ಅಭಿಪ್ರಾಯ

ಟ್ರಂಪ್ ಖುಷಿಪಡಿಸುವ ಭರದಲ್ಲಿ ಪ್ರಧಾನಮಂತ್ರಿ ಕೊರೋನಾವನ್ನು ಕಡೆಗಣಿಸಿದರೇ??

ಭಾರತದಲ್ಲಿ ಕೊರೋನಾ ಹರಡುವಿಕೆಯನ್ನು ತಡೆಯಬಹುದಿತ್ತೇ??

ಕೊರೋನಾ ವೈರಸ್ – ರಾಜಕೀಯ ಕುದುರೆ ವ್ಯಾಪಾರ – ‘ನಮಸ್ತೆ ಟ್ರಂಪ್’

ಆದ್ಯತೆ ಗುರುತಿಸುವಲ್ಲಿ ವಿಫಲವಾದರೇ ಪ್ರಧಾನಮಂತ್ರಿ??

ವರದಿಗಾರ (ಎ.15): ನಮ್ಮ ಪ್ರಪಂಚವನ್ನು ಅವರಿಸಿಕೊಂಡಿರುವ ಒಂದು ದೊಡ್ಡ ಸಾಂಕ್ರಾಮಿಕ ರೋಗ ಕೊರೋನ. ಸಾವಿರಾರು ಜನರನ್ನು ಬಲಿ ತೆಗೆದುಕೊಂಡಿರುವ ಈ ಪಿಡುಗನ್ನು ತಡೆಗಟ್ಟಲು ಎಲ್ಲ ರಾಷ್ಟ್ರಗಳು ಒದ್ದಾಡುತ್ತಿವೆ. ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ವಿಚಿತ್ರವಾದ ಈ ಸಾಂಕ್ರಾಮಿಕ  ಕಾಣಿಸಿಕೊಂಡದ್ದು ಚೀನಾದ ವುಹಾನ್‌ನಲ್ಲಿ. ಅದು ಅತಿ ಶೀಘ್ರವಾಗಿ ಹರಡುವ ಒಂದು  ಭಯಾನಕ ಸಾಂಕ್ರಾಮಿಕ ಎನ್ನುವುದು ಚೀನಾಕ್ಕೆ ಅರಿವಾಗುವ ಹೊತ್ತಿಗೆ ಸಾವಿರಾರು ಜನ ತಮ್ಮ ಜೀವವನ್ನು ಕಳೆದುಕೊಂಡಿದ್ದರು. ಸಹಸ್ರಾರು ಮಂದಿ ವುಹಾನ್‌ನಿಂದ ಪ್ರಪಂಚದ ಬೇರೆ ದೇಶಗಳಿಗೆ ಹಾರಿಯಾಗಿತ್ತು,

ಭಾರತದಲ್ಲಿ ಮೊದಲನೆಯ ಕೊರೋನ ರೋಗಿ ಕಂಡು ಬಂದದ್ದು ಕೇರಳದ ತ್ರಿಶ್ಶೂರಿನಲ್ಲಿ. ಜನವರಿ 30ಕ್ಕೆ ವುಹಾನ್‌ನಿಂದ ಕೇರಳಕ್ಕೆ ವಾಪಸಾದ ವಿದ್ಯಾರ್ಥಿನಿಗೆ  ಕೊರೋನ  ಸೋಂಕು ತಗಲಿತ್ತು. ಅಲ್ಲಿಂದ ಮುಂದಕ್ಕೆ ನಮ್ಮ ರಾಷ್ಟ್ರ ನಾಯಕರು ಈ ಸಾಂಕ್ರಾಮಿಕವನ್ನು ತಡೆಗಟ್ಟುವಲ್ಲಿ  ವಿಫಲರಾದದ್ದನ್ನು  ನಾವು ಕಾಣಬಹುದು. ಜನವರಿ 30ರಿಂದ ಮಾರ್ಚ್ 15ರ ವರೆಗೆ ಕೇಂದ್ರ ಸರಕಾರ ಕೊರೋನವನ್ನು ತಡೆಗಟ್ಟುವ  ಮತ್ತು ಅದು ಒಂದು ವೇಳೆ ಹೆಚ್ಚಾಗಿ ಅವರಿಸಿದ ಸಂದರ್ಭದಲ್ಲಿ ನಿರ್ವಹಿಸಬೇಕಾದ  ಕಾರ್ಯಗಳ ಕುರಿತಂತೆ ಚರ್ಚಿಸಲು ಯಾವುದೇ ಸಭೆಯನ್ನು ನಡೆಸಲಿಲ್ಲ. ಪ್ರಧಾನ ಮಂತ್ರಿಗಳು ಸರ್ವಪಕ್ಷ ಸಭೆಯನ್ನು ಆಯೋಜಿಸುವ ವೇಳೆ ಎಲ್ಲವೂ ಕೈಮೀರಿ ಹೋಗಿತ್ತು ಎನ್ನುವುದು ವಾಸ್ತವವಾಗಿದೆ.

ಫೆಬ್ರವರಿ 3ನೇ ತಾರೀಕಿಗೆ ನಮ್ಮ ದೇಶದಲ್ಲಿ ಇದ್ದದ್ದು ಬರಿ ಮೂರು ಜನ ಕೊರೋನ  ರೋಗಿಗಳು, ಆದರೆ ನಮ್ಮ ದೇಶವನ್ನು ಆಳುತ್ತಿರುವ ನಿರಂಕುಶ ಪ್ರಭುತ್ವ, ಬಿಜೆಪಿ ಸರಕಾರ ಎಚ್ಚೆತ್ತುಕೊಳ್ಳಲಿಲ್ಲ. ಬಿಜೆಪಿ ಅಮೆರಿಕಾದ  ಅಧ್ಯಕ್ಷ  ಡೊನಾಲ್ಡ್ ಟ್ರಂಪ್ ಅವರನ್ನು ಬರಮಾಡಿಕೊಳ್ಳುವ ಸಡಗರದಲ್ಲಿತ್ತು. ಫೆಬ್ರವರಿ 20ರ ವರೆಗೆ “ನಮಸ್ತೆ ಟ್ರಂಪ್” ಕಾರ್ಯಕ್ರಮದ ತಯಾರಿ , ಫೆಬ್ರವರಿ 23- ಡೆಲ್ಲಿ ಗಲಭೆ, ಫೆಬ್ರವರಿ 24-25 ಟ್ರಂಪ್ ಕಾರ್ಯಕ್ರಮ, ಇಷ್ಟರಲ್ಲಿ ನಮ್ಮ ದೇಶದಲ್ಲಿ ಐವರಿಗೆ ಮಾತ್ರ ಕೊರೋನ ಕಾಣಿಸಿಕೊಂಡಿತ್ತು.

“ಕೊರೋನ ಒಂದು ಮಾರಕ ಅಪಾಯಕಾರಿ ಸಾಂಕ್ರಾಮಿಕ ರೋಗ.  ನಮ್ಮ ಜನರಿಗೆ ಹಾಗೂ ನಮ್ಮ ದೇಶದ ಆರ್ಥಿಕ ಪರಿಸ್ಥಿತಿಗೆ ತುಂಬ ಹಾನಿಕಾರಕ, ಕೇಂದ್ರ ಬಿಜೆಪಿ ಸರಕಾರ ಈ ಸಾಂಕ್ರಾಮಿಕವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ” ಎಂದು ಫೆಬ್ರವರಿ 12ಕ್ಕೆ ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿಯವರು ಸರಕಾರವನ್ನು ಎಚ್ಚರಿಸಿದ್ದರು. ಆದರೆ ಅದೇ ಸಮಯಕ್ಕೆ ನಮ್ಮ ದೇಶದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಫೆಬ್ರವರಿ 24ಕ್ಕೆ ಗುಜರಾತಿನ ಅಹಮದಾಬಾದ್ ನಲ್ಲಿ ನಡೆಯಲಿರುವ “ನಮಸ್ತೆ ಟ್ರಂಪ್” ಕಾರ್ಯಕ್ರಮಕ್ಕೆ ದೇಶದ ಮೂಲೆ ಮೂಲೆಗಳಿಂದ ಒಂದು ಲಕ್ಷ ಜನರನ್ನು ಒಂದುಗೂಡಿಸುವ ಕೆಲಸದಲ್ಲಿ ತೊಡಗಿದ್ದರು. ಇಲ್ಲಿ ಸೇರಿದ ಜನರಲ್ಲಿ ಎಷ್ಟು ಜನ ಸೋಂಕಿತರಿದ್ದರೋ!?.

ಮಾರ್ಚ್ 3ನೇ ತಾರೀಕಿನ ವೇಳೆ  ಭಾರತದಲ್ಲಿ 6 ಜನ ಕೋರೋನ ಸೋಂಕಿತರಿದ್ದರು. ಮಾರ್ಚ್ 4ರಂದು  ಮೊದಲನೇ ಬಾರಿಗೆ ನಿದ್ರಾವಸ್ಥೆಯಲ್ಲಿದ್ದ ಕೇಂದ್ರ  ಆಡಳಿತ, ಕೊರೋನದ  ಬಗ್ಗೆ ಸಮಾಲೋಚನೆಯನ್ನು ಆಯೋಜಿಸಿತು. ಈ ಸಮಯದಲ್ಲಿ  ಮೋದಿಯವರು ತಮ್ಮ ಸಾಮಾಜಿಕ ಜಾಲತಾಣದ ಬಗ್ಗೆ ಟ್ವೀಟ್ ಮಾಡುತ್ತಿದ್ದರು! ಮಾರ್ಚ್ 9ಕ್ಕೆ 46 ಮಂದಿಗೆ ಕೋರೋನ ಸೋಂಕು ಇದೆ ಎನ್ನುವುದು ತಿಳಿಯುತ್ತಲೇ, ವಿಮಾನ ನಿಲ್ದಾಣಗಳಲ್ಲಿ  ಪರಿಶೀಲನೆ  ಪ್ರಾರಂಭಿಸಲಾಯಿತು. ಆ ವೇಳೆಗಾಗಲೇ ದೇಶದ ಮೂಲೆ ಮೂಲೆಗೆ ಈ ಸಾಂಕ್ರಾಮಿಕ ಹರಡಿತ್ತು.

ಮಾರ್ಚ್ 11ರಂದು, ವಿಶ್ವ ಆರೋಗ್ಯ ಸಂಸ್ಥೆ (W.H.O.) ಇದು ಒಂದು ಸಾಂಕ್ರಾಮಿಕ ಎಂದು ಘೋಷಿಸಿತು. ಆದರೆ ಬಿಜೆಪಿ  ಸರಕಾರ  ‘ಇದು ಒಂದು ಅರೋಗ್ಯ ದೃಷ್ಟಿಯಿಂದ ತುರ್ತುಪರಿಸ್ಥಿತಿಯಲ್ಲ’ ಎಂದು ಮಾರ್ಚ್ 13ಕ್ಕೆ ಪ್ರಕಟಿಸಿತು. ಮಾರ್ಚ್ 11ರಿಂದ 15ರ ವರೆಗೆ  ನರೇಂದ್ರ ಮೋದಿಯವರಿಗೆ ಬೇರೆ ಆದ್ಯತೆಯ ಕೆಲಸ ಇತ್ತು. ಅದು ಮಧ್ಯಪ್ರದೇಶದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್  ಸರಕಾರವನ್ನು ಉರುಳಿಸುವ ಕೆಲಸ!

ಮಾರ್ಚ್ 16ನೇ ತಾರೀಕಿನಂದು ಸಾರ್ಕ್ ಸಮಿತಿಯನ್ನು ಉದ್ದೇಶಿಸಿ ಮಾತನಾಡುವಾಗ ಮೋದಿ, ಭಾರತ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಜನವರಿಯಿಂದ ತಪಾಸಣೆಗೆ ಒಳಪಡಿಸಿದೆ ಎಂದು ಹೇಳಿದರು. ಇದು ಅಪ್ಪಟ ಸುಳ್ಳು ಎನ್ನುವುದು ಒಳಗಿದ್ದವರಿಗೆ ಗೊತ್ತು. ಪ್ರಧಾನಿಯವರು ಜನತಾ ಕರ್ಫ್ಯೂವನ್ನು ಮಾರ್ಚ್‌ 19ರಂದು ಪ್ರಕಟಿಸಿದರು.  ಇದಕ್ಕೆ 3 ದಿನಗಳ ಸಮಯಾವಕಾಶವಿತ್ತು.  ಮಾರ್ಚ್‌ 22ರಂದು ಇಡೀ ದೇಶ  ಕರ್ಫ್ಯೂವನ್ನು ಸ್ವಯಂ ವಿಧಿಸಿಕೊಂಡಿತು. ಇದರ ಬೆನ್ನಲ್ಲೇ ಲಾಕ್‌ಡೌನ್ ಘೋಷಣೆ ಮಾಡಲಾಯಿತು. ಒಂದು ದಿನದ ‘ಜನತಾ ಕರ್ಫ್ಯೂ’ ಮಾಡಲು ಮೂರು ದಿನಗಳ ಕಾಲಾವಕಾಶ ಕೊಟ್ಟ ಪ್ರಧಾನಿಯವರು, ದೇಶವನ್ನು 21 ದಿನಗಳ ಕಾಲ ‘ಲಾಕ್‌ಡೌನ್‌’ ಮಾಡುವ ಘೋಷಣೆ ಮಾಡಿ ಅದರ ಕಟ್ಟುನಿಟ್ಟಿನ ಅನುಷ್ಟಾನಕ್ಕಾಗಿ ಕೊಟ್ಟದ್ದು ಬರೇ 4 ತಾಸುಗಳು!.  ಹಠಾತ್ತಾಗಿ ಬಂದ ಸರಕಾರದ ಈ ನಿರ್ಧಾರದಿಂದ ಜನ ಕಂಗಾಲಾದರು. ಉಳ್ಳವರು  ತಮಗೆ ತೋಚಿದ್ದನ್ನು ಖರೀದಿ ಮಾಡಿ ದಾಸ್ತಾನು ಇಟ್ಟುಕೊಂಡರೆ, ಬಡವರು ದಿಕ್ಕುತೋಚದಾಗಿ ಬಿಟ್ಟರು. ಮರು ದಿನದಿಂದ ಸೂರು ಇಲ್ಲದೆ, ಹೊಟ್ಟೆಗೆ ಹಿಟ್ಟಿಲ್ಲದೆ ಜನ ತಮ್ಮ ತಮ್ಮ ಊರುಗಳಿಗೆ ಹಿಂತಿರುಗಲು ನಿರ್ಧಾರ ಮಾಡಿದರು. ಆದರೆ ಅದಾಗಲೇ ಸಾರಿಗೆ ವ್ಯವಸ್ಥೆ ಸ್ಥಗಿತಗೊಂಡಿತ್ತು. ಪೊಲೀಸರ ದೌರ್ಜನ್ಯ , ಹಸಿವು,  ಬಿಸಿಲು, ನುಚ್ಚು ನೂರಾದ ಕನಸ್ಸುಗಳನ್ನು ಹೊತ್ತುಕೊಂಡು ನಡೆದ ಜನರಿಗೆ ಆಸರೆಯನ್ನು ಯಾವ ರಾಜ್ಯ ಸರಕಾರವು ಒದಗಿಸಲಿಲ್ಲ. ಉತ್ತರಪ್ರದೇಶದ ಗಡಿಯಿಂದ ಸಾವಿರಾರು ಜನರನ್ನು ಹಿಂದಕ್ಕೆ ಕಳುಹಿಸಿದರೆ,  ಇನ್ನು ಕೆಲವರು ಹಸಿವಿನಿಂದ, ಬಿಸಿಲ ದಗೆಯಿಂದ  ಕೊನೆಯುಸಿರೆಳೆದರು.

ಪ್ರಧಾನಿಯವರು ಲಾಕ್‌ಡೌನ್‌ ಘೋಷಿಸುವ ಮುನ್ನ ತಮ್ಮ ಸಚಿವ ಸಂಪುಟದ ಜೊತೆ ಸಮಾಲೋಚನೆ ನಡೆಸಿದ್ದರೇ? ಗುಪ್ತಚರ ವಿಭಾಗದಿಂದ ವರದಿ ತರಿಸಿಕೊಂಡಿದ್ದರೇ? ಒಂದು ವೇಳೆ ಸಮಾಲೋಚನೆ ನಡೆಸಿದ್ದೇ ಆದಲ್ಲಿ ಅಸಂಘಟಿತ ವಲಸೆ ಕಾರ್ಮಿಕರ ಬಗ್ಗೆ, ಕಾರ್ಖಾನೆ ಕಾರ್ಮಿಕರ ಬಗ್ಗೆ, ರೈತರ ಬಗ್ಗೆ, ಕೃಷಿ ಉತ್ಪನ್ನಗಳು ಮಾರುಕಟ್ಟೆ ತಲುಪುವ ಬಗ್ಗೆ, ತರಕಾರಿ ಬೆಲೆ ಏರಿಕೆ ಬಗ್ಗೆ ಚರ್ಚೆ ನಡೆಸಿದ್ದರೇ? ಇದನ್ನೆಲ್ಲಾ ನಿರ್ವಹಿಸಲು ಅವರು ಯಾವ ಕ್ರಮಗಳನ್ನು ತೆಗೆದುಕೊಂಡರು ?

ಒಂದೆಡೆ ಸರಕಾರ, ʻಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತದೆʼ ಎಂದರೆ, ಇನ್ನೊಂದೆಡೆ ಪೊಲೀಸರು ತಮ್ಮ ಭಾಷೆಯಲ್ಲಿ ಮಾತನಾಡಲು, ಲಾಠಿಯ ಕೈಯಲ್ಲಿ ಮಾತನಾಡಿಸಲು ಆರಂಭಿಸಿದ ವರದಿಗಳು ಬಂದವು. ಈ ಲಾಕ್‌ಡೌನ್ ಯೋಜಿತವಲ್ಲದ ಮತ್ತು ಪ್ರಚಾರದ ಸ್ಟಂಟ್‌ನಂತೆ ಕಾಣುತ್ತಿದೆ.

ಉತ್ತರಪ್ರದೇಶದ ಮುಖ್ಯಮಂತ್ರಿ, ದೆಹಲಿಯಲ್ಲಿರುವ ತಮ್ಮ ರಾಜ್ಯದ ಜನರಿಗೆ ಆಹಾರ ಮತ್ತು ಆಶ್ರಯವನ್ನು ಅಲ್ಲೇ ನೀಡಲು ಒಮ್ಮೆ ಒತ್ತಾಯಿಸಿದರೆ, ಮತ್ತೊಮ್ಮೆ, ನೂರಾರು ಬಸ್ಸುಗಳನ್ನು ಕಳುಹಿಸಿ ಜನರನ್ನು ಮರಳಿ ತಮ್ಮ ರಾಜ್ಯಕ್ಕೆ ಕರೆತರುವಂತೆ ಹೇಳುತ್ತಾರೆ. ಒಟ್ಟಿನಲ್ಲಿ, ಇದು ಪೂರ್ವಯೋಜಿತವಲ್ಲದ, ಸಾರ್ವಜನಿಕರ ಗಮನ ಸೆಳೆಯುವ ಸಾಹಸದಂತೆ ಕಾಣುತ್ತದೆ. ಪರಸ್ಪರ ಸಾಮಾಜಿಕ ಅಂತರ ಐಷಾರಾಮಿ ಮಂದಿಗೆ ಮಾತ್ರ ಬಡ ಜನರಿಗಲ್ಲ ವಿಷಯ ಎನ್ನುವಂತಿದೆ. ವಲಸೆ ಬಂದ  ಜನ  ಹಸಿವಿನಿಂದ ಸಾಯದಿದ್ದರೆ, ಡಯೊರಿಯಾ ಇಲ್ಲವೇ ಕಾಲರಾದಿಂದ  ಪ್ರಾಣ ಕಳೆದುಕೊಳ್ಳಬಹುದು. ಇವರಲ್ಲಿ ಯಾರು ಕೊರೋನಾ ಸೋಕು ತಗಲಿದವರು ಇದ್ದಾರೆ, ಎಷ್ಟು ಜನರಿಗೆ ಇದು ಹರಡಬಹುದು ಎಂಬ ವಿಷಯದ ಬಗ್ಗೆ ಯಾವುದೇ ಯೋಚನೆ ಮಾಡದ ಬೇಜವಾಬ್ದಾರಿ ವರ್ತನೆಯನ್ನು ಕೇಂದ್ರ ಸರಕಾರ ಪ್ರದರ್ಶನ ಮಾಡುತ್ತಿದೆ.

ನಮ್ಮ ವೈದ್ಯರು ಮತ್ತು ದಾದಿಯರನ್ನು ವೈಯಕ್ತಿಕ ರಕ್ಷಣಾ ಸಾಧನ(PPE)ಗಳಿಲ್ಲದೆ ಸಂಭಾವ್ಯ ಕೋವಿಡ್ ರೋಗಿಗಳ ಆರೈಕೆ ಮಾಡಲು ಬಲವಂತವಾಗಿ ಕಳುಹಿಸಲಾಗುತ್ತಿದೆ .ವಿಶ್ವ ಆರೋಗ್ಯ ಸಂಸ್ಥೆ (W.H.O) ಇದು ಒಂದು ಸಾಂಕ್ರಾಮಿಕ ಅಂತ ಘೋಷಣೆ ಮಾಡಿದ ಮೇಲೂ,  ಅವಶ್ಯಕವಾದ ವೈದ್ಯಕೀಯ ಉಪಕರಣಗಳನ್ನು ಸಂಗ್ರಹಿಸಿ ದಾಸ್ತಾನು ಇಡಬೇಕೆಂದು ಕೇಂದ್ರ ಸರಕಾರ ಆಲೋಚನೆಯನ್ನೇ ಮಾಡಲಿಲ್ಲ. ಇದಕ್ಕೆ ವಿರುದ್ಧವಾಗಿ ಫೆಬ್ರವರಿಯಲ್ಲಿ ವೈಯಕ್ತಿಕ ರಕ್ಷಣಾ ಸಾಧನಗಳ (PPE)  ಕಿಟ್ ಅಡಿಯಲ್ಲಿ ಇನ್ನೂ 8 ವಸ್ತುಗಳನ್ನು ಸೇರಿಸಲು ರಫ್ತು ಮಾನದಂಡಗಳನ್ನು ಸಡಿಲಗೊಳಿಸಿ ಯುರೋಪ್ ದೇಶಗಳಿಗೆ ರಪ್ತು ಮಾಡಲು ಅವಕಾಶ ಮಾಡಿಕೊಟ್ಟಿತು.  ಮಾರ್ಚ್ 15ನೆ ತಾರೀಕಿನ ವರೆಗೆ ಭಾರತ ಪಿಪಿಇ ಮತ್ತು ವೆಂಟಿಲೇಟರ್‌ಗಳನ್ನು ಸಾಕಷ್ಟು ರಫ್ತು ಮಾಡಿತು. ಆದರೆ ಆ ವೇಳೆಗೆ ಭಾರತದಲ್ಲಿ ಅವುಗಳು ಸಾಕಷ್ಟು ಸಂಖ್ಯೆಯಲ್ಲಿ ಇದ್ದಿರಲಿಲ್ಲವೆನ್ನುವುದು ಭಾರತ ಈ ಒಂದು ಸಂಕಷ್ಟದ ಸಮಯವನ್ನು ಯಾವ ರೀತಿಯಲ್ಲಿ ನಿರ್ವಹಿಸಿತು ಎನ್ನುವುದರ ಜೀವಂತ ಉದಾಹರಣೆಯಾಗಿದೆ ಇದು !.

ಒಂದು ಆಡಳಿತ ಪಕ್ಷ ತನ್ನ ನಾಗರಿಕರ ಜೀವನದೊಂದಿಗೆ ಇಷ್ಟು  ಬೇಜವಾಬ್ದಾರಿಯಿಂದ ವರ್ತಿಸುತ್ತದೆ ಎಂಬುದನ್ನು ಊಹಿಸಲೂ ಅಸಾಧ್ಯ. ಪ್ರಧಾನ ಮಂತ್ರಿಗಳು ವೈದ್ಯರ ಸೇವೆಯನ್ನು ಗೌರವಿಸಲು, ಸಾರ್ವಜನಿಕರಿಗೆ ಚಪ್ಪಾಳೆ ತಟ್ಟಲು ಹೇಳಿ ಪ್ರಚಾರದ ಸ್ಟಂಟ್ ಮಾಡುತ್ತಾರೆ. ಆದರೆ ವೈದ್ಯರಿಗೆ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಸಾಕಷ್ಟು ಅಗತ್ಯ ಉಪಕರಣಗಳನ್ನು ನೀಡುವ ಮೂಲಕ ಅವರಿಗೆ ಸುರಕ್ಷಿತವಾಗಿರಿಸಲು ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ.

ಈ ಮಧ್ಯೆ ದೆಹಲಿಯಲ್ಲಿ ಆಯೋಜಿಸಿದ ಎರಡು ಬೃಹತ್‌ ಸಮಾವೇಶಗಳನ್ನು ಸಭೆಗಳನ್ನು ತಡೆಯಲು ಕೇಂದ್ರ ಸರ್ಕಾರ ವಿಫಲವಾಗಿದೆ. ಅವುಗಳಲ್ಲಿ ಒಂದು ಧಾರ್ಮಿಕ ಸಭೆ ಮತ್ತು ಇನ್ನೊಂದು ಯೋಗಿ ಆದಿತ್ಯನಾಥ್ ಯೋಜಿಸಿದ್ದು. ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಜನರನ್ನು ಪರೀಕ್ಷಿಸಲು ಮತ್ತು ಕ್ವಾರಂಟೈನ್ ಮಾಡಲು ಕೇಂದ್ರ ಸರಕಾರ, ದೆಹಲಿ ಸರಕಾರ ಮತ್ತು ಉತ್ತರಪ್ರದೇಶ ಸರಕಾರಗಳು  ವಿಫಲವಾಗಿವೆ. ಸಂಭವನೀಯ ರೋಗಿಗಳು ಮತ್ತು ನಾಗರಿಕರನ್ನು ಭೇಟಿ ಮಾಡಿ COVID ಬಗ್ಗೆ ತಿಳಿಹೇಳಲು ಈಗ ನಮ್ಮ ASHA ಕಾರ್ಯಕರ್ತರನ್ನು ಪ್ರತಿ ಮನೆಗೆ ಕಳುಹಿಸಲಾಗುತ್ತಿದೆ, ಆದರೆ ಯಾವುದೇ ಮಾಸ್ಕ್ ಮತ್ತು ಹ್ಯಾಂಡ್ ಸ್ಯಾನಿಟೈಜರ್‌ಗಳಿಲ್ಲದೆ! ನಾವು ಸಾಕಷ್ಟು ಪರೀಕ್ಷೆಗಳನ್ನು ಮಾಡದೆ ಹೋದರೆ ಎಷ್ಟು ಜನರಿಗೆ ಸೋಂಕು ತಗಲಿದೆ, ಎಷ್ಟು ಮಂದಿ ವಾಹಕರಾಗಿದ್ದಾರೆ, ಎಷ್ಟು ಜನರಿಗೆ ಸೋಂಕು ಹರಡಬಹುದು ಎನ್ನುವುದು ಗೊತ್ತಾಗುವುದಿಲ್ಲ. ಇತರ ದೇಶಗಳಿಗೆ ಹೋಲಿಸಿದರೆ ನಮ್ಮ ರಾಷ್ಟ್ರದಲ್ಲಿ ಮಾಡಿದ ಪರೀಕ್ಷೆಗಳ ಸಂಖ್ಯೆ ತೀರಾ ಕಡಿಮೆ ಮತ್ತು ಜನರಿಗೆ ಸಾಕಷ್ಟು ಪರೀಕ್ಷಾ ಕೇಂದ್ರಗಳಿಲ್ಲ. ಖಾಸಗಿ ಚಿಕಿತ್ಸಾಲಯಗಳಲ್ಲಿನ COVID ಪರೀಕ್ಷೆಗಳ ಶುಲ್ಕ 4500ರೂ, ಆದರೆ ಅದೇ ಬಾಂಗ್ಲಾದಲ್ಲಿ ಅದರ ವೆಚ್ಚ ಕೇವಲ 300 ರೂ !

ಕೊರೋನಾ ಮಹಾಮಾರಿಯ ವಿರುದ್ಧ ಸಮರ ಸಾರಲು ಪ್ರತ್ಯೇಕ ನಿಧಿಯೊಂದನ್ನು ಸ್ಥಾಪಿಸಲಾಗಿದೆ. ಅದಕ್ಕೆ ‘PM Cares’ ಎಂದು ಹೆಸರು. ಸಾರ್ವಜನಿಕರು ಉದಾರವಾಗಿ ಇದಕ್ಕೆ ದೇಣಿಗೆ ನೀಡುವಂತೆ ಕೋರಲಾಗಿದೆ. ಈ ನಿಧಿಯ ಸ್ಥಾಪನೆ ಆಗುತ್ತಲೇ ಹಲವು ಸಂದೇಹಗಳು ಸಹಜವಾಗಿಯೇ ಎದ್ದಿವೆ.  ಇಂತಹ ತುರ್ತು ಆವಶ್ಯಕತೆಗಳಿಗಾಗಿ ಈಗಾಗಲೇ ಅಸ್ತಿತ್ವದಲ್ಲಿರುವ ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿ (PMNRF) ಇದೆ. ಇದರಲ್ಲಿ  3,800 ಕೋಟಿಗಳಷ್ಟು ಕಾರ್ಪಸ್ ಅನ್ನು ಹೊಂದಿದ್ದು ಅದು ಖರ್ಚು ಮಾಡದೆ ಉಳಿದಿದೆ. 2018-19ರಲ್ಲಿ ಸಹ ಈ ನಿಧಿಯಿಂದ ಕೇವಲ 2,212 ಕೋಟಿ ಖರ್ಚು ಮಾಡಲಾಗಿದೆ. ಈ ನಿಧಿಗೆ ನೀಡುವ ದೇಣಿಗೆಗೆ ತೆರಿಗೆ ವಿನಾಯಿತಿ ಇದೆ. ಇದೀಗ ಮತ್ತೆ ಇನ್ನೊಂದು ಹೊಸದರ ಅಗತ್ಯವೇನು? ಕೇರಳದಲ್ಲಿ ಪ್ರಕೃತಿ ವಿಕೋಪವಾಗಿ, ಪ್ರವಾಹ ಪೀಡಿತರಿಗೆ ವಿದೇಶಿಯರಿಂದ ನೆರವು ಹರಿದು ಬಂದಾಗ ಕೇಂದ್ರದಲ್ಲಿದ್ದ ಬಿಜೆಪಿ ಆಡಳಿತವು ಇದನ್ನು ತಡೆದಿತ್ತು. ಆದರೆ ಈಗ “ಪಿಎಂ ಕೇರ್ಸ್” ವಿದೇಶಗಳಿಂದ ಬರುವ ಖಾಸಗಿ ಸಹಾಯಕ್ಕೆ ಮುಕ್ತವಾಗಿದೆ.!

ಆಡಳಿತ ಮತ್ತು ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ವಿಭಾಗವು ರಕ್ಷಣಾ ಸಚಿವಾಲಯದ ಅಧೀನದಲ್ಲಿರುವ ಭಾರತ್ ಡೈನಾಮಿಕ್ಸ್ ನಿಂದ 50 ಲಕ್ಷವನ್ನು ಪಿಎಂ ಕೇರ್ಸ್ ನಿಧಿಗೆ ಮರುನಿರ್ದೇಶಿಸಿದೆ ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ನಿವಾಸ ವೈದ್ಯರ ಸಂಘ (ಆರ್‌ಡಿಎ) ಆರೋಪಿಸಿದೆ. ಇದು ಕಂಪನಿಯ ವೈಯಕ್ತಿಕ ರಕ್ಷಣಾ ಸಾಧನಗಳನ್ನು (ಪಿಪಿಇ) ಖರೀದಿಸುವ ಉದ್ದೇಶದ ನಿಧಿಯಾಗಿದೆ. ಪಿಎಂ-ಕೇರ್ಸ್ ನಿಧಿಗೆ ಹಣವನ್ನು ದಾನ ಮಾಡಲು ಎಲ್ಲಾ ನಕಲಿ ಯುಪಿಐ ಐಡಿಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಲಾಗುತ್ತಿದೆ ಮತ್ತು ಪ್ರಧಾನಿ ಮೋದಿಯವರ ಚಿತ್ರಗಳನ್ನು ಹೊಂದಿರುವ ಆಹಾರ ಪೊಟ್ಟಣಗಳನ್ನು ಜನರಿಗೆ ಆಹಾರ ವಿತರಿಸಲಾಗುತ್ತಿದೆ. ಪ್ರಧಾನಿಯವರ ಸ್ವಯಂ ಪ್ರಚಾರಕ್ಕೆ ಮಿತಿ ಬೇಡವೇ?

“ನನ್ನ ಯೋಗ ವಿಡಿಯೋಗಳನ್ನು ನೋಡಿ, ನನ್ನ ಪುಸ್ತಕಗಳನ್ನು ಓದಿ ಮತ್ತು ನನ್ನ ಮನ್ ಕಿ ಬಾತ್ ಕೇಳಿ” ಇದು ಪ್ರಧಾನಿ  ಮೋದಿಯವರ ಹತ್ತಿರ ಈ ಸಾಂಕ್ರಾಮಿಕಕ್ಕೆ ಇರುವ ಏಕೈಕ ಪರಿಹಾರ. ಅದಕ್ಕಾಗಿಯೇ ಯೋಗದ 3 ಡಿವಿಡಿಗಳನ್ನು ಬಿಡುಗಡೆ ಮಾಡಲಾಗಿದೆ. ನಂತರ ಲಾಕ್‌ಔಟ್‌ ಮಾಡಿದ್ದಕ್ಕಾಗಿ ಅವರು  ಹೊರಗೆ ಬಂದು ಭಾರತದ ಪ್ರಜೆಗಳ  ಕ್ಷಮೆ ಯಾಚಿಸುತ್ತಾರೆ. ಇದು ಮತ್ತೊಂದು ಸ್ವಯಂ ಪ್ರಚಾರದ ಮುಖ. ಮಾನವೀಯ ಬಿಕ್ಕಟ್ಟಿನ್ನು ನಿರ್ಲಕ್ಷಿಸಿ, ನೈತಿಕವಾಗಿ ಶೂನ್ಯವಾಗಿರುವ  ಮನುಷ್ಯನಿಗೆ ಮಾತ್ರ  ಇಂತಹ ಸ್ವಯಂ ಪ್ರಚಾರದತ್ತ ಗಮನ ಹರಿಸಲು ಸಾಧ್ಯ.

ಅದೇ ಸಮಯದಲ್ಲಿ ಈರುಳ್ಳಿ ತಿನ್ನದ  ಮಹಿಳೆ  ನಿರ್ಮಲ್ ಸೀತಾರಾಮನ್ COVID ಅನ್ನು ನಿರ್ವಹಿಸಲು ಆರ್ಥಿಕ ಪರಿಹಾರ ಪ್ಯಾಕೇಜ್‌ನೊಂದಿಗೆ ಹೊರಬರುತ್ತಾರೆ. 1.7 ಲಕ್ಷ ಕೋಟಿ ರೂ. ಸಾಕು ಅನ್ನಿಸಬಹುದು, ಆದರೆ ಇದು 2020-21ನೇ ಸಾಲಿನ ಕೇಂದ್ರ ಸರ್ಕಾರದ ಯೋಜಿತ ಬಜೆಟ್‌ನ ಕೇವಲ 5.6% ಮತ್ತು ಜಿಡಿಪಿಯ ಕೇವಲ 0.8% ಮಾತ್ರ, ಇದು ಜರ್ಮನಿ, ನ್ಯೂಜಿಲೆಂಡ್, ಕೆನಡಾ, ಅಮೆರಿಕಾ ಮತ್ತು ಆಸ್ಟ್ರೇಲಿಯಾದಂತಹ ದೇಶಗಳ ಜಿಡಿಪಿ ಬದ್ಧತೆಯ 4-10% ಗಿಂತ ಕಡಿಮೆ. ಅಂತೂ ಇಂತೂ ಕೊರೋನಾದ ಈ ಸಂಕಷ್ಟದ ಸಮಯದಲ್ಲೂ ಪ್ರಚಾರ ಪ್ರಿಯ ಪ್ರಧಾನಿ ಹಾಗೂ ಸರಕಾರದ ಕೈಯಲ್ಲಿ ದೇಶ ನಲುಗುತ್ತಿದೆ .

ಲೇಖನ: ಲಾವಣ್ಯ ಬಳ್ಳಾಲ್ 

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group