
ವರದಿಗಾರ (ಎ.10): ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ಕೋಮು ಪ್ರಚೋದನೆ ಹಾಗೂ ಧಾರ್ಮಿಕ ಭಾವನೆಗೆ ಧಕ್ಕೆಯಾಗುವ ರೀತಿಯಲ್ಲಿ ಪೋಸ್ಟ್ ಮಾಡಿರುವ ಯುವಕನೊಬ್ಬನ ವಿರುದ್ಧ ಪ್ರಕರಣ ದಾಖಲಾಗಿದೆ.
ಆರೋಪಿಯನ್ನು ಕುಂದಾಪುರ ಕಾರ್ವಾಡಿ ಸೌಕೂರು ನಿವಾಸಿ ನಾಗರಾಜ್ ಮೊಗವೀರ (28) ಗುರುತಿಸಲಾಗಿದ್ದು, ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈತ ತನ್ನ ಫೇಸ್ಬುಕ್ ಪೇಜ್ನಲ್ಲಿ ‘ಕರ್ನಾಟಕದಿಂದ ದೆಹಲಿಯ ಮಸೀದಿಗೆ ಹೋದವರು 1500 ಜನ. ಒಬ್ಬೊಬ್ಬರ ಪರೀಕ್ಷೆಗೆ 4500ರೂ.ನಂತೆ ಒಟ್ಟು 67,50,000ರೂ. ಖರ್ಚು. ಎನ್ಕೌಂಟರ್ ಮಾಡಿದರೆ ಖರ್ಚು ಒಂದು ಬುಲೆಟ್ಗೆ 63ರೂ.ನಂತೆ 1500 ಮಂದಿಗೆ 94500 ರೂ.’ ಎಂಬುದಾಗಿ ಎ.9ರಂದು ಪೋಸ್ಟ್ ಮಾಡಿ ಕೋಮು ಪ್ರಚೋದನೆ ಮಾಡಲು ಪ್ರಯತ್ನಿಸಿದ್ದನು.
ಇದರಿಂದ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದ್ದು, ಸಮಾಜದಲ್ಲಿ ಶಾಂತ ರೀತಿಯಲ್ಲಿರುವ ಎರಡು ಸಮುದಾಯಗಳ ನಡುವೆ ಕೋಮುಧ್ವೇಷವನ್ನು ಹರಡಿ ಸಮಾಜದಲ್ಲಿ ಕೋಮು ಗಲಭೆಗಳು ಉದ್ಭವಿಸುವ ಸಾಧ್ಯತೆಗಳಿವೆ ಎಂದು ಕುಂದಾಪುರ ಕಾರ್ವಾಡಿ ಗ್ರಾಮದ ಜನತಾ ಕಾಲನಿಯ ಮುಖ್ತಾರ್ ಅಹ್ಮದ್ ನೀಡಿದ ದೂರಿನಂತೆ ಐಪಿಸಿ 1860 295ಎ, 505(2)ನಂತೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
