
ವರದಿಗಾರ (ಎ.17): ದ.ಕ. ಜಿಲ್ಲೆಯ ಉಪ್ಪಿನಂಗಡಿಯ ವ್ಯಕ್ತಿಯೊರ್ವರಿಗೆ ಕೊರೋನಾ ಪಾಸಿಟಿವ್ ಬರಲು ದ.ಕ ಜಿಲ್ಲಾಡಳಿತದ ನಿರ್ಲಕ್ಷ್ಯವೇ ಕಾರಣ ಹೊರತು ಅವರು ಸಂಚರಿಸಿದ ಪ್ರದೇಶ ಕಾರಣವಲ್ಲ ಎಂದು ಎಸ್.ಡಿ.ಪಿ.ಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಆರೋಪಿಸಿದ್ದಾರೆ.
ತನ್ನ ಕೆಲಸದ ನಿಮಿತ್ತ ದೆಹಲಿಗೆ ತೆರಳಿದ್ದ
ಉಪ್ಪಿನಂಗಡಿಯ ವ್ಯಕ್ತಿ ಮಾರ್ಚ್ 20ಕ್ಕೆ ವಿಮಾನದ ಮೂಲಕ ಬೆಂಗಳೂರಿಗೆ ಬಂದು ಅಲ್ಲಿಂದ ಮರು ದಿನ ತನ್ನ ಊರಾದ ಉಪ್ಪಿನಂಗಡಿಗೆ ಆಗಮಿಸಿದ್ದರು.ಬಂದು ಹನ್ನೆರಡು ದಿನ ತನ್ನ ಮನೆಯಲ್ಲೇ ಇದ್ದ ಇವರಿಗೆ ಯಾವುದೇ ರೋಗ ಲಕ್ಷಣಗಳು ಇರಲಿಲ್ಲ, ಆದರೂ ಆರೋಗ್ಯ ಇಲಾಖೆ ದೆಹಲಿಗೆ ತೆರಳಿದ ವ್ಯಕ್ತಿ ಎಂಬ ಕಾರಣದಿಂದ ದೇರಳಕಟ್ಟೆಯ ಕ್ವಾರಂಟೈನ್ ಕೇಂದ್ರಕ್ಕೆ ಸ್ಥಳಾಂತರಿಸಿ ಕೊರೋನಾ ಪರೀಕ್ಷೆಯನ್ನು ನಡೆಸಿತ್ತು,ಎರಡು ಬಾರಿಯು ವರದಿಗಳು ನೆಗೆಟಿವ್ ಬಂದಿತ್ತು. ಆದರೆ ಆ ಐಸೋಲೇಷನ್ ಕೇಂದ್ರದಲ್ಲಿ ಯಾವುದೇ ಮುಂಜಾಗ್ರತಾ ಕ್ರಮಗಳು ಇಲ್ಲದೇ ಡಿಟೆಂಶನ್ ಸೆಂಟರ್ ನಲ್ಲಿ ಇರಿಸಿದಂತೆ ಎಲ್ಲಾ ಶಂಕಿತರನ್ನು ಒಟ್ಟಿಗೆ ಇರಿಸಿದ್ದರು. ಇವರೆಲ್ಲರೂ ಒಂದೇ ಶೌಚಾಲಯವನ್ನು ಬಳಸಬೇಕಾಗಿತ್ತು. ಯಾವುದೇ ಸಾಮಾಜಿಕ ಅಂತರದ ಸೌಲಭ್ಯಗಳು ಇರಲಿಲ್ಲ. ಆದರೆ ನಂತರ ಅದೇ ಕ್ವಾರಂಟೈನ್ ನಲ್ಲಿದ್ದ ಮತ್ತೊಬ್ಬ ವ್ಯಕ್ತಿಯ ವರದಿ ಪಾಸಿಟಿವ್ ಆಗಿತ್ತು.
ದ.ಕ ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿ ಈ ರೀತಿಯಾಗಿ ಎಲ್ಲರನ್ನೂ ಒಟ್ಟಿಗೆ ಇರಿಸಿದ ಕಾರಣದಿಂದ ಉಪ್ಪಿನಂಗಡಿಯ ವ್ಯಕ್ತಿಗೂ ಕೊರೋನಾ ಹರಡಲು ಕಾರಣವೇ ಹೊರತು ಅವರು ಸಂಚಾರ ಮಾಡಿದ ಪ್ರದೇಶವಲ್ಲ,ಇದು ದ.ಕ ಜಿಲ್ಲಾಡಳಿತದ ಗಂಭೀರ ಸ್ವರೂಪದ ನಿರ್ಲಕ್ಷ್ಯವಾಗಿರುತ್ತದೆ.
ಈಗಾಗಲೇ ಕ್ವಾರಂಟೈನ್ ನಲ್ಲಿರುವ ವ್ಯಕ್ತಿಗಳ ಆರೋಗ್ಯದ ಬಗ್ಗೆಯು ಸಂಬಂಧಿಕರು ಭಯ ಪಡುವಂತಾಗಿದೆ.
ಆದ್ದರಿಂದ ಇನ್ನು ಮುಂದಕ್ಕೆ ಜಿಲ್ಲಾಡಳಿತವು ಕೊರೋನಾ ಶಂಕಿತರೆಂದು ಕ್ವಾರಂಟೈನ್ ನಲ್ಲಿ ಇರಿಸುವ ಪ್ರತಿಯೊಬ್ಬ ವ್ಯಕ್ತಿಯನ್ನು ಪ್ರತ್ಯೇಕ ಕೊಠಡಿಯಲ್ಲಿ ಇರಿಸಬೇಕೆಂದು ಅಥಾವುಲ್ಲಾ ಜೋಕಟ್ಟೆ ಆಗ್ರಹಿಸಿದ್ದಾರೆ.
