ನಿಮ್ಮ ಬರಹ

ಕೊರೋನ ಮತ್ತು ಫ್ಯಾಸಿಸಂ: ಮಾನವನ ಸಯಾಮಿ ಶತ್ರುಗಳು

ವರದಿಗಾರ (ಮಾ.31): ಕೊರೋನ ವೈರಸ್ ನ ಬಗ್ಗೆ ವೈದ್ಯಶಾಸ್ತ್ರವು ಆಳವಾದ ಅಧ್ಯಯನ ನಡೆಸಿ ನೀಡುತ್ತಿರುವ ಮಾಹಿತಿ, ಜಾಗೃತಿ ಮತ್ತು ಪ್ರತಿರೋಧಿಸುವ ವಿಧಾನಗಳನ್ನು ಸಮಾಜದಲ್ಲಿ ಪ್ರಾಯೋಗಿಕಗೊಳಿಸಿದರೆ ಕೊರೋನ ಮಾತ್ರವಲ್ಲ; ಬರಲಿರುವ ಇನ್ನಷ್ಟು ಅಪಾಯಕಾರಿ ಸನ್ನಿವೇಶಗಳನ್ನೂ ತಡೆಗಟ್ಟಬಹುದು. ಜಾಗತಿಕ ಭೀತಿಯನ್ನು ಹರಡಿರುವ ಮತ್ತು ಮನಃಶಾಂತಿಯನ್ನು ಕೆಡಿಸಿರುವ ಕೊರೋನದ ಬಗೆಗಿನ ವೈಜ್ಞಾನಿಕ ಮಾಹಿತಿಗಳನ್ನು ಒಮ್ಮೆ ಗಮನಿಸೋಣ.
1. ಕೊರೋನ ಎಂಬುದು ವೈರಸ್ ಗಳ ಪರಿವಾರಕ್ಕೆ ಸೇರಿದ ಒಂದು ಸುಪ್ತಕ್ರಿಮಿ. ಅಂದರೆ ಬರಿ ಕಣ್ಣಿಗೆ ಕಾಣದ ರೋಗಾಣು.
2. ಕೊರೋನ ವೈರಸ್ ಮನುಷ್ಯನ ಮೇಲೆ ಆಕ್ರಮಣ ಮಾಡಿದೆ ಎಂಬುದನ್ನು ಅರಿಯುವುದು ಅದರ ರೋಗ ಲಕ್ಷಣದ ಮೂಲಕ.
3. ಇದು ನಮಗೆ ಅರಿವಿಲ್ಲದಂತೆ ವ್ಯಾಪಿಸುತ್ತಲೇ ಇರುತ್ತದೆ.
4. ಕೊರೋನದ ಬಗ್ಗೆ ಚೆನ್ನಾಗಿ ಅರಿವು ಹೊಂದಿರುವುದು, ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದು ಇದಕ್ಕಿರುವ ಪರಿಹಾರ.
5. ಕೊರೋನ ವೈರಸ್ ತನ್ನನ್ನು ಆಕ್ರಮಿಸಿಕೊಂಡಿದೆ ಎಂಬುದನ್ನು ಸ್ವತಹ ವ್ಯಕ್ತಿಯ ಅರಿವಿಗೆ ಅದು ಪರಿಣಾಮ ಬೀರುವವರೆಗೆ ಅರಿವಾಗುವುದಿಲ್ಲ.
6. ಪ್ರತಿರೋಧ ಶಕ್ತಿ ಇರುವವರಿಗೆ ಇದು ಗಂಭೀರ ಪರಿಣಾಮ ಬೀರುವುದಿಲ್ಲ.

ಇಷ್ಟೆಲ್ಲ ಭಯಾನಕ ಎನಿಸಿರುವ ಕೊರೋನಾ ಹೇಗೆ ಆತಂಕಕಾರಿಯೋ ಅದೇ ರೀತಿಯಾಗಿದೆ ಭಾರತದಲ್ಲಿರುವ ಕೋಮುದ್ವೇಷ ಎನ್ನುವ ವೈರಸ್. ಹಾಗಾದರೆ ಇಷ್ಟೊಂದು ಭಯಾನಕ ಮತ್ತು ಭಾರೀ ಸಾವು ನೋವಿಗೆ ಕಾರಣವಾಗಿರುವ ಕೊರೋನವನ್ನೂ ಮೀರಿಸಿದ ಮಾನವ ನಿರ್ಮಿತ ವೈರಸ್ ಯಾವುದು?

ಇಷ್ಟು ದೊಡ್ಡ ಜಗತ್ತಿನ ಸ್ವಾಸ್ಥ್ಯವನ್ನು ಕ್ಷಣ ಮಾತ್ರದಲ್ಲಿ ಕೆಡಿಸಿರುವುದು ಬರಿ ಕಣ್ಣಿಗೆ ಕಾಣದ ಕೊರೋನ ಎಂಬ ಅಣುಜೀವಿ. ಇದು ಕಣ್ಣಿಗೆ ಕಾಣದಿದ್ದರೂ ಅದು ನಮ್ಮ ಮೇಲೆ ದಾಳಿ ಮಾಡಿದೆ ಅಥವಾ ನಮ್ಮೊಳಗೆ ಆವರಿಸಿಕೊಂಡಿದೆ ಎಂದು ತಿಳಿಯುವುದು ಲಕ್ಷಣಗಳು ಗೋಚರಿಸಿದ ಬಳಿಕವೇ. ಹೀಗಾಗಿ ಮಹಾಮಾರಿ ಎನಿಸಿರುವ ಕೊರೋನ ವೈರಸ್ ನ ಅಸ್ತಿತ್ವ ಗುರುತಿಸುವುದು ಅದು ಬೀರುವ ಪರಿಣಾಮಗಳ ಲಕ್ಷಣಗಳ ಮೂಲಕ. ಹಾಗೆ ಒಂದು ವೇಳೆ ಲಕ್ಷಣ ಗೋಚರಿಸಿದ ಕೂಡಲೇ ಪಾಲಿಸಬೇಕಾದ ಪ್ರತಿರೋಧ ಕ್ರಮಗಳನ್ನು ಅನುಸರಿಸದೇ ಹೋದರೆ ಅದು ಅಪಾರ ಜೀವ ಹಾನಿಗೆ ದಾರಿ ಮಾಡಿಕೊಡುತ್ತದೆ. ಕೊರೋನ ವೈರಸ್ ಹರಡುವ ರೀತಿ, ಅದರ ಸುಪ್ತವಾದ ದಾಳಿ, ಮನುಷ್ಯನೊಳಗೇ ಪ್ರವೇಶಿಸಿ ಮನುಕುಲವನ್ನೇ ನಾಶ ಮಾಡುವ ಭೀತಿ… ಇವೆಲ್ಲವೂ ತಥಾಕಥಿತ ಫ್ಯಾಸಿಸಂ ಎಂಬ ವೈರಸನ್ನು ಹೋಲುತ್ತದೆ. ಸಾವಿನ ಮತ್ತು ಕ್ರೂರತೆಯ ಹಿನ್ನೆಲೆಯಲ್ಲಿ ತುಲನೆ ಮಾಡುವುದಾದರೆ ಈ ಹಿಂದಿನ ವೈರಸ್ ಗಳಾದ ಮಾರ್ಸ್, ನಿಫಾ, ಎಬೋಲಾ ಹಾಗೂ ಇದೀಗ ಕೊರೋನ ವೈರಸ್ ಉಂಟು ಮಾಡಿರುವ ಮಾರಣ ಹೋಮಕ್ಕಿಂತಲೂ ಅದೆಷ್ಟೋ ಪಟ್ಟು ಅಧಿಕ ಭೀಕರತೆಯನ್ನು ಫ್ಯಾಸಿಸಂ ವೈರಸ್ ಹೊಂದಿದೆ.

ಕೊರೋನ ಎದುರಿಸಲು ಪ್ರತಿರೋಧ ಶಕ್ತಿ ಅಗತ್ಯ ಎಂದು ಹೇಳುತ್ತಿರುವ ವೈದ್ಯಶಾಸ್ತ್ರದ ನಿಯಮವು ಅಕ್ಷರಃಶ ಫ್ಯಾಸಿಸಂಗೆ ಅನ್ವಯವಾಗುತ್ತದೆ. ಫ್ಯಾಸಿಸಂ ಸಂವಿಧಾನದ ಮೇಲೆ ಆಕ್ರಮಣ ಮಾಡುತ್ತಿದೆ, ಜನರ ನಡುವೆ ಸಾಂಕ್ರಾಮಿಕ ರೋಗದಂತೆ ಹರಡುತ್ತಿದೆ ಎಂದು ಈ ಹಿಂದಿನಿಂದಲೂ ಪ್ರಗತಿಪರ ಚಿಂತಕರು ಹೇಳುತ್ತಾ ಬಂದಿದ್ದರೂ ಸರ್ವಾಧಿಕಾರಿಗಳು ದೇಶದ ಆಡಳಿತದ ಚುಕ್ಕಾಣಿ ಹಿಡಿದಾಗಲೇ ಅದು ಅರಿವಿಗೆ ಬಂದದ್ದು.

ಫ್ಯಾಸಿಸಂ ಎಂಬುದು ಎಷ್ಟು ಭಯಾನಕ ರೋಗವೆಂದರೆ ಜನರನ್ನು ರಾಕ್ಷಸೀಯವಾಗಿ ಕೊಲ್ಲುವುದು, ಜೀವಂತವಾಗಿ ದಹಿಸುವುದು, ಅತ್ಯಾಚಾರ ಎಸಗುವುದು ಮಾತ್ರವಲ್ಲದೆ ಅದನ್ನು ಪ್ರತಿರೋಧಿಸಬೇಕಾಗಿದ್ದ ಜನರಿಂದ ಪ್ರತಿರೋಧದ ಶಕ್ತಿಯನ್ನೇ ಕಸಿದುಕೊಂಡಿದೆ. ನೀರುಳ್ಳಿಗೆ ಎರಡು ರೂಪಾಯಿ ಹೆಚ್ಚಳವಾದರೂ ಭಾರತ್ ಬಂದ್ ಪ್ರತಿಭಟನೆ ನಡೆಯುತ್ತಿದ್ದ ನಮ್ಮ ದೇಶದಲ್ಲಿ ದಿನಸಿ ವಸ್ತುಗಳ ಬೆಲೆ, ಸಾರಿಗೆ ದರ, ಅಡುಗೆ ಅನಿಲ ಗಗನಕ್ಕೇರಿದರೂ ಪ್ರತಿಭಟನೆ ಆಗುತ್ತಿಲ್ಲ. ಸ್ವತಹ ತನ್ನ ಬ್ಯಾಂಕ್ ಖಾತೆಯ ಹಣವನ್ನು ಸರ್ವಾಧಿಕಾರಿಗಳು ಲೂಟಿ ಮಾಡುತ್ತಿದ್ದರೂ ಪ್ರತಿಭಟನೆ ನಡೆಯುತ್ತಿಲ್ಲ. ಇದು ಫ್ಯಾಸಿಸ ನ ಪರಿಣಾಮ.

ಈ ಫ್ಯಾಸಿಸಂ ಎಂಬ ಸಾಂಕ್ರಾಮಿಕ ರೋಗವು ಕೊರೋನವನ್ನೂ ತನ್ನ ತೆವಲಿಗೆ ಬಳಸಿಕೊಂಡಿತು. ಲಾಕ್ ಡೌನ್ ವೇಳೆ ಫ್ಯಾಸಿಸಂ ಸೋಂಕಿತ ಪೊಲೀಸರು ಮಾನವೀಯತೆಯನ್ನೇ ಮರೆತು ಮೃಗಗಳಂತೆ ದಾರಿಹೋಕರ ಮೇಲೆ ಎಗರಿ ಬಿದ್ದಿದ್ದರು. ಅಷ್ಟೇ ಅಲ್ಲದೆ ಗುಂಡು ಹಾರಿಸಿ ಯುವಕನೊಬ್ಬನ ಜೀವನವನ್ನೇ ಹಾಳುಗೆಡಹಿದ್ದು ಕೊರೋನಕ್ಕಿಂತಲೂ ಮಾರಕವಾದ ಹಾನಿಯನ್ನೇ ಎಸಗಿದ್ದಾರೆ. ಆಡಳಿತ ವ್ಯವಸ್ಥೆಯ ತುರ್ತು ಸೇವೆಯಲ್ಲೂ ಫ್ಯಾಸಿಸಂನ ಸೋಂಕು ತಗುಲಿದೆ. ಮಾಧ್ಯಮವಂತೂ ಫ್ಯಾಸಿಸಂ ಸೋಂಕಿನಿಂದ ಗುಣಪಡಿಸಲಾರದಷ್ಟು ವಿಪರೀತಕ್ಕೆ ತಲುಪಿದೆ.

ಫ್ಯಾಸಿಸಂ ಬರಿ ಕಣ್ಣಿಗೆ ಕಾಣಿಸದು. ಅದರ ಲಕ್ಷಣ, ದಾಳಿಯ ಸ್ವರೂಪ, ಉದ್ದೇಶ, ಹುಟ್ಟು, ಕಾರ್ಯಕ್ಷೇತ್ರ ಎಲ್ಲ ಮಾಹಿತಿಯನ್ನು ಒದಗಿಸುವ ಕೈಪಿಡಿ ಇದ್ದರೂ ನಾವು ಅದರ ಬೆಳವಣಿಗೆ, ವಿಸ್ತರಣೆಯ ಬಗ್ಗೆ ಅಶ್ರದ್ಧೆ ವಹಿಸಿದೆವು. ಇಂದು ಅದು ನಿಯಂತ್ರಣಕ್ಕೆ ಸಿಗದಷ್ಟು ಸಾಂಕ್ರಾಮಿಕ ರೋಗದಂತೆ ಹರಡಿ ಬಿಟ್ಟಿದೆ. ಯಾವುದೇ ಮಾರಕ ವೈರಸ್ ತಗಲದಂತೆ ಎಲ್ಲ ಬಗೆಯ ಪ್ರತಿಬಂಧಕ ರೋಗನಿರೋಧಕ ಸಿಂಪಡಣೆ ಮಾಡಲಾಗಿದ್ದ ಸುಪ್ರೀಮ್ ಕೋರ್ಟ್ ಎಂಬ ಸರ್ವೋಚ್ಛ ಚಿಕಿತ್ಸಾಲಯಕ್ಕೂ ರೋಗ ನಾಟಿದೆ. ಗಗೋಯ್ ಸೋಂಕು ಪೀಡಿತರಾಗಿದ್ದರು ಎಂದು ರುಜುವಾತುಗೊಳ್ಳುವ ಮುನ್ನವೇ ಅದರ ಲಕ್ಷಣಗಳು ಹಲವು ಬಾರಿ ಗೋಚರಿಸಿದ್ದವು. ರೋಗ ಬಾಧಿತರನ್ನು ಯಾವ ರೀತಿ ಗೃಹ ಬಂಧನದಲ್ಲಿ ಇಡುವುದೇ ಪರಿಹಾರವೋ ಅದೇ ರೀತಿ ಫ್ಯಾಸಿಸಂ ಸೋಂಕು ಪೀಡಿತರಾಗಿರುವ ಪಕ್ಷಗಳು, ಸಮುದಾಯ ಮುಖಂಡರು, ಹೋರಾಟಗಾರ ರೆನಿಸಿಕೊಂಡವರು ಮುಂತಾದವರೊಂದಿಗೆ ಕೊರೋನ ಬಾಧಿತರ ರೀತಿಯಲ್ಲೇ ವ್ಯವಹರಿಸಬೇಕು. ಕಾಲ ಇನ್ನೂ ಮಿಂಚಿಲ್ಲ; ಫ್ಯಾಸಿಸಂನ್ನು ಪ್ರತಿರೋಧಿಸಬೇಕಾದ ರೀತಿಯಲ್ಲೇ ಪ್ರತಿರೋಧಿಸಿದರೆ ರೋಗ ಇನ್ನಷ್ಟು ಉಲ್ಬಣಗೊಳ್ಳುವುದನ್ನು ತಡೆಗಟ್ಟಬಹುದು. ಕೊರೋನ ಮತ್ತು ಫ್ಯಾಸಿಸಂ ಇವೆರಡೂ ಸದ್ಯ ದೇಶದ ಸಯಾಮಿ ಶತ್ರುಗಳು.

ಲೇಖನ: ನೌಷಾದ್ ಕಲಂದರ್ ಕರ್ನಿರೆ

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group