ನಿಮ್ಮ ಬರಹ

ಕೊರೋನಾ ವೈರಸ್ ಮುಸ್ಲಿಮರಿಂದ?

ಮನುಕುಲದ ಅತ್ಯಂತ ಕರಾಳ ಕಾಲಘಟ್ಟದ ಮನಕಲಕುವ ಸಂದಿಗ್ಧ ಪರಿಸ್ಥಿತಿಯಲ್ಲಿ ನಡುಮನೆಯಲ್ಲಿ ಬೆತ್ತಲಾದ ಗೋದಿ ಮಾಧ್ಯಮಗಳು”

ವರದಿಗಾರ (ಎ.01): ಇಡೀ ಜಗತ್ತಿಗೆ ಮಹಾಮಾರಿ ಕೊರೋನ ಸೋಂಕಿನ ಮೂಲ ಚೀನಾವಾದರೆ, ನಮ್ಮ ದೇಶದ ಅಂಧ ಮಾಧ್ಯಮಗಳಿಗೆ ಕೊರೋನಾ ಕಾಯಿಲೆಯ ಮೂಲ ದೆಹಲಿಯ ನಿಜ಼ಾಮುದ್ದೀನ್ ಮರ್ಕಜ಼್.!!!

ಮೊನ್ನೆ ಮೊನ್ನೆಯವರೆಗೆ ಭಾರತದ ಗೋದಿ ಮೀಡಿಯಾಗಳಿಗೆ ನಿತ್ಯದ ಹೊಟ್ಟೆ ನೋವಿನ ಸಮಸ್ಯೆಯ ಮೂಲವಾಗಿದ್ದ ಶಾಹೀನ್ ಬಾಗ್ ಹೋರಾಟ ಕೊರೋನಾ ಲಾಕ್ ಡೌನ್ ಹಿನ್ನೆಲೆ ಸ್ಥಗಿತವಾಗಿದೆ.ಈಗ ನಿಜ಼ಾಮುದ್ದೀನ್ ಮರ್ಕಜ಼್ ನ ಹೆಸರಲ್ಲಿ ಹೊಟ್ಟೆ ನೋವು ಮರುಕಳಿಸಿದೆ.

ದೆಹಲಿಯ ನಿ‍ಜ಼ಾಮುದ್ದೀನ್ ಮರ್ಕಜ಼್ ತಬ್ಲೀಘ್ ಜಮಾತ್ ಎಂಬ ನಾಮದೊಂದಿಗೆ ಇಸ್ಲಾಮಿನ ಪ್ರವಚನ,ತತ್ವ ಬೋಧನೆ ಮತ್ತು‌ ಧಾರ್ಮಿಕ ಯಾತ್ರೆ ಕೈಗೊಂಡು ದೇಶಾದ್ಯಂತ ಮುಸಲ್ಮಾನರಿಗೆ ಪ್ರವಚನ ನೀಡುವ ಕಾರ್ಯ ನಿರ್ವಹಿಸುತ್ತದೆ. ಈ ಸಂಘಟನೆಯ ಮೂಲಕ ಆಯೋಜನೆಯಾಗುವ ಎಲ್ಲ ಕಾರ್ಯಕ್ರಮಗಳು ಸಭೆಗಳು ಮತ್ತು ಸಮಾವೇಶಗಳು‌ ಸಂಬಂಧಪಟ್ಟ ಇಲಾಖೆಗಳ ಪೂರ್ವಾನುಮತಿಯೊಂದಿಗೆ ಜರಗುತ್ತವೆ ಹಾಗೂ ಎಲ್ಲಾ ‍ಚಟುವಟಿಕೆಗಳ ಮೇಲೆ ಗುಪ್ತಚರ ಇಲಾಖೆ , ಇಮಿಗ್ರೇಶನ್‌ ಮತ್ತು ಸ್ಥಳಿಯ ಪೊಲೀಸ್ ಇಲಾಖೆ ಕಡ್ಡಾಯ ನಿಗಾ ವಹಿಸಬೇಕಾಗುತ್ತದೆ. ಹಾಗೆಯೆ ನಿಜ಼ಾಮುದ್ದೀನ್ ಮರ್ಕಜ಼್ ಗೆ ನೂರಾರು ಸಂಖ್ಯೆಯಲ್ಲಿ ದೇಶ ವಿದೇಶಗಳಿಂದ ನಿತ್ಯ ಯಾತ್ರಿಕರು ಮತ್ತು ಭಕ್ತಾದಿಗಳು ಭಾಗವಹಿಸುತ್ತಾರೆ.

ಇಲ್ಲಿಗೆ ಬರುವ ವಿದೇಶಿ ಯಾತ್ರಿಗರು ನಿಯಮಗಳಂತೆ ವಿಸಾ, ಪಾಸ್ ಪೋರ್ಟ್, ಇಮಿಗ್ರೇಶನ್, ಭದ್ರತಾ ಸ್ಕ್ರೀನಿಂಗ್ ವಿಧಾನಗಳ ಮೂಲಕ ಅಗತ್ಯ ವಿಚಾರಣೆ ಮತ್ತು ತಪಾಸಣೆಗೆ ಒಳಪಟ್ಟಿ ಬಂದಿರುತ್ತಾರೆ. ಇವೆಲ್ಲದರ ಸಂಪೂರ್ಣ ಮಾಹಿತಿ ಮೇಲಿನ ಸಂಬಂಧಿಸಿದ ಇಲಾಖೆಯವರದ್ದಾಗಿದ್ದು ಇವರ ವೀಸಾ, ಪಾಸ್ಪೋರ್ಟ್ ಅವಧಿ ಹಾಗೂ ಭೇಟಿಯ ಉದ್ದೇಶ, ಇವರ ಮೇಲೆ ನಿಗಾ ವಹಿಸುವುದು ದೆಹಲಿ ಸರ್ಕಾರ ಮತ್ತು ಕೇಂದ್ರಸರ್ಕಾರದ ಜವಾಬ್ಧಾರಿಯಾಗಿರುತ್ತದೆ. ಅದರಲ್ಲೂ ಕೊರೋನಾ ಮಹಾಮಾರಿ ಸಂಬಂಧ ವಿಶ್ವದ ಅಭಿವೃದ್ಧಿ ದೇಶಗಳೆ ಆತಂಕಗೊಂಡು ಸೋಂಕು ಹರಡದಂತೆ ತಡೆಗಟ್ಟುವ ಮತ್ತು ನಿಯಂತ್ರಿಸುವ ನಿಟ್ಟಿನಲ್ಲಿ ಪರದಾಡುತ್ತಿರುವಾಗ, ತೀರಾ ಸುರಕ್ಷತೆಯಲ್ಲಿರುವ ಅದರಲ್ಲೂ ನಮ್ಮ ಪ್ರಸ್ತುತ ಕೇಂದ್ರ ಸರ್ಕಾರದ ಮಾದರಿ ಮತ್ತು ಸ್ಪೂರ್ತಿಯ ಸೆಲೆಯಾಗಿರುವ ಇಸ್ರೇಲ್ ಅಧ್ಯಕ್ಷ ಬೆಂಜಮೀನ್ ನೇತಾ, ಬ್ರಿಟನ್ ಪ್ರಧಾನಿ ಹಾಗೂ ಆಸ್ಟ್ರೇಲಿಯಾದ ಗೃಹ ಸಚಿವರು, ಬ್ರಿಟನ್ ರಾಜಕುಮಾರರಂತಹ ಗಣ್ಯಾತಿ ಗಣ್ಯರಿಗೆ ಈ ಸೋಂಕು ತಗುಲಿದ್ದು ಹಾಗಾದರೆ ಇವರೆಲ್ಲರು ಬೇಜವಬ್ಧಾರಿ ವ್ಯಕ್ತಿಗಳೆ??

ಇನ್ನು ಇವರ ಪಾಡೆ ಹೀಗಾದರೆ ೧೪೦ ಕೋಟಿ ಜನಸಂಖ್ಯೆಯುಳ್ಳ ನಮ್ಮ ದೇಶದಲ್ಲಿ ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ನಾವು ಎಡವಿದ್ದೆಲ್ಲಿ ಎಂಬುದನ್ನು ಸರ್ಕಾರ ಆತ್ಮವಲೋಕನ ಮಾಡಿಕೊಳ್ಳಬೇಕಿದೆ. ಈ ಅವಧಿಯಲ್ಲಿ ಪದೇ ಪದೇ WHO ಎಲ್ಲಾ ರಾಷ್ಟ್ರಗಳಿಗೆ ಎಚ್ಚರಿಕೆ ನೀಡುತ್ತಿದ್ದರು ಮತ್ತು ನಮ್ಮ ದೇಶದ ಅತಿದೊಡ್ಡ ರಾಜಕೀಯ ವಿರೋಧ ಪಕ್ಷದ ಸಂಸದರಾದ ರಾಹುಲ್ ಗಾಂಧಿ ಫ಼ೆಬ್ರವರಿ ೧೨ ರಂದೆ ಟ್ವೀಟ್ ಮಾಡಿ ಸರ್ಕಾರಕ್ಜೆ ಎಚ್ಚರಿಕೆ ಮತ್ತು ಒತ್ತಡ ಹಾಕಿದ್ದಾರೆ. ಆದರೆ ಸರ್ಕಾರ ಆ ಸಮಯದಲ್ಲಿ ‘ನಮಸ್ತೆ ಟ್ರಂಪ್’ ಎಂಬ ಅಮೇರಿಕಾ ಅಧ್ಯಕ್ಷ ಚುನಾವಣೆಯ ಪೂರ್ವ ತಯಾರಿ ಕಾರ್ಯಕ್ರಮವನ್ನು ಭಾರತದಲ್ಲಿ ಆಯೋಜನೆ ಮಾಡಿ WHO ಎಚ್ಚರಿಕೆ ಮತ್ತು ವಿರೋಧ ಪಕ್ಷಗಳ ಒತ್ತಾಯವನ್ನು ನಿರ್ಲಕ್ಷ್ಯ ಮಾಡಿತು.

ಈ ಭಿಕಾರಿ ಭಿಕರಿ ಮಾಧ್ಯಮಗಳು ಕಳೆದ ಎರಡು ದಿನಗಳಿಂದ ಬೊಬ್ಬೆ ಹಾಕಿ ಕಿರುಚಾಡುತ್ತಿರುವಂತೆ ಆ ಸಮಯದಲ್ಲಾದರು ಕೊರೋನಾ ಸಂಬಂಧ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಕೇಂದ್ರಸರ್ಕಾರದ ಮೇಲೆ ಒತ್ತಡ ಹಾಕಿ ಕಳೆದ ಎರಡು ತಿಂಗಳಿಂದ ಬಂದ ಎಲ್ಲಾ ವಿದೇಶಿಯರು ಮತ್ತು ಭಾರತೀಯರನ್ನು ವಿಮಾನ ನಿಲ್ದಾಣಗಳಲ್ಲಿಯೆ ಸೂಕ್ತ ವೈದ್ಯಕೀಯ ತಪಾಸಣೆಗೊಳಪಡಿಸಿ ಸೋಂಕಿದ್ದವರನ್ನು ಪ್ರತ್ಯೇಕಿಸಿ ಚಿಕಿತ್ಸೆ ನೀಡಿ ಎಂದು ಹೇಳಿ ಪರ್ಯಾಯ ಕ್ವಾರಂಟೈನ್ ವ್ಯವಸ್ಥೆ ಮಾಡಿಸಿ, ಒಂದು ತಿಂಗಳು ಮುಂಚೆಯೆ ಎಲ್ಲಾ ಅಂತರ್ರಾಷ್ಟ್ರೀಯ ವಿಮಾನ ಹಾರಾಟ ಸ್ಥಗಿತಗೊಳಿಸುವಂತೆ ಕೇಂದ್ರ ಸರ್ಕಾರದ ಮೇಲೆ ದಬಾವ್ ಹಾಕಿ ತಮ್ಮ ಕಾಳಜಿ, ವೃತ್ತಿಪರತೆ, ಜರ್ನಲಿಜ಼ಮ್ ಎತಿಕ್, ಆಕ್ರೋಶ, ಅಸಮಾಧಾನವನು ತೋರಿದ್ದರೆ ಬಹುಶಃ ಇಂದು ಇಡೀ ದೇಶವನ್ನೆ ಲಾಕ್ ಡೌನ್ ಮಾಡುವ ಪರಿಸ್ಥಿತಿ ಬರುತ್ತಿರಲಿಲ್ಲವೇನೋ….

ಸೋಂಕಿರುವವರನ್ನು ವಿಮಾನಗಳನ್ನು ಕಳುಹಿಸಿ ಸುರಕ್ಷಿತವಾಗಿ ದೇಶದೊಳಗೆ ಕೂಡಿಕೊಂಡು, ಸೋಂಕಿಲ್ಲದ ಬಡವರಿಗೆ ತಮ್ಮ ಮನೆಗಳಿಗೆ ತಲುಪಲು ಲಾರಿ ಟ್ರಕ್ಕುಗಳ ವ್ಯವಸ್ಥೆಯನ್ನು ಮಾಡದೆ ಕಾಲ್ನಡಿಗೆಯಲ್ಲಿ ಪರದಾಡುವಂತೆ ಹೊರಡುವಂತೆ ಮಾಡಿ ಕೋಟೆ ಕೊಳ್ಳೆ ಹೊಡೆದ ಮೇಲೆ ಊರು ಬಾಗಿಲು ಹಾಕಿದ ಕೀರ್ತಿ ಕೇಂದ್ರ ಸರ್ಕಾರಕ್ಕೆ ಸಲ್ಲುತ್ತದೆ;

ಇನ್ನು ನಿಜ಼ಾಮುದ್ದೀನ್ ನಲ್ಲಿ ಸಭೆ ನಡೆದಾಗ ಲಾಕ್ ಡೌನ್ ಘೋಷಣೆಯಾಗಿರಲಿಲ್ಲ. ಮಾರ್ಚ್ ೧೩ರಂದು ನಮ್ಮ ಆರೋಗ್ಯ ಮಂತ್ರಾಲಯ ‘ಕೊರೋನಾ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ’ ಎಂಬ ಸುತ್ತೋಲೆ ಹೊರಡಿಸಿತ್ತು ಮಾರ್ಚ್ ೧೯ ನೇ ತಾರೀಖಿನಂದು ಮೊದಲ ಬಾರಿಗೆ ದೇಶದ ಪ್ರಧಾನಿ ‘ಸಾಮಾಜಿಕ ಅಂತರದ’ ಬಗ್ಗೆ ಮಾತಾಡಿರುತ್ತಾರೆ.
ಮಾರ್ಚ್ ೨೧ನೇ ತಾರೀಖಿನವರೆಗು ದೇಶದಾದ್ಯಂತ ಜನಜೀವನ ಮತ್ತು ಸಂಚಾರ ವ್ಯವಸ್ಥೆ ಸಹಜವಾಗಿಯೆ ಇತ್ತು.
ಅಂದು ನಾನು ಮೈಸೂರಿನಿಂದ ಬೆಂಗಳೂರಿಗೆ ಪ್ರಯಾಣಿಸಿದ ಚಾಮುಂಡಿ ಟ್ರೈನಿನಲ್ಲೆ ಸರಿ ಸುಮಾರು ಎರಡರಿಂದ ಮೂರು ಸಾವಿರ ಜನ ಇದ್ದಿರಬಹುದು;
ಮಾರ್ಚ್ ೧೩ರಿಂದ ಹಿಡಿದು ನೆನ್ನೆಯವರೆಗು ನಡೆದ ವಿದ್ಯಮಾನಗಳನ್ನು ಮತ್ತು ಪ್ರಮುಖವಾಗಿ ಜನ ಜಮಾವಣೆಗಳ ಮಹಿತಿ ದಿನಾಂಕದೊಟ್ಟಿಗೆ ಇಲ್ಲಿದೆ:

 1. ಮಾರ್ಚ್ 13, 2020 – ಆರೋಗ್ಯ ಸಚಿವಾಲಯ ಘೋಷಣೆ ಮಾಡುತ್ತದೆ “ಕರೋನ ವೈರಸ್ ಮೆಡಿಕಲ್ ಎಮರ್ಜೆನ್ಸಿ ಅಲ್ಲ‌” ಎಂದು.
 2. ಮಾರ್ಚ್ 13, 2020 – 3000ಕ್ಕು ಅಧಿಕ ಮುಸ್ಲಿಮರು ಜಮಾಅತ್ ಪ್ರಧಾನ ಕಚೇರಿ ಮರ್ಕಜ಼್ ನಿಜಾಮುದ್ದೀನ್‌ನಲ್ಲಿ ಸಭೆ ಸೇರುತ್ತಾರೆ, ಇದು ಸಮ್ಮೇಳನದ ಆರಂಭವನ್ನು ಸೂಚಿಸುತ್ತದೆ.
 3. ಮಾರ್ಚ್ 15, 2020 – ಜಮಾತ್ ಪ್ರಧಾನ ಕಚೇರಿಯಲ್ಲಿ ನಡೆದ ಸಮ್ಮೇಳನ ಮುಕ್ತಾಯವಾಗುತ್ತದೆ.
 4. ಮಾರ್ಚ್ 16, 2020 –ಹಿಂದೂ ಮಹಾಸಭಾ ದೆಹಲಿ ಸೇರಿದಂತೆ ಭಾರತದಾದ್ಯಂತ
  ಕೊರೋನ ವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಗೋ ಮೂತ್ರ ಸೇವನ ಕಾರ್ಯಕ್ರಮವನ್ನು ನಡೆಸಿತು.
 5. ಮಾರ್ಚ್ 16, 2020 – ದೆಹಲಿಯ ಎಲ್ಲಾ ಧಾರ್ಮಿಕ ಸ್ಥಳಗಳನ್ನು ಮುಚ್ಚಲು ದೆಹಲಿ ಸರ್ಕಾರ ಆದೇಶಿಸಿತು.
 6. ಮಾರ್ಚ್ 17, 2020 – ತಿರುಪತಿಯಲ್ಲಿ ಸಾವಿರಾರು ಭಕ್ತರು ಸೇರಿದ್ದರು.
 7. ಮಾರ್ಚ್ 18, 2020 – ತಿರುಪತಿಯಲ್ಲಿ ಇನ್ನೂ 40,000 ಭಕ್ತರಿದ್ದಾರೆ ಎಂದು ಮಾಧ್ಯಮದಲ್ಲಿ ವರದಿಯಾಯಿತು.
 8. ಮಾರ್ಚ್ 19, 2020 – ಪ್ರಧಾನಮಂತ್ರಿ ಮೋದಿರವರು ಮಾರ್ಚ್ 22 ರಂದು ಜನತಾ ಕರ್ಫ್ಯೂ ಮಾಡಬೇಕೆಂದು ಘೋಷಿಸಿದರು.
  ಕೊರೊನ್ ವೈರಸ್ ವಿರುದ್ಧ ಹೋರಾಡುವಲ್ಲಿ ಮುಂಚೂಣಿಯಲ್ಲಿರುವ ಆರೋಗ್ಯ ಕಾರ್ಯಕರ್ತರು ಮತ್ತು ಇತರರಿಗೆ ಚಪ್ಪಾಳೆ ತಟ್ಟುವ ಮೂಲಕ ಅಭಿಮಾನ ಮತ್ತು ಪ್ರಶಂಸೆಯನ್ನು ಪ್ರದರ್ಶಿಸಬೇಕೆಂದು ಕರೆ ನೀಡಿದರು.
  ಒಂದು ದಿನದ ಕರ್ಫ್ಯೂಗಾಗಿ ಪ್ರಧಾನಮಂತ್ರಿಗಳು ಮೂರು ದಿನದ ಕಾಲಾವಕಾಶ ನೀಡಿದರು.
 9. ಮಾರ್ಚ್ 22, 2020 – ಜನತಾ ಕರ್ಫ್ಯೂ ಆಚರಿಸಲಾಯಿತು.
  ಪ್ರಧಾನಮಂತ್ರಿಯವರ ಕೋರಿಕೆ ಮತ್ತು ಆಸೆಯಂತೆ ಜನರು ಆರೋಗ್ಯ ಕಾರ್ಯಕರ್ತರನ್ನು ಶ್ಲಾಘಿಸುತ್ತಾ ದೇಶಾದ್ಯಂತ ಲಕ್ಷಾಂತರ ಜನರು ಬೀದಿಗಿಳಿದರು.
  ಅಂದೇ ನಿಜಾಮುದ್ದೀನ್ ಮ್ಯಾನೇಜ್ಮೆಂಟ್ ದೈನಂದಿನ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿತು.
  ಎಲ್ಲಾ ಚಲನವಲನಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಿತು.
  ದೆಹಲಿಯ ಮುಖ್ಯಮಂತ್ರಿಗಳಾದ ಕೇಜ್ರಿವಾಲ್ ಅವರು ಮಾರ್ಚ್ 23 ಬೆಳಿಗ್ಗೆ 6 ಗಂಟೆಯಿಂದಲೆ ದೆಹಲಿ ಸಂಪೂರ್ಣ ಲಾಕ್ ಡೌನ್ ಆಗಲಿದೆಯೆಂದು ಘೋಷಿಸಿದರು.
  ಕಾರ್ಯಕ್ರಮಕ್ಕೆ ಬಂದಿದ್ದ ಪ್ರತಿನಿಧಿಗಳು ನಿಜಾಮುದ್ದೀನ್ ಪ್ರಧಾನ ಕಚೇರಿಯೊಳಗೆ ಸಿಲುಕಿಕೊಂಡರು.
 10. ಮಾರ್ಚ್ 23, 2020 – ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರ ಪ್ರಮಾಣವಚನ ಸ್ವೀಕರಿಸಿತು. ಬೃಹತ್ ಮಟ್ಟದಲ್ಲಿ ರಸ್ತೆ ಬದಿಯಲ್ಲಿ ಸಂಭ್ರಮಾ‍ಚರಣೆಗಳು ನಡೆದದ್ದು ಕೂಡ ಮಾಧ್ಯಮದಲ್ಲಿ ವರದಿಯಾಯಿತು.
 11. ಮಾರ್ಚ್ 24, 2020 – ಪಿಎಂ ಮೋದಿ ದೇಶಾದ್ಯಂತ ಲಾಕ್ ಡೌನ್ ಘೋಷಿಸಿದರು.
  135 ಕೋಟಿ ಜನರ ಇಡೀ ದೇಶವನ್ನು ಮುಚ್ಚಲು ನಾಲ್ಕು ಗಂಟೆಗಳ ನೋಟಿಸ್ ನೀಡಿದರು.!
 12. ಮಾರ್ಚ್ 25, 2020 – ರಾಮ್ ಲಲ್ಲಾ ವಿಗ್ರಹವನ್ನು ತಾತ್ಕಾಲಿಕ ಆಲಯಕ್ಕೆ ಸ್ಥಳಾಂತರಿಸಲು ಪುಣ್ಯಕ್ಷೇತ್ರ ರಾಮ ಜನ್ಮಭೂಮಿ ಆವರಣದಲ್ಲಿ ಮುಂಜಾನೆಯ ಪೂಜೆಯಲ್ಲಿ ಯೋಗಿ ಆದಿತ್ಯನಾಥ್ ಬೃಹತ್ ಸಮಾರಂಭದಲ್ಲಿ ಭಾಗವಹಿಸಿದರು.
 13. 13. ಮಾರ್ಚ್ 28,2020 – ದೆಹಲಿ ಮತ್ತು ಉತ್ತರ ಪ್ರದೇಶದ ಗಡಿಯಲ್ಲಿ ತಮ್ಮ ತಮ್ಮ ತವರು ಸೇರಲು ಜಮಾವಣೆಗೊಂಡಿದ್ದ ಜನರನ್ನು ಪೊಲೀಸರು ಎರಡು ಬದಿಯಲ್ಲು ತಡೆಗಟ್ಟಿದ್ದ ದೃಶ್ಯ ಭಾರತ ಪಾಕಿಸ್ತಾನ ವಿಭಜನೆಯ ಚಿತ್ರಣವನ್ನು ನೆನಪಿಸುವಂತಿತ್ತು ಎಂದು ಮಾಧ್ಯಮಗಳೆ ವರದಿ ಮಾಡಿವೆ.
 14. ಮಾರ್ಚ್ 30, 2020 – ಮಾರ್ಚ್ 13 ರಿಂದ ಮಾರ್ಚ್ 15 ರ ನಡುವೆ ತಬಲೀಖ್ ಜಮಾತ್ ಸಮ್ಮೇಳನಕ್ಕೆ ಹಾಜರಾಗಿದ್ದ 6 ಯಾತ್ರಿಗಳು ಮೃತಪಟ್ಟಿದ್ದಾರೆ ಎಂಬ ಸುದ್ದಿ ಹೊರಬಿದ್ದಿತು.
 15. ಮಾರ್ಚ್ 30, 2020 – ನಿಜಾಮುದ್ದೀನ್ ಮ್ಯಾನೇಜ್ಮೆಂಟ್ ವಿರುದ್ಧ ಕೇಜ್ರಿವಾಲ್ ಎಫ್ಐಆರ್ ಮಾಡಲು ಆದೇಶಿಸುತ್ತಾರೆ.
 16. ಮಾರ್ಚ್ 31, 2020 – ಬಿಜೆಪಿ ಐಟಿ ಸೆಲ್, ಮುಖ್ಯವಾಹಿನಿಯ ಮಾಧ್ಯಮಗಳು ಹಜಾರದ ಎರಡೂ ಬದಿಗಳಲ್ಲಿ ಅವಕಾಶವಾದಿಗಳು ಮುಸ್ಲಿಮ್ ಸಮುದಾಯವನ್ನು,ತಬ್ಲೀಖ್ ಜಮಾಅತ್, ನಿಜಾಮುದ್ದೀನ್ ಮತ್ತು ಇತರರನ್ನು ಬಗ್ಗು ಬಡಿಯಲು ಟೀಕಾ ಪ್ರಹಾರ ಶುರುಮಾಡುತ್ತಾರೆ.
  ಆಂಗಲ್ ಟೂ ಆಂಗಲ್ ನಿಜ಼ಾಮುದ್ದೀನ್ ದರ್ಗಾದ ವಿಷ್ಯುವಲ್ಸ್,ಟೋಪಿ ಗಡ್ಡದವರ ವೀಡಿಯೋ ಫ಼ೂಟೇಜ್,ಮುಸಲ್ಮಾನರ ಏರಿಯಾಗಳ ವೀಡಿಯೋವನ್ನು ತೋರಿಸುತ್ತ ನಿಜ಼ಾಮುದ್ದೀನ್ ಒಳಗಿದ್ದವರನ್ನು ಭಯೋತ್ಪಾದಕರಂತೆ ಬಿಂಬಿಸುತ್ತೆ.

ನೆನ್ನೆಯಿಂದ ಭಾರತದ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ದೃಶ್ಯಗಳನ್ನೇನಾದರು ಚೀನಾ ಗಮನಿಸಿದರೆ ಕೊರೋನಾ ಖಾಯಿಲೆಯ ಮೂಲ ಚೀನಾದ ವೂಹಾನ್ ಬದಲು ಭಾರತದ ನಿಜ಼ಾಮುದ್ದೀನ್ ಎಂದು ಬಿಂಬಿಸಿ ಜಗತ್ತಿನಾದ್ಯಂತ ತನ್ನ ವಿರುದ್ಧ ಆಗುತ್ತಿರುವ ಟೀಕೆಗಳಿಂದ ಪಲಾಯನ ಮಾಡಿ ಭಾರತದ ನಿಜ಼ಾಮುದ್ದೀನ್ ಮೇಲೆ ಗೂಬೆ ಕೂರಿಸಿ ಭಾರತವೆ ಕೊರೋನಾದ ಮೂಲ ಎಂದು ವಿಶ್ವಕ್ಕೆ ಹೇಳಿ ತಾನು ಬಚಾವಾಗಬಹುದು.

ಇದರ ನಡುವೆ ಬಡವರು,ಅವತ್ತಿನ ಅನ್ನ ಅವತ್ತೆ ದುಡಿದು ತಿನ್ನುವವರು ಸಾವು ಮತ್ತು ಬದುಕಿನ ನಡುವೆ ಸಿಲುಕಿಕೊಂಡಿದ್ದಾರೆ. ತಮ್ಮ ಹಳ್ಳಿಗಳಿಗೆ ಅನಂತವಾಗಿ ಮೆರವಣಿಗೆ ಮುಂದುವರೆಸುತ್ತಾರೆ ಮತ್ತು ಮಧ್ಯಂತರವಾಗಿ ಸಾಯುತ್ತಾರೆ. ರಸ್ತೆ ನಡುವಿನಲ್ಲಿ ಮೂರು ವರ್ಷದ ಮಗುವೊಂದು ಅನ್ನದ ಪಾಕೆಟು ಕಂಡ ತಕ್ಷಣ ಸ್ವರ್ಗವೆ ಸಿಕ್ಕಂತೆ ಕುಣಿಯುತ್ತದೆ.  ಮತ್ತೆಲ್ಲೋ ಎರಡು ಕಂದಮ್ಮಗಳು ಇನ್ನು ನಡೆಯಲು ನಮ್ಮಿಂದ ಸಾಧ್ಯವಿಲ್ಲ ಅಮ್ಮ ಎಂದು ತಾಯಿಯ ಕಾಲು ಹಿಡಿದು ಅಂಗಲಾಚುತ್ತವೆ. ಹದಿನಾರರ‌ ಆಸುಪಾಸಿನ ಹುಡುಗಿಯೊಬ್ಬಳು ತನ್ನವರ ಅನ್ನಕ್ಕಾಗಿ ದುಡಿಯುವವಳು ನಾನೊಬ್ಬಳೆ ಈಗ ದುಡಿಮೆಯೆ ಇಲ್ಲ ನನ್ನ ಮನೆಯವರಿಗೆ ಹೇಗೆ ಮುಖ ತೋರಿಸಲಿ,ಏನನ್ನು ತಿನ್ನಿಸಲಿ ಎಂದು ಮಾಧ್ಯಮಗಳ ಮುಂದೆ ಗೋಳಿಡುತ್ತಿದ್ದಾಳೆ. ಇನ್ನೆಲ್ಲೋ ಕೈಗಾರಿಕೆಗಳಲ್ಲಿ ಬಳಸುವ ಕೀಟನಾಶಕಗಳಿಂದ ಬಡವರ ಮೈ‌‌ತೊಳೆಯಲ್ಪಡುತ್ತದೆ.
ಎಲ್ಲೋ ಪೊಲೀಸರಿಂದ ಹೊಡೆತಗಳು ಬೀಳುತ್ತಿವೆ. ಈ ಸಂಕಷ್ಟದ ಪರಿಸ್ಥಿತಿಯಲ್ಲು ಮಾಧ್ಯಮಗಳ ಪ್ರಸಾರದಿಂದ ನಿರ್ಧಿಷ್ಟ ಸಮುದಾಯದವರಿಂದ ಕೊರೋನಾ ಹರಡಿದೆಯೆಂಬ ಪೂರ್ವಗ್ರಹ ಮತ್ತು ನಕಾರಾತ್ಮಕತೆಯನ್ನು ಬಿಂಬಿಸಿ ಈಗಾಗಲೆ ಸಾಮಾಜಿಕ ಜಾಲತಾಣಗಳಲ್ಲಿ ಅನವಶ್ಯಕ ಮತ್ತು ವಿಕೃತ ಚರ್ಚೆಗಳು ಹುಟ್ಟುಕೊಂಡಿದ್ದು ಜಾಗತೀಕ ಮಹಾಮಾರಿ ಕೊರೋನಾಗೆ ಧರ್ಮ, ಜಾತಿ,ರಾಜಕೀಯ ಬಣ್ಣವನ್ನು ಲೇಪಿಸುವ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ.

ನಿಜ಼ಾಮುದ್ದೀನ್ ಮರ್ಕಜ಼್ ಒಳಗಿದ್ದ ೧,೫೦೦ ಜನರ ಬಗ್ಗೆ ನಿಜ಼ಾಮುದ್ದೀನ್ ಆಡಳಿತ ಮಂಡಳಿ ದೆಹಲಿ ಪೊಲೀಸರ ಗಮನಕ್ಕೆ ತಂದಿದ್ದರು ಕೂಡ ಆ ಜನರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ತಮ್ಮ ತಮ್ಮ ಊರುಗಳಿಗೆ ತಲುಪಿಸುವ ವ್ಯವಸ್ಥೆಯನ್ನು ಸರ್ಕಾರವೆ ಮಾಡಬೇಕಿತ್ತು ,ಒಂದು ವೇಳೆ ನಿಯಮ ಮೀರಿ ಉಳಿದುಕೊಂಡಿದ್ದರೆ ಅವರುಗಳನ್ನು ಒತ್ತಾಯಪೂರ್ವಕವಾಗಿಯಾದರು ಸರಿಯೆ ಬೇರೊಂದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಬೇಕಾಗಿತ್ತು. ಇವೆಲ್ಲವು ಸಾಧ್ಯವಾಗದಿದ್ದಲ್ಲಿ ಅಂದೆ ಇದನ್ನು ಮುನ್ನೆಲೆಯ ಚರ್ಚೆಗೆ ಒಡ್ಡಬೇಕಿತ್ತು.ಭವಿಷ್ಯದಲ್ಲಿ ಜನ ಸಾಮಾನ್ಯರ ಆಕ್ರೋಷಕ್ಕೆ,ಅಸಮಾಧಾನಕ್ಕೆ ಗುರಿಯಾಗಬೇಕಾಗುತ್ತದೆಂದೋ,ಕೊರೋನಾ ನಿಯಂತ್ರಣದ ವೈಫಲ್ಯತೆ ಸರ್ಕಾರ ಹೊರಬೇಕಾಗುತ್ತದೆಂದೊ ಇಡೀ ಜಗತ್ತಿಗೆ ಸವಾಲಾಗಿರುವ ಮಹಾಮಾರಿ ವೈರಸ್ಸಿನ ಹರಡುವಿಕೆಗೆ ಒಂದು ಸಮುದಾಯದ ಧಾರ್ಮಿಕ ಗುಂಪಿನ ಸಂಚಾರವೆ ಕಾರಣವೆಂದು ಬಿಂಬಿಸಲಾಗುತ್ತಿದೆ.

ಮಾಧ್ಯಮಗಳಿಗೆ ಪತ್ರಿಕೋದ್ಯಮದ ವೃತ್ತಿಧರ್ಮ, ನೈತಿಕತೆ ,ಗಟ್ಟಿತನದ ನಿಲುವುಗಳು ಬಾಕಿ ಉಳಿದಿದ್ದರೆ ನಿಜ಼ಾಮುದ್ದೀನ್ ಪ್ರಕರಣದಲ್ಲಿ ಆಡಳಿತದ ವೈಫಲ್ಯವನ್ನು ,ಇಲಾಖೆಗಳ ವೈಫಲ್ಯವನ್ನು, ಸರ್ಕಾರದ ನಿರ್ಲಕ್ಷ್ಯದ ಬಗ್ಗೆ ಪ್ರಶಿಸಲಿ, ಟೀಕೆ ಮಾಡಲಿ, ಚರ್ಚೆ ಮಾಡಲಿ ಅದನ್ನು ಹೊರತು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡುವುದು ಎಷ್ಟರಮಟ್ಟಿಗೆ ಸರಿ ಎಂಬುದನ್ನು ತಮ್ಮನ್ನು ತಾವೆ ಆತ್ಮಾವಲೋಕನ ಮಾಡಿಕೊಳ್ಳಲಿ.

ಮಾಧ್ಯಮದವರು ಮಾಡಲೇಬೇಕಾದ ವೃತ್ತಿ ಧರ್ಮದ ಕೆಲಸವೆಂದರೆ, ಕೊರೋನಾ ದೆಹಲಿಯಿಂದ ದೇಶದಾದ್ಯಂತ ಹೇಗೆ ಹಬ್ಬಿತು ಎಂಬುವುದರ ಚರ್ಚೆಯ ಬದಲಾಗಿ ದೆಹಲಿಗೆ ಕೊರೋನಾ ಹೇಗೆ ಬಂತು?
ಕೇಂದ್ರ ಸರ್ಕಾರ ಯಾಕೆ ಬೇಗ ಮುನ್ನೆಚ್ಚೆತ್ತುಕೊಳ್ಳಲ್ಲಿಲ್ಲ?
ಏಕಾಏಕಿ ಲಾಕ್ ಡೌನ್ ನಿಂದ ಆಗಿರುವ ಸಮಸ್ಯೆಗಳೇನು?
ಜನ ಸಾಮಾನ್ಯರು ನಿತ್ಯ ಎದುರಿಸುತ್ತಿರುವ ಬವಣೆಗಳೇನು?
ಸರ್ಕಾರ ಕೊರೋನಾ ತಡೆಗಟ್ಟುವಲ್ಲಿ ವೈದ್ಯಕೀಯ ವ್ಯವಸ್ಥೆ ಮತ್ತು ಉಪಕರಣ ವ್ಯವಸ್ಥೆಯಲ್ಲು ಸರಿಯಾದ ರೀತಿಯಲ್ಲಿ ಮಾಡಿದೆಯೆ?
ಕೊರೋನಾಗೆ ಮದ್ದು ಕಂಡುಹಿಡಿಯಲು ನಡೆಯುತ್ತಿರುವ ಸಂಶೋಧನೆಗಳೇನು?
ಈ ಸಂಧಿಗ್ದ್ನ ಪರಿಸ್ಥಿತಿಯಲ್ಲಿ ಜನಸಮುದಾಯ ಸರ್ಕಾರದೊಂದಿಗೆ ಹೇಗೆ ಸಹಭಾಗಿತ್ವ ತೋರಬೇಕು.
ಜನಪ್ರತಿನಿಧಿಗಳು ಹೇಗೆ ಜವಬ್ಧಾರಿಯುತವಾಗಿ ವರ್ತಿಸಬೇಕು.
ಸೋಂಕಿತರ ಖಾಸಗಿತನವನ್ನು ಹೇಗೆ ಕಾಪಾಡಬೇಕು.
ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬುವುದು ಹೇಗೆ.
ಇದರ ಬಗೆಗೆ ಜಾಗೃತಿ,ಅಭಿಯಾನ,‍ಚರ್ಚೆಗಳನ್ನು ಹುಟ್ಟುಹಾಕಲಿ ವಿಶ್ವವ್ಯಾಪಿಯಾಗಿರುವ ಖಾಯಿಲೆಗೆ ಕೂಡ ಧರ್ಮವೆ ಕಾರಣ,ಜಾತಿಯೆ ಮದ್ದು ಎಂದು ಬಿಂಬಿಸುವ ಅನಾಗರೀಕ ಪ್ರಯತ್ನ ಕೊನೆಗೊಳ್ಳಲಿ.

ಲೇಖನ:ನಜ್ಮಾ ನಜೀರ್ ಚಿಕ್ಕನೇರಳೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group