
ವರದಿಗಾರ (ಜ.10,2020): ಉತ್ತರ ಪ್ರದೇಶದಲ್ಲಿ ಸಾಮಾಜಿಕ ಸಂಘಟನೆಯಾಗಿ ಕಾರ್ಯನಿರ್ವಹಿಸುತ್ತಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವನ್ನು ನಿಷೇಧಿಸುವಂತೆ ರಾಜ್ಯದ ಮುಖ್ಯಮಂತ್ರಿ ಆದಿತ್ಯನಾಥ್ ಕೇಂದ್ರ ಸರಕಾರಕ್ಕೆ ಕೋರಿಕೆ ಸಲ್ಲಿಸಿದ್ದರು. ಯೋಗಿಯ ಈ ದಮನಕಾರಿ ನೀತಿಯನ್ನು ವಿರೋಧಿಸಿ ಬಿಜೆಪಿಯ ಮಾಜಿ ನಾಯಕ, ಮಾಜಿ ವಿತ್ತ ಮಂತ್ರಿ ಹಾಗೂ ಸದ್ಯ ಕೇಂದ್ರ ಸರಕಾರ ಕಟು ವಿಮರ್ಶಕರಾಗಿರುವ ಯಶವಂತ್ ಸಿನ್ಹಾ ಸೇರಿದಂತೆ 24ಕ್ಕೂ ಹೆಚ್ಚು ಪ್ರಮುಖ ಸಂಘಟನೆಗಳು ಹಾಗೂ ಉನ್ನತ ಚಿಂತಕರು ಇದನ್ನು ಕಟುವಾಗಿ ವಿರೋಧಿಸಿದ್ದಾರೆ. ಕೆಲವೊಂದು “ವ್ಯಕ್ತಿಗಳು” ನಡೆಸಿರುವ ಕೃತ್ಯವನ್ನು ಸಂಘಟನೆಗಳ ಮೇಲೆ ಹಾಕುವ ದುರುದ್ದೇಶವನ್ನು ಎಲ್ಲರೂ ಒಕ್ಕೊರಳಿನಿಂದ ವಿರೋಧಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ರಾಜ್ಯ ಸರಕಾರ ಪ್ರಜಾಸತ್ತಾತ್ಮಕ ಪ್ರತಿಭಟನೆಗಳನ್ನು ಹತ್ತಿಕ್ಕುವ ದಮನಕಾರೀ ನೀತಿಗಳನ್ನು ಹಾಗೂ ಮಾನವಹಕ್ಕುಗಳ ಮೇಲಿನ ದಾಳಿಗಳನ್ನು ಇವರೆಲ್ಲರೂ ಖಂಡಿಸಿದ್ದಾರೆ.
ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಸರಕಾರ ರಾಜ್ಯದಲ್ಲಿ ಸಂವಿಧಾನ ವಿರೋಧಿ ಪೌರತ್ವ ಕಾಯ್ದೆಯನ್ನು ವಿರೋಧಿಸಿ ನಡೆದ ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸರು ಆಕ್ರಮಣಕಾರಿ ಕ್ರಮಗಳನ್ನು ಕೈಗೊಂಡಿದ್ದರು. ಪೊಲೀಸ್ ದೌರ್ಜನ್ಯಗಳ ವರದಿಗಳು ಹೇರಳವಾಗಿ ವರದಿಯಾಗಿದ್ದವು. ಈ ಮಧ್ಯೆ ಪ್ರತಿಭಟನೆಗಳಲ್ಲಿ ಪಿಎಫ್ಐ ಸಂಘಟನೆಯ ಕಾರ್ಯಕರ್ತರು ಪಾಲ್ಗೊಂಡಿದ್ದರು ಎಂಬ ಕ್ಷುಲ್ಲಕ ಕಾರಣ ನೀಡಿ, ಸಂಘಟನೆಯನ್ನೇ ನಿಷೇಧಿಸುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಕೋರಿಕೆ ಸಲ್ಲಿಸಿದ್ದರು. ಇದು ಯೋಗಿಯ ಸರ್ವಾಧಿಕಾರಿ ನೀತಿಯನ್ನು ಪ್ರತಿಫಲಿಸುತ್ತಿತ್ತು. ಜನಪರ ಹೋರಾಟಗಳಲ್ಲಿ ಸಂಘಟನೆಗಳು ಭಾಗವಹಿಸುವುದನ್ನು ತಡೆಯುವ ಉದ್ದೇಶಗಳನ್ನು ಹೊಂದಿದೆ ಎಂದು ಹಲವರು ಇದನ್ನು ಆಗಲೇ ಖಂಡಿಸಿದ್ದರು.
“ಇದು ಸತ್ಯಗಳನ್ನು ಇಲ್ಲವಾಗಿಸುವ ಕ್ರಮವಾಗಿದೆ, ಪೌರತ್ವ ಕಾಯ್ದೆಯ ವಿರುದ್ಧದ ಜನಾಂದೋಲನಗಳು ಹಿಂದೆಯೂ ಇತ್ತು ಮುಂದಕ್ಕೂ ಇರುತ್ತದೆ. ಅದು ಯಾವುದೇ ಸಂಘಟನೆಗಳ, ಪಕ್ಷಗಳ ಅಥವಾ ಯಾವುದೇ ವ್ಯಕ್ತಿಗಳ ನೇತೃತ್ವದಲ್ಲಿ ನಡೆದಂತಹವುಗಳಲ್ಲ. ಈ ರೀತಿಯ ಕ್ರಮಗಳೌ ಕೇವಲ ರಾಜಕೀಯ ಹಗೆತನವಷ್ಟೇ” ಎಂದು ಯಶವಂತ್ ಸಿನ್ಹಾ ಸೇರಿದಂತೆ ಹಲವರು ಸಹಿ ಹಾಕಿರುವ ಪಿಎಫ್ಐ ಜಂಟಿಯಾಗಿ ಬಿಡುಗಡೆಗೊಳಿಸಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ. ಉತ್ತರ ಪ್ರದೇಶದಲ್ಲಿ ಇನ್ನೂ ಹಲವಾರು ಪ್ರಮುಖ ನಾಯಕರು ಹಾಗೂ ಅಮಾಯಕರು ಜೈಲಿನಲ್ಲಿದ್ದಾರೆ. ಪ್ರತಿಭಟನೆಗಳನ್ನು ಹತ್ತಿಕ್ಕುವ ನೆಪದಲ್ಲಿ ನಡೆದ ಪೊಲೀಸರ ದೌರ್ಜನ್ಯಗಳ ಕುರಿತು ಸತಂತ್ರ ಸಂಸ್ಥೆಗಳ ಮೂಲಕ ತನಿಖೆ ನಡೆಸಬೇಕು, ಜೈಲಿನಲಿರುವ ಅಮಾಯಕರನ್ನು ಬಿಡುಗಡೆಗೊಳಿಸಬೇಕು ಎಂದು ಹೇಳಿಕೆಗಳಲ್ಲಿ ಉಲ್ಲೇಖಿಸಲಾಗಿದೆ.
ಈ ಹೇಳಿಕೆಗೆ ಸಹಿ ಹಾಕಿರುವ ಪ್ರಮುಖರಲ್ಲಿ ಯಶವಂತ್ ಸಿನ್ಹಾ , ಮುಸ್ಲಿಮ್ ಪರ್ಸನಲ್ ಲಾ ಬೋರ್ಡಿನ ಪ್ರಧಾನ ಕಾರ್ಯದರ್ಶಿ ಮೌಲಾನಾ ವಲಿ ರಹ್ಮಾನಿ, ಮೌಲಾನಾ ಕೆ ಆರ್ ಸಜ್ಜಾದ್ ನೊಮಾನಿ, BAMCEF ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ವಾಮನ್ ಚಿಂದುಜಿ ಮೆಶ್ರಮ್, ಭೀಮ್ ಆರ್ಮಿಯ ನಾಯಕ ಚಂದ್ರಶೇಖರ್ ಆಜಾದ್, ಮಾಜಿ ಸಂಸದ ಮೌಲಾನಾ ಉಬೇದುಲ್ಲಾ ಖಾನ್ ಅಝ್ಮಿ, ಬಾಂಬೆ ಹೈಕೋರ್ಟಿನ ಮಾಜಿ ನ್ಯಾಯಾಧೀಶ ಬಿ ಜಿ ಖೋಲ್ಸೆ, ಖೋಲ್ಸೆ, ಎಸ್ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ ಕೆ ಫೈಝಿ, ವೆಲ್ಫೇರ್ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷ ಡಾ. ಎಸ್ ಕ್ಯೂ ಆರ್ ಇಲ್ಯಾಸ್, ಮಾಜಿ ಕೇಂದ್ರ ಮಂತ್ರಿ ಲಾಲ್ಮನಿ ಪ್ರಸಾದ್, ಜಮಾಅತೆ ಇಸ್ಲಾಮೀ ಹಿಂದ್ ನ ರಾಷ್ಟ್ರೀಯ ಸಲಹಾ ಸಮಿತಿಯ ಸದಸ್ಯ ಹಾಗೂ ಸಾರ್ವಜನಿಕ ಸಂಪರ್ಕದ ನಿರ್ದೇಶಕ ಮುಜ್ತಬಾ ಫಾರೂಕ್, ರಾಷ್ಟ್ರೀಯ ಜನಹಿತ್ ಪಕ್ಷ, ಅಡ್ವಕೇಟ್ ಭಾನು ಪ್ರತಾಬ್ ಸಿಂಗ್ , ಅಜ್ಮೀರಿನ ಸಯ್ಯೆದ್ ಸರ್ವರ್ ಚಿಸ್ತಿ, ಇಂಡೀಯನ್ ನ್ಯಾಶನಲ್ ಲೀಗಿನ ಪ್ರೊಫೆಸರ್ ಮುಹಮ್ಮದ್ ಸುಲೇಮಾನ್ , ದೆಹಲಿ ವಿವಿಯ ನಿಶಾಂತ್ ವರ್ಮಾ ಹಾಗೂ ಅಭಾ ದೇವ್, ಅಖಿಲ ಭಾರತ ಅಂಬೇಡ್ಕರ್ ಮಹಾಸಭಾದ ಅಶೋಕ್ ಭಾರ್ತಿ ಸೇರಿದಂತೆ ಇನ್ನೂ ಹಲವಾರು ರಾಜಕೀಯ ಪಕ್ಷ ಹಾಗೂ ಸಂಘಟನೆಗಳ ನಾಯಕರು ಸಹಿ ಹಾಕಿದ್ದಾರೆ.
