ವರದಿಗಾರ-ಬೆಂಗಳೂರು: ಸ್ವತಃ ತಾಯಿ ತನ್ನ ಮಗಳನ್ನೇ ಮೂರನೇ ಮಹಡಿಯಿಂದ ದೂಡಿ ಕೊಂದಿರುವ ಹೃದಯ ವಿದ್ರಾವಕ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನ ಕನಕಪುರ ರಸ್ತೆ ಜರಗನಹಳ್ಳಿಯಿಂದ ವರದಿಯಾಗಿದೆ.
ಮೂರನೇ ಮಹಡಿಯಿಂದ ಬಿದ್ದು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿರುವ 9 ಹರೆಯದ ಬಾಲಕಿಯ ಹೆಸರು ಶ್ರೇಯಾ. ಮಗಳನ್ನೇ ಮಹಡಿಯಿಂದ ದೂಡಿ ಕೊಂದಿರುವ ದುಷ್ಟೆ ತಾಯಿಯೇ ಸ್ವಾತಿ.
ಸ್ವಾತಿಯ ಈ ಅಮಾನವೀಯ ಕೃತ್ಯದಿಂದ ರೊಚ್ಚಿಗೆದ್ದ ಸ್ಥಳೀಯ ಜನರು ಕಂಬಕ್ಕೆ ಕಟ್ಟಿ ಸರಿಯಾಗಿ ಥಳಿಸಿದ್ದಾರೆ. ಸಾವಿಗೀಡಾಗಿರುವ ಶ್ರೇಯಾ ಮೂಕಿಯಾಗಿದ್ದು, ಇದರಿಂದ ಮಗಳನ್ನು ನಿಭಾಯಿಸಲು ಕಷ್ಟವಾಗುತ್ತಿದ್ದದ್ದೇ ತನ್ನ ಮಗಳನ್ನು ಕೊಂದಿರುವುದಕ್ಕೆ ಕಾರಣವೆಂದು ಹೇಳಲಾಗಿದೆ. ಇನ್ನಷ್ಟೇ ಘಟನೆಯ ಸತ್ಯಾಸತ್ಯತೆ ತಿಳಿದು ಬರಬೇಕಿದೆ. ಸ್ಥಳಕ್ಕಾಗಮಿಸಿದ ಪುಟ್ಟೇನಹಳ್ಳಿ ಪೊಲೀಸರು ಸ್ವಾತಿಯನ್ನು ವಶಕ್ಕೆ ಪಡೆದಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
