ರಾಜ್ಯ ಸುದ್ದಿ

ಹಸಿದ ಹೊಟ್ಟೆಗಳಿಗ್ಯಾವ ಜಾತಿ?; ಬಿಜೆಪಿಯ ವಿರುದ್ಧ ಸಿದ್ಧರಾಮಯ್ಯ ಕಿಡಿ

‘ಅಗತ್ಯ ವಸ್ತು ಪೂರೈಕೆಯಲ್ಲೂ ಬಿಜೆಪಿಯಿಂದ ಜಾತಿ, ಧರ್ಮದ ಲೆಕ್ಕಾಚಾರ’

‘ವಿತರಿಸುತ್ತಿರುವ ಆಹಾರ ಸಾಮಾಗ್ರಿಗಳ ಮೇಲೂ ಬಿಜೆಪಿ ನಾಯಕರ ಭಾವಚಿತ್ರ’

ವರದಿಗಾರ (ಎ.13): ‘ಹಸಿದಿರುವ ಹೊಟ್ಟೆಗಳಿಗೆ ಯಾವ ಧರ್ಮ? ಯಾವ ಊರು?’ ಎಂದು ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.

ಕೊರೋನಾ ವೈರಸ್ ನ ಇಂತಹ ಸಂಕಷ್ಟದ ಸಂದರ್ಭದಲ್ಲೂ ಜಾತಿ, ಧರ್ಮ ಹೆಸರಲ್ಲಿ ಅಲೆಯುತ್ತಿರುವ ಬಗ್ಗೆ ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿ ಮತ್ತು ರಾಜಕೀಯ ಲಾಭಕ್ಕಾಗಿ ಈ ಸಂದರ್ಭವನ್ನು ಉಪಯೋಗಿಸುತ್ತಿರುವ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿದ್ದು, ಈ ಬಗ್ಗೆ ಸರಣಿ ಟ್ವೀಟ್ ಮಾಡಿದ್ದಾರೆ.

ಸಿದ್ದರಾಮಯ್ಯ ತನ್ನ ಸರಣಿ ಟ್ವೀಟ್ ನಲ್ಲಿ ಈ ಬಗ್ಗೆ ಉಲ್ಲೇಖಿಸುತ್ತಾ, ಬೆಂಗಳೂರಿನಲ್ಲಿ ಕಾರ್ಮಿಕರು ಮತ್ತು ಬಡವರಿಗೆ ಆಹಾರ ವಿತರಿಸುವ ಕಾರ್ಮಿಕ ಇಲಾಖೆಯ ಯೋಜನೆಯನ್ನು ರಾಜ್ಯ ಬಿಜೆಪಿಯು ರಾಜಕೀಯವಾಗಿ ದುರುಪಯೋಗ ಮಾಡುತ್ತಿದ್ದು ಪಾರದರ್ಶಕತೆ ಇಲ್ಲದಿರುವ ಈ ಯೋಜನೆಯ ಬಗೆಗಿನ ದೂರುಗಳ ಬಗ್ಗೆ ತನಿಖೆ ನಡೆಸಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಒತ್ತಾಯಿಸುತ್ತೇನೆ’ ಎಂದಿದ್ದಾರೆ.

‘ಕಟ್ಟಡ ನಿರ್ಮಾಣ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ನಿಧಿಯಿಂದ ನೀಡಲಾಗುತ್ತಿರುವ ಆಹಾರದ ಪೊಟ್ಟಣಗಳನ್ನು ಬಿಜೆಪಿ ಶಾಸಕರು ಮತ್ತು ಮಹಾನಗರಪಾಲಿಕೆ ಸದಸ್ಯರು ಬೇಕಾಬಿಟ್ಟಿಯಾಗಿ ಕೇಂದ್ರ ಕಿಚನ್ ನಿಂದ ತರಿಸಿಕೊಂಡು ತಮಗೆ ಬೇಕಾದವರಿಗೆ ವಿತರಿಸುತ್ತಿದ್ದಾರೆ. ಇದೆಂತಹ ಕ್ಷುಲಕ ರಾಜಕೀಯ!’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಮತ್ತೊಂದು ಟ್ವೀಟ್ ನಲ್ಲಿ, ‘ಕಾರ್ಮಿಕರು ಮತ್ತು ಬಡವರಿಗೆ ಸರ್ಕಾರ ವಿತರಿಸುವ ಆಹಾರ ಸಾಮಾಗ್ರಿಗಳ ಹ್ಯಾಂಪರ್ಸ್ ಮೇಲೆ ಬಿಜೆಪಿ ಶಾಸಕರು ತಮ್ಮ ಭಾವಚಿತ್ರ-ಹೆಸರಿನ ಲೇಬಲ್ ಗಳನ್ನು ಹಚ್ಚಿ, ತಮ್ಮ ಮತದಾರರಿರುವ ಪ್ರದೇಶದಲ್ಲಿ ವಿತರಣೆ ಮಾಡುತ್ತಿದ್ದಾರೆ. ಜನರ ಹಸಿವು ತಣಿಸುವ ಅನ್ನದಲ್ಲಿಯೂ ರಾಜಕೀಯವೇ?’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

‘ಅರ್ಹ ಫಲಾನುಭವಿಗಳಾದ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರು ಹಾಗೂ ಅಸಂಘಟಿತ ಕ್ಷೇತ್ರದ ಕಾರ್ಮಿಕರು ತಮ್ಮದೇ ಕಲ್ಯಾಣ ಮಂಡಳಿಯ ನಿಧಿಯಿಂದ ನೀಡಲಾಗುತ್ತಿರುವ ಸಿದ್ದ ಆಹಾರ ಪೊಟ್ಟಣ ಮತ್ತು ಆಹಾರ ಸಾಮಗ್ರಿಗಳ ಹ್ಯಾಂಪರ್ಸ್‌ಗಳಿಂದ ವಂಚಿತರಾಗಿದ್ದಾರೆ’.

‘ರಾಜ್ಯದಲ್ಲಿ ಸುಮಾರು 30 ಲಕ್ಷ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿದ್ದಾರೆ. ಬೆಂಗಳೂರು ಮಹಾನಗರದಲ್ಲಿಯೇ ಸುಮಾರು 15 ಲಕ್ಷ ಕಾರ್ಮಿಕರು ನೊಂದಾಯಿಸಿಕೊಂಡಿದ್ದಾರೆ. ಇವರಲ್ಲಿ ಬಹುಸಂಖ್ಯೆಯ ಕಾರ್ಮಿಕರು ಸರ್ಕಾರದ ಯಾವುದೇ ನೆರವಿಲ್ಲದೆ ಉಪವಾಸ ಕೂರುವ ಪರಿಸ್ಥಿತಿ ಎದುರಾಗಿದೆ.’ ಎಂದು ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.

‘ರಾಜ್ಯದ ಕಾರ್ಮಿಕ ಸಚಿವರೇ ಉದ್ಘಾಟಿಸಿದ ಆಹಾರ ವಿತರಣಾ ಯೋಜನೆಯನ್ನು ನಗರದ ಬಿಜೆಪಿ ಶಾಸಕರು ಮತ್ತು ಮಹಾನಗರಪಾಲಿಕೆ ಸದಸ್ಯರು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿ ಕಾರ್ಮಿಕ ಇಲಾಖೆಯಿಂದ ಮಹಾನಗರಪಾಲಿಕೆಗೆ ವರ್ಗಾಯಿಸಿರುವುದು ಸರ್ಕಾರದ ಹಣದಲ್ಲಿ‌ ಪಕ್ಷದ ಪ್ರಚಾರಕ್ಕಾಗಿಯೇ?’ ಎಂದು ಪ್ರಶ್ನಿದ್ದಾರೆ.

‘ಕಳೆದ ಕೆಲವು ದಿನಗಳಿಂದ ಪ್ರತಿದಿನ ಸುಮಾರು ಎರಡು ಲಕ್ಷ ಆಹಾರದ ಪೊಟ್ಟಣಗಳನ್ನು ಕೇಂದ್ರ ಕಿಚನ್ ನಿಂದ ಪೂರೈಸಲಾಗಿದೆ. ಅದೇ ರೀತಿ ಒಂದು ಲಕ್ಷ ಆಹಾರ ಸಾಮಾಗ್ರಿಗಳ ಹ್ಯಾಂಪರ್ಸ್ ಗಳನ್ನು ವಿತರಿಸಲಾಗಿದೆಯಂತೆ. ಸಿಎಂ ಯಡಿಯೂರಪ್ಪನವರೇ, ಈ ಯೋಜನೆಯ ಫಲಾನುಭವಿಗಳ‌ ಲೆಕ್ಕ‌ಕೊಡಿ’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

‘ನಗರದ ಕೆಲವು ಬಿಜೆಪಿಯ ಶಾಸಕರು ಮತ್ತು ಬಿಬಿಎಂಪಿ ಸದಸ್ಯರು ಜಾತಿ-ಧರ್ಮಗಳನ್ನು ವಿಚಾರಿಸಿ ಆಹಾರ ಪೊಟ್ಟಣಗಳನ್ನು ವಿತರಿಸುತ್ತಿರುವ ಬಗ್ಗೆ ದೂರುಗಳಿವೆ. ಬೇರೆ ರಾಜ್ಯಗಳಿಂದ ಬಂದವರೆಲ್ಲರನ್ನೂ ಬಾಂಗ್ಲಾದೇಶೀಯರೆಂದು ದೂರ ಇಟ್ಟಿರುವ ಆರೋಪಗಳಿವೆ. ಹಸಿದ ಹೊಟ್ಟೆಗಳಿಗೆ ಯಾವ ಧರ್ಮ? ಯಾವ ಊರು?’ ಎಂದು ಪ್ರಶ್ನಿಸಿದ್ದಾರೆ.

‘ಆಹಾರ ಸಾಮಗ್ರಿ ವಿತರಣೆಯ ಹೊಣೆಯನ್ನು ಹಲವು ಕಡೆ ರಾಜ್ಯ ಬಿಜೆಪಿಯು ಆರ್‌ಎಸ್‌ಎಸ್‌ಗೆ ಸೇರಿದ ಸಂಸ್ಥೆಗಳಿಗೆ ವಹಿಸಲಾಗಿದೆ. ಈ ಮೂಲಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಭದ್ರತಾ ಮಂಡಳಿಯ ನಿಧಿಯಲ್ಲಿನ ರೂ.8000 ಕೋಟಿಯನ್ನು ಈ ಸಂಸ್ಥೆಗಳಿಗೆ ಧಾರೆಯೆರೆಯಲು ಸರ್ಕಾರ ಹೊರಟಂತಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಲಾಕ್ ಡೌನ್ ಘೋಷಣೆಯ ದಿನದಿಂದಲೇ ಇಂದಿರಾ ಕ್ಯಾಂಟೀನ್‌ನಲ್ಲಿ ಬಡವರಿಗೆ ಉಚಿತ ಊಟ-ತಿಂಡಿ ನೀಡುವಂತೆ ಆಗ್ರಹಪಡಿಸಿದ್ದೆ. ಕೆಲವು ದಿನಗಳ‌ ನಂತರ ಈ ಉಚಿತ ಊಟವನ್ನು ನಂತರ ನಿಲ್ಲಿಸಿ ಅದಕ್ಕೆ ದರ ನಿಗದಿಪಡಿಸಲಾಯಿತು. ಇದರಿಂದಾಗಿ ಆ ಕ್ಯಾಂಟೀನ್ ಗಳಿಗೆ ಬರುವವರ ಸಂಖ್ಯೆ ಅರ್ಧದಷ್ಟು ಇಳಿದಿದೆ’ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಮಾಡಿರುವ ಸರಣಿ ಟ್ವೀಟ್ ಗಳನ್ನು ಕೆಳಗೆ ನೀಡಲಾಗಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group