ರಾಷ್ಟ್ರೀಯ ಸುದ್ದಿ

ಸಾಮಾನ್ಯ ನಾಗರಿಕನಾಗಿ ಕೊರೋನ ಹೋರಾಟದಲ್ಲಿ ಕೈಜೋಡಿಸುತ್ತೇನೆ ಆದರೆ ಐಎಎಸ್ ಅಧಿಕಾರಿಯಾಗಿ ಅಲ್ಲ: ಕಣ್ಣನ್ ಗೋಪಿನಾಥನ್

ಕರ್ತವ್ಯಕ್ಕೆ ಹಾಜರಾಗುವಂತೆ ಸರಕಾರದ ಸೂಚನೆಯನ್ನು ತಿರಸ್ಕರಿಸಿದ ಕಣ್ಣನ್ ಗೋಪಿನಾಥನ್

ವರದಿಗಾರ (ಎ.11): ಐಎಎಸ್ ಅಧಿಕಾರಿಯಾಗಿದ್ದ ಕಣ್ಣನ್ ಗೋಪಿನಾಥನ್ ಕಳೆದ 2019ರ ಆಗಸ್ಟ್ ತಿಂಗಳಲ್ಲಿ ಕೆಲವೊಂದು ವೈಯಕ್ತಿಕ ಮತ್ತು ತಮ್ಮ ಸೇವೆಯಲ್ಲಿ ನಡೆಯುತ್ತಿರುವ ಅರಾಜಕತೆಯ ಕಾರಣಗಳನ್ನು ನೀಡಿ ಐಎಎಸ್ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ರಾಜೀನಾಮೆಯ ಬಳಿಕ ಜನರೊಂದಿಗೆ ಬೆರೆಯಲು ಮತ್ತು ಜನಸೇವೆಯನ್ನು ಮಾಡಲು ಇಚ್ಛಿಸಿದರು. ಸರಕಾರದ ಜನವಿರೋಧಿ ನೀತಿಗಳ ಬಗ್ಗೆ ಸರಕಾರವನ್ನು ಪ್ರಶ್ನಿಸಲು ಮುಂದಾದರು.

ಸರಕಾರವನ್ನು ಪ್ರಶ್ನಿಸಲು ಮುಂದಾದ ಇವರನ್ನು ಜನಸಮೂಹ ಅಭೂತಪೂರ್ವವಾಗಿ ಸ್ವೀಕರಿಸಿತು. ಕಳೆದ ಕೆಲವು ತಿಂಗಳಿನಿಂದ ನಡೆಯುತ್ತಿರುವ ರಾಷ್ಟ್ರೀಯ ಪೌರತ್ವ ಕಾಯ್ದೆಯ ವಿರುದ್ಧದ ಹಲವು ಪ್ರತಿಭಟನೆಗಳಲ್ಲಿ, ಸಮಾವೇಶಗಳಲ್ಲಿ, ಸೆಮಿನಾರ್ ಗಳಲ್ಲಿ ಕಣ್ಣನ್ ಗೋಪಿನಾಥನ್ ಮುಂಚೂಣಿಯಲ್ಲಿದ್ದು, ಜನರನ್ನು ಜಾಗೃತಿಗೊಳಿಸಲು ಪ್ರಯತ್ನಿಸುತ್ತಿದ್ದರು. ಇದು ಕೆಲವರ ಕೆಂಗಣ್ಣಿಗೂ ಗುರಿಯಾಗಿತ್ತು. ಈ ಸಂದರ್ಭ ಹಲವು ತೊಡಕುಗಳನ್ನೂ ಕಣ್ಣನ್ ಗೋಪಿನಾಥನ್ ಎದುರಿಸಿದ್ದಾರೆ.

ವಿಶ್ವವನ್ನು ಕಾಡಿರುವ ಕೊರೋನ ವೈರಸ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ತಕ್ಷಣದಿಂದಲೇ ಸೇರ್ಪಡೆಯಾಗಬೇಕೆಂದು ಸರಕಾರ ಆದೇಶ ಹೊರಡಿಸಿರುವುದಾಗಿ ಮಾಜಿ ಐಎಎಸ್ ಅಧಿಕಾರಿ ಗೋಪಿನಾಥನ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಗೋಪಿನಾಥನ್, ‘ಕೊರೋನಾ ವಿರುದ್ಧ ನಾನು ನನ್ನೆಲ್ಲಾ ಸೇವೆಯನ್ನು ಮುಂದುವರಿಸುತ್ತೇನೆ. ಅದು ಸಾಮಾನ್ಯ ನಾಗರಿಕನಾಗಿಯೇ ಹೊರತು ಐಎಎಸ್ ಅಧಿಕಾರಿಯಾಗಿ ಅಲ್ಲ’ ಎಂದು ಸರಕಾರಕ್ಕೆ ಸ್ಪಷ್ಟನೆ ನೀಡಿದ್ದು ಸರಕಾರದ ಕರ್ತವ್ಯಕ್ಕೆ ಹಾಜರಾಗುವ ಆದೇಶವನ್ನು ಅವರು ತಿರಸ್ಕರಿಸಿದ್ದಾರೆ.

‘ಕಣ್ಣನ್ ಗೋಪಿನಾಥನ್ ಅವರ ರಾಜೀನಾಮೆಯನ್ನು ಇದುವರೆಗೂ ಸ್ವೀಕರಿಸದ ಕಾರಣ ಸರಕಾರ ಕರ್ತವ್ಯಕ್ಕೆ ಹಾಜರಾಗುವಂತೆ ಅವರಿಗೆ ಸೂಚನೆ ನೀಡಲಾಗಿದೆ’ ಎಂದು ಆದೇಶ ಹೊರಡಿಸಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಸರಕಾರದ ಆದೇಶದ ಪ್ರತಿಯನ್ನು ಟ್ವಿಟರ್ ನಲ್ಲಿ ಹಂಚಿಕೊಂಡು ಪ್ರತಿಕ್ರಿಯಿಸಿರುವ ಅವರು, “ನಾನು ರಾಜೀನಾಮೆ ಸಲ್ಲಿಸಿ 8 ತಿಂಗಳುಗಳು ಕಳೆದಿವೆ. ಸರಕಾರಕ್ಕೆ ತಿಳಿದಿರುವ ಒಂದೇ ವಿಚಾರವೆಂದರೆ ಅದು ಕಿರುಕುಳ. ಮುಂದೆಯೂ ಅವರು ಕಿರುಕುಳ ನಡೆಸುತ್ತಾರೆ ಎನ್ನುವುದು ನನಗೆ ತಿಳಿದಿದೆ. ಆದರೆ ಈ ಸಂಕಷ್ಟದಲ್ಲಿ ಸಮಯದಲ್ಲಿ ನಾನು ಸ್ವಯಂಪ್ರೇರಿತನಾಗಿ ಸಹಾಯ ಮಾಡಲು ಇಚ್ಛಿಸುತ್ತೇನೆ. ಆದರೆ ಐಎಎಸ್ ಅಧಿಕಾರಿಯಾಗಿ ಅಲ್ಲ” ಎಂದಿದ್ದಾರೆ.

‘ನನಗನಿಸುವುದಿಲ್ಲ ಈ ಪತ್ರವನ್ನು ಉತ್ತಮ ಉದ್ದೇಶಗಳಿಗಾಗಿ ನೀಡಿದ್ದಾರೆಂದು. ಇದರ ಹಿಂದೆ ಕಿರುಕುಳ ನೀಡುವ ಉದ್ದೇಶವಿದೆ. ಅವರು ಬಯಸುತ್ತಿರುವುದು ನನ್ನ ಸೇವೆಯಲ್ಲ. ಬದಲಾಗಿ ನನ್ನ ಅಧೀನತೆ. ಸರಕಾರದೊಂದಿಗೆ ಸ್ವಯಂಪ್ರೇರಿತನಾಗಿ ಸಹಾಯ ಮಾಡಲು ಮಾತ್ರ ಇಚ್ಛಿಸುತ್ತೇನೆ’ ಎಂದು ಕಣ್ಣನ್ ಸ್ಪಷ್ಟಪಡಿಸಿದ್ದಾರೆ. ಇನ್ನು ದೈನಂದಿವಾಗಿ ಟ್ವಿಟ್ಟರ್ ನಲ್ಲಿ ಸರಕಾರವನ್ನು ಅವರು ಪ್ರಶ್ನಿಸುತ್ತಿದ್ದಾರೆ.

ಮೋದಿ ಸರಕಾರವು ರೈತ ವಿರೋಧಿಯೇ?

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group