
ವರದಿಗಾರ ಫೆ 01 : ದೆಹಲಿಯಲ್ಲಿ ಭಯೋತ್ಪಾದಕರು ಮತ್ತೊಮ್ಮೆ ತಮ್ಮ ಅಟ್ಟಹಾಸ ಮೆರೆದಿದ್ದಾರೆ. ಇತ್ತೀಚೆಗೆ ಜಾಮಿಯಾ ವಿವಿಯ ಸಿಎಎ ವಿರುದ್ಧ ಪ್ರತಿಭಟಿಸುತ್ತಿದ್ದವರ ಮೇಲೆ ಗುಂಡಿನ ದಾಳಿ ನಡೆಸಿದ್ದ ಉಗ್ರ ರಾಮ್ ಭಕ್ತ್ ಗೋಪಾಲ್ ಘಟನೆ ತಣ್ಣಗಾಗುವ ಮೊದಲೇ ಮತ್ತೊಮೆ ರಾಷ್ಟ್ರ ರಾಜಧಾನಿಯಲ್ಲಿ ಉಗ್ರರ ಗುಂಡಿನ ಮೊರೆತ ಕೇಳಿಬಂದಿದೆ. ಸಿಎಎಯನ್ನು ವಿರೋಧಿಸಿ ಕಳೆದ ಡಿಸಂಬರ್ ನಿಂದಲೇ ಆಹೋರಾತ್ರಿ ಪ್ರತಿಭಟಿಸುತ್ತಿರುವ ದೆಹಲಿಯ ಶಹೀನ್ ಭಾಗ್ ನಿವಾಸಿಗಳು ಪ್ರತಿಭಟನೆ ನಡೆಸುತ್ತಿದ್ದ ಸ್ಥಳದಲ್ಲೇ ಉಗ್ರನೊಬ್ಬ ಮೂರು ಸುತ್ತು ಗುಂಡು ಹಾರಾಟ ನಡೆಸಿದ್ದಾನೆ. ಅದೃಷ್ಟವಶಾತ್ ಪ್ರಾಣಹಾನಿಗಳು ಸಂಭವಿಸಿಲ್ಲ. ಗುಂಡು ಹಾರಿಸಿದ ಭಯೋತ್ಪಾದಕನನ್ನು ಕಪಿಲ್ ಗುಜ್ಜರ್ ಎಂದು ಗುರುತಿಸಲಾಗಿದೆ.
“ಈ ದೇಶದಲ್ಲಿ ಕೇವಲ ಹಿಂದೂಗಳದ್ದು ಹೇಳಿದ್ದು ಮಾತ್ರ ನಡೆಯಬೇಕು. ಅದಕ್ಕಾಗಿ ನಾನು ಗುಂಡು ಹಾರಿಸಿದೆ” ಎಂದು ಪೊಲೀಸರಿಂದ ಬಂಧಿಸಲ್ಪಡುತ್ತಿರುವಾಗ ಉಗ್ರ ಕಪಿಲ್ ಗುಜ್ಜರ್ ಹೇಳುತ್ತಿರುವುದು ವೀಡಿಯೋಗಳಲ್ಲಿ ದಾಖಲಾಗಿದೆ
ಸಿಎಎ ವಿರುದ್ಧ ದೇಶದಾದ್ಯಂತ ನಡೆಯುತ್ತಿರುವ ನಿರಂತರ ಪ್ರತಿಭಟನೆಗಳಿಗೆ ಪ್ರೇರಕ ಶಕ್ತಿಯಾಗುವಂತೆ ಶಹೀನ್ ಭಾಗಿನಲ್ಲಿ ಕೇವಲ ಮಹಿಳೆಯರು ಸೇರಿಕೊಂಡು ಕೇಂದ್ರ ಸರಕಾರದ ಸಂವಿಧಾನ ವಿರೋಧಿ ಪೌರತ್ವ ಕಾಯ್ದೆಯನ್ನು ವಿರೋಧಿಸಿ ಆಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಇದು ಕೇಂದ್ರ ಸರಕಾರದ ನಿದ್ದೆಗೆಡಿಸಿದೆ. ಈ ಧರಣಿ ಅದೆಷ್ಟರ ಮಟ್ಟಿಗೆ ಪರಿಣಾಮ ಬೀರಿದೆಯೆಂದರೆ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ತನ್ನ ಪ್ರತಿ ಚುನಾವಣಾ ರಾಲಿಗಳಲ್ಲಿ, ‘ನೀವು ಯಾವ ರೀತಿ ಮತ ಹಾಕುವ ಬಟನ್ ಒತ್ತಬೇಕೆಂದರೆ ಶಹೀನ್ ಭಾಗಿನ ಸತ್ಯಾಗ್ರಹಿಗಳು ಓಡಿ ಹೋಗಬೇಕು’ ಎಂದು ಹೇಳುತ್ತಲೇ ಇದ್ದಾರೆ.
ಈ ರೀತಿಯ ಪ್ರತಿಭಟನೆಯನ್ನು ಹತ್ತಿಕ್ಕುವ ಉದ್ದೇಶವಿರುವ ಉಗ್ರ ಪಡೆಗಳು ಇಂದು ಶಹೀನ್ ಭಾಗ್ ನಲ್ಲಿ ತಮ್ಮ ಕುಕೃತ್ಯ ಮೆರೆದಿದ್ದಾರೆ. ಜಾಮಿಯಾದಲ್ಲಿ ಗುಂಡು ಹಾರಾಟ ನಡೆಸಿದ ಉಗ್ರ ರಾಮ್ ಭಕ್ತ್ ಗೋಪಾಲ್ ಕೂಡಾ ಶಹೀನ್ ಭಾಗ್ ಪ್ರತಿಭಟನೆಗೆ ನಾನೊಂದು ಅಂತ್ಯ ಹಾಡುತ್ತೇನೆ ಎಂದು ಹೊರಟಿದ್ದವನಾಗಿದ್ದ. ಆದರೆ ಆತ ಗುರಿ ತಪ್ಪಿ ಜಾಮಿಯಾದಲ್ಲಿ ತನ್ನ ಭಯೋತ್ಪಾದನಾ ಕೃತ್ಯ ನಡೆಸಿದ್ದ. ಇದೀಗ ಉಗ್ರ ಕಪಿಲ್ ಗುರ್ಜರ್ ಕೂಡಾ ಶಹೀನ್ ಭಾಗನ್ನೇ ಗುರಿಯಾಗಿಸಿಕೊಂಡು ತನ್ನ ದಾಳಿ ನಡೆಸಿರುವುದನ್ನು ನೋಡಿದರೆ ಈ ದುಷ್ಟ ಶಕ್ತಿಗಳ ಹಿಂದೆ ದೊಡ್ಡ ಮಟ್ಟದ ‘ಕಾಣದ ಕೈಗಳು’ ನೆರವಾಗುತ್ತಿವೆ ಎಂದು ಯಾರಿಗೂ ತಿಳಿಯಬಹುದು. ಆದರೆ ಇದರ ಹಿಂದಿರುವ ವಾಸ್ತವಾಂಶಗಳನ್ನು ದಿಟ್ಟ ತನಿಖೆಗಳ ಮೂಲಕ ಹೊರ ತರಬೇಕಾಗಿರುವ ದೆಹಲಿ ಪೊಲೀಸರ ಮುಂದೆಯೇ ಜಾಮಿಯಾದಲ್ಲಿ ಉಗ್ರ ಗೋಪಾಲ್ ತನ್ನ ಕೃತ್ಯ ನಡೆಸಿದ್ದ. ಹೀಗಿರುವಾಗ ದೆಹಲಿ ಪೊಲೀಸರು ಇದರ ಹಿಂದೆ ಬದ್ಧತೆಯಿಂದ ಕೆಲಸ ಮಾಡುತ್ತಾರೆಯೇ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.
