ನಾಕಾಬಂದಿ

ಮುಸ್ಲಿಂ ವ್ಯಕ್ತಿ ಆಹಾರದ ಪ್ಯಾಕೆಟ್ ಗೆ ‘ಉಗುಳುವ’ ವೀಡಿಯೋ ; ಭಾರತದ ‘ಫ್ಯಾಸಿಸ್ಟ್ ವೈರಸ್’ ಗಳು ಹರಡಿರುವ ಅಪಪ್ರಚಾರದ ವೀಡಿಯೋದ ಅಸಲಿಯತ್ತು ಬಯಲು !

ವರದಿಗಾರ(03-04-2020):- ಜಗತ್ತಿನೆಲ್ಲೆಡೆ ಹರಡುತ್ತಿರುವ ಕೊರೋನಾ ವೈರಸ್ ಭಾರತಕ್ಕೆ ತಲುಪಿದಾಗ ಒಂದು ನಿರ್ದಿಷ್ಟ ಧರ್ಮದೊಂದಿಗೆ ಗುರುತಿಸಿಕೊಂಡಂತಿದೆ. ದೆಹಲಿಯ ನಿಜಾಮುದ್ದೀನ್ ನಲ್ಲಿ ತಬ್ಲೀಗ್ ಜಮಾಅತ್ ನಿರ್ಲಕ್ಷ್ಯದ ಕಾರಣ ಉಂಟಾದ ಆತಂಕವನ್ನು ಮಾಧ್ಯಮಗಳು ದುರುಪಯೋಗಪಡಿಸುತ್ತಿವೆ. ಐಟಿ ಸೆಲ್ ಹಾಗೂ ಮಾಧ್ಯಮಗಳ ಆಹೋರಾತ್ರಿ ಪರಿಶ್ರಮದ ಪರಿಣಾಮ, ಕೊರೋನಾ ವೈರಸನ್ನು ಮುಸ್ಲಿಮರ ತಲೆಗೆ ಕಟ್ಟಲಾಗುತ್ತಿದೆ.

ಹೀಗಿರುವಾಗ, ಸಾಮಾಜಿಕ ಜಾಲತಾಣಗಳಲ್ಲಿರುವ ಕೋಮುವಾದಿ ವಿಕೃತ ಜೀವಿಗಳಿಗೆ ಸುಗ್ಗಿ! ಎಲ್ಲೆಲ್ಲಿಂದಲೋ ವಿಡಿಯೋ, ಚಿತ್ರಗಳನ್ನು ಹುಡುಕಿ, ಏನೇನೋ ತಲೆಬರಹದೊಂದಿಗೆ ಹರಿಯಬಿಡುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿರುವ ಮೂರ್ಖರು ಇದನ್ನು ನಂಬುತ್ತಾರೆ ಹಾಗೂ ಅದೇ ರೀತಿ ಫಾರ್ವರ್ಡ್ ಮಾಡುತ್ತಾರೆ. ತಬ್ಲೀಗ್ ಜಮಾಅತ್ ಪ್ರಕರಣದ ನಂತರ ಈ ರೀತಿಯ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇಂತಹ ಒಂದು ವಿಡಿಯೋದ ಸತ್ಯಾಸತ್ಯತೆಯನ್ನು ಆಲ್ಟ್ ನ್ಯೂಸ್ ಪರಿಶೀಲಿಸಿ ವರದಿ ಮಾಡಿದೆ.

45 ಸೆಕೆಂಡ್’ಗಳ ಈ ವಿಡಿಯೋ, ರೆಸ್ಟೋರೆಂಟ್ ಉದ್ಯೋಗಿಯೊಬ್ಬ ಆಹಾರ ಪ್ಯಾಕ್ ಮಾಡುತ್ತಿರುವಾಗ ಪ್ಯಾಕೆಟ್ಗೆ ಊದುವುದನ್ನು ತೋರಿಸಲಾಗುತ್ತಿದೆ. ಈ ವಿಡಿಯೋವನ್ನು “ಮುಸ್ಲಿಮ್ ವ್ಯಕ್ತಿ ಗ್ರಾಹಕರಿಗೆ ಆಹಾರ ನೀಡುವ ಮೊದಲು ಉಗುಳುತ್ತಿರುವುದು” ಎಂಬ ತಲೆಬರಹದೊಂದಿಗೆ ಹರಡಲಾಗುತ್ತಿದೆ.

ಫೇಕ್ ನ್ಯೂಸ್ ಪೋರ್ಟಲ್ ‘ಪೋಸ್ಟ್ ಕಾರ್ಡ್’ ಸಂಸ್ಥಾಪಕ ಮಹೇಶ್ ವಿಕ್ರಮ್ ಹೆಗ್ಡೆ ಕೂಡಾ ಈ ವಿಡಿಯೋ ಟ್ವೀಟ್ ಮಾಡುವ ಮೂಲಕ ಎಂದಿನ ಹಾಗೆ, ಸುಳ್ಳು ಸುದ್ದಿ ಹರಡುವುದಕ್ಕೆ ತನ್ನ ಕೊಡುಗೆ ನೀಡಿದ್ದಾನೆ.

ಇದಲ್ಲದೆ, ಕೆಲವು ಬಿಜೆಪಿ ನಾಯಕರು ಹಾಗೂ ಬಿಜೆಪಿಯ ‘ಸಿಲೆಬ್ರಿಟಿ’ ಬೆಂಬಲಿಗರೂ ಈ ವಿಡಿಯೋವನ್ನು ಬೇರೆ ಬೇರೆ ರೀತಿಯಲ್ಲಿ ಪೋಸ್ಟ್ ಮಾಡಿದ್ದಾರೆ. ಮುಸ್ಲಿಮ್ ರೆಸ್ಟೋರೆಂಟ್ಗಳನ್ನು ಬಹಿಷ್ಕರಿಸುವಂತೆ ಕರೆ ನೀಡಿ ಹಲವಾರು ಸಂದೇಶಗಳು ವಾಟ್ಸಪ್ ನಲ್ಲಿ ಹರಿದಾಡುತ್ತಿವೆ.

ಈ ವಿಡಿಯೋ ಮೊದಲು 2019ರ ಏಪ್ರಿಲ್ 27ರಂದು ಯುಟ್ಯೂಬ್ ನಲ್ಲಿ ಅಪ್ಲೋಡ್ ಆಗಿತ್ತು. ನಂತರ ಯುಎಇಯಲ್ಲಿ ಕೂಡಾ ವೈರಲ್ ಆಗಿತ್ತು. ಅಲ್ಲಿನ ಸುದ್ದಿ ಮಾಧ್ಯಮವಾದ ‘ಗಲ್ಫ್ ನ್ಯೂಸ್‘ ಈ ಬಗ್ಗೆ ಮಾಡಿದ ವರದಿಯಲ್ಲಿ, “ವ್ಯಕ್ತಿಯೋರ್ವನು ಆಹಾರದ ಪ್ಯಾಕೆಟ್ಗೆ ಊದುವ ವೀಡಿಯೋ ಯುಎಇಯಲ್ಲಿ ನಡೆದದ್ದಲ್ಲ” ಎಂದು ಸ್ಪಷ್ಟೀಕರಿಸಿದೆ.

ಮಾರ್ಚ್ 19, 2020ಯ ‘Complaint Singapore‘ ವರದಿ ಪ್ರಕಾರ, ಸಿಂಗಾಪುರದ ಆಹಾರ ಸಂಸ್ಥೆ ಈ ಕುರಿತು ದೂರು ಸ್ವೀಕರಿಸಿ, ಪ್ರಕರಣದ ತನಿಖೆ ನಡೆಸಿತ್ತು. ಸಿಂಗಾಪುರದಲ್ಲಿ ಈ ವಿಡಿಯೋ ವೈರಲ್ ಆದಾಗ ಅಲ್ಲಿಯ ಒಂದು ನಿರ್ದಿಷ್ಟ ಪ್ರದೇಶದ ಆಹಾರ ಕೇಂದ್ರವೊಂದರ ಹೆಸರು ನಮೂದಿಸಲಾಗಿತ್ತು. ಆದರೆ, ಸಿಂಗಾಪುರದ ಆಹಾರ ಸಂಸ್ಥೆಯ ಹೇಳಿಕೆ ಪ್ರಕಾರ, ಆ ಪ್ರದೇಶದಲ್ಲಿ ವೈರಲ್ ಸಂದೇಶದಲ್ಲಿ ನಮೂದಿಸಲಾಗಿದ್ದ ಹೆಸರಿನ ಯಾವುದೇ ಆಹಾರ ಕೇಂದ್ರವಿರಲಿಲ್ಲ. ಅದಲ್ಲದೆ, ಸಂಸ್ಥೆಯು ಅಲ್ಲಿನ ಎಲ್ಲಾ ಆಹಾರ ಕೇಂದ್ರಗಳಲ್ಲಿ ತನಿಖೆ ನಡೆಸಿತ್ತು.

ಯುಎಇ ಹಾಗೂ ಸಿಂಗಾಪುರದ ವರದಿಯಲ್ಲಿ ಆಹಾರದ ಪ್ಯಾಕೆಟ್ಗೆ ಊದುವುದರ ಬಗ್ಗೆ ಹೇಳಲಾಗಿದೇ ಹೊರತು ಉಗುಳುವುದರ ಬಗ್ಗೆ ಅಲ್ಲ. ಇದೀಗ ತಬ್ಲೀಗ್ ಜಮಾಅತ್ ಸದಸ್ಯರು ಕ್ವಾರಂಟೈನ್ ಕೇಂದ್ರಗಳಲ್ಲಿ ಎಲ್ಲೆಂದರಲ್ಲಿ ಉಗುಳುತ್ತಿದ್ದಾರೆಂಬ ಆರೋಪ ಬಂದ ಹಿನ್ನಲೆಯಲ್ಲಿ, ಭಾರತದಲ್ಲಿ ಈ ವಿಡಿಯೋದ ತಲೆಬರಹದಲ್ಲಿ ಬದಲಾವಣೆಯಾಗಿದೆ.

ಕಳೆದ ವರ್ಷ ಈ ವಿಡಿಯೋ ಮಲೇಶ್ಯಾದಲ್ಲೂ ವೈರಲ್ ಆಗಿತ್ತು. ಅಲ್ಲಿನ ‘ಫೀಡ್ ಮಿ‘ ಎಂಬ ವೆಬ್ ಸೈಟಿನಲ್ಲಿ 2019ರ ಮೇ 1ರಂದು ಪ್ರಕಟವಾದ ವರದಿ ಪ್ರಕಾರ, ವಿಡಿಯೋ ಮೂಲವು ಇನ್ನೂ ರಹಸ್ಯವಾಗಿದೆ.

ವಿಡಿಯೋ ಮೂಲ ಇನ್ನೂ ತಿಳಿಯದಿದ್ದರೂ, ಒಂದಂತೂ ಸ್ಪಷ್ಟವಾಗಿದೆ. ಇದು ಭಾರತದಲ್ಲಿ ಕೊರೋನಾ ವೈರಸ್ ಹರಡಲು ಉಗುಳುತ್ತಿರುವುದು ಅಲ್ಲ. ವಿಡಿಯೋದಲ್ಲಿ ತೋರಿಸಲಾಗಿರುವ ವ್ಯಕ್ತಿಯು ಆಹಾರವನ್ನು ಪ್ಯಾಕ್ ಮಾಡುತ್ತಿರುವ ಶೈಲಿ ಅಸಹ್ಯಕರವಾಗಿದ್ದರೂ, ಇದನ್ನು ಒಂದು ನಿರ್ದಿಷ್ಟ ಸಮುದಾಯದ ಮೇಲೆ ಅರೋಪ ಹೊರಿಸಲು ಉಪಯೋಗಿಸುತ್ತಿರುವುದು ಐಟಿ ಸೆಲ್ ಕಾಲಾಳುಗಳ ನೈತಿಕತೆಯನ್ನು ಎತ್ತಿ ತೋರಿಸುತ್ತಿದೆ.

ಈ ರೀತಿಯ ವಿಕೃತ ಸಂದೇಶಗಳು ಕೊರೋನಾ ವೈರಸ್ ತಡೆಗಟ್ಟುವಲ್ಲಿ ಸರಕಾರದ ವಿಫಲತೆಯನ್ನು ಮುಚ್ಚುವ ದೊಡ್ಡ ಯೋಜನೆಯ ಭಾಗವಾಗಿದೆ. ಅದಲ್ಲದೆ, ಮುಸ್ಲಿಮರನ್ನು ಆರ್ಥಿಕವಾಗಿ ಬಹಿಷ್ಕರಿಸಬೇಕೆಂದು ಕರೆ ನೀಡುವವರೂ ಈ ವೀಡಿಯೋ ಹಾಗೂ ಅದರ ಜೊತೆ ಸುಳ್ಳು ಸಂದೇಶಗಳನ್ನು ಹರಡುವ ಮೂಲಕ ತಮ್ಮ ತೀಟೆ ತೀರಿಸಿಕೊಳ್ಳುತ್ತಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group