ಅಭಿಪ್ರಾಯ

ಕೋವಿಡ್-19 ಭಾರತದಲ್ಲಿ; ‘ಮಾಧ್ಯಮದ ದ್ವೇಷದ ದುಷ್ಪರಿಣಾಮ’ ನಾ ಕಂಡಂತೆ!

ವರದಿಗಾರ (ಎ.21): ವಿಶ್ವದ ಎಲ್ಲಾ‌ ಮೂಲೆಗಳಲ್ಲಿ ಮರಣ ತಾಂಡವಾಡುತ್ತಾ ತನ್ನ ಕ್ರೂರ ಬಾಹುಗಳನ್ನು ಚಾಚುತ್ತಿರುವಾಗ ಭಾರತವೂ ಒಂದು ಕಡೆಯಿಂದ ತತ್ತಿರಿಸುತ್ತಿದೆ. ಮನುಷ್ಯ ತನ್ನ ಸ್ಥಾನಮಾನಗಳನ್ನು‌ ಮರೆತು ಪ್ರಕೃತಿಯ ವಿರುದ್ದ ಅತಿರೇಕದ ವರ್ತನೆಗೆ ತಂತ್ರಜ್ಞಾನದ ತುತ್ತತುದಿಯಲ್ಲಿ ತೆಲಾಡುತ್ತಾ ನಬಕ್ಕೆ ಕೈ ಚಾಚುತ್ತಿದ್ದ ವಿಶ್ವವನ್ನು ದಿನ ಮಾತ್ರದಲ್ಲಿ ಮಂಡಿಯೂರುವಂತೆ ಮಾಡಿ ಅಕ್ಷರಶಃ ಮರಣ ಮೃದಂಗ ಭಾರಿಸುತ್ತಾ ಪ್ರಕೃತಿಯ ಮುಂದೆ ಮಾನವನು ಏನೇನು ಅಲ್ಲವೆಂಬಂತೆ ಸಾರಿ ಹೇಳುವಂತಿದೆ.

ವಿಶ್ವದ ಎಲ್ಲಾ ರಾಷ್ಟ್ರಗಳು ಈ‌ ಮಹಾಮಾರಿಯ ವಿರುದ್ದ ತಮ್ಮ ಎಲ್ಲಾ ವೈಷಮ್ಯಗಳನ್ನು ಬದಿಗೊತ್ತಿ ಒಗ್ಗಟ್ಟಾಗಿ ಹೋರಾಡುತ್ತಿರಬೇಕಾದರೆ ಭವ್ಯವಾದ ಇತಿಹಾಸವುಳ್ಳ ವಿವಿಧತೆಯಲ್ಲಿ ಏಕತೆಯ ಪಾರಂಪಾರ್ಯವುಳ್ಳ ಭಾರತದಲ್ಲಿ ಮಾತ್ರ ನೇರಾ ತದ್ವಿರುದ್ಧ!. ವಿಶ್ವ ತನ್ನೆಲ್ಲಾ ತಂತ್ರಜ್ಞಾನವನ್ನು ಒಟ್ಟುಗೂಡಿಸಿ ಮನುಷ್ಯಕುಲದ ಉಳಿವಿಗೆ ಹೋರಾಡುತ್ತಿರಬೇಕಾದರೆ ಭಾರತದಲ್ಲಿ ಕರೋನಾಕ್ಕೆ ಧರ್ಮವನ್ನು ಹುಡುಕಲಾಯಿತು. ವಿಶ್ವದ ಎಲ್ಲಾ ಮೂಲೆಗಳಲ್ಲಿ ವೈರಸ್ ಅಗಿದ್ದ ಕೋವಿಡ್ ನಮ್ಮ ದೇಶದಲ್ಲಿ ಒಂದರ್ಥದಲ್ಲಿ ‘ಇಸ್ಲಾಂ’ ಆಯಿತು ಅಂದರೆ ಅತಿಶಯವಾಗದು!.

ಮರಣದ ಮನೆಯಲ್ಲಿ ರಾಜಕೀಯ ಇಲ್ಲಿಯವರಿಗೆ ಹೊಸದಲ್ಲ ಆದರೆ ಇಂತಹ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ತನ್ನ ನೀಚ ರಾಜಕೀಯದ ಮೂಲಕ ಬೇಳೆ ಬೇಯಿಸಿಕೊಳ್ಳುತ್ತಿರುವುದು ನೋಡಿದರೆ ಭಾರತದ ಭವಿಷ್ಯ ಕಣ್ಣಮುಂದೆ ಕಾಣಿಸಿಕೊಳ್ಳುತ್ತದೆ. ಏಕಾಏಕಿ ಯಾವುದೇ ಪೂರ್ವ ತಯಾರಿಲ್ಲದೆ ಹೇರಿದ ಜನತಾ ಕರ್ಫ್ಯೂ ಜನಸಾಮಾನ್ಯರ ಬದುಕನ್ನು ಅಲ್ಲೋಲ ಕಲ್ಲೋಲ ಮಾಡಿತು. ಅದೆಷ್ಟೋ ಲಕ್ಷ ವಲಸಿಗರು ಅನ್ನ ನೀರಿಲ್ಲದೆ ಸಾವಿರಾರು ಕಿಲೋ ಮೀಟರ್ ನಡೆದು ಊರು ತಲುಪಿದರೆ ಕೆಲವರು ಮರಣದ ಮನೆ ತಲುಪಿದ್ದರು. ಅದ್ಯಾಗೋ ಪ್ರಾಣದ ಮೇಲಿನ ಆಸೆ ಲಾಕ್ಡೌನನ್ನು ಒಪ್ಪಿಕೊಳ್ಳುವಂತೆ ಮಾಡಿದರೂ ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ಜನರ ನಡುವೆ ಧರ್ಮವನ್ನು ತಂದಿಟ್ಟು ಮಜಾ‌ ನೋಡುತ್ತಾರೆ . ತಮ್ಮ ಸ್ವಾರ್ಥಕ್ಕಾಗಿ ಜನರನ್ನು ಮೌಡ್ಯರಾಗಿ ಸರಿಯಾಗಿ ವೈದ್ಯರಿಗೆ ಬೇಕಾದ ಸಲಕರಣೆಗಳನ್ನು ಪೂರೈಸದೆ ಚಪ್ಪಾಳೆ ತಮಟೆ ಬಾರಿಸಿ ಗುಂಪಾಗಿ ಮೆರವಣಿಗೆ ಮಾಡಿ ಅನ್ನುವಷ್ಟು!.

ಜನರಾದರೂ ಕುರಿಗಳಂತೆ !
ಸಮಾಜ ಎಷ್ಟು ಹದಗೆಟ್ಟಿದೆಯೆಂದರೆ? ಮನೆಯಲ್ಲಿ ಅಕ್ಕಿ ಇಲ್ಲದವನು ಕೂಡ ಒಂದು ಕ್ಷಣ ಪದಾರ್ಥ ಖರೀದಿಸುವಾಗ ವ್ಯಾಪಾರಿಯ ಧರ್ಮ ನೋಡುವಷ್ಟು! ಇದಕ್ಕೆಲ್ಲಾ ನೇರಹೊಣೆ ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಸ್ವಯಂ ಘೋಷಿಸಿಕೊಂಡು ಕಂಡವರ ಮನೆಗೆ ಬೆಂಕಿಯಿಟ್ಟು ಹೊಟ್ಟೆ ತುಂಬಿಸಿಕೊಳ್ಳುವ ಮಾದ್ಯಮಗಳು.

ಕರೋನಾ ಅಪಾಯವಲ್ಲಾಂತ ಅಲ್ಲ ಆದರೆ ಜನರಿಗೆ ಅದರ ವಿರುದ್ಧ ಹೋರಾಡಲು ಜಾಗೃತಿ ಮೂಡಿಸಬೇಕಾಗಿದ್ದ ಮಾಧ್ಯಮಗಳು ತಮ್ಮ ಟಿಆರ್ ಪಿ ಹೆಚ್ಚಿಸಿಕೊಳ್ಳುವ ನೀಚ ವೃತ್ತಿಯಲ್ಲಿ ತೊಡಗಿಕೊಂಡಿತು ಅಲ್ಲಿಗೆ ಜನಸಾಮಾನ್ಯರ ಬದುಕು ಹಳ್ಳದಿಂದ ಬಾವಿಗೆ ನೂಕಿದಂತಾಯಿತು!
ಅವರು ಇವರು ಯಾಕೆ ನನ್ನ ವೈಯುಕ್ತಿಕ ಅನುಭವವನ್ನು ನಿಮ್ಮಲ್ಲಿ ಹಂಚಿಕೊಳ್ಳುವೆ;

ಜನತಾ ಕರ್ಫ್ಯೂ ಅಂದಾಗ ಅಷ್ಟೇನು ತಲೆನೋವಾಗಿರಲಿಲ್ಲ. ಕಾರಣ ನಾಳೆ ಹೇಗಿದ್ದರೂ ಅಂಗಡಿ ಬಾಗಿಲು ತೆರೆಯುತ್ತದೆ ಅಲ್ವಾ…. ಸಮಸ್ಯೆ ಆಗದು ಅಂತ ಮಲಗಿದ್ವಿ,ಯಾವಾಗ ಮಾರ್ಚ್ ಮೂವತ್ತೊಂದು ಅಂತ ಹೇಳಿತೋ ಕೈಯಲ್ಲಿ ಉಳಿದಿದ್ದ ಅಷ್ಟಿಷ್ಟು ಹಣ ಸೇರಿಸಿ ಊರು ತಲುಪುವ ಕೆಲಸ ನೋಡಿದೆವು ಆದರೆ ಅಷ್ಟರಲ್ಲಾಗಲಿ‌ ಟ್ಯಾಕ್ಸಿಗಳು ದುಬಾರಿ ಆಗಿಬಿಟ್ಟಿದ್ದವು. ಬಸ್ಸುಗಳು ಯಾವುದು ಸೇವೆ ಒದಗಿಸುತ್ತಿಲ್ಲ, ಒಂದಿಬ್ಬರಾದರೆ ಸರಿ ನಾವು ಆರೆಳು ಮಂದಿ ಜೊತೆಗೆ ತುಂಬು ಗರ್ಭಿಣಿ ಅತ್ತಿಗೆಯಿದ್ದರು. ಹಂಗೂ ಹಿಂಗೂ ಹಾಸನ ವರೆಗೆ ಗಾಡಿ ಮಾಡ್ಕೊಂಡು ಅಲ್ಲಿಂದ ಮನೆಯಲ್ಲಿರುವ ಓಮ್ನಿ ತರಿಸಿ ಊರು ಸೇರಿದೆವು. ಅಲ್ಲಿಯವರೆಗೆ ಊರು ಸೇರುವುದು ಮಾತ್ರ ತಲೆಯಲ್ಲಿತ್ತು ಮನೆಗೂಡಿದ ನಂತರ ನಮ್ಮೆಲ್ಲರ ಮುಂದೆ ದೊಡ್ಡ ಪ್ರಶ್ನೆಯಾಗಿದ್ದು ಅಪ್ಪನ ಡಯಾಲಿಸಿಸ್….???!!!

ವಾರದಲ್ಲಿ ಮೂರು ಡಯಾಲಿಸಿಸ್ ಕಡ್ಡಾಯ, ಕಡಿಮೆ ಅಂದರೆ ವಾರದಲ್ಲಿ ಮೂರುವರೆಯಿಂದ ನಾಲ್ಕು ಸಾವಿರ ಬೇಕು! ಅಪ್ಪನಿಗೆ ಮಕ್ಕಳೇ ಆಸ್ತಿ ಆದಾಯ. ನಮ್ಮ ದುಡಿತ ಎಲ್ಲರೂ ದುಡಿಮೆಯಿಲ್ಲದೆ ಮನೆ ಸೇರಿಯಾಗಿತ್ತು. ಆದಾಯಕ್ಕೆ ಯಾವ ಮೂಲವೂ ಇಲ್ಲ. ಹೊಟ್ಟೆಗೆ ಹೇಗಾದರೂ ಉಪವಾಸ, ಗಂಜಿ ಇಳಿಸಿದ್ರೆ ಬದುಕಬಹುದು ಆದರೆ ಅಪ್ಪ ಡಯಾಲಿಸಿಸ್ ಇಲ್ಲದೆ ಬದುಕಲಾರರು!. ಎರಡು ವಾರ ಹೇಗೋ ಅಡ್ಜಸ್ಟ್ಮೆಂಟಲ್ಲಿ ಹೋಯಿತು ಇನ್ನು ಎರಡು ವಾರ ಹೋಗಲು ಬೇಕಾದ ದುಡ್ಡಿತ್ತು ಆದರೆ ಈ ವಾರದ ಬೆಳವಣಿಗೆಯಿಂದ ತಿಳಿದದ್ದು ಲಾಕ್ಡೌನ್ ಮುಂದುವರಿಯಬಹುದು! ಏನು ಮಾಡುವುದು ಹೀಗಾದರೇ???

ಊರು ಪರವೂರಿನ ಸ್ನೆಹಿತರು ಕಿಟ್ ವಿತರಿಸುವ ಗ್ರೂಪಿಗೆ ಸೇರಿಸಿ ಸಹಾಯ ಧನ ನಿರೀಕ್ಷೆಯಲ್ಲಿದ್ದಾರೆ ಆದರೆ ಅಪ್ಪನ ಪರಿಸ್ಥಿತಿ ಹೀಗಿರುವಾಗ ಹೇಗೆ? ನಿನ್ನೆ ರಾತ್ರಿ ಅಣ್ಣ ತಮ್ಮಂದಿರು ಸೇರಿ ಕೈಯಲ್ಲಿರುವ ಐದಾರು ಸಾವಿರ ರುಪಾಯಿಯಿಂದ ಅಣ್ಣನ ಮೀನು ಮಾರುವ ಗಾಡಿಯಲ್ಲಿ ಮನೆ ಮನೆಗೆ ತರಕಾರಿ ಕೊಂಡೊಯ್ದು ವ್ಯಾಪಾರ ಮಾಡುವ ಹೆಚ್ಚೇನು ಬೇಡ ವಾರದಲ್ಲಿ ಅಪ್ಪನಿಗೆ ಮೂರು ಡಯಾಲಿಸಿಸ್ಗೆ ಬೇಕಾದಷ್ಟು ಸಿಕ್ಕರೆ ಬಹಳವಾಯಿತು; ಆದ್ದರಿಂದ ಈ ಸಮಯದಲ್ಲಿ ಎಲ್ಲರೂ ಕಷ್ಟದಲ್ಲಿರುತ್ತಾರೆ. ಹೆಚ್ಚಿನ ಲಾಭವಿಡದೆ ಎಲ್ಲರಿಗಿಂತ ಕಡಿಮೆ ಬೆಲೆಯಲ್ಲಿ‌ ಮಾರುವುದೆಂದು. ಅದರಂತೆ ಇವತ್ತು ಶುರು ಹಚ್ಕೊಂಡು ಪರಪ್ಪು ಊರಿನ ಗಲ್ಲಿಗಳಿಗೆ ಹೋದೆವು, ಎಲ್ಲಾ ಕಡೆ ಉತ್ತಮ ಸ್ಪಂದನೆ ಸಿಕ್ಕಿದರೂ ರಕ್ತೇಶ್ವರಿ ಪದವು ಏರಿಯಾದಲ್ಲಿ ಮೂರು ನಾಲ್ಕು ಮನೆಯವರು ಗಾಡಿ ನಿಲ್ಲಿಸಿದರು. ಮಹಿಳೆಯರು ಸೇರಿದಂತೆ ಎರಡು ಗಂಡಸರು ಬೇಕಾದ ತರಕಾರಿಗಳನ್ನು ತೂಕ ಮಾಡುತ್ತಿದ್ದಂತೆ ಅದರಲ್ಲಿ ಒಂದು ಮನೆಗೆ ಸೇರಿದ ಒಬ್ಬ ಯುವಕ ಬೈಕಲ್ಲಿ ವಯಸ್ಸಾದವರನ್ನು ಕೂರಿಸಿ ಮನೆಯಂಗಳ ತಲುಪುತ್ತಿದ್ದಂತೆ ಹೆಂಗಸರು ಒಬ್ಬೊಬ್ಬರೆ ಜಾಗ ಖಾಲಿ ಮಾಡಿದರು. ಮೊದಲು ಏನು ಅಂತ ಅರ್ಥವಾಗಲಿಲ್ಲ ಆದರೆ ಆ ಮೊದಲು ತರಕಾರಿ ತೂಕ ಮಾಡಿಟ್ಟ ಹೆಂಗಸು “ದೆತ್ತೊನ್ಯರ ಬಲ್ಲಿ ಆಂಡಲ ತೂಕ ಮಲ್ತಾಂಡತ್ತ ಕೊರ್ಲೆ”(ತೆಗೆದುಕೊಳ್ಳಬಾರದು ಆದರೂ ತೂಕ ಮಾಡಿ ಆಯಿತಲ್ಲ ಕೊಡಿ) ಅನ್ನುವಾಗ ಆತ ಕೆಟ್ಟ ಪದಗಳಿಂದ ತನ್ನ ಮನೆಯವರಿಗೆ ಬೈಯ್ಯತೊಡಗಿದ. ಆದರೆ ಅದರಲ್ಲಿದ್ದ ಹಿರಿಯ ವ್ಯಕ್ತಿ ಒಬ್ಬರು “ನಿನಗೆ ಎಲ್ಲರೊಂದಿಗೆ ಜಗಳ ಮಾಡುವುದೇ ಕೆಲಸ ನಾಯಿ ನೀನು ಸುಮ್ಮನಿರು ” ಅಂತ ಹೇಳಿ ಮನೆಕಡೆ ನಡೆದರು.

ನಾವು ಗಾಡಿ ಸ್ಟಾರ್ಟ್ ಮಾಡಿ ಮುಂದೆ ಬಂದಾಗ ಬಹಳಷ್ಟು ಊರ ಹಿಂದು ಸಹೋದರ ಸಹೋದರಿಯರು ಮನೆ ಅಂಗಳಕ್ಕೆ ಕರೆದು ವ್ಯಾಪಾರ ಮಾಡಿದರು. ಆದರೆ ಅವನಾಡಿದ ಒಂದು ಕ್ಷಣ ಅವನನ್ನು ಕಂಡಾಗ ಕ್ಷಣ ಮಾತ್ರದಲ್ಲಿ ಭಯದಿಂದ ಬದಲಾದ ಹೆಂಗಸರ ಮುಖದ ಹಾವಭಾವ ಈಗಲು ನನ್ನ ಕಣ್ಣಮುಂದೆ ತೇಲುತ್ತಿದೆ. ಈಗಾಗಲೇ ಆತ ತನ್ನಲ್ಲಿರುವ ವಿಷವನ್ನು ಆ ಮೂರು ಮನೆಮಂದಿಗೆಲ್ಲಾ ಹರಡಿರುವುದರಲ್ಲಿ ಸಂಶಯವಿಲ್ಲ!.

ಜನ ಯಾಕೆ ಹೀಗೆ????
ಇದಕ್ಕೆಲ್ಲಾ ನೇರ ಹೊಣೆ ನಮ್ಮ ಕನ್ನಡ ಮಾಧ್ಯಮಗಳು ಅಂದರೆ ತಪ್ಪಲ್ಲ ಕಾರಣ ಆರೇಳು ತಿಂಗಳ ಹಿಂದೆ ಅದೇ ಏರಿಯಾಕ್ಕೆ ಅಣ್ಣ ಮೀನು ಮಾರಾಟ ಮಾಡಿ ಬರುತ್ತಿದ್ದರು.ಆಗ ಈತರ ಇರಲಿಲ್ಲ ಮತ್ಯಾಕೆ ಈಗ ಹೀಗೆ? ಗೊತ್ತಿಲ್ಲ ಈತರ ಮುಂದುವರಿದರೆ ಸಮಾಜ ನಮ್ಮ ದೇಶ ಯಾವ ಮಟ್ಟಕ್ಕೆ ಹೋಗಿ ನಿಲ್ಲುತ್ತದೆ ಅಂತ? ಒಡೆಯುವ ಶಕ್ತಿಗಳು ಕಟ್ಟುವ ಶಕ್ತಿಗಳಿಗಿಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿರುವುದಂತೂ ಸತ್ಯ!
ಹೌದು ತಮ್ಮನ್ನು ತಾವು ಪ್ರಜಾಪ್ರಭುತ್ವದ ಅಂಗವೆಂದು ಕರೆದು ಸಂವಿಧಾನದ ಮೂಲ ಆಶಯವಾದ ಜಾತ್ಯಾತೀತ ಭಾರತಕ್ಕೆ ಕೊಡಲಿಯೇಟು ಕೊಡುತ್ತಿದೆ, ಚುನಾವಣಾ ಸಂದರ್ಭದಲ್ಲಿ ಬಕೆಟ್ ಹಿಡಿಯುತ್ತಾರೆ ಬಿಡಿ. ಆದರೆ ಜನ ಸಾಯುವ ಸಂದರ್ಭದಲ್ಲಿ ಕೂಡ ಜಾತಿ ಧರ್ಮದ ಕನ್ನಡವಿಟ್ಟು ನೋಡುತ್ತಾರೆಂದರೆ ಮನುಷ್ಯರಾಗಲು ಅರ್ಹರಲ್ಲ ಎಂದರ್ಥ.

ಎಲ್ಲರಿಗೂ ತಮ್ಮ ತಮ್ಮ ಜವಾಬ್ದಾರಿಗಳನ್ನು ಅರಿತು ಕಾರ್ಯಪ್ರವೃತ್ತರಾಗಲು ಪ್ರಕೃತಿ ಒಳ್ಳೆಯ ಅವಕಾಶವನ್ನು ಕೊಟ್ಟಿದೆ ಇನ್ನಾದರೂ ಕನಿಷ್ಠ ಪಕ್ಷ ಮನುಷ್ಯರಾಗಲು ಪ್ರಯತ್ನಿಸುವ ಮಹಾಮಾರಿ ಕೋರೋನವನ್ನು ವಿಶ್ವದಿಂದಲೇ ಒದ್ದೋಡಿಸುವ!

ನೋವಿನಿಂದ,
-ಅಸಪ ಗೇರುಕಟ್ಟೆ

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group