ವರದಿಗಾರ ವಿಶೇಷ

ಮಂಗಳೂರು ಗೋಲಿಬಾರ್: ಬಚ್ಚಿಟ್ಟ ಕರಾಳ ಸತ್ಯಗಳನ್ನು ಬಿಚ್ಚಿಡುತ್ತಿಲ್ಲವೇಕೆ ಆ ಸಿಸಿಟಿವಿ ಕ್ಯಾಮರಾ ?

ಅಂಗೈ ಹುಣ್ಣನ್ನು ಪೊಲೀಸರು ಕನ್ನಡಿಯಲ್ಲಿ ನೋಡಿದ್ದು ಯಾಕೆ ?

ವರದಿಗಾರ (ಜ.03,20): ಮಂಗಳೂರಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಪ್ರತಿಭಟಿಸಿ ಬೀದಿಗಿಳಿದಿದ್ದ ಪ್ರತಿಭಟನೆಕಾರರ ಮೇಲೆ ಗುಂಡು ಹಾರಿಸಿ ಎರಡು ಅಮಾಯಕ ಜೀವಗಳನ್ನು ಬಲಿ ತೆಗೆದುಕೊಂಡ ಕಮಿಷನರ್ ಹರ್ಷ ನೇತೃತ್ವದ ಪೊಲೀಸ್ ತಂಡ ಇನ್ನೂ ಅನೇಕ ಪ್ರಶ್ನೆಗಳಿಗೆ ಉತ್ತರಿಸಬೇಕಾಗಿದೆ. ಗೋಲೀಬಾರ್ ನಡೆಸಲು ಕಮಿಷನರ್ ಹರ್ಷ ನೀಡಿದ್ದ ಒಂದು ಪ್ರಮುಖ ಕಾರಣವಾಗಿದೆ ಪ್ರತಿಭಟನೆಕಾರರು ಮಂಗಳೂರು ಬಂದರು ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿ, ಆಯುಧಗಳನ್ನು ಲೂಟಿ ಮಾಡಿ ಠಾಣೆಗೆ ಬೆಂಕಿ ಹಾಕಲು ಪ್ರಯತ್ನಿಸಿದ್ದರು ಎಂದು !

ಆದರೆ ಈಗ ಬೆಳಕಿಗೆ ಬರುತ್ತಿರುವ ಒಂದೊಂದು ಮಾಹಿತಿಗಳು ಹಾಗೂ ವೀಡಿಯೋಗಳು ಬೇರೆಯದೇ ಕಥೆಗಳನ್ನು ಹೇಳುತ್ತಿದೆ. ಸಾಮಾಜಿಕ ತಾಣಗಳಲ್ಲಿ ಈಗ ಹೊಸ ವೀಡಿಯೋ ಒಂದು ವೈರಲ್ ಆಗುತ್ತಿದ್ದು , ಮಂಗಳೂರು ಗೋಲೀಬಾರ್ ಪ್ರಕರಣ ಮುಚ್ಚಿಟ್ಟ ಹಲವಾರು ಕರಾಳ ಸತ್ಯಗಳ ವಾಸ್ತವಗಳನ್ನು ಹೊರ ಹಾಕುವಂತೆ ಸಾರ್ವಜನಿಕರ ಕೂಗನ್ನು ಆ ವೀಡಿಯೋ ಪ್ರತಿನಿಧಿಸುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೋ ವೀಕ್ಷಿಸಿ:

ಆ ವೀಡಿಯೋದಲ್ಲಿ ಬಂದರು ಠಾಣೆಯ ಮೇಲಿನ ದಾಳಿ ಹಾಗೂ ಬೆಂಕಿ ಹಾಕುವ ಪೊಲೀಸರ ಕಟ್ಟುಕಥೆಯಲ್ಲಿ ಪ್ರಧಾನ ಭೂಮಿಕೆ ನಿರ್ವಹಿಸುವ ಪಾತ್ರವೊಂದರ ಕುರಿತು ಪ್ರಶ್ನಿಸಲಾಗಿದ್ದು, ಆ ಪಾತ್ರವೇ ಬಂದರು ಪೊಲೀಸ್ ಠಾಣೆಯ ಆವರಣದಲ್ಲಿರುವ 360 ಡಿಗ್ರೀ ಸಾಮರ್ಥ್ಯದ ಸಿಸಿಟಿವಿ ಕ್ಯಾಮರಾ ! ಪೊಲೀಸರು ಹೇಳುವಂತೆ ಪ್ರತಿಭಟನೆಕಾರರು ಬಂದರು ಠಾಣೆಗೆ ಬೆಂಕಿ ಹಾಕಲು ಪ್ರಯತ್ನಿಸಿದ್ದೇ ಆದಲ್ಲಿ ಪೊಲೀಸರ ಸುಪರ್ದಿಯಲ್ಲೇ ಇರುವ ಆ ಸಿಸಿಟಿವಿ ಕ್ಯಾಮರಾದ ಮಾಹಿತಿಗಳನ್ನು ಇದುವರೆಗೂ ಬಹಿರಂಗಪಡಿಸಿಲ್ಲ ಎಂದು ಪ್ರಶ್ನಿಸಲಾಗಿದೆ.

ಪ್ರತಿಭಟನೆಕಾರರು ಬಂದರು ಠಾಣೆಯ ಮೇಲೆ ದಾಳಿ ಮಾಡಲು ಪ್ರಯತ್ನಿಸಿದ್ದೇ ಆದಲ್ಲಿ ಖಂಡಿತವಾಗಿಯೂ ಆ ಕ್ಯಾಮರಾದಲ್ಲಿ ಅದರ ಮಾಹಿತಿ ಇದ್ದಿರಲೇಬೇಕು. ಅದು ಗೋಲೀಬಾರಿಗೆ ಬಹುಮುಖ್ಯ ಸಾಕ್ಷ್ಯವಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಕಮಿಷನರ್ ಹರ್ಷ ಅವರು ತಮ್ಮ ಇಲಾಖೆಯ ಅಧೀನದಲ್ಲೇ ಇರುವ ಬಹುಮುಖ್ಯ ವೀಡಿಯೋ ಸಾಕ್ಷ್ಯವನ್ನು ಪರಿಗಣಿಸಿದ್ದಿದ್ದರೆ, ಸಾರ್ವಜನಿಕರಲ್ಲಿ ವೀಡಿಯೋ ಕಳಿಸಿ ಎಂದು ವಿನಂತಿ ಮಾಡುವ ಪ್ರಮೇಯ ಬರುತ್ತಿತ್ತೇ ಎನ್ನುವುದು ಈಗ ಯಕ್ಷ ಪ್ರಶ್ನೆ. ಪ್ರಕರಣವನ್ನು ರಾಜ್ಯ ಸರಕಾರ ಸಿಐಡಿ ತನಿಖೆಗೆ ವಹಿಸಿ, ಅದಾಗಲೇ ತನಿಖೆ ಪ್ರಾರಂಭಿಸಿತ್ತು. ಇದರ ಮಧ್ಯೆ ಕಮಿಷನರ್ ಅವರ ವಿನಂತಿ ಸಾರ್ವಜನಿಕರ ಸಂಶಯಕ್ಕೆ ಕಾರಣವಾಗಿತ್ತು. ತದ ನಂತರ ತಮಗೆ ದೊರೆತ ವೀಡಿಯೋಗಳನ್ನು ಮಾಧ್ಯಮಗಳಿಗೆ ಬಿಡುಗಡೆಗೊಳಿಸಿ, ಕನ್ನಡದ ಕೆಲ ದೃಶ್ಯ ಮಾಧ್ಯಮಗಳು ಆ ವೀಡೀಯೋಗಳನ್ನು ತಮಗೆ ಬೇಕಾದ ಹಾಗೆ ತಿರುಚಿ ರಂಗು ರಂಗಿನ ಕಥೆಗಳನ್ನು ಕಟ್ಟಿ ಇಡೀ ಘಟನೆಯನ್ನೇ ದಿಕ್ಕು ತಪ್ಪಿಸಿದ್ದು ಈಗ ಇತಿಹಾಸ.

 

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group