‘ಹೆಗಡೆ ಸ್ವಾತಂತ್ರ್ಯ ಹೋರಾಟದಲ್ಲಿ ಬಲಿದಾನ ಆದವರ ಹೆಸರು ಹೇಳಲಿ ನೋಡೋಣ’; ಬಹಿರಂಗ ಸವಾಲು
‘ಕ್ರೂರತ್ವ ಮನೋಭಾವದವರಿಗೆ ಸತ್ಯ, ಅಹಿಂಸೆ ಅರ್ಥ ಆಗುವುದಿಲ್ಲ’
ವರದಿಗಾರ, ಫೆ.4: ಇತಿಹಾಸ ತಿಳಿದಿಲ್ಲ ಅಂದರೆ ಹಿರಿಯರಿಂದ ಕೇಳಿ ತಿಳಿದುಕೊಳ್ಳಲಿ ಎಂದು ಸಂಸದ ಅನಂತ್ ಕುಮಾರ್ ಹೆಗಡೆಯ “ಗಾಂಧೀಜಿ” ಬಗೆಗಿನ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟಾಂಗ್ ನೀಡಿ ಪ್ರತಿಕ್ರಿಯಿಸಿದ್ದಾರೆ.
‘ಗಾಂಧೀಜಿಯನ್ನು ಕೊಂದ ನಾಥೂರಾಮ್ ಗೋಡ್ಸೆ ಹಾಗೂ ಸಾವರ್ಕರ್ ಪೂಜೆ ಮಾಡುವವರಿಂದ ಇನ್ನೇನು ನಿರೀಕ್ಷಿಸಬಹುದು?. ಕ್ರೂರತ್ವ ಮನೋಭಾವದವರಿಗೆ ಸತ್ಯ, ಅಹಿಂಸೆ ಅರ್ಥ ಆಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ಸಂಸದ ಅನಂತ್ ಕುಮಾರ್ ಹೆಗಡೆಯು,’ಯಾರು ದೇಶಕ್ಕಾಗಿ ಶಸ್ತ್ರ ಹಿಡಿದು ಹೋರಾಟಕ್ಕೆ ಇಳಿದರೋ ಅವರೆಲ್ಲಾ ನೇಣಿನ ಉರುಳಿಗೆ ಕೊರಳೊಡ್ಡಿದರು. ಯಾರು ತಮ್ಮ ಪ್ರಖರ ವಿಚಾರಧಾರೆಗಳನ್ನು ಇಟ್ಟುಕೊಂಡು ದೇಶ ಕಟ್ಟಲು ಯತ್ನಿಸಿದರೋ ಅವರೆಲ್ಲಾ ಕತ್ತಲೆ ಕೋಣೆಯಲ್ಲಿ ತಮ್ಮ ಬದುಕನ್ನು ಸವೆಸಿದರು. ಯಾರು ಬ್ರಿಟಿಷರ ಜೊತೆ ಒಪ್ಪಂದ ಮಾಡಿಕೊಂಡು ಸ್ವಾತಂತ್ರ್ಯ ಹೋರಾಟಗಾರ ಎಂಬ ಸರ್ಟಿಫಿಕೇಟ್ ತೆಗೆದುಕೊಂಡರೋ ಅವರೆಲ್ಲಾ ಇಂದು ಇತಿಹಾಸದ ಪುಟಗಳಲ್ಲಿ ರಾರಾಜಿಸುತ್ತಿದ್ದಾರೆ’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಅನಂತಕುಮಾರ್ ಹೆಗಡೆಗೆ ಎಷ್ಟು ವರ್ಷ? ಇವನು ಸ್ವಾತಂತ್ರ್ಯ ಪೂರ್ವದಲ್ಲಿ ಹುಟ್ಟಿದ್ದನಾ? ಸ್ವಾತಂತ್ರ್ಯ ಹೋರಾಟದ ಬಗ್ಗೆ ಇವನಿಗೇನು ಗೊತ್ತು ಎಂದು ಪ್ರಶ್ನಿಸಿದ್ದಾರೆ. ನಾನು ಸ್ವಾತಂತ್ರ್ಯ ಪೂರ್ವದಲ್ಲಿ ಹುಟ್ಟಿದ್ದೇನೆ. ಹೆಗಡೆ ಸ್ವಾತಂತ್ರ್ಯ ಹೋರಾಟದಲ್ಲಿ ಬಲಿದಾನ ಆದವರ ಹೆಸರು ಹೇಳಲಿ ನೋಡೋಣ ಎಂದು ಬಹಿರಂಗ ಸವಾಲು ಹಾಕಿದ್ದಾರೆ. ಮಹಾತ್ಮ ಗಾಂಧಿ ಎಷ್ಟು ವರ್ಷ ಜೈಲಿನಲ್ಲಿ ಇದ್ದರು ಗೊತ್ತಾ? ಗಾಂಧಿ ಕೊಂದಿದ್ದು ದೇಶದ್ರೋಹಿನಾ ದೇಶಭಕ್ತಿನಾ? ವಲ್ಲಭಾಯಿ ಪಟೇಲ್ ಪ್ರತಿಮೆ ಮಾಡಿದ್ದು ಯಾರು? ಕ್ರೂರತ್ವ ಮನೋಭಾವದವರಿಗೆ ಸತ್ಯ, ಅಹಿಂಸೆ ಅರ್ಥ ಆಗುವುದಿಲ್ಲ. ಇತಿಹಾಸ ಗೊತ್ತಿಲ್ಲ ಅಂದ್ರೆ ಅವರ ಹಿರಿಯರಿಂದ ಕೇಳಿ ತಿಳಿದುಕೊಳ್ಳಲಿ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು…
