
ಶಕ್ತಿ ಕೇಂದ್ರದಲ್ಲೇ ಮುಖಭಂಗಕ್ಕೊಳಗಾದ ಬಿಜೆಪಿ!
ವರದಿಗಾರ, ಜ 29: ಕೇಂದ್ರ ಸರಕಾರದ ಸಂವಿಧಾನ ವಿರೋಧಿ ಪೌರತ್ವ ಕಾಯ್ದೆಯ ಪರ ಸಭೆ ಬಿಜೆಪಿ ಮಂಗಳೂರಿನಲ್ಲಿ ನಡೆಸಿದ್ದ ಸಭೆ ಸಂಪೂರ್ಣವಾಗಿ ವಿಫಲಗೊಂಡಿದೆ ಎನ್ನಲಾಗಿದೆ. ಈ ಕುರಿತು ಬಿಜೆಪಿಯ ಒಳಗೊಳಗೇ ಗುಸುಗುಸು ಪ್ರಾರಂಭೊಗೊಂಡಿದ್ದು, ಸಭೆ ವಿಫಲಗೊಳ್ಳಲು ಇರುವ ಕಾರಣಗಳ ಕುರಿತು ಕಾರ್ಯಕರ್ತರು ಮಾತನಾಡಿಕೊಳ್ಳುತ್ತಿದ್ದಾರೆ. ಭಾರತದ ಹಲವು ಭಾಗಗಳಲ್ಲಿ ಬಿಜೆಪಿ ಸಿಎಎ ಪರ ಸಭೆ ನಡೆಸಿ ವಿಫಲಗೊಂಡಿದ್ದರ ಅರಿವಿದ್ದರೂ ತಮ್ಮ ಶಕ್ತಿ ಕೇಂದ್ರದಲ್ಲೇ ಈ ರೀತಿಯ ಮುಖಭಂಗವನ್ನು ಬಿಜೆಪಿ ನಿರೀಕ್ಷಿಸಿರಲಿಲ್ಲ. ಬಿಜೆಪಿಯ ನಿರೀಕ್ಷೆಯಂತೆ ಜನರು ಈ ಸಭೆಗೆ ಆಗಮಿಸದೆ ಸಂಘಟಕರ ಹುರುಪಿಗೆ ತಣ್ಣೀರೆರಚಿದ್ದು, ಕಾರ್ಯಕ್ರಮಕ್ಕೆ ಕೇರಳದಿಂದ ಜನರು ಆಗಮಿಸಿದ್ದರೂ ನಿರೀಕ್ಷಿತ ಬೆಂಬಲ ಪಡೆಯುವಲ್ಲಿ ವಿಫಲವಾಗಿದೆ. ಬಿಜೆಪಿಯ ಹಿಂದಿನ ಸಭೆಗಳ ಅರ್ಧದಷ್ಟು ಜನರು ಕೂಡ ಆಗಮಿಸಿರಲಿಲ್ಲ ಎಂದು ಸಭೆಯಲ್ಲಿ ಭಾಗವಹಿಸಿದ್ದ ಜನರಾಡಿಕೊಳ್ಳುತ್ತಿದ್ದರು.
ದಕ್ಷಿಣ ಕನ್ನಡ ಜಿಲ್ಲೆ ಕರ್ನಾಟಕದಲ್ಲಿ ಬಿಜೆಪಿಯ ಶಕ್ತಿ ಪ್ರದರ್ಶನದ ಜಿಲ್ಲೆ ಎಂದರೆ ತಪ್ಪಾಗಲಾರದು. ಜಿಲ್ಲೆಯ 8 ಶಾಸಕರಲ್ಲಿ 7 ಶಾಸಕರುಗಳು ಕೂಡಾ ಬಿಜೆಪಿಯವರು. ಇದಷ್ಟೇ ಅಲ್ಲ ಹಲವಾರು ಸ್ಥಳೀಯ ಸಂಸ್ಥೆಗಳಲ್ಲೂ ಕೂಡಾ ಬಿಜೆಪಿ ಪಾರಮ್ಯ ಸಾಧಿಸಿದ್ದನ್ನು ಒಪ್ಪಿಕೊಳ್ಳಲೇಬೇಕು. ಹೀಗಿರುವಾಗ ಕೇಂದ್ರ ಸರಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸಿ ಸಭೆ ನಡೆಸಲು ಕರ್ನಾಟಕದಲ್ಲಿ ಮಂಗಳೂರನ್ನು ಆಯ್ದುಕೊಂಡದ್ದು ಸರಿಯಾಗಿಯೇ ಇತ್ತು. ಆದರೆ ಸಿಎಎ ಪರವಾಗಿನ ಹಿಂದಿನ ಎಲ್ಲಾ ಸಭೆಗಳಂತೆ ಮಂಗಳೂರ ಸಭೆಯೂ ಕೂಡಾ ನಿರೀಕ್ಷಿತ ಜನಬೆಂಬಲ ಪಡೆಯದೆ ವಿಫಲಗೊಂಡಿದೆ ಎನ್ನಲಾಗಿದೆ.
ಮೊದಲು ಗೃಹ ಸಚಿವ ಅಮಿತ್ ಶಾ ಮಂಗಳೂರಿಗೆ ಆಗಮಿಸುತ್ತಾರೆ ಎಂಬ ಸುದ್ದಿ ಇತ್ತು. ಆದರೆ ಕೊನೆ ಗಳಿಗೆಯಲ್ಲಿ ಅವರು ಮಂಗಳೂರು ಕಾರ್ಯಕ್ರಮವನ್ನು ರದ್ದುಗೊಳಿಸಿ, ಹುಬ್ಬಳ್ಳಿಯಲ್ಲಿನ ಸಭೆಯಲ್ಲಿ ಪಾಲ್ಗೊಂಡಿದ್ದರು. ಮುಂದೂಡಿದ ಸಭೆಗೆ ಕೇಂದ್ರ ಮಂತ್ರಿ ರಾಜ್ ನಾಥ್ ಸಿಂಗ್ ಆಗಮಿಸಿದ್ದರೂ, ಜಿಲ್ಲೆಯಲ್ಲಿನ ಬಿಜೆಪಿ ಬೆಂಬಲಿಗರು ಮೋದಿ-ಅಮಿತ್ ಶಾ ಅವರಷ್ಟು ರಾಜ್ ನಾಥ್ ರನ್ನು ನೆಚ್ಚಿಕೊಂಡಿಲ್ಲ. ಮಂಗಳೂರು ಬಿಜೆಪಿಗರ ತಾರಾ ನಾಯಕರ ಆಗಮನದ ನಿರೀಕ್ಷೆ ಹುಸಿಯಾದ ಪರಿಣಾಮವೋ ಎಂಬಂತೆ ಕೂಳೂರಿನ ಗೋಲ್ಡ್ ಫಿಂಚ್ ಬೃಹತ್ ಮೈದಾನ ಮಾತ್ರ ಜನರಿಲ್ಲದೆ ಬಿಕೋ ಎನ್ನುತ್ತಿತ್ತು.
ಈ ಸಭೆ ವಿಫಲಗೊಳ್ಳಲು ಇತರೆ ರಾಜ್ಯಗಳ ಸಭೆಗಳಂತೆ ಜಿಲ್ಲೆಯ ಜನರೂ ಸಿಎಎ ವಿರುದ್ಧದ ನಿಲುವನ್ನು ತೆಗೆದುಕೊಂಡಿರುವುದೋ ಅಥವಾ ತಮ್ಮ ನಿರೀಕ್ಷೆಯ ನಾಯಕರ ಭಾಗವಹಿಸುವಿಕೆ ಸಭೆಯಲ್ಲಿ ಇಲ್ಲದ್ದರಿಂದಲೋ ಎಂಬುವುದು ಬಿಜೆಪಿಯ ಆಂತರಿಕ ಅವಲೋಕನದಲ್ಲಿ ಹೊರಬರಬೇಕಷ್ಟೇ.
