
ಪೊಲೀಸ್ ಅಧಿಕಾರಿಯ ಕೈ ಕತ್ತರಿಸಿ ಗುರುದ್ವಾರದಲ್ಲಿ ಅಡಗಿದ ‘ನಿಹಾಂಗ್ ಸಿಖ್’ ಗುಂಪು
ಗುರುದ್ವಾರದಿಂದ ಮಾರಕಾಯುಧ, ಬಾಂಬ್ ಗಳ ವಶ!
ವರದಿಗಾರ(ಎ.12): ಪಂಜಾಬಿನ ಪಟಿಯಾಲ ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ ತರಕಾರಿ ಮಾರುಕಟ್ಟೆಗೆ ಪ್ರವೇಶ ನಿರಾಕರಿಸಿ ಕಾರಣಕ್ಕಾಗಿ ಪೊಲೀಸರ ಮೇಲೆ ತಲವಾರಿನಿಂದ ದಾಳಿ ಮಾಡಿರುವ ಘಟನೆ ವರದಿಯಾಗಿದೆ.
ಪೊಲೀಸ್ ಬ್ಯಾರಿಕೇಡಿಗೆ ಡಿಕ್ಕಿ ಹೊಡೆದ ನಿಹಾಂಗ್ ಗುಂಪಿನ ವಾಹನವನ್ನು ತಡೆಯಲು ಪ್ರಯತ್ನಿಸಿದ ಪೊಲೀಸರ ಮೇಲೆ ದಾಳಿ ನಡೆಸಿದ್ದಲ್ಲದೆ ಸ್ಥಳದಲ್ಲಿದ್ದ ಸಹಾಯಕ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ರ ಕೈ ಕತ್ತರಿಸಿದ್ದಾರೆ. ಇಬ್ಬರು ಪೊಲೀಸರ ಮೇಲೂ ದಾಳಿಯಾಗಿದೆ.
ನಿಹಾಂಗ್, ಅಮರರು ಎಂದೂ ಕರೆಯಲ್ಪಡುವ ಇವರು ಸಶಸ್ತ್ರ ಸಿಖ್ ಯೋಧರು, ಅವರು ಗುರು ಗೋಬಿಂದ್ ಸಿಂಗ್ ಜಿ ಅವರ ಮಗ ಸಾಹಿಬ್ಜಾಡಾ ಫತೇಹ್ ಸಿಂಗ್ ಜಿ ಅವರ ವಂಶಸ್ಥರು ಎಂದು ಹೇಳಲಾಗಿದೆ ಹಾಗೂ ಅವರದೇ ಶೈಲಿ ಉಡುಪಿನಲ್ಲಿ ದಾಳಿಕೋರರು ದಾಳಿ ನಡೆಸಿರುವುದಾಗಿ ಮೂಲಗಳು ವರದಿ ಮಾಡಿವೆ.
ಪೊಲೀಸರ ಮೇಲೆ ದಾಳಿ ಮಾಡಿ ಪರಾರಿಯಾಗಲು ಯತ್ನಿಸಿದ ತಂಡ ಸಮೀಪದ ಗುರುದ್ವಾರವೊಂದರಲ್ಲಿ ಆಶ್ರಯ ಪಡೆದಿದ್ದರು. ದಾಳಿಕೋರರನ್ನು ಬೆನ್ನಟ್ಟಿದ ಪೊಲೀಸರು 20 ನಿಹಾಂಗ್ ಸಿಖ್ಖರನ್ನು ಬಂಧಿಸಿದ್ದಾರೆ. ಆರೋಪಿಗಳು ಆಶ್ರಯ ಪಡೆದಿದ್ದ ಬಲ್ಬೇರಾದಲ್ಲಿರುವ ಗುರುದ್ವಾರದಿಂದ ಮಾರಕಾಯುಧಗಳಾದ ತಲಾವರು, ಸ್ವಯಂ ಚಾಲಿತ ಗನ್,ಪೆಟ್ರೋಲ್ ಬಾಂಬ್ ಹಾಗೂ 35 ಲಕ್ಷ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ದಾಳಿಗೊಳಗಾದ ಪೊಲೀಸ್ ಅಧಿಕಾರಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.
