ರಾಷ್ಟ್ರೀಯ ಸುದ್ದಿ

‘ಪಿಎಂ ಫಂಡ್ ಗೆ 35 ಸಾವಿರ ಕಟ್ಟಿ, ಜಾಮೀನು ಪಡೆದುಕೊಳ್ಳಿ’: ಅಚ್ಚರಿ ಮೂಡಿಸಿದ ಜಾರ್ಖಂಡ್ ಹೈಕೋರ್ಟ್ ಷರತ್ತು!

‘ಕೋವಿಡ್ ಕೇರ್ ಫಂಡ್ ಗೆ ದೇಣಿಗೆ ನೀಡಿ, ಆರೋಗ್ಯ ಸೇತು ಆ್ಯಪ್ ಡೌನ್ ಲೋಡ್ ಮಾಡಿ’

ವರದಿಗಾರ (ಎ.19): ಕೊರೋನಾ ವೈರಸ್ ಮಾಹಾಮಾರಿಯ ಇಂದಿನ ಸಂಕಷ್ಟ ಸಂದರ್ಭದಲ್ಲೊಂದು ಅಚ್ಚರಿಯ ವರದಿಯೊಂದು ಬೆಳಕಿಗೆ ಬಂದಿದೆ. ಅದು ಜಾರ್ಖಂಡ್ ಹೈಕೋರ್ಟ್ ಜಾಮೀನು ಪಡೆಯಲು ನೀಡಿರುವ ಷರತ್ತು.

ಬಿಜೆಪಿಯ ಮಾಜಿ ಸಂಸದ ಸೋಮ್ ಮರಂಡಿ, ವಿವೇಕಾನಂದ ತಿವಾರಿ, ಅಮಿತ್ ಅಗರ್‍ವಾಲ್, ಹಿಸಾಬಿ ರಾಯ್, ಸಂಚಯ್ ಬರ್ಧನ್ ಮತ್ತು ಅನುರಾಗ್ ಪ್ರಸಾದ್ ಅವರು 2012ರಲ್ಲಿ ನಡೆಸಿದ ರೈಲು ತಡೆ ಚಳವಳಿ ಹಿನ್ನೆಲೆಯಲ್ಲಿ ಇವರ ವಿರುದ್ಧ ಪ್ರಕರಣ ದಾಖಲಾಗಿತ್ತು. ರೈಲ್ವೆ  ಜ್ಯುಡೀಶಿಯಲ್ ಮ್ಯಾಜಿಸ್ಟ್ರೇಟ್ ಅವರು ರೈಲ್ವೆ ಕಾಯ್ದೆ-2017ರ ಸೆಕ್ಷನ್ 174 (ಎ) ಅನ್ವಯ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದ್ದರು.

‘ಕೋವಿಡ್-19 ಪಿಎಂ ಕೇರ್ ಫಂಡ್‍ಗೆ 35 ಸಾವಿರ ರೂ. ಪಾವತಿಸುವಂತೆ ಮತ್ತು ಆರೋಗ್ಯ ಸೇತು ಆ್ಯಪ್ ಡೌನ್‍ಲೋಡ್ ಮಾಡುವಂತೆ’ ಷರತ್ತು ವಿಧಿಸಿ ಮಾಜಿ ಸಂಸದ ಹಾಗೂ ಇತರ ಐದು ಮಂದಿಗೆ ಜಾರ್ಖಂಡ್ ಹೈಕೋರ್ಟ್ ಜಾಮೀನು ನೀಡಿ ಅಚ್ಚರಿಗೊಳಿಸಿದೆ.

ವಿಡಿಯೋ-ಕಾನ್ಫರೆನ್ಸ್ ಮೂಲಕ ಜಾಮೀನು ನೀಡಲು ಅನುಮತಿ ನೀಡಿದ ನ್ಯಾಯಮೂರ್ತಿ ಅನುಭಾ ರಾವತ್ ಚೌಧರಿ ಅವರು ಆರೋಪಿಗಳಿಗೆ  ಬಿಡುಗಡೆಯಾದ ನಂತರ ಠೇವಣಿ ಮತ್ತು ಡೌನ್‌ಲೋಡ್ ಸಾಕ್ಷ್ಯವನ್ನು ನೀಡುವಂತೆ ಕೇಳಿಕೊಂಡಿದ್ದಾರೆ ಎಂದು ಸಾರ್ವಜನಿಕ ಸಹಾಯಕ ಅಭಿಯೋಜಕ ರಾಕೇಶ್ ಕುಮಾರ್ ಸಿನ್ಹಾ ತಿಳಿಸಿದ್ದಾರೆ.

ಕಸ್ಟಡಿಯಿಂದ ಬಿಡುಗಡೆಯಾದ ತಕ್ಷಣ ಆರೂ ಮಂದಿ ಆರೋಗ್ಯ ಸೇತು ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ. ಸರ್ಕಾರ ಚಾಲನೆ ನೀಡಿರುವ ಈ ಆ್ಯಪ್‍ನ ವಿಶೇಷತೆ ಎಂದರೆ ಡೌನ್‍ಲೋಡ್ ಮಾಡಿಕೊಂಡ ವ್ಯಕ್ತಿ ಕೋವಿಡ್-19 ಪಾಸಿಟಿವ್ ವ್ಯಕ್ತಿಯನ್ನು ಸಂಪರ್ಕಿಸಿದರೆ ತಕ್ಷಣ ಮಾಹಿತಿ ನೀಡುತ್ತದೆ ಹಾಗೂ ಸೋಂಕಿಗೆ ಒಳಗಾಗುವ ಸಾಧ್ಯತೆ ಇದೆಯೇ ಎಂದು ತಿಳಿಸುತ್ತದೆ. ಆರೋಪಿಗಳ ಪರ ವಕೀಲರು ವಾದ ಮಂಡಿಸುತ್ತಾ, ಪಿಎಂ ಕೇರ್ಸ್ ಫಂಡ್‍ಗೆ ದೇಣಿಗೆ ನೀಡುವುದೂ ಸೇರಿದಂತೆ ಯಾವುದೇ ಷರತ್ತುಗಳಿಗೆ ಬದ್ಧ ಎಂದು ಹೇಳಿದ್ದರು.

COVID-19 ಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಪಾಲಿಸುವಂತೆ ಎಲ್ಲಾ ಆರೋಪಿಗಳಿಗೆ ಸೂಚನೆ ನೀಡಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.

 

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group