಒಬ್ಬ ರೆಬೆಲ್ ರೀತಿಯಲ್ಲಿ ಕಾಣುತಿದ್ದರು.,ಒಬ್ಬ ಪೈಲ್ವಾನರಂತೆ, ದಿಟ್ಟ ಪೋಲಿಸ್ ಅಧಿಕಾರಿಯಂತೆ ಕಾಣುತಿದ್ದವರು! ಇಂತಹ ಕನಸುಗಾರ ನನ್ನ ಕಣ್ಣ ಮುಂದೆಯೇ ಕನಸೇ ಇಲ್ಲದ ನಿದ್ದೆಗೆ ಇಷ್ಟು ಆತುರವಾಗಿ ಜಾರುತ್ತಾರೆಂದು ಕನಸುಮನಸಿನಲ್ಲೂ ಎಣಿಸಿರಲಿಲ್ಲ..!!
ನಾನು ಅವರನ್ನು ‘ಮಹೇಂದ್ರ’ ಅಂತ ಅನ್ನುತಿದ್ದೆ. ಅದ್ಯಾಕೋ ಏನೋ ಸದಾ ಅವರೊಂದಿಗೆ ಒಂದು ರೀತಿಯ ಹತ್ತಿರದ ಆಪ್ತ ಭಾವವಿತ್ತು. ಈಗ ಏನು ಮಾಡುವುದು? ನಿಜಕ್ಕೂ ನಮ್ಮ ಮುಂದೆ ಒಂದು ಗಾಢ ಶೂನ್ಯ ಆವರಿಸಿದೆ. ಅಸಹಾಯಕತೆಯ ನೋವು ಹೆಪ್ಪುಗಟ್ಟಿದೆ‌…
– ಸಿ.ಎಸ್.ದ್ವಾರಕಾನಾಥ್

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group