ರಾಜ್ಯ ಸುದ್ದಿ

ಕನ್ನಡ ಸುದ್ದಿವಾಹಿನಿಗಳು ಜವಾಬ್ಧಾರಿಯಿಂದ ವರ್ತಿಸಲಿ: ಪಾಪ್ಯುಲರ್ ಫ್ರಂಟ್

ವರದಿಗಾರ (ಎ.21): ಕೊರೋನ ಮಹಾಮಾರಿಯ ವಿರುದ್ಧ ಎಲ್ಲೆಡೆ ಒಗ್ಗಟ್ಟಿನ ಪ್ರತಿಬಂಧಕ ಕ್ರಮಗಳು ಕಂಡು ಬರುತ್ತಿದ್ದರೂ ರಾಜ್ಯದಲ್ಲಿ ಕೆಲವು ಸುದ್ದಿ ಮಾಧ್ಯಮಗಳು ಪೂರ್ವಾಗ್ರಹಪೀಡಿತವಾಗಿ ಸುದ್ದಿ ಬಿತ್ತರಿಸಿ ಕೊರೋನ ನಿಯಂತ್ರಣ ಕ್ರಮಗಳಿಗೆ ಹಿನ್ನಡೆ ಉಂಟು ಮಾಡುತ್ತಿವೆ. ಈ ಸಂದರ್ಭದಲ್ಲಿ ಸಾಮಾಜಿಕ ಕಳಕಳಿಯೊಂದಿಗೆ ವರ್ತಿಸಬೇಕಾಗಿದ್ದ ಮಾಧ್ಯಮಗಳು ಸಂಪೂರ್ಣವಾಗಿ ರೋಗ ಭೀತಿಯನ್ನು ಕೋಮುಧ್ರುವೀಕರಣಕ್ಕೆ ಬಳಸುತ್ತಿರುವುದು ಅಕ್ಷಮ್ಯ ಮತ್ತು ಖಂಡನಾರ್ಹ. ಸರಕಾರವು ಈ ಕೂಡಲೇ ಇಂತಹ ಮಾಧ್ಯಮಗಳ ಪ್ರಸಾರವನ್ನು ಕೋವಿಡ್-19 ಪರಿಸ್ಥಿತಿಯು ಹತೋಟಿಗೆ ಬರುವವರೆಗೆ ತಡೆಹಿಡಿಯಬೇಕು. ಕೋಮುಧ್ರುವೀಕರಣದ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವುದಾಗಿ ರಾಜ್ಯದ ಜನತೆಗೆ ಮುಖ್ಯಮಂತ್ರಿ ನೀಡಿರುವ ಭರವಸೆಯನ್ನು ಉಳಿಸಿಕೊಳ್ಳಬೇಕು ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಯಾಸಿರ್ ಹಸನ್ ಆಗ್ರಹಿಸಿದ್ದಾರೆ.

ಬೀದರ್ ನಲ್ಲಿ ಮುಸ್ಲಿಮ್ ಸಮುದಾಯಕ್ಕೆ ಸೇರಿದ ಇಬ್ಬರು ಕೊರೋನ ಪೀಡಿತರಾಗಿ ಸಾವನ್ನಪ್ಪಿದ್ದಾರೆ ಎಂದು ಸುಳ್ಳುಸುದ್ದಿ ಹಬ್ಬಿಸಿದ ಕನ್ನಡದ ಪ್ರಮುಖ ಸುದ್ದಿ ಚಾನೆಲ್ ಸೇರಿದಂತೆ ಹಲವು ಸುದ್ದಿ ಮಾಧ್ಯಮಗಳು ಆರಂಭದಿಂದಲೇ ಕೊರೋನವನ್ನು ಕೋಮು ಆಧಾರಿತವಾಗಿ ಚಿತ್ರಿಸಿ ಜನರಲ್ಲಿ ಅಪನಂಬಿಕೆಯನ್ನು ಬೆಳೆಸಿವೆ.

ಇತ್ತೀಚೆಗೆ ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದ ಘಟನೆಯಲ್ಲೂ ಇಡೀ ಮುಸ್ಲಿಂ ಸಮುದಾಯವನ್ನೇ ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸಿದ್ದು ಮಾತ್ರವಲ್ಲದೇ ಇಡೀ ದಿನ ಇದೇ ಘಟನೆಗೆ ಸಂಬಂಧಿಸಿ ಚರ್ಚಿಸುತ್ತಾ ತಮ್ಮ ಟಿವಿ ಚರ್ಚೆಯಲ್ಲೊಂದರ ವಿಷಯವನ್ನೇ “ಭಾರತ ಮತ್ತು ಅವರು” ಎಂದಿಟ್ಟು ಚರ್ಚೆಯುದ್ಧಕ್ಕೂ ಇಡೀ ಮುಸ್ಲಿಮರನ್ನು ಗುರಿಪಡಿಸುವ ರೀತಿಯ ಹೇಳಿಕೆಗಳನ್ನು ನೀಡಿ
ಮುಸ್ಲಿಮರನ್ನು ಸಮಾಜದಲ್ಲಿ ದ್ವೇಷಿಸುವ ಪರಿಸ್ಥಿತಿಯನ್ನು ನಿರ್ಮಾಣ ಮಾಡಿರುತ್ತಾರೆ.
ನಿರಂತರ ಇಂತಹ ವರದಿಯ ಪರಿಣಾಮವಾಗಿ ಹಲವು ಕಡೆ ಮುಸ್ಲಿಮರಿಗೆ ಹಲ್ಲೆ, ಮೈಸೂರು ಮತ್ತು ಮಂಡ್ಯದಲ್ಲಿ ಮುಸ್ಲಿಮ್ ಮೊಹಲ್ಲಾಗಳಿಗೆ ಬಹಿಷ್ಕಾರ, ಚಿಕಿತ್ಸೆ ನಿರಾಕರಣೆ, ಮುಸ್ಲಿಮ್ ಸಾಮಾಜಿಕ ಕಾರ್ಯಕರ್ತರು ಸಮಾಜಸೇವೆ ನಡೆಸದಂತೆಯೂ ತಡೆಯೊಡ್ಡಿದ ಪ್ರಕರಣಗಳು ನಡೆದಿವೆ.

ಮಾಧ್ಯಮದ ವರದಿಯ ಆಧಾರದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿಯೂ ಹಲವರು ನಿರಂತರ ಮುಸ್ಲಿಮರ ವಿರುದ್ಧದ ದ್ವೇಷಪೂರಿತ ಸಂದೇಶಗಳನ್ನು ಹರಿಯಬಿಟ್ಟ ಕಾರಣದಿಂದ ರಾಜ್ಯಾಧ್ಯಂತ ವಿವಿಧ ಠಾಣೆಗಳಲ್ಲಿ ಸುಮಾರು ಎಪ್ಪತ್ತಕ್ಕೂ ಹೆಚ್ಚು ಪ್ರಕರಣಗಳು ಧಾಖಲಾಗಿರುತ್ತದೆ.ಮಾಧ್ಯಮಗಳ ಇಸ್ಲಾಮಾಫೋಬಿಯವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ ಆರೋಪದಲ್ಲಿ ವಿದೇಶದಲ್ಲೂ ಅನಿವಾಸಿ ಭಾರತೀಯರು ಕೆಲಸದಿಂದ ವಜಾಗೊಂಡು ಜೈಲು ಸೇರಿದ್ದಾರೆ.

ಇಂತಹ ಎಲ್ಲಾ ಘಟನೆಗಳು ಮಾಧ್ಯಮವು ಪ್ರಸಾರ ಮಾಡಿದ ಪೂರ್ವಾಗ್ರಹಪೀಡಿತ ವರದಿಗಳ ಪ್ರತಿಫಲನವಾಗಿವೆ.

ಈ ಎಲ್ಲ ಪರಿಣಾಮಗಳಿಗೆ ಮಾಧ್ಯಮವು ನೇರ ಹೊಣೆಯಾಗಿದ್ದು, ಇವುಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದರಿಂದ ಮಾತ್ರವೇ ನಾಡಿನಲ್ಲಿ ಶಾಂತಿ ನೆಲೆಗೊಳ್ಳಲು ಸಾಧ್ಯ ಎಂದು ಪಾಪ್ಯುಲರ್ ಫ್ರಂಟ್ ತಿಳಿಸುತ್ತದೆ.

ಮಾಧ್ಯಮಗಳು ಸಾಮಾಜಿಕ ಕಳಕಳಿಯೊಂದಿಗೆ ಆಡಳಿತ ವ್ಯವಸ್ಥೆ ಮತ್ತು ಸಾರ್ವಜನಿಕರೊಂದಿಗೆ ಬೆರೆತು ಕಾರ್ಯನಿರ್ವಹಿಸಿದ ರಾಜ್ಯಗಳಲ್ಲಿ ಕೊರೋನವು ಬಹುತೇಕ ನಿಯಂತ್ರಣಕ್ಕೆ ಯಶಸ್ಸು ಸಾಧಿಸಿರುವುದನ್ನು ಕಾಣಬಹುದು. ರಾಜ್ಯದಲ್ಲಿ ಕನ್ನಡ ನ್ಯೂಸ್ ಚಾನೆಲ್ ಗಳು ಮಾತ್ರ ಬೇಜವಾಬ್ಧಾರಿಯಿಂದ ವರ್ತಿಸಿ ನಕಾರಾತ್ಮಕ ಪರಿಣಾಮವನ್ನು ಬೀರಿವೆ ಎಂದು ಯಾಸಿರ್ ಹಸನ್ ಆರೋಪಿಸಿದ್ದಾರೆ.

ಜನರು ಸುದ್ದಿ ಮಾಧ್ಯಮಗಳು ಪ್ರಸಾರ ಮಾಡುವ ಸುಳ್ಳುಸುದ್ದಿ, ವದಂತಿಗಳಿಗೆ ಕಿವಿಗೊಡದೆ ಆಡಳಿತ ವ್ಯವಸ್ಥೆ ಮತ್ತು ಆರೋಗ್ಯ ಇಲಾಖೆಯ ಅಧಿಕೃತರು ನೀಡುವ ಮಾಹಿತಿಯನ್ನು ಮಾತ್ರವೇ ಅವಲಂಬಿಸಬೇಕಾಗಿ ಪಾಪ್ಯುಲರ್ ಫ್ರಂಟ್ ಕರೆ ನೀಡುತ್ತದೆ.

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group