
ವರದಿಗಾರ (ಜ.01,20): ಕೇಂದ್ರ ಸರಕಾರ ಜಾರಿಗೆ ತಂದಿರುವ ಪೌರತ್ವತಿದ್ದುಪಡಿ ಕಾಯ್ದೆಯ ವಿರುದ್ಧ ದೇಶವ್ಯಾಪಿ ನಡೆಯುತ್ತಿರುವ ಪ್ರತಿಭಟನೆಯ ಭಾಗವಾಗಿ 2019ರ ಡಿಸೆಂಬರ್19 ರಂದು ಮಂಗಳೂರಿನಲ್ಲಿ ನಡೆಯಬೇಕಿದ್ದ ಪ್ರತಿಭಟನೆಯ ಸಂದರ್ಭ ಪೊಲೀಸರು ನಡೆಸಿರುವ ಲಾಠಿ ಚಾರ್ಜ್ ಹಾಗೂ ಗೋಲಿಬಾರ್ ಗೆ ಇಬ್ಬರು ಅಮಾಯಕ ಯುವಕರು ಮೃತಪಟ್ಟಿದ್ದು, ಹಲವಾರು ಜನರು ಗಾಯಗೊಂಡಿದ್ದಾರೆ.
ಈ ಘಟನೆಯು ಪೂರ್ವನಿಯೋಜಿತವಾಗಿ ನಡೆದದ್ದು ಹಾಗೂ ಘಟನೆಗೆ ಮಂಗಳೂರು ಕಮೀಷನರ್ ಡಾ.ಪಿ.ಎಸ್.ಹರ್ಷ ಹಾಗೂ ಪೊಲೀಸ್ ಅಧಿಕಾರಿಗಳು ನೇರ ಕಾರಣ ಎಂದು ಆರೋಪಿಸಿ ಕಾಂಗ್ರೆಸ್ ಹಾಗೂ ಇನ್ನಿತರ ಸಮಾನ ಮನಸ್ಕರು ನೀಡಿರುವ ದೂರಿನ ವಿಚಾರಣೆಯನ್ನು ಮಾನವ ಹಕ್ಕುಗಳ ಆಯೋಗ ಫೆಬ್ರವರಿ 4ಕ್ಕೆ ಮುಂದೂಡಿದೆ.
ಸಾಮಾಜಿಕ ಹೋರಾಟಗಾರ್ತಿ ಲಾವಣ್ಯ ಬಲ್ಲಾಳ್, ಬಂಟ್ವಾಳ ಪುರಸಭೆಯ ಸದಸ್ಯರಾದ ಲುಕ್ಮಾನ್, ಮೂನಿಷ್ ಅಲಿ ಅಹಮದ್, ಕೆಪಿಸಿ ಕಾರ್ಯದರ್ಶಿ ಶಿವರಾಂ ಸೇರಿದಂತೆ ಹಲವರು ಡಿ. 26ರಂದು ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದರು.
ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನ್ಯಾ. ಡಿ.ಎಚ್.ವಘೇಲಾ, ಸದಸ್ಯರಾದ ಕೆ.ಬಿ.ಚೆಂಗಪ್ಪ, ರೂಪಕ್ ಕುಮಾರ್ ದತ್ತ ಅವರನ್ನು ಒಳಗೊಂಡ ಪೀಠ ಇಂದು ಅರ್ಜಿಯ ವಿಚಾರಣೆ ನಡೆಸಿತು. ದೂರುದಾರರು ತಮ್ಮ ಅರ್ಜಿಗೆ ಪೂರಕವಾದ ಕೆಲವು ಹೊಸ ದಾಖಲೆಗಳನ್ನು ಸಲ್ಲಿಸಿದರು. ಇದೇ ವೇಳೆ, ಗೋಲಿಬಾರ್ ನಲ್ಲಿ ಮೃತಪಟ್ಟ ಕುಟುಂಬ ಸದಸ್ಯರು ಪಾಲ್ಗೊಂಡರು. ಇನ್ನು ಘಟನೆ ಕುರಿತು ಪೊಲೀಸ್ ಕಮೀಷನರ್ ಮಾನವ ಹಕ್ಕುಗಳ ಆಯೋಗಕ್ಕೆ ವಿಸ್ತೃತವಾಗಿ ವಿವರಿಸಿ ಪತ್ರ ರವಾನಿಸಿದ್ದಾರೆ.
