
ಸುಳ್ಳು ಸುದ್ದಿ ಪ್ರಸಾರ ಮಾಡಿದ ‘ಕಹಳೆ ನ್ಯೂಸ್’ ವಿರುದ್ಧ ಸಂತ್ರಸ್ತ ಕುಟುಂಬದಿಂದ ದೂರು!
ವರದಿಗಾರ (ಎ.18):ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಯುವಕನೊಬ್ಬನಲ್ಲಿ ನಿನ್ನೆ (ಎ.17) ಸೋಂಕು ದೃಢಪಟ್ಟಿದೆ. ಈ ಬಗ್ಗೆ ಆರೋಪ ಪತ್ಯಾರೋಪ ಕೇಳಿ ಬರಲಾರಂಭಿಸಿರುವುದು ಮಾತ್ರ ಖೇಧಕರ.
‘ಸೋಂಕು ದೃಢಪಟ್ಟಿರುವುದು ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಮತ್ತು ಕ್ವಾರಂಟೈನ್ ಪ್ಲಾಟಿನಲ್ಲಿನ ಅವ್ಯವಸ್ಥೆಯ ಬಗ್ಗೆ ನೀಡಿದ್ದ ದೂರನ್ನು ನಿರ್ಲಕ್ಷಿಸಿದ್ದರಿಂದಲೇ’ ಎಂದು ಸಂತ್ರಸ್ತ ಯುವಕನ ಕುಟುಂಬದ ಸದಸ್ಯರು ಮತ್ತು ಸ್ಥಳೀಯ ಉಪ್ಪಿನಂಗಡಿ ಗ್ರಾಮ ಪಂ. ಸದಸ್ಯ, ಯೂತ್ ಕಾಂಗ್ರೆಸ್ ಪುತ್ತೂರು ವಿಧಾನಸಭಾಧ್ಯಕ್ಷ ತೌಸೀಫ್ ಯುಟಿ ಆರೋಪಿಸಿದ್ದರು.
ಈ ಆರೋಪದ ಬಗ್ಗೆ ಮಾಧ್ಯಮದೊಂದಿಗೆ ಪ್ರತಿಕ್ರಿಯಿಸಿರುವ ಪುತ್ತೂರು ವಿಧಾನ ಸಭಾ ಕ್ಷೇತ್ರ ಶಾಸಕರಾದ ಸಂಜೀವ ಮಠಂದೂರು, ‘ಕಾಂಗ್ರೆಸ್ ನಾಯಕರು ಇಂತಹ ಕಠಿಣ ಪರಿಸ್ಥಿತಿಯಲ್ಲಿ ರಾಜಕೀಯ ಮಾಡುವುದನ್ನು ನಿಲ್ಲಿಸಬೇಕು. ಇಂತಹ ನಾಯಕರು ಇನ್ನು ಮುಂದಾದರೂ ಬೇಜವಾಬ್ದಾರಿ ಹೇಳಿಕೆ ನೀಡುವುದನ್ನು ಬಿಟ್ಟು ಸಮಾಜಕ್ಕೆ ತಾವೇನು ಕೊಡುಗೆ ನೀಡುತ್ತಿದ್ದೇವೆ ಎಂಬುವುದನ್ನು ಮಾಡಿ ತೋರಿಸಲಿ’ ಎಂದು ಹೇಳಿಕೆ ನೀಡಿದ್ದರು.
ಶಾಸಕರ ಹೇಳಿಕೆಗೆ ‘ವರದಿಗಾರ’ ತಂಡದೊಂದಿಗೆ ದೂರವಾಣಿ ಮೂಲಕ ಪ್ರತಿಕ್ರಿಯಿಸಿರುವ ತೌಸೀಫ್ ಯುಟಿ, ‘ಉಪ್ಪಿನಂಗಡಿ ಯುವಕನಲ್ಲಿ ಕೊರೋನ ಸೋಂಕು ದೃಢಪಟ್ಟ ವಿಚಾರದಲ್ಲಿ ಬೇಜವಾಬ್ದಾರಿಯ ಹೇಳಿಕೆ ಬಿಟ್ಟು ಶಾಸಕರು ರಾಜಧರ್ಮ ಪಾಲಿಸಲಿ. ತನ್ನ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಲಿ. ಶಾಸಕರು ತಮ್ಮ ಕ್ಷೇತ್ರದಲ್ಲಿ ಪಾಸಿಟಿವ್ ಬಂದ ವ್ಯಕ್ತಿಯ ಆರೋಗ್ಯವನ್ನು ವಿಚಾರಿಸಲು ಇದುವರೆಗೆ ಪ್ರಯತ್ನ ಮಾಡಿದ್ದಾರೆಯೇ? ಯಾವುದೇ ಪ್ರಯತ್ನ ಮಾಡದ ನಿಮ್ಮ ಕಾಳಜಿ ಏನೆಂದು ತಿಳಿಯುತ್ತಿಲ್ಲ’ ಎಂದು ಹೇಳಿದ್ದಾರೆ.
‘ಜನರ ಕಾಳಜಿ ಬಗ್ಗೆ ಮಾತನಾಡುವ ಶಾಸಕರು ಅದೆಷ್ಟು ಬಾರಿ ತನ್ನ ಕ್ಷೇತ್ರದ ಜನರನ್ನು ಸಂಪರ್ಕಿಸಿ ತಮ್ಮ ಸಂಕಷ್ಟದ ಬಗ್ಗೆ ಕೇಳಿದ್ದಾರೆ? ಸಂಕಷ್ಟ ನಿವಾರಣೆಗಾಗಿ ಪ್ರಯತ್ನಿಸದ್ದಾರೆ?. ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಜವಾಬ್ದಾರಿಯನ್ನು ನಿರ್ವಹಿಸದೇ ಇರುವುದು ಯಾವ ರೀತಿಯ ಕಾಳಜಿ’ ಎಂದು ತೌಸೀಫ್ ಶಾಸಕರನ್ನು ಪ್ರಶ್ನಿಸಿದ್ದಾರೆ.
‘ಉಪ್ಪಿನಂಗಡಿಯ ಯುವಕನಲ್ಲಿ ಪೋಸಿಟಿವ್ ಬರಲು ಜಿಲ್ಲಾಡಳಿತದ ನಿರ್ಲಕ್ಷ್ಯವೇ ಕಾರಣ’ ಎಂದು ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ‘ಸೋಂಕು ದೃಢಪಟ್ಟ ವ್ಯಕ್ತಿ ಕ್ವಾರಂಟೈನ್ ಸಂದರ್ಭದಲ್ಲಿ ಜಿಲ್ಲಾಡಳಿತದ ನಿರ್ಲಕ್ಷ್ಯದ ಬಗ್ಗೆ ತಿಳಿಸಿದ್ದರೂ, ಈ ಬಗ್ಗೆ ಮನವಿ ಮಾಡಿದ್ದರೂ, ಆರೋಗ್ಯಾಧಿಕಾರಿಯನ್ನು ಸಂಪರ್ಕಿಸಿ “ನಿಮ್ಮಿಂದಾಗಿ ನನಗೂ ಸೋಂಕು ಹರಡುವ ಸಾಧ್ಯತೆಯಿದೆ. ದಯವಿಟ್ಟು ಈ ಬಗ್ಗೆ ಎಚ್ಚೆತ್ತುಕೊಳ್ಳಿ’ ಎಂದು ಗಂಭೀರತೆಯ ಬಗ್ಗೆ ಬೇಡಿಕೊಂಡಿದ್ದರೂ ಯಾಕೆ ಅದನ್ನು ನಿರ್ಲಕ್ಷಿಸಲಾಯಿತು. ಇದಕ್ಕೆ ಶಾಸಕರು ಏನೆಂದು ಉತ್ತರಿಸುತ್ತಾರೆ? ಎಂದು ಪ್ರಶ್ನಿಸಿದ್ದಾರೆ.
‘ಇನ್ನು ಈ ಸಂದಿಗ್ನ ಪರಿಸ್ಥಿತಿಯಲ್ಲಿ ರಾಜಕೀಯ ಮಾಡುವವರು ಯಾರೆಂದು ಸಮಾಜಕ್ಕೆ ತಿಳಿಯುತ್ತಿದೆ. ಕೊರೋನಾ ಮಹಾಮಾರಿಯು ಪ್ರಾರಂಭಗೊಂಡ ದಿನದಿಂದ ನಾವು ನಮ್ಮ ಪಕ್ಷವನ್ನು ದೂರವಿಟ್ಟು ಜನಸೇವೆಯಲ್ಲಿ ನಿರತರಾಗಿದ್ದೇವೆ. ನಮ್ಮ ಪಕ್ಷ, ವಿರೋಧ ಪಕ್ಷವೆಂದು ಯಾವುದೇ ಭೇದ ಬಾವ ಮಾಡಲು ಹೋಗಿಲ್ಲ. ಸರಕಾರ ಎಡವಟ್ಟು ಮಾಡಿದ್ದರೂ ನಾವು ಸರಕಾರದಲ್ಲಿ ತಪ್ಪನ್ನು ಹುಡುಕಲು ಪ್ರಯತ್ನ ಪಟ್ಟಿಲ್ಲ. ಕೊರೋನಾ ಮಹಾಮಾರಿಯ ವಿರುದ್ಧ ನಾವು ರಾಜಕೀಯ ರಹಿತವಾಗಿ, ಯಾವುದೇ ಭೇದ ಬಾವವಿಲ್ಲದೆ ಪ್ರಯತ್ನಿಸುತ್ತಿದ್ದೇವೆ. ಸರಕಾರದ ಎಡವಟ್ಟನ್ನು ಮುಚ್ಚಿ ಹಾಕುವ ಪ್ರಯತ್ನದಲ್ಲಿ ಜನತೆಯ ಭಾವನೆಗಳೊಂದಿಗೆ ಆಟವಾಡಬೇಡಿ’ ಎಂದು ತೌಸೀಫ್ ಯುಟಿ ಶಾಸಕರೊಂದಿಗೆ ಮನವಿ ಮಾಡಿದ್ದಾರೆ.
ಸುಳ್ಳು ಸುದ್ದಿ ಪ್ರಸಾರ ಮಾಡಿದ ‘ಕಹಳೆ ನ್ಯೂಸ್’ ವಿರುದ್ಧ ಸಂತ್ರಸ್ತ ಕುಟುಂಬದಿಂದ ದೂರು!
ಉಪ್ಪಿನಂಗಡಿ ಯುವಕನಲ್ಲಿ ಸೋಂಕು ದೃಢಪಟ್ಟ ಬಗ್ಗೆ ‘ಕಹಳೆ ನ್ಯೂಸ್’ ಸುಳ್ಳು ಸುದ್ದಿ ಪ್ರಸಾರ ಮಾಡಿದೆ ಎಂದು ಆರೋಪಿಸಿ ಸಂತ್ರಸ್ತ ಯುವಕನ ಸಹೋದರ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
‘ಕಹಳೆ ನ್ಯೂಸ್ ನಮ್ಮನ್ನು ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನ ನಡೆಸಿದ್ದು, ಸತ್ಯಕ್ಕೆ ದೂರವಾದ ಸುಳ್ಳನ್ನು ಪ್ರಸಾರ ಮಾಡಿದೆ. ಇದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಮುದಾಯಗಳ ನಡುವೆ ದ್ವೇಷ ಬಿತ್ತುವ ಪ್ರಯತ್ನವಾಗಿದೆ’ ಎಂದು ದೂರಿನಲ್ಲಿ ಉಲ್ಲೇಖಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ವಿಶ್ವವಿಂದು ಕೊರೋನಾ ಎಂಬ ಸಂಕ್ರಾಮಿಕ ರೋಗದಿಂದ ತತ್ತರಿಸಿದೆ. ಭಾರತ ದೇಶವು ಈ ಮಹಾಮಾರಿ ವಿರುದ್ಧ ಲಾಕ್ ಡೌನ್ ಮೂಲಕ ಸೆಣೆಸಾಟ ನಡೆಸುತ್ತಿದೆ. ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಅಘಾತಕಾರಿಯಾಗಿದೆ. ಸದ್ಯದ ವರದಿಯಂತೆ ದೇಶದಲ್ಲಿ ಒಟ್ಟು 14,676 ಜನರಲ್ಲಿ ಸೋಂಕು ದೃಢಪಟ್ಟಿದ್ದು, 12,126 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. 2,054 ಮಂದಿ ಗುಣಮುಖರಾಗಿದ್ದು, 496 ಜನರು ಕೊರೋನಾ ವೈರಸ್ ನಿಂದ ಮೃತಪಟ್ಟಿದ್ದಾರೆ. ಇಂದು 10 ಜನರು ಮೃತಪಟ್ಟಿರುವುದಾಗಿ ವರದಿಯಾಗಿದೆ.
