Uncategorized

ಮಂಗಳೂರು ಗಲಭೆಯನ್ನು ಮಾಧ್ಯಮಗಳು-ಪೊಲೀಸರು ‘ಪೂರ್ವನಿಯೋಜಿತ’ ಎಂದಿದ್ದ ಟೆಂಪೋ ರಹಸ್ಯದೊಂದಿಗೆ ಬಯಲಾಗಿಸಿದ ಹೆಚ್ ಡಿ ಕುಮಾರಸ್ವಾಮಿ !

  • ಸರಕಾರ-ಪೊಲೀಸ್-ಮಾಧ್ಯಮಗಳ ಕಟ್ಟುಕಥೆಗಳನ್ನು ಬೆತ್ತಲಾಗಿಸಿದ ಮಾಜಿ ಮುಖ್ಯಮಂತ್ರಿ !
  • ವೀಡೀಯೋಗಳಲ್ಲಿ ಬೆಚ್ಚಿ ಬೀಳಿಸುತ್ತಿದೆ ಪೊಲೀಸ್ ‘ಬರ್ಬರತೆ’ !
  • ಮಣ್ಣು ತುಂಬಿಸಿದ್ದ ಟೆಂಪೋವನ್ನೇ ಗಲಭೆಗೆ ಮೂಲ ಕಾರಣ ಎಂದಿದ್ದ ‘ಸುವರ್ಣ ಚಾನೆಲ್’ !

 

ವರದಿಗಾರ ಜ 10 : ಮಂಗಳೂರು ಗಲಭೆಗೆ ಸಂಬಂಧಪಟ್ಟಂತೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಬಹುಮುಖ್ಯ ಸಿಡಿ ಒಂದನ್ನು ಇಂದು ಬೆಂಗಳೂರಿನಲ್ಲಿ ಬಿಡುಗಡೆಗೊಳಿಸಿದ್ದು, ಅದರಲ್ಲಿ ಸರಕಾರ, ಪೊಲೀಸ್ ಇಲಾಖೆ ಹಾಗೂ ಕೆಲ ಕನ್ನಡ ಮಾಧ್ಯಮಗಳು ಸೇರಿಕೊಂಡು ಈ ಗಲಭೆಯನ್ನು ‘ಪೂರ್ವಯೋಜಿತ’ ಎಂದು ನಿರೂಪಿಸಲು ಶ್ರಮಪಟ್ಟದ್ದು ಗೋಚರಿಸುತ್ತಿದೆ. ಸಿಡಿಯು 35 ವಿವಿಧ ದೃಶ್ಯಾವಳಿಗಳನ್ನು ಒಳಗೊಂಡಿದ್ದು, ಅದರಲ್ಲಿ ಪೊಲೀಸರು ನಡೆಸಿದ ದೌರ್ಜನ್ಯದ ಬರ್ಬರತೆ, ಟೆಂಪೋ ಒಂದನ್ನು ತೋರಿಸಿ ಮಾಧ್ಯಮಗಳನ್ನು ಬಳಸಿಕೊಂಡು, ಗಲಭೆ ಆ ಟೆಂಪೋದ ಮೂಲಕವೇ ಶುರು ಆದದ್ದು ಎಂಬಂತೆ ಬಿಂಬಿಸಿದ್ದರು. ಅವೆಲ್ಲಾ ಕಟ್ಟುಕಥೆಗಳ ನೈಜ ವಾಸ್ತವಗಳನ್ನು ಕುಮಾರಸ್ವಾಮಿ ಬಿಡುಗಡೆಗೊಳಿಸಿದ ಆ 26 ನಿಮಿಷದ ವೀಡಿಯೋದಲ್ಲಿ ಬಹಿರಂಗಗೊಂಡಿದೆ.

ಟೆಂಪೋದಲ್ಲಿ ಕಲ್ಲು ಕಟ್ಟುಕಥೆಯ ವಾಸ್ತವವೇನು ?

ಮಂಗಳೂರು ಪೊಲೀಸ್ ಕಮಿಷನರ್ ಬಿಡುಗಡೆ ಮಾಡಿದ್ದ ವೀಡಿಯೋದಲ್ಲಿ ಟೆಂಪೋ ಒಂದರಲ್ಲಿ ಕಲ್ಲುಗಳನ್ನು ತುಂಬಿಕೊಂಡು ಬಂದಿದ್ದರು, ಇದು ಗಲಭೆ ಪೂರ್ವಯೋಜಿತ ಅನ್ನುವುದಕ್ಕೆ ಸಾಕ್ಷ್ಯ ಎಂದು ‘ಸುವರ್ಣ ಸುದ್ದಿ ವಾಹಿನಿ’ ಸೇರಿದಂತೆ ಕನ್ನಡದ ಕೆಲ ಮಾಧ್ಯಮಗಳು ವರ್ಣರಂಜಿತ ಕಟ್ಟುಕಥೆ ಹೆಣೆದಿದ್ದವು. ಆದರೆ ಈ ವೀಡೀಯೋ ತಿರುಚಿದ ವೀಡೀಯೋ ಆಗಿದ್ದು, ಅಲ್ಲಿ ಎರಡು ನಿಮಿಷಗಳ ವೀಡೀಯೋಗೆ ಕತ್ತರಿ ಹಾಕಿ ಏನನ್ನೋ ಜನತೆಯಿಂದ ಮುಚ್ಚಿಡುವ ಪ್ರಯತ್ನ ಮಾಡಲಾಗಿತ್ತು. ಮಾಧ್ಯಮಗಳು ಅದನ್ನು ಪ್ರಶ್ನಿಸದೆ ಜಾಣ ಕುರುಡುತನ ಮೆರೆದಿದ್ದವು.

ಕುಮಾರಸ್ವಾಮಿ ಬಿಡುಗಡೆ ಮಾಡಿರುವ ವೀಡೀಯೋದಲ್ಲಿ ಅದರ ಅಸಲಿಯತ್ತು ಬಹಿರಂಗಗೊಂಡಿದ್ದು, ಈ ವೀಡಿಯೋ  ಮಂಗಳೂರ ಹೊರವಲಯದ ಕಣ್ಣೂರ್ ಎಂಬಲ್ಲಿನ ಅಶ್ಫಾಕ್ ಎನ್ನುವವರಿಗೆ ಸೇರಿದ ಟೆಂಪೋ ಅದಾಗಿದ್ದು, ಬಂದರ್ ಪ್ರದೇಶದ ಕಂದುಕ ಎಂಬಲ್ಲಿನ ಫ್ಲಾಟ್ ಒಂದರಲ್ಲಿ ಒಡೆದು ಹಾಕಿದ್ದ ಮನೆಯೊಂದರ ಕಲ್ಲು ಮಣ್ಣುಗಳ ಅವಶೇಷಗಳನ್ನು ತುಂಬಿಕೊಂಡು ಮಂಗಳೂರಿನ ಜೆಪ್ಪು ಪ್ರದೇಶದಲ್ಲಿ ಸುರಿದಿದ್ದರು. ಮೂರು ಬಾರಿ ಅವಶೇಷಗಳನ್ನು ಹಾಕಿದ್ದ ಅಶ್ಫಾಕ್, ನಾಲ್ಕನೇ ಟ್ರಿಪ್ ಪ್ರಯಾಣಕ್ಕೆ ಅವಶೇಷಗಳನ್ನು ತುಂಬಿಕೊಂಡು ವಾಪಾಸ್ ಹೋಗುವಾಗ ಗಲಭೆ ಪ್ರಾರಂಭವಾಗಿತ್ತು. ಸುರಕ್ಷಿತ ಪ್ರದೇಶವನ್ನು ಹುಡುಕಿಕೊಂಡು ಟೆಂಪೋ ಪಾರ್ಕ್ ಮಾಡಿದ್ದ ಅಶ್ಫಾಕ್ ರವರ ಟೆಂಪೋವನ್ನೇ ‘ಸುವರ್ಣ ಸುದ್ದಿ’ ವಾಹಿನಿ ಸೇರಿದಂತೆ ಕನ್ನಡದ ಕೆಲವು ಚಾನೆಲ್ ಗಳು ಗಲಭೆಗೆ ಬೇಕಾಗಿ ಪೂರ್ವಯೋಜಿತವಾಗಿ ಕಲ್ಲುಗಳನ್ನು ತುಂಬಿಕೊಂಡು ಬಂದಿದ್ದ ಟೆಂಪೋ ಎಂದು ಜನರಿಗೆ ಸುಳ್ಳು ವರದಿಯನ್ನು ಮಾಡಿದ್ದವು. ಆದರೆ ಕುಮಾರಸ್ವಾಮಿಯಾರ ಈ ವೀಡೀಯೋದ ಮೂಲಕ ಆ ಟೆಂಪೋಗೂ ಮಂಗಳೂರ ಗಲಭೆಗೂ ಎಳ್ಳಷ್ಟೂ ಸಂಬಂಧವಿಲ್ಲ ಅನ್ನುವುದು ಸಾಬೀತಾಗಿದೆ. ಮಾತ್ರವಲ್ಲ ಮಂಗಳೂರು ಪೊಲೀಸರು ಮಾಧ್ಯಮಗಳನ್ನು ಬಳಸಿಕೊಂಡು ಆ ಟೆಂಪೋದ ಸುತ್ತ ಹಲವು ವರ್ಣರಂಜಿತ ಕಥೆಗಳನ್ನು ಹೆಣೆದಿದ್ದು, ಅವುಗಳೆಲ್ಲವೂ ಈ ವೀಡಿಯೋದ ಮೂಲಕ ಮಕಾಡೆ ಮಲಗಿದೆ. ಟೆಂಪೋ ಚಾಲಕ ಅಶ್ಫಾಕ್ ಈ ಕುರಿತಾಗಿ ವಾಸ್ತವಾಂಶಗಳನ್ನು ಹೇಳುವ ದೃಶ್ಯ ವೀಡಿಯೋದಲ್ಲಿದೆ. ಮಾತ್ರವಲ್ಲ ಅವಶೇಷಗಳನ್ನು ತೆಗೆದುಕೊಂಡು ಹೋಗಲು ಹೇಳಿದ್ದ ಅಲ್ಲಿನ ಫ್ಲಾಟ್ ಅಸೋಶಿಯೇಶನ್ ಕಾರ್ಯದರ್ಶಿ ಅಮ್ಜದ್ ಎಂಬವರ ಹೇಳಿಕೆಯನ್ನೂ ದಾಖಲಿಸಿಕೊಳ್ಳಲಾಗಿದೆ

ವೀಡಿಯೋದಲ್ಲಿ ಪೊಲೀಸ್ ಲಾಠಿಯ ಬರ್ಬರತೆ !

ಕುಮಾರಸ್ವಾಮಿ ಬಿಡುಗಡೆ ಮಾಡಿರುವ ವೀಡಿಯೋದಲ್ಲಿ ಗಲಭೆಗೆ ಮೊದಲ ಪ್ರಚೋದನೆ ಪೊಲೀಸರ ಕಡೆಯಿಂದಲೇ ಆಗಿದೆ ಎನ್ನುವುದಕ್ಕೆ ಪ್ರಬಲ ಸಾಕ್ಷ್ಯ ದೊರೆತಿದೆ. ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದವರನ್ನು ಸೆಕ್ಷನ್ ಉಲ್ಲಂಘನೆ ಮಾಡಿರುವ ಕಾರಣಕ್ಕೆ ಬಂಧಿಸುವ ಬದಲಾಗಿ ಪೊಲೀಸರು ಏಕಾ ಏಕಿ ತಲೆಯನ್ನು ಗುರಿಯಾಗಿಸಿ ಲಾಠಿ ಬೀಸಿದ್ದು ಕಂಡುಬಂದಿದೆ. ಅದು ಮಾತ್ರವಲ್ಲ ಅಲ್ಲಿದ್ದ ಪತ್ರಕರ್ತರ ಮೇಲೂ ಕ್ರೌರ್ಯ ಮೆರೆದಿದ್ದಾರೆ. ಒಂದು ದೃಶ್ಯದಲ್ಲಂತೂ ಓರ್ವ ಪತ್ರಕರ್ತನ ವಿಡೀಯೋ ಬಲವಂತವಾಗಿ ಎಳೆಯುವ ದೃಶ್ಯವಿದೆ. ಬೀದಿ ವ್ಯಾಪಾರಿಗಳು, ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳ ಮೇಲೆ ಲಾಠಿಯು ಎಗ್ಗಿಲ್ಲದೆ ದಾಳಿ ಮಾಡಿದೆ. ಅಂಗಡಿ ವ್ಯಾಪಾರಸ್ಥರನ್ನು ಬಲವಂತವಾಗಿ ಅಂಗಡಿ ಮುಚ್ಹುವಂತೆ ಲಾಠಿ ಬೀಸುತ್ತಾ, ಅವರನ್ನು ಎಳೆದಾಡುತ್ತಾ ಬರ್ಬರತೆ ಮೆರೆದಿದ್ದಾರೆ. ನೆಲ್ಲಿಕಾಯಿ ರಸ್ತೆಯ ಮಸೀದಿಯೊಳಗೆ ಪೊಲೀಸರೇ ಕಲ್ಲು ಹಾಕುವ ದೃಶ್ಯವಿದೆ, ಮಾತ್ರವಲ್ಲ ಅದೇ ಮಸೀದಿಗೆ ಅಶ್ರುವಾಯು ಸಿಡಿಸಿ, ಮೂರು ಸುತ್ತುಗಳ ಗುಂಡು ಹಾರಾಟ ಮಾಡಲಾಗಿದೆ. ಆ ಕುರಿತು ಮಸೀದಿ ಆಡಳಿತ ಮಂಡಳಿ ಪೊಲೀಸ್ ದೂರು ನೀಡಿದ್ದು, ಮಸೀದಿ ಆವರಣದಲ್ಲಿ ಸಿಕ್ಕಿರುವ ಮೂರು ಗುಂಡುಗಳನ್ನು ತಮ್ಮ ವಶದಲ್ಲಿ ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ.

ಹಗಲು  ಹೊತ್ತಿನ ಸಿಸಿಟಿವಿ ವೀಡಿಯೋವನ್ನು ಕಗ್ಗತ್ತಲ ದೃಶ್ಯದಂತೆ ತೋರಿಸಿದ್ದು ಯಾಕೆ ?

ಮನೆಯ ಅವಶೇಷಗಳ ಹೊತ್ತ ಟೆಂಪೋದಲ್ಲಿ ಕಲ್ಲುಗಳನ್ನು ತುಂಬಿಸಿಕೊಂಡು ಬರಲಾಗಿತ್ತು ಎಂಬ ಕಟ್ಟುಕಥೆಯಲ್ಲಿನ ದೃಶ್ಯಾವಳಿಗಳ ಸಮಯ ಡಿಸಂಬರ್ 19ರ ಸಂಜೆ 4.45 ರದ್ದು, ಆದರೆ ಅದರ ದೃಶ್ಯಗಳು ಮಧ್ಯರಾತ್ರಿಯ ದೃಶ್ಯಗಳಂತೆ ಮಾಡಿ ತೋರಿಸಿದ್ದು ಸಂಶಯಗಳಿಗೆ ಆಸ್ಪದ ನೀಡುತ್ತಿತ್ತು.  ಗಲಭೆ ಪ್ರದೇಶದ ಹಲವು ಮನೆಗಳ ಸಿಸಿಟಿವಿ ಡಿವಿಆರ್ ಗಳನ್ನು ವಶಪಡಿಸಿರುವ ಪೊಲೀಸ್ ಇಲಾಖೆ, ಅದನ್ನು ವಾಪಾಸ್ ಕೊಡುವಾಗ ಅದರಲ್ಲಿನ ಕೆಲ ದೃಶ್ಯಗಳಿಗೆ ಕತ್ತರಿ ಹಾಕಿದ್ದು ಸಾರ್ವಜನಿಕರಲ್ಲಿ ಅಚ್ಚರಿ ಹುಟ್ಟುಹಾಕಿದೆ. ಮಾಧ್ಯಮಗಳಿಗೆ ಬಿಡುಗಡೆಗೊಳಿಸಿರುವ ಮಂಗಳೂರಿನ ವೀಡೀಯೋಗಳನ್ನು ತಯಾರು ಮಾಡಲು ಬೆಂಗಳೂರಿನಿಂದ ಓರ್ವ ತಂತ್ರಜ್ಞ ಬಂದಿರುವ ಬಗ್ಗೆಯೂ ಸಾರ್ವಜನಿಕರು ಗುಮಾನಿ ವ್ಯಕ್ತಪಡಿಸುತ್ತಿದ್ದು, ಈ ಕುರಿತು ಹೆಚ್ಚಿನ ತನಿಖೆಯಿಂದ ವಾಸ್ತವಗಳು ಹೊರಬರಬಹುದಾಗಿದೆ.

ಒಟ್ಟಿನಲ್ಲಿ ಸೆಕ್ಷನ್ 144 ನ್ನು ಉಲ್ಲಂಘಿಸಿದ ಆರೋಪದಲ್ಲಿ ಬೆರಳೆಣಿಕೆಯ ಪ್ರತಿಭಟನೆಕಾರರನ್ನು ಬಂಧಿಸಿ, ಮುಗಿಸುವ ಪ್ರಕರಣವನ್ನು ಪೊಲೀಸ್ ಇಲಾಖೆ ಲಾಠಿಯ ಮೂಲಕ ಪ್ರಚೋದಿಸಿ, ಗೋಲಿಬಾರ್ ಹಂತಕ್ಕೆ ಕೊಂಡೊಯ್ದು ಎರಡು ಅಮಾಯಕ ಜೀವಗಳ ಸಾವಿಗೆ ಕಾರಣವಾಗಿದೆ. ರಾಜ್ಯ ಸರಕಾರ ಆದೇಶಿಸಿರುವ ಮ್ಯಾಜಿಸ್ಟ್ರೇಟ್ ತನಿಖೆಯನ್ನು ರಾಜ್ಯ ಸರಕಾರದ ಅಧಿಕಾರಿಯಾಗಿರುವ ಉಡುಪಿ ಜಿಲ್ಲಾಧಿಕಾರಿ ಅವರಿಗೆ ವಹಿಸಲಾಗಿದೆ. ಇದು ಸರಕಾರಕ್ಕೆ ಬೇಕಾದ ರೀತಿಯ ಏಕಪಕ್ಷೀಯವಾದ ತನಿಖಾ ವರದಿಗೆ ಕಾರಣವಾಗುತ್ತದೆ. ಆದುದರಿಂದ ಘಟನೆಯ ಸಂಪೂರ್ಣ ತನಿಖೆಯನ್ನು ಹೈಕೋರ್ಟಿನ ನ್ಯಾಯಾಧೀಶರೋರ್ವರಿಗೆ  ವಹಿಸಿಕೊಡಿ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

ಕುಮಾರಸ್ವಾಮಿ ಬಿಡುಗಡೆಗೊಳಿಸಿರುವ ವೀಡಿಯೋ –  ಕೃಪೆ : Mangalore Leaks

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group