ರಾಜ್ಯ ಸುದ್ದಿ

ವಿದೇಶದಲ್ಲಿರುವ ಅನಿವಾಸಿ ಭಾರತೀಯರ ಬಗ್ಗೆ ಸರಕಾರ ತಕ್ಷಣ ಸ್ಪಂದಿಸಲಿ: ಎಸ್.ಡಿ.ಪಿ.ಐ

ವಿವಿಧ ಬೇಡಿಕೆಗಳನ್ನು ಸರಕಾರದ ಮುಂದಿಟ್ಟು ಕಾರ್ಯಪ್ರವೃತ್ತರಾಗುವಂತೆ ಮನವಿ

ವರದಿಗಾರ (ಎ.12): ಕೋವಿಡ್  19 ಸಾಂಕ್ರಾಮಿಕವು  ಜಗತ್ತಿನಾದ್ಯಂತ ಹಬ್ಬಿ ವಿಶ್ವದ ಬಹುತೇಕ ದೇಶಗಳನ್ನು ಲಾಕ್ ಡೌನ್  ಸ್ಥಿತಿಗೆ ತಲುಪಿಸಿದೆ. ಇದಕ್ಕೆ ಸಂಬಂಧಪಟ್ಟಂತೆ ರಾಜ್ಯ ಮತ್ತು ಕೇಂದ್ರ ಸರಕಾರಗಳು ವಿದೇಶಗಳಿಗೆ ದುಡಿಮೆಗಾಗಿ ತೆರಳಿದ ನಮ್ಮ ಕನ್ನಡಿಗರು ಮತ್ತು ಅನಿವಾಸಿ ಭಾರತೀಯರ ಬಗ್ಗೆ ಗಮನಹರಿಸುವ ಮತ್ತು ಪ್ರತಿಸ್ಪಂದಿಸುವ ತುರ್ತು ಅವಶ್ಯಕತೆಯಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ – ಎಸ್.ಡಿ.ಪಿ.ಐ ಹೇಳಿದೆ.

ಈ ಬಗ್ಗೆ ಎಸ್.ಡಿ.ಪಿ.ಐ ಕರ್ನಾಟಕ ರಾಜ್ಯ ಸಮಿತಿಯು ಪತ್ರಿಕಾ ಪ್ರಕಟನೆ ಹೊರಡಿಸಿದ್ದು, ಪ್ರಕಟಣೆಯಲ್ಲಿ, ‘ಗಲ್ಫ್ ರಾಷ್ಟ್ರಗಳಾದ ಸೌದಿ ಅರೇಬಿಯಾ, ಕತಾರ್, ಯು ಏ ಇ, ಕುವೈಟ್, ಒಮಾನ್, ಬಹರೈನ್ ಮುಂತಾದ ರಾಷ್ಟ್ರಗಳಲ್ಲಿ ಇದೀಗ ಲಾಕ್ ಡೌನ್ ಘೋಷಣೆಯಾಗಿದೆ. ಎಲ್ಲಾ ಭಾರತೀಯರು ತಮ್ಮ ತಮ್ಮ ಕೋಣೆಗಳ ಒಳಗೆ  ಸೀಮಿತರಾಗಿದ್ದಾರೆ. ಹೆಚ್ಚಿನವರಿಗೆ ಸಂಬಳದ ಅರ್ಧ ಕಡಿತ ಮಾಡಲಾಗಿದೆ. ತಾತ್ಕಾಲಿಕ ಕೆಲಸಗಳನ್ನು ಮಾಡಿಕೊಂಡಿದ್ದವರು ಕೆಲಸವಿಲ್ಲದೆ ಅತಂತ್ರರಾಗಿದ್ದಾರೆ. ಕೆಲಸ ಹುಡುಕುತ್ತಿದ್ದವರು ಕೆಲಸ ಇಲ್ಲದೆ ಸರಿಯಾದ ವಸತಿಯೂ ಇಲ್ಲದೆ ಅಲೆದಾಡುತ್ತಿದ್ದಾರೆ. ವಿಮಾನಯಾನಗಳು ಸ್ಥಗಿತಗೊಂಡು ಅತ್ತ ರೂಮಿನಲ್ಲೂ ಇರಲಾಗದೆ ಊರಿಗೂ ಬರಲಾಗದೆ ಕೈಯಲ್ಲಿ ಹಣವೂ ಇಲ್ಲದೆ ಪರದಾಡುತ್ತಿರುವ ಭಾರತೀಯರು ಅನುಭವಿಸುತ್ತಿರುವ ಸಂಕಷ್ಟಗಳ ಆತಂಕ ವ್ಯಕ್ತಪಡಿಸಿರುವ ಎಸ್.ಡಿ.ಪಿ.ಐ ಈ ಬಗ್ಗೆ ಬೆಳಕು ಚೆಲ್ಲಲು ಪ್ರಯತ್ನಿಸಿದೆ.

ಕೋವಿಡ್  19 ಸೋಂಕಿನ ವಿರುದ್ಧ ಅಲ್ಲಿರುವ ಅನಿವಾಸಿ ಭಾರತೀಯರನ್ನು ಕ್ವಾರಂಟೈನ್ ನಲ್ಲಿ ಇರಿಸುವ ವ್ಯವಸ್ಥೆಯು ಗಲ್ಫ್ ರಾಷ್ಟ್ರಗಳಲ್ಲಿ ಅತ್ಯಂತ ಸಂಕೀರ್ಣವಾದುದು. ಯಾಕೆಂದರೆ ಅಲ್ಲಿ ಅನಿವಾಸಿ ಭಾರತೀಯರು ಒಂದೊಂದು ಕೋಣೆಗಳಲ್ಲಿ ಕಿಕ್ಕಿರಿದು ವಾಸ ಮಾಡುವುದರಿಂದ ಪ್ರತ್ಯೇಕವಾದ ಕ್ವಾರಂಟೈನ್ ಹೇಗೆ ತಾನೆ ಸಾಧ್ಯ? ಎಂದು ಪ್ರಶ್ನಿಸಿದೆ.

ಹಾಗಾಗಿ ನಮ್ಮ ಕರ್ನಾಟಕ ರಾಜ್ಯ ಹಾಗೂ ಕೇಂದ್ರ ಸರ್ಕಾರ ಈ ವಿಚಾರದಲ್ಲಿ ತಕ್ಷಣ ಮಧ್ಯಪ್ರವೇಶಿಸಿ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಎಸ್.ಡಿ.ಪಿ.ಐ ಕರ್ನಾಟಕ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಒತ್ತಾಯಿಸಿದ್ದಾರೆ.

ಸರಕಾರಕ್ಕೆ ಎಸ್.ಡಿ.ಪಿ.ಐ ನ ಬೇಡಿಕೆಗಳು:

1) ಸಂಕಷ್ಟಗಳಿಗೆ ಒಳಗಾಗಿ ಊರಿಗೆ ಮರಳ ಬಯಸುವಂತಹ ಅನಿವಾಸಿ ಭಾರತೀಯರನ್ನು ಕರೆತರುವ ನಿಟ್ಟಿನಲ್ಲಿ ಭಾರತ ಸರಕಾರ ಗಲ್ಫ್ ರಾಷ್ಟ್ರಗಳ ಸರಕಾರದ ಜೊತೆಗೆ ಮಾತುಕತೆ ನಡೆಸಿ ಕಾರ್ಯಪ್ರವೃತ್ತವಾಗಬೇಕು.

2)  ಅಲ್ಲಿನ ಅನಿವಾಸಿ ಭಾರತೀಯರಿಗೆ ಅಗತ್ಯವಿರುವ ವೈದ್ಯಕೀಯ ಸೌಲಭ್ಯ, ವೆಂಟಿಲೇಟರ್, ಕ್ವಾರಂಟೈನ್  ವ್ಯವಸ್ಥೆಗಳ ಬಗ್ಗೆ ಖಾತರಿಪಡಿಸಬೇಕು.

3)  ಪ್ರತಿ ಗಲ್ಫ್ ರಾಷ್ಟ್ರಗಳಲ್ಲಿ ಕರ್ನಾಟಕ ರಾಜ್ಯದ ಪ್ರತಿನಿಧಿಗಳನ್ನು ಕಳುಹಿಸಿ ಪರಿಸ್ಥಿತಿಯ ನಿಗಾ ಹಾಗೂ ವ್ಯವಸ್ಥೆಯನ್ನು ಏರ್ಪಡಿಸುವ ಜವಾಬ್ದಾರಿ ನೀಡಬೇಕು.

4)  ಸಂಕಷ್ಟಗಳನ್ನು ಎದುರಿಸುತ್ತಿರುವ ಗಲ್ಫ್  ಭಾರತೀಯರಿಗೆ ವೈದ್ಯಕೀಯ ವ್ಯವಸ್ಥೆಯನ್ನು ಏರ್ಪಡಿಸಬೇಕು.

5) ಕೇಂದ್ರ ಹಾಗೂ ರಾಜ್ಯ ಸರಕಾರಗಳು ಈ ಬಗ್ಗೆ ತನ್ನ ಸಚಿವಾಲಯದಲ್ಲಿ ವಿಶೇಷ ಅಧಿಕಾರಿಗಳ ತಂಡವನ್ನು ನೇಮಿಸಿ  ಪರಿಸ್ಥಿತಿಯ ನಿತ್ಯ ಪರಿಶೀಲನೆ ನಡೆಸಬೇಕು.

6)  ಭಾರತಕ್ಕೆ ಮರಳ ಬಯಸುವವರನ್ನು ಕ್ವಾರಂಟೈನ್ ನಲ್ಲಿ  ಇರಿಸಲು ರಾಜ್ಯದ ಸಂಘ-ಸಂಸ್ಥೆಗಳ ಮತ್ತು ಉದ್ಯಮಿಗಳಿಂದ ಕಟ್ಟಡಗಳನ್ನು ದಾನವಾಗಿ ಪಡೆದು ವ್ಯವಸ್ಥೆ ಮಾಡಬೇಕು.

ಯುರೋಪ್ ಅಮೆರಿಕ ಮುಂತಾದ ರಾಷ್ಟ್ರಗಳಲ್ಲಿ ದುಡಿಯುತ್ತಿರುವ ಭಾರತೀಯರು ಗಳಿಸಿದ  ಹಣವನ್ನು ಅಲ್ಲೇ ವಿನಿಯೋಗಿಸಬೇಕು ಎಂದು ಕಾನೂನುಗಳಿದ್ದರೂ ಗಲ್ಫ್  ರಾಷ್ಟ್ರಗಳಲ್ಲಿ ಮಾತ್ರ ದುಡಿಯುವವರಿಗೆ ಅಂತಹ ಕಾನೂನುಗಳಿಲ್ಲವಾದ್ದರಿಂದ ಭಾರತ ದೇಶದ ಆರ್ಥಿಕತೆಗೆ ಗಲ್ಫ್ ರಾಷ್ಟ್ರದ ಅನಿವಾಸಿ ಭಾರತೀಯರ ಕೊಡುಗೆ ಅಪಾರವಾಗಿದೆ. ದೇಶದ ಆರ್ಥಿಕತೆಯ ದೃಢವಾದ ಶಕ್ತಿ  ಎನಿಸಿಕೊಂಡಿರುವ ಗಲ್ಫ್  ಅನಿವಾಸಿ ಭಾರತೀಯರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರ ತಕ್ಷಣ ಧನಾತ್ಮಕವಾಗಿ ಕಾರ್ಯಪ್ರವೃತ್ತರಾಗಬೇಕೆಂದು ಪ್ರಕಟಣೆಯಲ್ಲಿ ಇಲ್ಯಾಸ್ ಮುಹಮ್ಮದ್ ಆಗ್ರಹಿಸಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group