ಸಾಮಾಜಿಕ ತಾಣ

ಪೊಲೀಸರ ಮೇಲೆ ಹಲ್ಲೆಗೈದ ಯುವಕನ ಕಾಲಿಗೆ ಗುಂಡೇಟು; ಘಟನೆಯ ವಾಸ್ತವ ಸ್ಥಿತಿಗಳನ್ನು ತೆರೆದಿಟ್ಟ ಮತ್ತೊಂದು ವೀಡಿಯೋ ಬಹಿರಂಗ!

ಬೆಂಗಳೂರಿನ ಭೂಪಸಂದ್ರದಲ್ಲಿ ನಿಜಕ್ಕೂ ನಡೆದಿದ್ದೇನು ?

ವರದಿಗಾರ (ಮಾ.28): ಕೊರೋನಾ ವೈರಸ್ ಮುನ್ನೆಚ್ಚರಿಕೆ ಪಾಲಿಸುವ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದ ಜನತಾ ಕರ್ಫ಼್ಯೂ ದಿನದಂದು ಬೆಂಗಳೂರಿನ ಸಂಜಯ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಭೂಪಸಂದ್ರದಲ್ಲಿ ಯುವಕನೋರ್ವ ಪೊಲೀಸರ ಮೇಲೆ ಹಲ್ಲೆ ನಡೆಸುವ ವೀಡಿಯೋ ಒಂದು ಸಾಮಾಜಿಕ ಜಾಲತಾಣಗಳಾದ್ಯಂತ ವೈರಲ್ ಆಗಿತ್ತು. ಯುವಕನ ಕೃತ್ಯವು ಯಾವುದೇ ಕಾರಣಕ್ಕೂ ಸಮರ್ಥನೆಗೆ ಯೋಗ್ಯವಾಗಿರಲಿಲ್ಲ. ಬೆಂಗಳೂರು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಕೂಡಾ ಈ ಕುರಿತು ಪ್ರತಿಕ್ರಿಯಿಸಿ ಹಲ್ಲೆಗೈದವರನ್ನು ಕಾನೂನು ರೀತಿಯ ಕಠಿಣ ಕ್ರಮಕೈಗೊಳ್ಳುವ ಹೇಳಿಕೆ ನೀಡಿದ್ದರು. ಉಪಮುಖ್ಯಮಂತ್ರಿ ಆರ್ ಅಶೋಕ್ ಹಾಗೂ ಗೃಹ ಮಂತ್ರಿ ಬೊಮ್ಮಾಯಿ ಕೂಡಾ ಇದೇ ಧಾಟಿಯಲ್ಲಿ ಮಾತನಾಡಿದ್ದರು. ಕರ್ನಾಟಕದ ಬಹುತೇಕ ಮಾಧ್ಯಮಗಳು ಕೂಡಾ ಆ ವೈರಲ್ ವೀಡಿಯೋವನ್ನು ಮಾತ್ರ ತೋರಿಸುತ್ತಾ ಯುವಕನನ್ನು ಭಯಂಕರ ಖಳನಾಯಕನನ್ನಾಗಿ ಬಿಂಬಿಸಿದ್ದವು. ಘಟನೆ ನಡೆದು ಮರುದಿನ ತಾಜುದ್ದೀನ್ ನನ್ನು ಸ್ಥಳ ಮಹಜರು ನೆಪದಲ್ಲಿ ಘಟನಾ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದ ಪೊಲೀಸರು, ‘ಆತ ನಮ್ಮ ಮೇಲೆ ಮತ್ತೊಮ್ಮೆ ಹಲ್ಲೆ ಮಾಡಲು ಪ್ರಯತ್ನಿಸಿದ’ ಎಂದು ಆರೋಪಿಸಿ ಆತನ ಕಾಲಿಗೆ ಗುಂಡು ಹಾರಿಸಿದ್ದು ವರದಿಯಾಗಿತ್ತು. ಆರೋಪಿ ತಾಜುದ್ದೀನ್ ಕಾಲಿಗೆ ಗುಂಡು ತಾಗಿ ಚಿಕಿತ್ಸೆ ಪಡೆಯುತ್ತಿರುವ ವೀಡಿಯೊ ಕೂಡಾ ಜಾಲತಾಣಗಳಲ್ಲಿ ಹೊರಬಂದಿತ್ತು.

ವೀಡಿಯೋ ವೀಕ್ಷಿಸಿ

ಆದರೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಇನ್ನೊಂದು ವೀಡಿಯೋ ಹೊರಬಂದಿದ್ದು, ಅದು ಘಟನೆಯ ಇನ್ನೊಂದು ಮುಖವನ್ನು ಬಹಿರಂಗಗೊಳಿಸುತ್ತಿದೆ. ಆ ವೀಡಿಯೋದಲ್ಲಿ ಯುವಕ ಪೊಲೀಸರಿಗೆ ಹಲ್ಲೆ ನಡೆಸುವುದಕ್ಕಿಂತ ಮೊದಲು ಅದೇ ಸ್ಥಳದಲ್ಲಿ ಆ ಇಬ್ಬರು ಪೊಲೀಸರಲ್ಲಿ ಒಬ್ಬ ಪೊಲೀಸ್ ಆ ಯುವಕನ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ, ಕಾಲಿನಿಂದ ಒದೆಯುತ್ತಿರುವ, ಮುಷ್ಟಿ ಬಿಗಿ ಹಿಡಿದು ಮುಖದ ಮೇಲೆ, ಹೊಟ್ಟೆಗೆ ಹಾಗೂ ಎದೆ ಭಾಗಕ್ಕೆ ಹೊಡೆಯುತ್ತಿರುವ, ಹೆಲ್ಮೆಟ್ ನಲ್ಲಿ ಹಲ್ಲೆ ನಡೆಸುತ್ತಿರುವ ದೃಶ್ಯಗಳು ಕಂಡು ಬಂದಿದೆ. ೨ ನಿಮಿಷ ೪೧ ಸೆಕೆಂಡಿನ ಆ ವೀಡೀಯೋದಲ್ಲಿ ಪೊಲೀಸ್ ಪೇದೆ ಯುವಕನ ಮೇಲೆ ನಿರಂತರವಾಗಿ ಹಲ್ಲೆ ನಡೆಸುತ್ತಿರುವುದು ಕಂಡು ಬಂದಿದ್ದು, ಯುವಕನು ಅದೇನನ್ನೋ ಹೇಳಲು ಪ್ರಯತ್ನಿಸುತ್ತಿರುವುದಲ್ಲದೆ ಪೊಲೀಸ್ ಪೇದೆಗೆ ನೀಡಿದ ಗೌರವ ಮತ್ತು ಬೇಡಿಕೊಳ್ಳುತ್ತಿರುವುದು ವೀಡಿಯೋದಲ್ಲಿ ಸ್ಪಷ್ಟವಾಗಿದೆ.

ಘಟನೆಯ ವಾಸ್ತವಗಳೇನು ?

ಈ ಘಟನೆಯನ್ನು ಕಂಡ ಕೆಲವರ ಪ್ರಕಾರ ಜನತಾ ಕರ್ಫ಼್ಯೂ ದಿನ ಭೂಪಸಂದ್ರ ಗೇಟ್ ಬಳಿಯಿಂದ ತನ್ನ ಬೈಕಿನಲ್ಲಿ ತಾಜುದ್ದೀನ್ ತ್ರಿಬಲ್ ರೈಡಿಂಗ್ ಮಾಡಿಕೊಂಡು ಬಂದಿದ್ದನ್ನು ಈ ಇಬ್ಬರು ಪೊಲೀಸರು ಪ್ರಶ್ನಿಸಿದ್ದರು. ಆ ವೇಳೆ ಅಲ್ಲಿದ್ದ ಪೊಲೀಸ್ ಆತನ ಮೇಲೆ ತೀವ್ರ ರೀತಿಯ ಹಲ್ಲೆ ನಡೆಸಿದ್ದು, ಒಂದು ಹಂತದಲ್ಲಿ ತಾಳ್ಮೆ ಕಳೆದುಕೊಂಡ ತಾಜುದ್ದೀನ್ ಪೊಲೀಸನ ಮೇಲೆ ಮರುದಾಳಿ ನಡೆಸಿದ್ದಾನೆ. ಇದು ಸರ್ವಥಾ ಸಮರ್ಥನೀಯವಲ್ಲದಿದ್ದರೂ ಪೊಲೀಸರ ವರ್ತನೆ ಕೂಡಾ ಪ್ರಶ್ನಾತೀತವಲ್ಲ. ಪೊಲೀಸರ ಮೇಲೆ ಹಲ್ಲೆ ನಡೆಸಿದ ತಾಜುದ್ದೀನ್ ತದ ನಂತರ ಪರಾರಿಯಾಗಿದ್ದು, ಆತನ ಮನೆಗೆ ಬಂದ ಸಂಜಯನಗರ ಪೊಲೀಸರು ತಾಜುದ್ದೀನ್ ಕುರಿತು ವಿಚಾರಿಸಿದ್ದು, ಆತ ಸಿಗದಾಗ ಆತನ ತಂದೆ ಹಾಗೂ ತಾಯಿಯನ್ನು ಠಾಣೆಗೆ ಕರೆಸಿಕೊಂಡಿದ್ದಾರೆ. ರಾತ್ರಿ 10ರ ವೇಳೆಗೆ ತಾಜುದ್ದೀನ್ ಪೊಲೀಸರ ಮುಂದೆ ಶರಣಾಗಿದ್ದು, ನಂತರ ಪೋಷಕರನ್ನು ಮನೆಗೆ ಕಳುಹಿಸಿದ್ದಾರೆ. ತಾಜುದ್ದೀನ್ ಸಂಜಯನಗರ ಠಾಣೆಯಲ್ಲಿರುವ ಫೋಟೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು, ಮರುದಿನ ಬೆಳಗ್ಗೆ ಸ್ಥಳ ಮಹಜರು ಹೆಸರಿನಲ್ಲಿ ಘಟನಾ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದು, ಆತನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಅಲ್ಲಿ ಆತ ಮತ್ತೊಮ್ಮೆ ಪೊಲೀಸರ ಮೇಲೆ ಹಲ್ಲೆ ಮಾಡಲು ಯತ್ನಿಸಿದ, ಆಗ ನಾವು ಆತನ ಕಾಲಿಗೆ ಗುಂಡು ಹರಿಸಿದೆವು ಎಂಬುವುದು ಪೊಲೀಸರ ವಾದವಾಗಿದೆ.

ಸಾರ್ವಜನಿಕರು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಬಾರದು, ಪೊಲೀಸರ ಮೇಲೆ ಹಲ್ಲೆ ನಡೆಸುವಂತಹಾ ಕೃತ್ಯಗಳನ್ನು ಖಂಡಿತಾ ಸಮರ್ಥನೆ ಮಾಡಲು ಸಾಧ್ಯವಿಲ್ಲ. ಆದರೆ ಈ ಘಟನೆಯಲ್ಲಿ ಪೊಲೀಸರು ಹಾಗೂ ಮಾಧ್ಯಮಗಳು ಘಟನೆಯ ಒಂದು ಭಾಗವನ್ನು ಮುಚ್ಚಿಟ್ಟು ತಮಗೆ ಬೇಕಾದ ರೀತಿಯಲ್ಲಿ ವರದಿ ಮಾಡಿದ್ದು ಸ್ಪಷ್ಟವಾಗಿದೆ. ಪೊಲೀಸ್ ಹಲ್ಲೆ, ಪೊಲೀಸರ ಮೇಲಿನ ಹಲ್ಲೆ ಹಾಗೂ ಶೂಟೌಟ್ ಈ ಎಲ್ಲಾ ಘಟನಾವಳಿಗಳನ್ನು ಸೂಕ್ತ ತನಿಖೆಯ ಮೂಲಕ ಮಾತ್ರ ಸತ್ಯವನ್ನು ಹೊರತರಲು ಸಾಧ್ಯವಿದೆ.

ಸಮವಸ್ತ್ರ ನೀಡುವ ಅಧಿಕಾರವನ್ನು ದುರುಪಯೋಗಪಡಿಸಿದ ಪೊಲೀಸ್ ಪೇದೆಯ ಮೇಲೆ ಅದ್ಯಾವ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಪ್ರಶ್ನೆಗಳುದ್ಬವಿಸಿವೆ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group