ಜಿಲ್ಲಾ ಸುದ್ದಿ

“ನೀವು ಸುಳ್ಳು ಸುದ್ದಿ ಹಬ್ಬಿಸುತ್ತಿರುವುದರ ಹಿಂದಿನ ಉದ್ದೇಶವೇನು?” : ಮಂಗಳೂರು ಕಮಿಷನರ್ ಗೆ SDPI ಪ್ರಶ್ನೆ

ವರದಿಗಾರ (ಎ.15):ಜನ ಸಾಮಾನ್ಯರು ಸಾಮಾಜಿಕ ತಾಣಗಳಲ್ಲಿ ಸುಳ್ಳು ಸುದ್ದಿ ಹಾಗೂ ಪ್ರಚೋದನಕಾರಿ ಸಂದೇಶಗಳನ್ನು ಹರಿಯಬಿಡುವುದರ ವಿರುದ್ಧ ಮುಖ್ಯಮಂತ್ರಿಗಳೇ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದರು. ಆದರೆ ಮಂಗಳೂರು ಪೊಲೀಸ್ ಕಮಿಷನರ್ ಅವರೇ ಸುಳ್ಳು ಸುದ್ದಿಯನ್ನು ಪ್ರಚಾರ ಮಾಡಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಆರೋಪಿಸಿದೆ.

ಫೇಸ್ಬುಕ್ ತಾಣದಲ್ಲಿ ಪ್ರಧಾನಿ ಹಾಗೂ ಗೃಹ ಸಚಿವರ ವಿರುದ್ಧ ಅವಹೇಳನಕಾರಿ ಸಂದೇಶ ಹರಿಯಬಿಟ್ಟಿದ್ದಾರೆ ಎಂದು ಆರೋಪಿಸಿ ಮಂಗಳೂರು ಪೊಲೀಸರು ಪುತ್ತೂರು ಹಾಗೂ ಬೆಳ್ತಂಗಡಿಯ ಇಬ್ಬರು ಯುವಕರನ್ನು ಸುಮೋಟ ಪ್ರಕರಣ ದಾಖಲಿಸಿ ಬಂಧಿಸಿದ್ದು, ಕಮಿಷನರ್ ಹರ್ಷ ಅವರು ಆರೋಪಿಗಳನ್ನು PFI – SDPI ಕಾರ್ಯಕರ್ತರು ಎಂದು ಹೇಳಿದ್ದರೆ, PFI ಮತ್ತು SDPI ಇದನ್ನು ಖಂಡತುಂಡವಾಗಿ ನಿರಾಕರಿಸಿದ್ದು, ಇದು ಕಮಿಷನರ್ ಪೂರ್ವಾಗ್ರಹಪೀಡಿತರಾಗಿ ಪಕ್ಷವನ್ನು ಗುರಿಯಾಗಿಸಿಕೊಂಡು ತೇಜೋವಧೆ ಮಾಡುವ ಪ್ರಯತ್ನ ಎಂದು ಹೇಳಿದೆ.

“ಮೈಕಾಲ್ತೊ ಬಿಸಯ” ಎನ್ನುವ ಫೇಸ್ಬುಕ್ ಪೇಜಿನಲ್ಲಿ ಅವಹೇಳನಕಾರಿ ಸಂದೇಶ ಹರಿಯಬಿಟ್ಟಿದ್ದಾರೆಂದು ಆರೋಪಿಸಿ ಬೆಳ್ತಂಗಡಿಯ ಇಲ್ಯಾಸ್ ಹಾಗೂ ಪುತ್ತೂರಿನ ಬಶೀರ್ ಎನ್ನುವ ಯುವಕರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದರು. ಈ ಕುರಿತು ಟ್ವೀಟ್ ಮಾಡಿದ್ದ ಕಮಿಷನರ್ ಹರ್ಷ ಅವರು, ಆರೋಪಿಗಳಿಬ್ಬರು PFI – SDPI ನ ಕಾರ್ಯಕರ್ತರು ಎಂದಿದ್ದರು. ಈ ಟ್ವೀಟ್ ಗೆ ಟ್ವಿಟ್ಟರಿನಲ್ಲೇ ಪ್ರತಿಕ್ರಿಯಿಸಿದ SDPI ಜಿಲ್ಲಾಧ್ಯಕ್ಷ ಅಥಾವುಲ್ಲಾ , ‘ಕಮಿಷನರ್ ಅವರೇ ಬಂಧಿತರಿಗೂ ನಮ್ಮ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಆದರೂ ಬಲವಂತವಾಗಿ ಪಕ್ಷದೊಂದಿಗೆ ಮತ್ತು PFI ಸಂಘಟನೆಯೊಂದಿಗೆ ನಂಟು ಕಲ್ಪಿಸುವ ತಮ್ಮ ದುರುದ್ದೇಶವೇನೆಂದು ತಿಳಿಯಬಯಸಿದ್ದೇನೆ’ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದರು.

ಆದರೆ ಈ ನಡುವೆ ಆರೋಪಿಗಳು ಪೊಲೀಸ್ ವಶದಲ್ಲಿರುವಂತೆಯೇ “ಮೈಕಾಲ್ತೊ ಬಿಸಯ” ಪೇಜಿನಲ್ಲಿ ನಿನ್ನೆ ಕೂಡಾ ಪೋಸ್ಟ್ ಗಳು ಪ್ರತ್ಯಕ್ಷಗೊಂಡಿದ್ದು, ಅದರಲ್ಲಿ ಕಮಿಷನರ್ ಅವರು ಅಮಾಯಕರನ್ನು ಬಂಧಿಸಿದ್ದಾರೆ ಎಂದು ಬರೆಯಲಾಗಿದೆ. ಹಾಗಾದರೆ ಪೊಲೀಸರು ಅಮಾಯಕರನ್ನು ಬಂಧಿಸಿದ್ದಾರೆಯೇ ಎನ್ನುವ ಪ್ರಶ್ನೆ ಎದುರಾಗಿದೆ. ಈ ನಡುವೆ PFI ದ ಕ ಜಿಲ್ಲಾ ಮುಖಂಡ ಇಜಾಝ್ ಅಹ್ಮದ್ ಪ್ರತಿಕ್ರಿಯಿಸಿದ್ದು, ‘ಇದು ಕಮಿಷನರ್ ರವರು ಪಿಎಫ್ಐ ಸಂಘಟನೆಯನ್ನು ತೇಜೋವಧೆ ಮಾಡುವ ಪ್ರಯತ್ನದ ಭಾಗವಾಗಿದೆ. ಬಂಧಿತರಿಬ್ಬರೂ ನಮ್ಮ ಸಂಘಟನೆಯ ಸದಸ್ಯರಲ್ಲ, ಕಮಿಷನರ್ ರವರು ಪಿಎಫ್ಐ ಮೇಲಿರುವ ಪೂರ್ವಾಗ್ರಹದಿಂದಾಗಿ ನಮ್ಮ ಸಂಘಟನೆಯ ನಂಟನ್ನು ಕಲ್ಪಿಸಿದ್ದಾರೆ ಎಂಬುವುದು ಇದರಿಂದ ಸ್ಪಷ್ಟವಾಗುತ್ತದೆ’ ಎಂದಿದ್ದಾರೆ.

ಒಟ್ಟಿನಲ್ಲಿ ಅವಹೇಳನಕಾರಿ ಸಂದೇಶಗಳನ್ನು ಯಾರೇ ಮಾಡಿದ್ದರೂ ಶಿಕ್ಷಾರ್ಹ ಅಪರಾಧ. ಆದರೆ ಕಮಿಷನರ್ ಅವರು ಈ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿದ ಕೂಡಲೇ ಒಂದು ನಿರ್ದಿಷ್ಟ ಸಂಘಟನೆ ಹಾಗೂ ಪಕ್ಷವನ್ನು ಗುರಿಯಾಗಿಸಿ ಟ್ವೀಟ್ ಮಾಡಿರುವುದು ಸಂಶಯಾಸ್ಪದವಾಗಿದೆ. ಪೋಸ್ಟ್ ಮಾಡುತ್ತಿದ್ದವರು ಇವರೇ ಎಂದು ಇಬ್ಬರನ್ನು ಬಂಧಿಸಿದ ಮೇಲೂ ಪೋಸ್ಟ್ ಗಳು ಮುಂದುವರಿದಿರುವುದನ್ನು ನೋಡಿದರೆ ಕಮಿಷನರ್ ಅವರು ಏನನ್ನೋ ಸಾಬೀತುಪಡಿಸುವ ಭರದಲ್ಲಿ ಎಡವಿದ್ದಾರೇನೋ ಎಂದು ತೋರುತ್ತಿದೆ. ಪೂರ್ವಾಗ್ರಹಪೀಡಿತವಲ್ಲದ ನಿಷ್ಪಕ್ಷವಾದ ತನಿಖೆಗಳು ಮಾತ್ರ ಸತ್ಯವನ್ನು ಹೊರಗೆಳೆಯಬಲ್ಲದು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group