ಅಭಿಪ್ರಾಯ

’ತೊಡೆಗೂಸು’ ಮಾಧ್ಯಮಗಳ ರೋಗ ಲಕ್ಷಣಗಳು! -ಕೆ.ಫಣಿರಾಜ್

ವರದಿಗಾರ (ಎ.21):  ರೋಗಕ್ಕೆ ತುತ್ತಾದವರು ಮಾಡಬೇಕಾದ ಜರೂರಿನ ಕೆಲಸವೇನು? ಎಂಬ ಪ್ರಶ್ನೆಗೆ ಬದುಕಿನಲ್ಲಿ ಕಾಯಿಲೆಗಳನ್ನುಂಡ ಯಾವುದೇ ಸಾಮಾನ್ಯ ಮನುಷ್ಯ ಜೀವಿ ಸಹಜವಾಗಿ ಉತ್ತರಿಸುವುದು: ರೋಗ ಲಕ್ಷಣ ತಿಳಿದುಕೊಳ್ಳುವುದು, ಉಲ್ಬಣವಾಗದಂತೆ ಕ್ರಮಗಳನ್ನು ಅನುಸರಿಸುವುದು, ತಜ್ಞರ ಬಳಿ ಪರೀಕ್ಷಿಸಿಕೊಂಡು ಹೇಳಿದ ಉಪಕ್ರಮಗಳನ್ನು ಅನುಸರಿಸುವುದು.. ಇತ್ಯಾದಿ. ರೋಗಿಯ ಆರೈಕೆ ಮಾಡುವ ಸಾಮಾನ್ಯ ಮಂದಿ ಯೋಚಿಸುವುದು, ರೋಗಿಯ ದೈಹಿಕ ಸ್ಥಿತಿ, ಔಷದೋಪಚಾರ ನಡೆಸುವ ಬಗೆ, ರೋಗ ಸುತ್ತಲಿನ ಇತರರಿಗೆ ಬಾಧೆಯಾಗದಂತೆ ವಾತಾವರಣ ಸ್ವಚ್ಛವಾಗಿಟ್ಟುಕೊಳ್ಳುವುದು ಇತ್ಯಾದಿ.

ರೋಗ ಸಾಂಕ್ರಮಿಕವಾಗಿದ್ದರೆ, ಸಮಾಜ ಹಾಗು ಸರಕಾರಗಳೂ ತಮ್ಮ ಕೆಲವು ಜವಾಬ್ದಾರಿಗಳನ್ನು ನಿಭಾಯಿಸಬೇಕಾಗುತ್ತದೆ. ಇಂತಹ ಬಿಕ್ಕಟ್ಟಿನ ಹೊತ್ತಲ್ಲಿ ಸರಕಾರವು ಕೈಗೊಳ್ಳಬೇಕಾದ ಸಹಜ ’ಜನ ಕಲ್ಯಾಣ’ ಕ್ರಮಗಳೂ ಹೊಸದಾದವೇನೂ ಅಲ್ಲ; ರೋಗ ಹರಡದಂತೆ ತಡೆಯುವ ವಿಜ್ಞಾನ ವಿವೇಕದ ಕ್ರಮಗಳನ್ನು ಕೈಗೊಳ್ಳುವುದು, ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಅಗತ್ಯವಾದ ಸಾಧನ-ಸಲಕರಣೆಗಳನ್ನು ಒದಗಿಸುವುದು, ಚಿಕಿತ್ಸೆ ನೀಡುವ ವೈದ್ಯಕೀಯ ಸಿಬ್ಬಂಧಿಯ ಸುರಕ್ಷಿತತೆಯ ಕಡೆ ಗಮನ ಕೊಡುವುದು, ಸಾಂಕ್ರಮಿಕ ಬಿಕ್ಕಟ್ಟಿನ ಸ್ಥಿತಿಯಲ್ಲಿ ಹೊಟ್ಟೆಪಾಡಿಗೆ ತತ್ವಾರವಾದವರನ್ನು ಗುರುತಿಸಿ ದೈನಂದಿನ ಅಗತ್ಯಗಳನ್ನು ಸಕ್ಷಮವಾಗಿ ಪೂರೈಸುವುದು, ಬಳಲುತ್ತಿರುವ ವ್ಯಾಪಾರ-ವ್ಯವಹಾರಗಳ ಸುಧಾರಣೆಯ ಬಗ್ಗೆ ಕಾರ್ಯಕ್ರಮ ರೂಪಿಸುವುದು,ಇದೆಲ್ಲವನ್ನೂ ಪ್ರಜೆಗಳ ಮರ್ಜಿಗೆ ಬಿಡದೆ ಅಗತ್ಯವಾದ ಸಂಪನ್ಮೂಲ ಕ್ರೋಢಿಕರಿಸುವುದು ಸರಕಾರದ ಸಹಜ ಉತ್ತರದಾಯಿತ್ವ. ಇವೆಲ್ಲವೂ ರೋಚಕವಾದ ಕಾಯಕಗಳೇನೂ ಅಲ್ಲ, ಲೋಕತಂತ್ರದಲ್ಲಿ ಲೋಕ ಸಹಜವಾಗಿ ನಡೆಯಬೇಕದ್ದಂತಹು.

ಸಮಾಜದ ಒಂದು ಸಂಸ್ಥೆಯಾಗಿ ಮಾಧ್ಯಮಗಳ ಕಾಯಕವೂ ಇಷ್ಟೇ ಲೋಕ ಸಹಜವಾಗಿ ಇರಬೇಕು. ಸಾಮಾನ್ಯರಲ್ಲಿ ಸಾಂಕ್ರಮಿಕ ರೋಗದ ಬಗ್ಗೆ ವಿಜ್ಞಾನ ವಿವೇಚನೆ, ರೋಗ ಲಕ್ಷಣ, ತಕ್ಷಣ ಉಪಚಾರಗಳ, ಸೂಕ್ತ ವೈದ್ಯಕೀಯ ಸೌಲಭ್ಯಗಳ ಮಾಹಿತಿ ಪ್ರಸಾರ; ಸಾಂಕ್ರಮಿಕ ಸ್ಥಿತಿಯಲ್ಲಿ ಹೊಟ್ಟೆಪಾಡಿನ ಕಷ್ಟ ಅನುಭವಿಸುವವರ ಕುರಿತು ಸಮಗ್ರ ಮಾಹಿತಿ; ಸರಕಾರದ ಕಾರ್ಯಕ್ರಮಗಳ ವಸ್ತುನಿಷ್ಠ ವರದಿ ಮತ್ತು ಕೈಗೊಳಬಹುದಾದ ಕ್ರಮಗಳ ಕುರಿತು ತಜ್ಞರಿಂದ ಮಾಹಿತಿ ಸಂಗ್ರಹಿಸಿ ಸರಕಾರದ ಕಿವಿಗೂ, ಪ್ರಜೆಗಳ ವಿವೇಚನೆಗೂ ಹಾಕುವುದು; ಪ್ರಜೆಗಳ ಅಹವಾಲುಗಳನ್ನು ಆಡಳಿತಕ್ಕೆ ತಲುಪಿಸುವ ಜವಾಬ್ದಾರಿ-ಇಂತಹ ಕೆಲಸಗಳನ್ನು ಮಾಧ್ಯಮ ದಿನ ಪೂರ್ತಿ ನಿಭಾಯಿಸುವ ಒತ್ತಡ ಈ ಸಮಯದಲ್ಲಿ ಇರುತ್ತದೆ ಮತ್ತು ಅದ್ಯಾವುದು ರೋಚಕವಲ್ಲದ ನಿತ್ಯ ಸಾಮಾನ್ಯ ಕೆಲಸ.

ಮಾಧ್ಯಮಗಳು ಕೋವಿಡ್-19 ಸಾಂಕ್ರಮಿಕ ಸ್ಥಿತಿಯಲ್ಲಿ ಮಾಡುತ್ತಿರುವ ಕೆಲಸವೇನು?

‘ರೋಗ’ಕ್ಕೆ ವಿರುದ್ಧ ಪದಗಳು ’ಗುಣಮುಖ’, ’ಸುಧಾರಿಕೆ’, ’ಚಿಕಿತ್ಸೆ’. ಆದರೆ, ನಮ್ಮ ಮಾಧ್ಯಮಗಳು ಬಳಸುತ್ತಿರುವ ಪದ ’ಯುದ್ಧ’! ಈ ಬಿಕ್ಕಟ್ಟಿನ ವಿದ್ಯಮಾನವನ್ನು ರೋಚಕಗೊಳಿಸಲು ನಮ್ಮ ಮಾಧ್ಯಮಗಳು ಪಣ ತೊಟ್ಟಂತೆ ವರ್ತಿಸುತ್ತಿವೆ. ಹಾಗಾಗಿ, ’ಕೋವಿಡ್-19’ರ ವಿರುದ್ಧ ಅವು ಅನಾಮತ್ತಾಗಿ ’ಯುದ್ಧ ಘೋಷಣೆ’ ಮಾಡಿಬಿಟ್ಟಿವೆ! ಯುದ್ಧ ಕಾಲದಲ್ಲಿ ಸರಕಾರಗಳು ತೆಗೆದುಕೊಳ್ಳುವ ಕ್ರಮಗಳು ಗೌಪ್ಯವಾಗಿದ್ದು, ಅವು ನೀಡಿದಷ್ಟು ಮಾಹಿತಿಯನ್ನು ರೋಚಕ ಯುದ್ದೋನ್ಮಾದ ಚೋಧಿಸುವ ಹಾಗೆ ಜನರ ಬುದ್ಧಿಯನ್ನು ಆಕ್ರಮಿಸುವಂತೆ ಮಾಧ್ಯಮಗಳು ಪ್ರಸಾರ ಮಾಡಬೇಕೆಂದು ಬಯಸುತ್ತವೆ; ತನ್ನ ಸಾಧನೆಗಳನ್ನು ಉತ್ಪ್ರೇಕ್ಷಿಸಿ ಜನರಲ್ಲಿ ಸುರಕ್ಷಿತತೆಯ ಭ್ರಮೆ ಹುಟ್ಟಿಸಬೇಕು ಎಂದು ಒತ್ತಾಯ ಹೇರುತ್ತವೆ; ಕೆಟ್ಟ ಮಾಧ್ಯಮಗಳು ಈ ತೊತ್ತಿನ ಕೆಲಸವನ್ನು ಉತ್ಸಾಹದಲ್ಲೇ ಮಾಡುತ್ತವೆ, ಸರಕಾರಗಳು ಬಯಸುವುದಕ್ಕಿಂತ ಒಂದಿಷ್ಟು ಹೆಚ್ಚೇ ಮಾಡುತ್ತವೆ! ಈಗಲೂ ನಮ್ಮ ಮಾಧ್ಯಮಗಳು, ತಾವು ನಿರ್ವಹಿಸಬೇಕಾದ ಸಾಮಾನ್ಯ ಲೋಕ ಸಹಜ ಕೆಲಸಗಳನ್ನು ಮೂಲೆಗೆಸೆದು, ಯುದ್ದೋನ್ಮಾದ ಉಕ್ಕಿಸುವ ಬಗೆಯಲ್ಲಿ ಕಾರ್ಯಾಚರಿಸುತ್ತಿವೆ. ಮಾರ್ಚ್ ಎರಡನೇ ವಾರದ ವರೆಗೂ ಕೋವಿಡ್-19ರ ಕುರಿತು ಯಾವ ಜನಜಾಗೃತಿ, ಸರಕಾರಕ್ಕೆ ಎಚ್ಚರಿಸುವ ಮಾಹಿತಿಗಳನ್ನೂ ಪ್ರಸಾರ ಮಾಡದೆ ಅದು ದೂರದ ದೇಶದಲ್ಲಿ ನಡೆಯುತ್ತಿರುವ ಅವಘಡವೆಂದೇ ವರದಿ ಮಾಡುತ್ತಿದ್ದವು. ಒಮ್ಮೆ ಸರಕಾರ ಎಚ್ಚರಗೊಂಡು ಬಿಕ್ಕಟ್ಟಿನ ಸೂಚನೆ ನೀಡಿದ್ದೇ, ಯಾವ ಪೂರ್ವ ತಯಾರಿಯೂ ಇಲ್ಲದ ನಮ್ಮ ಮಾಧ್ಯಮಗಳು, ಅಗ್ಗದ ಯುದ್ಧೋನ್ಮಾದ ಮಾರ್ಗವನ್ನು ಹಿಡಿದವು! ಮೊದಲ ವಾರವಂತೂ, ಸರಕಾರ ನೀಡುವ ತುಂಡು ತುಂಡು ಮಾಹಿತಿಯನ್ನು ನೂರಾರು ಸಲ ಪುನಃರಾವರ್ತಿಸುವುದು ಮತ್ತು ಈ ರೋಗವು ಪುರಾಣದಿಂದ ಎದ್ದು ಬಂದ ಕೇಡು ಎಂಬ ಹುಂಬ ನಿರೂಪಣೆಗಳಲ್ಲಿ ಕಾಲ ದೂಡಿದವು. ಕಾನೂನಿನ ಅತಿರೇಕದ ವರ್ತನೆಗಳನ್ನು ಕ್ರೈಂ ಥ್ರಿಲ್ಲರಿನಂತೆ ವರ್ಣಿಸತೋಡಗಿದವು. ಇವುಗಳ ಹೊರತು ಬೇರೆ ಏನು ಮಾಡಲೂ ಮಾಧ್ಯಮಗಳಿಗೆ ತಯಾರಿ ಇರಲಿಲ್ಲ; ತಯಾರಿ ಮಾಡಿಕೊಳ್ಳುವ ಯಾವ ಉತ್ಸಾಹವೂ ಅವುಗಳಿಗೆ ಇದ್ದಂತೆ ಕಾಣಲಿಲ್ಲ. ಜನ ಉದ್ಯೋಗವಿಲ್ಲದೆ ಲಕ್ಷಾಂತರ ಸಂಖ್ಯೆಯಲ್ಲಿ ನಗರಗಳಿಂದ ತಮ್ಮ ಊರುಗಳಿಗೆ ನೂರಾರು ಮೈಲಿ ಹಸಿದು ಗುಳೇ ಹೊರಟ ಸಂಗತಿ ಗೊತ್ತಿದ್ದೂ ಇವರಿಗೆ ಮಾತ್ರ ಕಾಣಲಿಲ್ಲ; ಸರಕಾರ ಯಾವ ಉತ್ತರದಾಯಿತ್ವ ನಿಭಾಯಿಸುತ್ತಿದೆ ಎಂದು ಹುಡುಕಲಿಲ್ಲ; ಲಾಕ್ಡೌನ್ ಅಗತ್ಯವಿತ್ತು ಸರಿ-ಆದರೆ ಅದರಿಂದ ಅರ್ಥ ವ್ಯವಸ್ಥೆಯ ಮೇಲೆ ಏನು ಪರಿಣಾಮ ಉಂಟಾಗಿದೆ? ಅದನ್ನು ಹದ್ದುಬಸ್ತಿನಲ್ಲಿ ಇಡಬೇಕಾದ ಮಾರ್ಗೋಪಯಗಳಿವೆಯಾ? ಎಂಬ ಕಡೆ ಗಮನ ಹರಿಸಲಿಲ್ಲ; ಬದಲಿಗೆ ಕೆಲವು ಜಾಲತಾಣ ಮಾಧ್ಯಮಗಳು ಹಾಗು ಇಂಗ್ಲೀಷ್ ಪತ್ರಿಕೆಯ ಬರಹಗಳು ಇವುಗಳ ಕುರಿತು ಮಾತನಾಡಿದ್ದನ್ನು ಅಪರಾಧವೆನ್ನುವಂತೆ ಹಾರಿಹಾಯತೊಡಗಿದವು. ಒಟ್ಟಾರೆ, ರೋಚಕತೆಯ ತುರಿಕೆಯಲ್ಲಿ ಬಿದ್ದವರಿಗೆ, ಕಣ್ಣಿಗೆ ಕಾಣದ ವೈರಸ್ಸ್ನ ವಿರುದ್ಧ ಯುದ್ಧವೂ ಹಳಸತೊಡಗಿ ಹೊಸ ವೈರಿಗಳ ತಹತಹಿಕೆಯವಲ್ಲಿದ್ದವರಂತೆ, ದೆಹಲಿಯ ತಬ್ಲಿಘ್ ಜಮಾತ್‌ನ ವಿದ್ಯಮಾನದ ಮೇಲೆ ಮುಗಿಬಿದ್ದರು. ಯಾವ ನಾಚಿಕೆಯೂ ಇಲ್ಲದೆ ಓತಾಪ್ರೋತವಾಗಿ ’ಸುಳ್ಳು ಸುದ್ಧಿ’ಗಳನ್ನು ಹುಟ್ಟಿಸಿ ಹರಡತೊಡಗಿದರು. ಮೂರು ವಾರಗಳಲ್ಲಿ ಒಂದು ಕೋಮನ್ನು ಅಪರಾಧಿಗಳೆಂದು ದೂಷಿಸುವ ಬರೋಬರಿ 65ಕ್ಕೂ ಹೆಚ್ಚು ’ಕೋಮು ದ್ವೇಷ’ ಹಬ್ಬಿಸುವ ಸುಳ್ಳುವರದಿಗಳನ್ನು ಪ್ರಸಾರಿಸತೊಡಗಿದವು. ಈ ಸುಳ್ಳು ವರದಿಗಳ ಪ್ರಭಾವ ಎಷ್ಟಿತ್ತೆಂದರೆ, ಲಾಕ್‌ಡೌನ್ ನಡುವೆ ಕಿಡಿಗೇಡಿ ಕೃತ್ಯಗಳೆನ್ನೆಗಿದವರನ್ನು ಯಾವ ಪೂರ್ವಪರ ವಿಚಾರಣೆ ಇಲ್ಲದೆ ಒಂದು ಕೋಮಿಗೆ ಸೇರಿದವರು ಎಂದು ಗುರುತಿಸುವ ಕೆಲಸವನ್ನು ಕೆಳ ಹಂತದ ಪೋಲಿಸರು, ಅಧಿಕಾರಿಗಳು ಸಹ ಮಾಡತೊಡಗಿದರು; ಬೆಂಕಿಗೆ ತುಪ್ಪ ಸುರಿಯುವುದಕ್ಕೆ ಇನ್ನೂ ಅನುಕೂಲವಾಯಿತು. ಜಾಗೃತ ಪುಟ್ಟ ಮಾಧ್ಯಮಗಳು ಮೇಲಾಧಿಕಾರಿಗಳ ಗಮನ ಸೆಳೆದು, ಅವರು ಸತ್ಯಾಸತ್ಯತೆ ವಿಷದಪಡಿಸಿದಾಗ, ಅದರ ಬಗ್ಗೆ ಕ್ಷಮೆಯಾಚಿಸದಷ್ಟು ಭಂಡತನವನ್ನೂ ಮಾಧ್ಯಮಗಳು ಬೆಳೆಸಿಕೊಂಡುಬಿಟ್ಟಿದ್ದಾವೆ. ಕರ್ನಾಟಕದ ಮುಖ್ಯಮಂತ್ರಿಗಳು ಸಂದರ್ಶಕರೊಬ್ಬರ ಕೋಮು ಪೂರ್ವಾಗ್ರಹದ ಪ್ರಶ್ನೆಗೆ ಖಡಕ್ ಎಚ್ಚರ ಕೊಟ್ಟರೂ, ಸುಳ್ಳು ಸುದ್ಧಿ ಹಬ್ಬಿಸುವ ತುರಿಕೆ ರೋಗ ನಿಂತಿಲ್ಲ.

ಮಾಧ್ಯಮಗಳ ಈ ರೀತಿಯ ಕೀಳು ನಡುವಳಿಕೆಗೆ ಕಾರಣವೇನು?

ಕಳೆದ ಒಂದು ದಶಕದಿಂದ ಮಾಧ್ಯಮಗಳು, ಜನರಿಗೆ ವಾಸ್ತವ ಸಂಗತಿಗಳನ್ನು ತಿಳಿಸುವ, ಅಧಿಕಾರಸ್ಥರ ತಪ್ಪುಗಳನ್ನು ಪರಾಮರ್ಶಿಸುವ, ಭಿನ್ನಮತೀಯ ವಿಚಾರಗಳಿಗೆ ವೇದಿಕೆಯಾಗುವ ತಮ್ಮ ಜವಾಬ್ದಾರಿಯನ್ನು ಕಳಚಿಟ್ಟುಬಿಟ್ಟಿವೆ; ಅಧಿಕಾರಸ್ಥರನ್ನು ಓಲೈಸಿಕೊಂಡು, ಅವರ ಮುಖವಾಣಿಯಾಗಿ ವರ್ತಿಸತೊಡಗಿವೆ; ಅಧಿಕಾರಸ್ಥ ವಲಯದ ಜಾಹಿರಾತಿನ ದಾಸರಾಗಿ ಮಾಧ್ಯಮ ವ್ಯವಹಾರವನ್ನು ನಡೆಸುವ ಸುಲುಭದ ದಾರಿ ಕಂಡುಕೊಂಡಿರುವ ಮಾಧ್ಯಮಗಳಿಗೆ, ಜನರ ಕಲ್ಯಾಣವಾಗಲೀ, ದುಃಖಗಳಾಗಲೀ ನೈತಿಕ ಬಾಧೆಗಳಾಗಿಯೂ ಉಳಿದಿಲ್ಲ. ಯಾವ ಮಾಧ್ಯಮಗಳನ್ನು ರವೀಶ್‌ಕುಮಾರ್ ’ಅಧಿಕಾರಸ್ಥರ ತೊಡೆಗೂಸುಗಳು’ ಎಂದು ಕರೆಯುತ್ತಾರೋ(ದೇಶದ ಮುಕ್ಕಾಲುವಾಸಿ ದೊಡ್ಡ ಹಾಗು ಮಧ್ಯಮ ವ್ಯವಹಾರವುಳ್ಳ ಮಾಧ್ಯಮಗಳು ಈ ವರ್ಗಕ್ಕೆ ಸೇರಿವೆ), ಅಂತಹ ಮಾಧ್ಯಮಗಳಿಗೆ ದೊಡ್ಡ ಸಂಖ್ಯೆಯ ಓದುಗರು/ವೀಕ್ಷಕರು ತಮ್ಮ ಗಿರಾಕಿಗಳಾದ್ದರೆ ಮಾತ್ರವೇ, ಅವರು ಪ್ರಸಾರಿಸುವ ಜಾಹಿರಾತಿಗೆ ಮೌಲ್ಯ ದೊರಕುವುದು; ಜನರ ಕಲ್ಯಾಣ ಧಿಕ್ಕರಿಸಿಯೂ, ಜನರನ್ನು ತಮ್ಮ ಜಾಹಿರಾತಿಗೆ ಸರಕಾಗಿ ಬಂಧಿಸಿಟ್ಟುಕೊಳ್ಳುವುದಕ್ಕಾಗಿ ನಮ್ಮ ಮಾಧ್ಯಮಗಳು ವಾಸ್ತವಿಕತೆಯನ್ನು ತಿರುಚಿ, ನಾಯಕರು-ಖಳರನ್ನು ಸೃಷ್ಟಿಸಿ, ಭ್ರಮಾತ್ಮಕ ವಾಸ್ತವವನ್ನು ಅತ್ಯಂತ ನಾಟಕೀಯವಾಗಿ ಓದುಗರಿಗೆ/ವಿಕ್ಷಕರಿಗೆ ಉಣಿಸುತ್ತಾ ಬರುತ್ತಿದ್ದಾರೆ. ವಾಸ್ತವವನ್ನು ತಿರುಚಿಯೂ ಅದು ಸುಳ್ಳು ಎಂದು ಗೊತ್ತಾಗದಂತೆ ಬಿಂಬಿಸಲು, ಸಮಾಜದಲ್ಲಿರೂಢಿಗತವಾಗಿರುವ ಕೋಮು,ಜಾತಿ, ಲಿಂಗ, ಆಸ್ತಿ ಭೇದಗಳ ಕುರಿತಾದ ಸಹಮತವನ್ನು ಮತ್ತಷ್ಟೂ ಹಿಗ್ಗಿಸಿ, ಉತ್ಪ್ರೇಕ್ಷಿಸಿ ತೋರಿಸುವ ಅತಿನಾಟಕೀಯತೆಯ ನಿರೂಪಣೆಯನ್ನು ಕರಗತ ಮಾಡಿಕೊಂಡಿದ್ದಾರೆ; ಹಾಗೆ ನೋಡಿದರೆ, ದೃಷ್ಯ ಮಾಧ್ಯಮದಲ್ಲಿ ಮನೋರಂಜನೆಯ ಹೆಸರಿನಲ್ಲಿ ಪ್ರಸಾರವಾಗುವ ಧಾರವಾಹಿಗಳ ನಿರೂಪಣೆಗೂ, ವಾಸ್ತವಿಕತೆಯನ್ನು ವಿಶ್ಲೇಷಿಸುವ ಸುದ್ಧಿ ಹಾಗು ಪ್ರಚಲಿತ ವಿದ್ಯಮಾನ ಕಾರ್ಯಕ್ರಮಗಳ ನಿರೂಪಣೆಗೂ ಹೆಚ್ಚಿನ ಅಂತರವೇನೂ ಉಳಿದಿಲ್ಲ. ನಾವು ನಿರಂತರವಾಗಿ ಹಲವು ರೂಪಗಳಲ್ಲಿ ಕಡಿದಿಟ್ಟಂತಹ ಒಳಿತು ಕೆಡುಕಿನ  ಪಾತ್ರಗಳಿರುವ ಒಂದೇ ಅತಿನಾಟಕೀಯ ಅಭಿನಯ ಪ್ರಸ್ತುತತೆಯನ್ನು ನೋಡುವಂತೆ / ಓದುವಂತೆ ನಮ್ಮನ್ನು ಪಳಗಿಸಲಾಗಿದೆ! ಇದರ ಫಲವಾಗಿ ಜನಮನದ ವಿವೇಚನೆ ವಿವೇಕಗಳಿಗೆ ಮಂಕು ಕವಿಸುವ ಮಾಧ್ಯಮ ಸುದ್ಧಿ ಉತ್ಪಾದನೆ ಬೇರೂರಿಬಿಟ್ಟಿದೆ. ನಮ್ಮ ದುಡಿಮೆಯ ಕಾಸಿನಿಂದಲೇ, ನಮ್ಮನ್ನು ರೋಗಗ್ರಸ್ತ ಮನೋಸ್ಥಿತಿಯಲ್ಲಿಡುವ ಕಸುಬುದಾರಿಕೆಯ ಹಿಡಿತ ಮಾಧ್ಯಮವು ಸಾಧಿಸಿದೆ. ಎಂತಹ ಕೋಮು ಹಿಂಸೆ, ದಲಿತ ಹತ್ಯೆ, ಅತ್ಯಾಚಾರ, ಭ್ರಷ್ಟಾಚಾರಗಳು ನಡೆದರೂ, ಅವುಗಳ ಹಿಂದಿರುವ ವಾಸ್ತವಾಂಶಗಳನ್ನು ತಿರುಚಿ ಸಹಜವೆಂಬಂತೆ ಪ್ರಸಾರಿಸುವ ಮಾಧ್ಯಮದ ವರೆಸೆಗೆ ’ಸುಳ್ಳು ಸುದ್ಧಿ’ಯೇ ವ್ಯವಹಾರ ಪೋಷಕ.

ಬದ್ಧ ವಿರೋಧಿಗಳೂ, ರೋಗ-ರುಜಿನಗಳ ಹೊತ್ತನ್ನು, ಸಂಬಂಧ ಸುಧಾರಿಸಿಕೊಳ್ಳುವುದಕ್ಕೆ ಉಪಯೋಗಿಸಿಕೊಳ್ಳುತ್ತಾರೆ. ಕೋವಿಡ್-19ರ ಕೇಡುಗಾಲವು, ಜನ ಸಾಮಾನ್ಯರು ತಮ್ಮ ರೂಢಿಗತ ಭೇದಗಳನ್ನು ಬದಿಗಿಟ್ಟು ಸೌಹಾರ್ದದ ಸಂಬಂಧ ಬೆಳೆಸಿಕೊಳ್ಳುವ ವಾತಾವರಣಕ್ಕೆ ಅನುವು ಮಾಡಿಕೊಟ್ಟಿದೆ; ಆದರೆ, ನಮ್ಮ ಮಾಧ್ಯಮಗಳಿಗೆ, ಸೌಹಾರ್ದವೇ ತಮ್ಮ ವ್ಯವಹಾರ ಲಾಭಕ್ಕೆ ಮುಳುವಾಗಿ ಕಾಣುತ್ತಿದೆ!ಇದು ’ತೊಡೆಗೂಸು’ಗಳಾಗಿರುವ ಮಾಧ್ಯಮಗಳ ಅಂತರಂಗ ದರ್ಶನದ ಕಾಲವೂ ಆಗಿದೆ.

ಲೇಖನ: -ಕೆ.ಫಣಿರಾಜ್

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group