ವರದಿಗಾರ ವಿಶೇಷ

ದೆಹಲಿ ಚುನಾವಣೆ: ಬೆದರಿಕೆಯ ‘ಬಂದೂಕಿನ’ ಎದುರು ಅಭಿವೃದ್ಧಿಯ ‘ಪೊರಕೆ’ಯ ವಿಜಯ!

ದೆಹಲಿ ವಿಧಾನಸಭಾ ಚುನಾವಣೆಯ ಒಂದು ವಿಶ್ಲೇಷಣೆ

ವರದಿಗಾರ, ಫೆ. 12: ಇಡೀ ರಾಷ್ಟ್ರದ ಕುತೂಹಲಕ್ಕೆ ಕಾರಣವಾಗಿದ್ದ ದೆಹಲಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನಾಯಕತ್ವದ ಆಮ್ ಆದ್ಮಿ ಪಕ್ಷದ (AAP) ಅಭಿವೃದ್ಧಿಯ ಮಂತ್ರಕ್ಕೆ ಭರ್ಜರಿ ಜಯ ಲಭಿಸಿದೆ. ಹೊಡಿ-ಬಡಿ, ಬಂದೂಕು ಬೆದರಿಕೆ, ಧರ್ಮದ ಆಧಾರದಲ್ಲಿ ವಿಭಜಕ ರಾಜಕೀಯ, ಭಾವನೆಗಳ ಮೇಲೆ ಕೋಮು ಧ್ರುವೀಕರಣ ರಾಜಕೀಯವನ್ನೇ ನೆಚ್ಚಿಕೊಂಡಿದ್ದ ಬಿಜೆಪಿಗೆ ನಿರೀಕ್ಷಿತ ಮತ್ತು ಅಷ್ಟೇ ಹೀನಾಯವಾದ ಸೋಲಾಗಿದೆ. ದೆಹಲಿ ವಿಧಾನಸಭಾ ಚುನಾವಣೆಯ ಪ್ರಕಟವಾಗಿರುವ ಒಟ್ಟು 70 ಕ್ಷೇತ್ರಗಳಲ್ಲಿ ಆಮ್ ಆದ್ಮಿ ಭರ್ಜರಿ 62 ಕ್ಷೇತ್ರಗಳಲ್ಲಿ ವಿಜಯ ಪತಾಕೆ ಹಾರಿಸಿದ್ದು,  ಇದೇ ವೇಳೆ ಬಿಜೆಪಿ ಕೇವಲ 8 ಸ್ಥಾನಗಳಲ್ಲಿ ಮಾತ್ರ ಜಯಗಳಿಸಿ ಮುಖಭಂಗಕ್ಕೀಡಾಗಿದೆ.

ಕೇಜ್ರಿವಾಲರ ಆಮ್ ಆದ್ಮಿ ಪಕ್ಷ ಚುನಾವಣಾ ಪ್ರಚಾರದ ವೇಳೆ ತಮ್ಮ ಕಳೆದ ಐದು ವರ್ಷಗಳ ಅವಧಿಯಲ್ಲಿ ಮಾಡಿರುವಂತಹ ಅಭಿವೃದ್ಧಿ ವಿಷಯಗಳಾದ ಶಿಕ್ಷಣ, ವಿದ್ಯುತ್, ನೀರು, ಮಹಿಳಾ ಸಬಲೀಕರಣ, ಮೂಲಭೂತ ಸೌಕರ್ಯಗಳು ಸೇರಿದಂತೆ ಕೇವಲ ಧನಾತ್ಮಕ ವಿಚಾರಗಳ  ಮೇಲೆ ಮತಯಾಚನೆ ನಡೆಸಿತ್ತು.  ಆದರೆ ಇದಕ್ಕೆ ವ್ಯತಿರಿಕ್ತವಾಗಿ ಮತ್ತು ಪಕ್ಷದ ಸಹಜ ಗುಣ ಎಂಬಂತೆ ಬಿಜೆಪಿ ಮಾತ್ರ ಧರ್ಮ, ಕೋಮು ಭಾವನೆಗಳ ಕೆರಳಿಸುವಿಕೆಯ ಭಾಷಣಗಳ ಮೂಲಕವೇ ಜನರ ಬಳಿ ತಲುಪಿತ್ತು. ಆದರೆ ದೆಹಲಿ ಜನತೆ ಮಾತ್ರ ತಮ್ಮ ಆದ್ಯತೆಗಳೇನು ಎನ್ನುವುದನ್ನು ಚುನಾವಣಾ ಫಲಿತಾಂಶದ ಮೂಲಕ ಬಹಿರಂಗಗೊಳಿಸಿದ್ದು, ಅರವಿಂದ್ ಕೇಜ್ರಿವಾಲರ ‘ಪೊರಕೆ’ ಚಿಹ್ನೆಗೆ ತಮ್ಮ ಬೆಂಬಲ ನೀಡಿ, ಬೆದರಿಕೆಯ ‘ಬಂದೂಕು’ ಗಳನ್ನು ಸಾರಾಸಾಗಾಟಾಗಿ ತಿರಸ್ಕರಿಸುವುದು ಸ್ಪಷ್ಟವಾಗಿದೆ.

ಚುನಾವಣೆ ಘೋಷಣೆಯಾದ ನಂತರ ಶಾಹೀನ್ ಭಾಗ್  CAA ಪ್ರತಿಭಟನೆಯ ಕುರಿತಾಗಿ ಹಲವಾರಿಂದ ಕೀಳು ಮಟ್ಟದ ಹೇಳಿಕೆಗಳು ಕೇಳಿ ಬಂದವು. ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ತಮ್ಮ ಭಾಷಣದಲ್ಲಿ ‘ಮತದಾರರು ಎಷ್ಟು ಗಟ್ಟಿಯಾಗಿ ಕಮಲದ  ಬಟನ್ ಒತ್ತಬೇಕೆಂದರೆ ಶಾಹೀನ್ ಭಾಗಿನಲ್ಲಿ ಅದರ ವಿದ್ಯುತ್ ಪ್ರವಹಿಸಬೇಕು, ಆ ರೀತಿಯಲ್ಲಿ ಒತ್ತಬೇಕು’ ಎನ್ನುವಷ್ಟರ ಮಟ್ಟಿಗೆ ಸಂವಿಧಾನಬದ್ದವಾದ ಪ್ರತಿಭಟನೆಯೊಂದನ್ನು ತಮ್ಮ ರಾಜಕೀಯಕ್ಕೆ ದಾಳವಾಗಿ ಉಪಯೋಗಿಸುವ ಮಟ್ಟಕ್ಕಿಳಿದಿದ್ದರು. JNU ವಿವಿಯೊಳಗೆ ಎಬಿವಿಪಿಯ ಗೂಂಡಾಗಳು ನುಗ್ಗಿ ಮಾರಕಾಯುಧಗಳಿಂದ ಅಲ್ಲಿನ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದರು. ಕೇಂದ್ರ ಮಂತ್ರಿ ಅನುರಾಗ್ ಠಾಕೂರ್ ‘ಗೋಲೀ ಮಾರೋ ಸಾ….ಕೋ” (ದೇಶದ್ರೋಹಿಗಳಿಗೆ ಗುಂಡು ಹೊಡೆಯಿರಿ) ಎಂಬ ಪ್ರಚೋದಕ ಹೇಳಿಕೆ ಬಂದ ನಂತರವಂತೂ CAA ವಿರೋಧಿ ಪ್ರತಿಭಟನೆ ನಡೆಯುತ್ತಿದ್ದ ಶಾಹೀನ್ ಭಾಗ್ ಹೊರಗಡೆ ಹಾಗೂ ಜಾಮಿಯಾ ವಿವಿಯ ವಠಾರದಲ್ಲಿ ಉಗ್ರರಿಬ್ಬರು ಬಂದೂಕು ಹಿಡಿದುಕೊಂಡು ಗುಂಡು ಹಾರಿಸುತ್ತಲೇ ಪ್ರತಿಭಟನಾಕಾರರನ್ನು ಬೆದರಿಸುವ ಪ್ರಯತ್ನ ಮಾಡಿದ್ದರು.

ರಾಮಮಂದಿರದ ಪರವಾಗಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದರೂ ಕೂಡಾ ಗೃಹ ಸಚಿವ ಅಮಿತ್ ಶಾ ಮಾತ್ರ ಅದರ ಗುಂಗಿನಿಂದ ಹೊರ ಬಂದಿರಲಿಲ್ಲ. ದೆಹಲಿ ಚುನಾವಣಾ ಪ್ರಚಾರದ ವೇಳೆ ‘ಇನ್ನು ನಾಲ್ಕು ತಿಂಗಳಲ್ಲಿ ರಾಮಮಂದಿರ ನಿರ್ಮಾಣವಾಗುತ್ತದೆ’ ಎಂದು ಹೇಳಿಕೆ ನೀಡಿದ್ದರು. ಅಮಿತ್ ಶಾ ಒಟ್ಟು 52 ಸಾರ್ವಜನಿಕ ಪ್ರಚಾರ ರಾಲಿ ಹಮ್ಮಿಕೊಂಡಿದ್ದರೆ, ಉತ್ತರಪ್ರದೇಶದ ಯೋಗಿ 12 ರಾಲಿಗಳನ್ನು ಹಮ್ಮಿಕೊಂಡಿದ್ದರು. ಪ್ರಧಾನಿ ಮೋದಿ ರಾಮ್ ಲೀಲಾ ಮೈದಾನ ಸೇರಿದಂತೆ ಮೂರು ಕಡೆ ಚುನಾವಣಾ ರಾಲಿಗಳಲ್ಲಿ ಭಾಗವಹಿಸಿದ್ದರೂ ಕೂಡಾ ದೆಹಲಿ ಜನತೆ ಅದಾಗಲೇ ನಿರ್ಧರಿಸಿದ್ದ ತಮ್ಮ ಆದ್ಯತೆಗಳನ್ನು ಬದಲಿಸಲು ಸಾಧ್ಯವಾಗಲಿಲ್ಲ. CAA – NRC ಪ್ರತಿಭಟನಾ ಕಾವಿನ ಮಧ್ಯೆ ನಡೆದಿದ್ದ ಜಾರ್ಖಂಡ್ ವಿಧಾನಸಭಾ ಸೋಲಿನ ನಂತರ ಈಗ ದೆಹಲಿ ಫಲಿತಾಂಶ ಗೃಹ ಸಚಿವ ಅಮಿತ್ ಶಾ ಗೆ ಮಾತ್ರ ಅರಗಿಸಿಕೊಳ್ಳಲು ಕಷ್ಟವಾಗಬಹುದು.

ಕುತೂಹಲಕಾರಿಯಾದ ಅಂಶವೆಂದರೆ ದೆಹಲಿ ಚುನಾವಣೆಯಲ್ಲಿ ಬಿಜೆಪಿ ಸೋತಿದ್ದರೂ 2015 ರ ಚುನಾವಣೆಗಿಂತಲೂ ಒಟ್ಟು ಶೇಕಡಾವಾರು ಮತಗಳಿಕೆಯಲ್ಲಿ 39.07% ಮೇಲುಗೈ ಸಾಧಿಸಿದೆ ಎನ್ನುವುದು. ಆಮ್ ಆದ್ಮಿ ಸಣ್ಣ ಅಂತರದಲ್ಲಿ ಶೇಕಡಾವಾರು ಮತಗಳಿಕೆಯಲ್ಲಿ ಕಳೆದ ಬಾರಿಗಿಂತ ಹಿಂದೆ ಬಿದ್ದಿದೆ. ಆಮ್ ಆದ್ಮಿ ಮತ್ತು ಬಿಜೆಪಿ ಮಧ್ಯೆ 12% ಕ್ಕೂ ಹೆಚ್ಚು ಶೇಕಡಾ ಮತಗಳಿಕೆಯ ಅಂತರದ ಏರುಪೇರು ಇದ್ದರೆ, ಕಾಂಗ್ರೆಸ್ 2015 ರ ಚುನಾವಣೆಗಿಂತ ಈ ಬಾರಿ 5% ಕಡಿಮೆ ಪ್ರಮಾಣದಲ್ಲಿ ಮತಗಳಿಸಿದೆ.  ಆದರೆ ಚುನಾವಣಾ ಪ್ರಚಾರದಲ್ಲಿ ಹೆಚ್ಚಿನ ಮುತುವರ್ಜಿ ವಹಿಸದೆ ಕಾಂಗ್ರೆಸ್ ಪಕ್ಷ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷದ ವಿಜಯದಲ್ಲಿ ಭಾಗಿಯಾಗಿದೆ ಎನ್ನುವುದು ಹೆಚ್ಚಿನ ವಿಶ್ಲೇಷಕರ ಅಭಿಪ್ರಾಯವಾಗಿದೆ.

ಒಟ್ಟಿನಲ್ಲಿ ಈ ಬಾರಿಯ ದೆಹಲಿ ಮತದಾನದ ಫಲಿತಾಂಶದಲ್ಲಿ ಒಂದಂತೂ ಸ್ಪಷ್ಟವಾದಂತಾಗಿದೆ. ಜನರಿಗೆ ಅಭಿವೃದ್ಧಿಯೇ ಮುಖ್ಯವಾಗಿದೆ. ಅದನ್ನು ಕೋಮು ಧ್ರುವೀಕರಣದ, ವಿಭಜಕ ರಾಜಕೀಯವನ್ನೇ ನೆಚ್ಚಿಕೊಂಡಿರುವ ಬಿಜೆಪಿಯಿಂದ ನಿರೀಕ್ಷಿಸುವುದು ಕಷ್ಟಸಾಧ್ಯ. ಹೀಗಿರುವಾಗ ಕಳೆದ ಐದು ವರ್ಷಗಳಲ್ಲಿ ಅಭಿವೃದ್ಧಿಯ ರಾಜಕೀಯವನ್ನು ಸಾಕಾರಗೊಳಿಸಿ ತೋರಿಸಿರುವ ಅರವಿಂದ್ ಕೇಜ್ರಿವಾಲರ ಆಮ್ ಆದ್ಮಿ ಪಕ್ಷಕ್ಕೆ ಅಭೂತಪೂರ್ವ ಜನಬೆಂಬಲ ವ್ಯಕ್ತವಾಗಿದೆ ಎನ್ನುವುದು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group