ರಾಜ್ಯ ಸುದ್ದಿ

ಐತಿಹಾಸಿಕ ಸಭೆ…ತ್ರಿವರ್ಣ ಧ್ವಜಗಳ ಕಾರುಬಾರು..ಮೊಳಗಿದ ಆಝಾದಿ ಕೂಗು…ಮಲಗಿದ ಕನ್ನಡ ಮಾಧ್ಯಮಗಳು…!!

  • ಇದು ಮಂಗಳೂರು ಅಡ್ಯಾರ್ ಪ್ರತಿಭಟನೆಯ ವಿಶೇಷ ವರದಿ
  • ಕಮಿಷನರ್ ಹರ್ಷ ವಿರುದ್ಧವೂ ಆಕ್ರೋಶ!

ವರದಿಗಾರ ಜ 16: ಡಿಸೆಂಬರ್19 ರಂದು ಸಂವಿಧಾನ ವಿರೋಧಿ ಪೌರತ್ವ ಕಾಯ್ದೆಯ ವಿರುದ್ಧ ಪ್ರತಿಭಟಿಸಿದ್ದ ಸಣ್ಣ ಗುಂಪನ್ನು ಪೊಲೀಸರು ಲಾಠಿ ಮೂಲಕ ಪ್ರಚೋದಿಸಿ ಅದನ್ನು ನಂತರ ಗೋಲಿಬಾರಾಗಿ ಪರಿವರ್ತಿಸಿ ಎರಡು ಅಮಾಯಕ ಜೀವಗಳನ್ನು ಬಲಿ ಪಡೆದ ನಂತರ ತಣ್ಣಗಿದ್ದ ಮಂಗಳೂರಿಗರ ಕಿಚ್ಚು, ಆವೇಶ, ಆಕ್ರೋಶಗಳು ಒಮ್ಮಿಂದೊಮ್ಮೆ ಭುಗಿಲೆದ್ದ ರೀತಿಯಲ್ಲಿತ್ತು ನಿನ್ನೆ ಮಂಗಳೂರಿನ ಅಡ್ಯಾರ್ ನಲ್ಲಿ ನಡೆದ ಪೌರತ್ವ ಕಾಯ್ದೆಯನ್ನು ವಿರೋಧಿಸಿ ನಡೆದ ಪ್ರತಿಭಟನೆ. ಡಿಸಂಬರ್ 19 ರ ಘಟನೆಯ ನಂತರ ಮಂಗಳೂರು ನಗರ ವ್ಯಾಪ್ತಿಯಲ್ಲಿ ಪ್ರತಿಭಟನೆ ನಡೆಸಲು ಅವಕಾಶ ನಿರಾಕರಿಸಿದ್ದ ಕಮಿಷನರ್ ಹರ್ಷ ಅವರ ನಿರ್ಧಾರವನ್ನು ವಿರೋಧಿಸುತ್ತಲೇ ಜನವರಿ 15 ರಂದು ನಗರದ ಹೊರವಲಯದ ಅಡ್ಯಾರಿನ ಶಾ ಮೈದಾನದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ತಯಾರಾಗಿದ್ದರು.

ಬೆಳಗ್ಗೆ 10 ಗಂಟೆಯಿಂದಲೇ ಮೈದಾನದತ್ತ ಹರಿದುಬರತೊಡಗಿದ್ದ ಜನಸಮೂಹವನ್ನು ನಿಯಂತ್ರಿಸಲು ಪೊಲೀಸರಿಗೆ ಯಾವುದೇ ಕೆಲಸವಿರಲಿಲ್ಲ. ಯಾಕೆಂದರೆ ಶಿಸ್ತಿನ ಸಿಪಾಯಿಗಳಂತೆ 2000ಕ್ಕೂ ಮಿಕ್ಕಿ ಎಲ್ಲಾ ಸಂಘ ಸಂಸ್ಥೆಗಳ ಕಾರ್ಯಕರ್ತರು ಮೈದಾನದ ವೇದಿಕೆಯಿಂದ ತೊಡಗಿ 15 ಕಿ ಮೀ ದೂರದವರೆಗೂ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸುತ್ತಾ ಟ್ರಾಫಿಕ್ ನಿಯಂತ್ರಿಸುತ್ತಿದ್ದರು. ಮಧ್ಯಾಹ್ನ 12 ರ ವೇಳೆಗೆ ಇಡೀ ಮೈದಾನ ತುಂಬಿ ತುಳುಕತೊಡಗಿತು. ಕಾರ್ಯಕ್ರಮ ಸರಿಯಾಗಿ 2.30ಕ್ಕೆ ಪ್ರಾರಂಭವಾದಾಗ ಮೈದಾನ ಅಕ್ಷರಶಃ ಜಾಮ್ ಆಗಿತ್ತು. ನಂತರ ಮೈದಾನದ ಬದಿಯಲ್ಲಿರುವ ಇನ್ನೊಂದು ಮೈದಾನದಲ್ಲಿ ಜನರಿಗೆ ವ್ಯವಸ್ಥೆ ಕಲ್ಪಿಸಲಾಯಿತು. ಆದರೂ ಸಂಜೆ 4.30ರ ತನಕ ಜನರು ಮೈದಾನದತ್ತ ಹರಿದು ಬರುತ್ತಲೇ ಇತ್ತು. ರಾಷ್ಟ್ರೀಯ ಹೆದ್ದಾರಿಯ ಎರಡೂ ಕಡೆಗಳೂ ಸಭಿಕರಿಂದ ತುಂಬಿ ತುಳುಕುತ್ತಿತ್ತು.

ಮೈದಾನದ ಪ್ರತಿ ಮೂಲೆಗಳಲ್ಲೂ ಹೆಮ್ಮೆಯ ತ್ರಿವರ್ಣ ಧ್ವಜ ರಾರಾಜಿಸುತ್ತಿತ್ತು. ತ್ರಿವರ್ಣ ಧ್ವಜಗಳೊಂದಿಗೆ ಆಸೀನರಾಗಿದ್ದ  ಪ್ರತಿಭಟನೆಕಾರರು ವೇದಿಕೆಯಿಂದ ಕ್ಲಿಕ್ಕಿಸಲು ಕ್ಯಾಮರಾಗಳಿಗೂ ನಿಲುಕದ ದೃಶ್ಯವಾಗಿತ್ತು. ಇಡೀ ಮೈದಾನವೇ ಕೇಸರಿ, ಹಸಿರು ಬಿಳಿ ಬಣ್ಣಗಳಿಂದ ಕಂಗೊಳಿಸುತ್ತಾ ಕೇಂದ್ರ ಸರಕಾರದ ಸಂವಿಧಾನ ವಿರೋಧಿ ಕಾಯ್ದೆಯ ವಿರುದ್ಧ ಸಮರ ಸಾರಿತ್ತು.

ಮೈದಾನದಲ್ಲಿ ತುಂಬಿ ತುಳುಕುತ್ತಿದ್ದ ಸಭಿಕರಿಂದ ಪ್ರತಿ ಮೂಲೆಗಳಿಂದಲೂ ‘ಆಝಾದಿ’ ಕಹಳೆ ಮೊಳಗುತ್ತಿತ್ತು. ಸಂಘಟಕರೂ ಕೆಲವೊಮ್ಮೆ ಆಝಾದಿ ಕಹಳೆ ಮೊಳಗಿಸುತ್ತಾ ಸಭಿಕರನ್ನು ಹುರಿದುಂಬಿಸುತ್ತಿದ್ದರು. ಈ ಆಝಾದಿ ಕಹಳೆ ಮೊಳಗಿಸುವಾಗ ಪ್ರತಿ ಸಭಿಕರ ಕೈಯ್ಯಲ್ಲಿದ್ದ  ತ್ರಿವರ್ಣ ಧ್ವಜಗಳು ಹಾರಾಡುತ್ತಾ ದೇಶಭಕ್ತಿಯ ಉನ್ಮಾದ ಸೃಷ್ಟಿಸುತ್ತಿದ್ದವು. ಜನಸಾಗರವೇ ಸಾಕ್ಷಿಯಾಗಿದ್ದ ನಿನ್ನೆಯ ಪ್ರತಿಭಟನೆಯು ಮಂಗಳೂರಿನ ಇತಿಹಾಸದಲ್ಲಿಯೇ ಹಿಂದೆಂದೂ ಕಾಣದ ಸಭೆಯಾಗಿ ಇತಿಹಾಸದ ಪುಟಗಳಲ್ಲಿ ಸೇರ್ಪಡೆಗೊಂಡಿತು.

ಮಲಗಿದ ಕನ್ನಡ ಮಾಧ್ಯಮಗಳು

ಪೌರತ್ವ ಕಾಯ್ದೆಯನ್ನು ವಿರೋಧಿಸಿ, ಅದೇ ರೀತಿ ಎನ್ ಆರ್ ಸಿ ಹಾಗೂ ಎನ್ ಪಿ ಆರ್ ಜಾರಿಗೊಳಿಸುವುದನ್ನು ಪ್ರತಿಭಟಿಸಿ ಅಡ್ಯಾರಿನ ಶಾ ಮೈದಾನದಲ್ಲಿ ಎರಡು ಲಕ್ಷಕ್ಕೂ ಮಿಕ್ಕಿದ ಪ್ರತಿಭಟನೆಕಾರರು ಸೇರಿ ಸರಕಾರದ ಸಂವಿಧಾನ ವಿರೋಧಿ ಕಾಯ್ದೆಯ ವಿರುದ್ಧ ಧ್ವನಿ ಎತ್ತಿದ್ದರೂ ಕನ್ನಡ ಮಾಧ್ಯಮಗಳು ಮಾತ್ರ ಇದಕ್ಕೂ ಮತ್ತು ತಮಗೂ ಏನೂ ಸಂಬಂಧವಿಲ್ಲದಂತೆ ‘ದಿವ್ಯ’ ನಿದ್ರೆಗೆ ಜಾರಿಬಿಟ್ಟಿತ್ತು. ಕೆಲವು ದೃಶ್ಯ ಮಾಧ್ಯಮಗಳು ಸ್ಥಳದಲ್ಲಿ ವರದಿಗಾರಿಕೆಗೆಗಾಗಿ ಹಾಜರಿದ್ದರೂ ಪ್ರತಿಭಟನಾ ಸಭೆಯ ವರದಿಯನ್ನು ಕೆಲವೇ ಸೆಕೆಂಡುಗಳಿಗೆ ಸೀಮಿತಗೊಳಿಸಿತಲ್ಲದೇ, ಆ ಸೆಕೆಂಡುಗಳ ವರದಿಯ ಮಧ್ಯೆಯೂ ಕೆಲ ಮಾಧ್ಯಮಗಳು ಕೇರಳದಿಂದ ಪ್ರತಿಭಟನೆಕಾರರು ಬಂದಿದ್ದಾರೆ ಎಂಬ ತಮ್ಮ ಹಳೆಯ ಕಟ್ಟುಕಥೆಯನ್ನು ಪ್ರಸಾರಿಸಲು ವ್ಯರ್ಥಗೊಳಿಸಿ ರಾಜ್ಯದ ಜನರ ಮುಂದೆ ಅದೇನನ್ನೋ ಸಾಬೀತುಗೊಳಿಸುವ ಪ್ರಯತ್ನ ಮಾಡಿತು. ಮಂಗಳೂರಿನ ಮುದ್ರಣ ಮಾಧ್ಯಮಗಳಂತೂ ಅಡ್ಯಾರಿನ ಪ್ರತಿಭಟನಾ ಸುದ್ದಿಯನ್ನು ಜನರಿಗೆ ತಲುಪದಂತೆ ಮಾಡುವ ಸ್ಪರ್ಧೆಯಲ್ಲಿದ್ದವರಂತೆ ಇದ್ದು, ಜನ ಸಾಗರವನ್ನು ತೋರಿಸುವ ಚಿತ್ರಗಳನ್ನು ಬಿಡಿ ಕನಿಷ್ಟ ಒಂದು ಪ್ಯಾರಾ ಸುದ್ದಿಯನ್ನು ಕೂಡಾ ಪ್ರಕಟಿಸದೆ ತಮ್ಮ ‘ಪ್ಯಾರಾಲೈಸ್ಡ್ ಪತ್ರಿಕಾ ಧರ್ಮ’ ವನ್ನು ರಾಜ್ಯಕ್ಕೆ ಬಿಚ್ಚಿ ತೋರಿಸಿಬಿಟ್ಟಿದೆ.

ಈ ಮಧ್ಯೆ ಡಿಸೆಂಬರ್ 19 ರ ಗೋಲೀಬಾರಿಗೆ ಕಾರಣಕರ್ತರಾಗಿದ್ದ ಜಿಲ್ಲಾ ಕಮಿಷನರ್ ಹರ್ಷ ಅವರ ವಿರುದ್ಧವೂ ಪ್ರತಿಭಟನೆಕಾರರ ಆಕ್ರೋಶ ಕಂಡುಬಂದಿತ್ತು. ಪ್ರತಿಭಟನೆಕಾರರ ಮಧ್ಯೆ ಹಲವಾರು ಪ್ಲಕಾರ್ಡ್ ಗಳು ಹರ್ಷ ಅವರನ್ನು ಗುರಿಯಾಗಿಸಿದ್ದು, ಆ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಒಟ್ಟಿನಲ್ಲಿ ಅಡ್ಯಾರಿನ ಈ ಪ್ರತಿಭಟನೆಯು ಹಲವು ಕಾರಣಗಳಿಂದಾಗಿ ಮಂಗಳೂರಿನ ಇತಿಹಾಸದ ಪುಟಗಳಲ್ಲಿ ಸೇರಿಬಿಟ್ಟಿದೆ ಎಂದರೆ ತಪ್ಪಾಗಲಾರದು.

ಪ್ರತಿಭಟನಾ ಸಮಾವೇಶದಲ್ಲಿ ಭಾಗವಹಿಸಿದ ಜನಸಂಗಮದ ವಿಹಂಗಮ ನೋಟ

 

 

 

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group