ರಾಜ್ಯ ಸುದ್ದಿ

ಸರಕಾರ ನಿಷೇಧದ ಮೂಲಕ ಜನರ ಹಕ್ಕನ್ನು ಹತ್ತಿಕ್ಕುವ ಪ್ರಯತ್ನವು ಮೂರ್ಖತನವಾಗಿದೆ: ಭಾಸ್ಕರ್ ಪ್ರಸಾದ್

‘ಅಕ್ಷರವನ್ನು ಮಾತ್ರ ನಿಷೇಧಿಸಬಹುದೇ ಹೊರತು, ಅದರ ಶಕ್ತಿ ಮತ್ತು ಹೋರಾಟವನ್ನಲ್ಲ’

ಎಸ್.ಡಿ.ಪಿ.ಐ ಮತ್ತು ಪಿಎಫ್ ಐ ಮೇಲಿನ ನಿರಾಧಾರ ಆರೋಪದ ಬಗ್ಗೆ ಪತ್ರಿಕಾಗೋಷ್ಠಿ

ವರದಿಗಾರ (ಡಿ.30): ಸರಕಾರ ನಿಷೇಧದ ಮೂಲಕ ಜನರ ಹಕ್ಕನ್ನು ಹತ್ತಿಕ್ಕುವ ಪ್ರಯತ್ನವು ಮೂರ್ಖತನವಾಗಿದೆ ಎಂದು ದಲಿತ ದಮನಿತ ಹೋರಾಟದ ಮುಖ್ಯಸ್ಥ ಬಿ.ಆರ್. ಭಾಸ್ಕರ್ ಪ್ರಸಾದ್ ಹೇಳಿದ್ದಾರೆ.

ಅವರು ಬೆಂಗಳೂರಿನ ಪತ್ರಿಕಾ ಭವನದಲ್ಲಿ “ಎಸ್.ಡಿ.ಪಿ.ಐ ಮತ್ತು ಪಿಎಫ್ ಐ ಸಂಘಟನೆಗಳ ಮೇಲಿನ ನಿರಾಧಾರ ಆರೋಪ”ಗಳ ಬಗ್ಗೆ ಜಂಟಿಯಾಗಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿ ಮಾತನಾಡುತ್ತಿದ್ದರು.

ಭಾಸ್ಕರ್ ಪ್ರಸಾದ್ ಮಾತನಾಡುತ್ತಾ, ‘ಎಸ್.ಡಿ.ಪಿ.ಐ ಮತ್ತು ಪಿಎಫ್ ಐ ಉದ್ದೇಶ ಹಾಗೂ ಸಂವಿಧಾನ ಬದ್ಧವಾದ ಅವರ ನಡವಳಿಕೆಗಳು ಇದೆಲ್ಲವೂ ಅವರ ಶಕ್ತಿಯಾಗಿದೆ’ ಎಂದು ಹೇಳಿದ್ದಾರೆ.

‘ಸರಕಾರ ಎಸ್.ಡಿ.ಪಿ.ಐ ಎಂಬ ಅಕ್ಷರವನ್ನು ಮಾತ್ರ ನಿಷೇಧಿಸಬಹುದೇ ಹೊರತು ಅದರ ಶಕ್ತಿ ಮತ್ತು ಹೋರಾಟವನ್ನು ಎಂದಿಗೂ ನಿಷೇಧಿಸಲು ಸಾಧ್ಯವಿಲ್ಲ. ಎನ್.ಆರ್.ಸಿ ಮತ್ತು ಸಿಎಎ ವಿರುದ್ಧ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಧ್ವನಿ ಎತ್ತುವ ಸಂಘಟನೆಯಾಗಿದೆ. ಶಾಂತಿಯ ಹೆಸರಿನಲ್ಲಿ ಮತ್ತಷ್ಟು ಜನರನ್ನು ಉದ್ರಿಕ್ತರನ್ನಾಗಿಸಲು ಮಂಗಳೂರು ಪೊಲೀಸರು ಪ್ರಯತ್ನಿಸಿದ್ದಾರೆ’ ಎಂದು ಅವರು ಆರೋಪಿಸಿದರು.

‘ತನ್ನ ಡಿಗ್ರಿ ಪ್ರಮಾಣ ಪತ್ರವನ್ನು ತೋರಿಸಲು ಸಾಧ್ಯವಿಲ್ಲದವರು ದೇಶದ ಮೂಲನಿವಾಸಿಗಳ ಪೌರತ್ವವನ್ನು ಕೇಳುತ್ತಿರುವುದು ವಿಪರ್ಯಾಸ. ಸಂಪೂರ್ಣ ಸರಕಾರ ಒಂದು ಸಮುದಾಯದ ವಿರುದ್ಧವಾಗಿದೆ ಎಂದರೆ ಸರಕಾರವು ನಾಶದ ಕಡೆಗೆ ಹೋಗುತ್ತಿದೆ ಎಂದರ್ಥವಾಗಿದೆ’ ಎಂದು ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ಅವರು ವಾಗ್ದಾಳಿ ನಡೆಸಿದ್ದಾರೆ.

ಹೆಬ್ಬಾಳ ವೆಂಕಟೇಶ್ ಮಾತನಾಡಿ. ‘ಎಸ್.ಡಿ.ಪಿ.ಐ ನ್ನು ನಿಷೇಧ ಮಾಡುವುದಾದರೆ ಈ ದೇಶದಲ್ಲಿರುವ ಎಲ್ಲಾ ಪಕ್ಷಗಳನ್ನು ನಿಷೇಧ ಮಾಡಬೇಕೆಂದು ಅವರು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಮುಹಮ್ಮದ್ ಶಾಕಿಬ್, ಎಸ್.ಡಿ.ಪಿ.ಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ, ಎಜೆ ಖಾನ್ ಮುಂತಾದವರು ಉಪಸ್ಥಿತರಿದ್ದರು.

ಭಾಸ್ಕರ್ ಪ್ರಸಾದ್ ರವರ ವೀಡಿಯೋ ವೀಕ್ಷಿಸಿ:

ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಯನ್ನು ಯಥಾವತ್ತಾಗಿ ಕೆಳಗೆ ನೀಡಲಾಗಿದೆ:

ಸಿಎಎ/ಎನ್‍ಆರ್‍ಸಿ ವಿರುದ್ಧ ದೇಶದಾದ್ಯಂತ ಭುಗಿಲೆದ್ದಿರುವ ಅಭೂತಪೂರ್ವ ಪ್ರತಿಭಟನೆಗಳಿಂದ ಕಂಗೆಟ್ಟ ಬಿಜೆಪಿ ದೇಶದ ಜನತೆಯ ಗಮನವನ್ನು ಬೇರೆಡೆಗೆ ಸೆಳೆಯಲು ಇನ್ನಿಲ್ಲದ ಹತಾಶ ಪ್ರಯತ್ನ ನಡೆಸುತ್ತಿದೆ. ಬಿಜೆಪಿ ಸರಕಾರವಿರುವ ರಾಜ್ಯಗಳಲ್ಲಿ ಅಲ್ಲಿನ ರಾಜ್ಯ ಸರಕಾರ ಪೊಲೀಸರನ್ನು ಉಪಯೋಗಿಸಿಕೊಂಡು ಪ್ರತಿಭಟನಾಕಾರರ ಮೇಲೆ ಅಮಾನುಷ ದೌರ್ಜನ್ಯ ನಡೆಸಿವೆ. ಕರ್ನಾಟಕ, ಉತ್ತರ ಪ್ರದೇಶ ಹಾಗೂ ಅಸ್ಸಾಂ ರಾಜ್ಯಗಳಲ್ಲಿ ಒಟ್ಟು 31 ಜೀವ ಬಲಿಯಾಗಿದ್ದು ನೂರಾರು ಮಂದಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗಳಲ್ಲಿ ನರಳುವಂತೆ ಮಾಡಿವೆ.

ಕರ್ನಾಟಕ ಸೇರಿದಂತೆ ದೇಶದೆಲ್ಲೆಡೆ ನಿರಂತರವಾಗಿ ವ್ಯಕ್ತವಾಗುತ್ತಿರುವ ಪ್ರತಿಭಟನೆಗಳನ್ನು ಕಂಡು ವಿಚಲಿತಗೊಂಡಿರುವ ಕರ್ನಾಟಕ ರಾಜ್ಯದ ಬಿಜೆಪಿ ಸರಕಾರ ಇದೀಗ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಎಸ್‍ಡಿಪಿಐ ಪಕ್ಷ ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‍ಐ) ಸಂಘಟನೆಯನ್ನು ನಿಷೇಧಿಸಬೇಕೆಂದು ಹೇಳಿಕೆ ನೀಡುತ್ತಿರುವುದು ಖಂಡನೀಯ. ಪೊಲೀಸರ ಶೋಚನೀಯ ವೈಫಲ್ಯ, ಕ್ರೌರ್ಯ ಮತ್ತು ಪಕ್ಷಪಾತೀಯ ಮನೋಭಾವನೆ, ಉತ್ತರ ಪ್ರದೇಶ ಸರಕಾರದ ಸೇಡು ಹಾಗೂ ದ್ವೇಷಭರಿತ ಷಡ್ಯಂತ್ರಗಳೇ ಈ ಮೂರು ರಾಜ್ಯಗಳಲ್ಲಿ ಹಿಂಸೆ ತಾಂಡವಾಡಲು ಕಾರಣವೆನ್ನುವುದು ಸಾಕ್ಷ್ಯಗಳ ಸಮೇತ ಸಾಬೀತಾಗಿವೆ. ಕರ್ನಾಟಕ ರಾಜ್ಯದ ಕೆಲ ಬಿಜೆಪಿ ಸಚಿವರು, ಶಾಸಕರು ಹಾಗೂ ಸಂಸದರು ಹಿಂಸೆಗೆ ಪ್ರಚೋದನೆ ನೀಡುವ ಹಾಗೂ ದ್ವೇಷ ಹುಟ್ಟಿಸುವ ಪ್ರಚೋದನಾತ್ಮಕ ಹೇಳಿಕೆಗಳನ್ನು ನಿರಂತರವಾಗಿ ನೀಡುತ್ತಿದ್ದಾರೆ. ಅಂತಹವರ ಮೇಲೆ ಕರ್ನಾಟಕ ಸರಕಾರ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ. ಎಸ್‍ಡಿಪಿಐ ಪಕ್ಷ ಹಾಗೂ ಪಿಎಫ್‍ಐ ಸಂಘಟನೆಯ ಮೇಲೆ ನಿರಾಧಾರ ಹಾಗೂ ಬಾಲಿಶ ಆರೋಪಗಳನ್ನು ಹಾಗೂ ಅಪಪ್ರಚಾರಗಳನ್ನು ಮಾಡುತ್ತಿರುವ ರಾಜ್ಯ ಸರಕಾರದ ನಿಲುವನ್ನು ವಿರೋಧಿಸುತ್ತೇವೆ. ಈ ಬಗ್ಗೆ ಸೂಕ್ತ ಕಾನೂನು ಹೋರಾಟವನ್ನು ನಡೆಸಲಾಗುವುದು.

ಸಿಎಎ ಮತ್ತು ಎನ್‍ಆರ್‍ಸಿ ವಿರುದ್ಧ ಪ್ರತಿಭಟಿಸುತ್ತಿದ್ದ ಜನರ ಮೇಲೆ ಮಂಗಳೂರಿನಲ್ಲಿ ಪೊಲೀಸರು ನಡೆಸಿದ ಲಾಠಿಚಾರ್ಜ್ ಹಾಗೂ ಗೋಲಿಬಾರ್‍ನಲ್ಲಿ ಇಬ್ಬರು ಜೀವ ಕಳೆದುಕೊಂಡಿದ್ದು ಹಲವಾರು ಜನರು ಗಾಯಗೊಂಡಿರುವ ಘಟನೆ ನಾಗರಿಕ ಸಮಾಜವನ್ನು ತೀವ್ರವಾಗಿ ಘಾಸಿಗೊಳಿಸಿದೆ.

ಸುಮಾರು 100-150ರಷ್ಟು ಪ್ರತಿಭಟನಾಕಾರರ ಮೇಲೆ ವಿನಾಕಾರಣ ದೌರ್ಜನ್ಯ ನಡೆಸಿದ ಪೊಲೀಸರ ಕ್ರಮ ಎಲ್ಲಾ ಅನಾಹುತಗಳಿಗೆ ಕಾರಣ. ಗಂಭೀರ ಗಾಯಗೊಂಡ ಹಲವು ಮಂದಿ ಮಂಗಳೂರು ನಗರದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯೊಳಗೆ ಆಶ್ರುವಾಯು ಸಿಡಿಸಿರುವುದು ಹಾಗೂ ಪೊಲೀಸರು ಆಸ್ಪತ್ರೆಯ ಐಸಿಯು ಘಟಕದ ಬಾಗಿಲನ್ನು ಒಡೆದು ಒಳ ನುಗ್ಗಿ ಅಲ್ಲಿದ್ದ ವೈದ್ಯರು, ನರ್ಸ್‍ಗಳಿಗೂ ಲಾಠಿ ಬೀಸಿರುವುದು ಕೂಡಾ ಮಂಗಳೂರು ಪೊಲೀಸರ ಮನಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ಅಲ್ಲಿನ ಪೊಲೀಸರ ಕ್ರೌರ್ಯ ಮನೋಸ್ಥಿತಿ ಎಷ್ಟು ಮಿತಿಮೀರಿದೆ ಎನ್ನುವುದಕ್ಕೆ ಗಲಭೆಗೆ ಸಂಬಂಧಪಟ್ಟ ಕೆಲವು ವೀಡಿಯೋ ದೃಶ್ಯಗಳೇ ಸಾಕ್ಷಿ.

ಆದರೆ ಇದುವರೆಗೂ ಪೊಲೀಸ್ ಅಧಿಕಾರಿಗಳ ಮೇಲೆ ಯಾವುದೇ ಕ್ರಮಗಳನ್ನು ರಾಜ್ಯ ಸರಕಾರ ಕೈಗೊಳ್ಳದಿರುವುದು ದೊಡ್ಡ ದುರಂತವಾಗಿದೆ. ಕಾರಣವಿಲ್ಲದೆ ಲಾಠಿಚಾರ್ಜ್ ಹಾಗೂ ಗೋಲಿಬಾರ್ ನಡೆಸಿದ ಪೊಲೀಸ್ ಅಧಿಕಾರಿಗಳು ಈಗಲೂ ತಮ್ಮ ಸ್ಥಾನದಲ್ಲಿ ಮುಂದುವರಿಯುತ್ತಿರುವುದು ಹಾಗೂ ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಿರುವುದು ಅತ್ಯಂತ ಖಂಡನೀಯ. ಇದೀಗ ಸರಕಾರ ಇಡೀ ಪ್ರಕರಣವನ್ನು ಸಿಐಡಿ ಮತ್ತು ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶ ನೀಡಿದ್ದು ಇದರಿಂದ ಕಿಂಚಿತ್ತೂ ನ್ಯಾಯ ಸಿಗುವ ಭರವಸೆ ಉಳಿದಿಲ್ಲ. ಆದುದರಿಂದ ರಾಜ್ಯ ಸರಕಾರ ತಪ್ಪಿತಸ್ಥ ಅಧಿಕಾರಿಗಳನ್ನು ತಕ್ಷಣವೇ ಹುದ್ದೆಯಿಂದ ಅಮಾನತುಗೊಳಿಸಬೇಕು ಹಾಗೂ ಕರ್ನಾಟಕ ಹೈಕೋರ್ಟ್‍ನ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು.

ಈ ನಡುವೆ ರಾಜ್ಯ ಬಿಜೆಪಿ ಸರಕಾರವು ಮಂಗಳೂರಿನಲ್ಲಿ ಪೊಲೀಸ್ ಗೋಲಿಬಾರ್‍ನಲ್ಲಿ ಮೃತಪಟ್ಟ ಕುಟುಂಬಕ್ಕೆ ಘೋಷಿಸಿದ್ದ ಪರಿಹಾರವನ್ನು ವಾಪಾಸ್ ಪಡೆದಿರುವುದು ಅತ್ಯಂತ ನಾಚಿಕೆಗೇಡು ಮಾತ್ರವಲ್ಲ ರಾಜ್ಯಕ್ಕೆ ಮಾಡಿದ ಅಪಮಾನವಾಗಿದೆ.

ದೇಶದಾದ್ಯಂತ ಸಿಎಎ/ಎನ್‍ಆರ್‍ಸಿ ವಿರುದ್ಧ ಪ್ರತಿಭಟನೆಗಳು ವ್ಯಾಪಕವಾಗಿ ನಿರಂತರವಾಗಿ ನಡೆಯುತ್ತಿದೆ. ಆದರೆ ಬಿಜೆಪಿ ಸರಕಾರಗಳಿರುವ ರಾಜ್ಯಗಳಲ್ಲಿ ಮಾತ್ರ ಹಿಂಸಾ ಕೃತ್ಯಗಳು ಹಾಗೂ ಪೊಲೀಸ್ ದೌರ್ಜನ್ಯಗಳು ಭೀಕರವಾಗಿ ನಡೆಯುತ್ತಿವೆ. ಕರ್ನಾಟಕ ಮತ್ತು ಉತ್ತರ ಪ್ರದೇಶಗಳಲ್ಲಿ ಪ್ರತಿಭಟನಾಕಾರರ ಮೇಲೆ ಮಹಿಳೆಯರು, ವಿದ್ಯಾರ್ಥಿಗಳು, ವೃದ್ಧರು, ಮಕ್ಕಳೆನ್ನದೆ ನಡೆಸಿದ ಪೊಲೀಸರ ದೌರ್ಜನ್ಯ ಅತ್ಯಂತ ಭಯಾನಕವಾಗಿದೆ. ಬಿಜೆಪಿ ಸರಕಾರಗಳಿರುವ ಮೂರು ರಾಜ್ಯಗಳಾದ ಉತ್ತರ ಪ್ರದೇಶದಲ್ಲಿ 23 ಜನರನ್ನು, ಅಸ್ಸಾಮ್‍ನಲ್ಲಿ 6 ಜನರನ್ನು ಹಾಗೂ ಕರ್ನಾಟಕದಲ್ಲಿ ಇಬ್ಬರನ್ನು ಪೊಲೀಸರು ಕೊಂದಿದ್ದು, ನೂರಾರು ಜನರು ಆಸ್ಪತ್ರೆಯಲ್ಲಿ ನರಳುತ್ತಿದ್ದಾರೆ. ಬಿಜೆಪಿಯೇತರ ಸರಕಾರವಿರುವ ಇತರ ರಾಜ್ಯಗಳಲ್ಲಿ ಹಿಂಸಾ ಸನ್ನಿವೇಶಗಳು ಉದ್ಭವಾಗದಿರುವುದು ಹಾಗೂ ಬಿಜೆಪಿ ಸರಕಾರಗಳಿರುವ ರಾಜ್ಯಗಳಲ್ಲಿ ಭೀಕರ ಕ್ರೌರ್ಯ ಮರೆದಿರುವುದು ಹಿಂಸಾ ಕೃತ್ಯಗಳಲ್ಲಿ ಬಿಜೆಪಿ ಸರಕಾರ ಹಾಗೂ ಪೊಲೀಸರ ನೇರ ಕೈವಾಡವನ್ನು ವ್ಯಕ್ತಪಡಿಸುತ್ತಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಪ್ರತಿಭಟನಾಕಾರರ ವಿರುದ್ಧ “ಪ್ರತೀಕಾರ” (ಬದ್‍ಲಾ) ನಡೆಸಲಾಗುವುದು ಎಂದಿರುವುದು ಪ್ರತಿಭಟನಾಕಾರರ ಮೇಲೆ ಪೊಲೀಸರು ಪಿಸ್ತೂಲ್‍ಗಳಿಂದ ಗುಂಡು ಹೊಡೆಯುವುದು, ಪೊಲೀಸರು ಗುಂಪು ಗುಂಪಾಗಿ ಮನೆಗಳಿಗೆ ನುಗ್ಗಿ ದಾಂಧಲೆ ಎಬ್ಬಿಸಿ ಮಹಿಳೆಯರು, ಮಕ್ಕಳು, ವೃದ್ಧರ ಮೇಲೆ ಹಲ್ಲೆ ನಡೆಸಿರುವುದು ಮುಂತಾದವುಗಳ ವೀಡಿಯೋ ಚಿತ್ರಣಗಳು ಬಿಜೆಪಿ ಸರಕಾರವಿರುವ ರಾಜ್ಯಗಳ ಕ್ರೌರ್ಯತೆಗೆ ಸಾಕ್ಷಿಯಾಗಿದೆ.

ಬಿಜೆಪಿ ಸರಕಾರವಿರುವ ರಾಜ್ಯಗಳಲ್ಲಿ ಈ ತರಹದ ಭಯೋತ್ಪಾದನಾ ಸನ್ನಿವೇಶ ನಡೆಯುವುದಕ್ಕೆ ಆಯಾಯ ಬಿಜೆಪಿ ಸರಕಾರಗಳು ಹಾಗೂ ಪೊಲೀಸರೇ ಕಾರಣ. ಈ ಎಲ್ಲಾ ಗಲಭೆಗಳು ಬಿಜೆಪಿ ಸರಕಾರದ ಮತ್ತು ಪೊಲೀಸರ ಪೂರ್ವಯೋಜಿತ ಸಂಚು ಹಾಗೂ ಕೋಮುವಾದಿ ಮನೋಭಾವನೆಯೇ ಕಾರಣವಾಗಿದೆ. ಹಿಂಸೆ ಹಾಗೂ ಬಲಪ್ರಯೋಗದಿಂದ ಪ್ರತಿಭಟನೆಗಳನ್ನು ಹತ್ತಿಕ್ಕಬಹುದು ಎಂದು ಯೋಚಿಸಿರುವ ಇಂತಹ ಸರಕಾರಗಳು ಪ್ರಜಾಪ್ರಭುತ್ವಕ್ಕೆ ಮಾತ್ರವಲ್ಲ ನಮ್ಮ ದೇಶದ ಭವಿಷ್ಯಕ್ಕೆ ಮಾರಕವಾಗಿದೆ.

ಕೇಂದ್ರ ಸರಕಾರ ಇದೀಗ ಎನ್‍ಪಿಆರ್‍ನ್ನು ನಡೆಸಲು ಹೊರಟಿರುವುದನ್ನು ವಿರೋಧಿಸುತ್ತಿದ್ದೇವೆ. ಗೃಹ ಮಂತ್ರಿ ಅಮಿತ್ ಶಾ ಹೇಳಿದ ಹಾಗೆ ಇದೊಂದು ಎನ್‍ಆರ್‍ಸಿಯ ಮೊದಲ ಹಂತವಾಗಿದೆ. ದೇಶವನ್ನು ಧರ್ಮದ ಆಧಾರದಲ್ಲಿ ವಿಭಜಿಸುವ ಯಾವುದೇ ಕ್ರಮಗಳನ್ನು ನಾಗರಿಕ ಜನತೆ ಒಕ್ಕೊರಲಿನಿಂದ ಐಕ್ಯರಾಗಿ ವಿರೋಧಿಸುತ್ತಿದೆ. ನಾವೆಲ್ಲರೂ ಸಿಎಎ/ಎನ್‍ಆರ್‍ಸಿ/ಎನ್‍ಪಿಆರ್ ನ್ನು ಬಹಿಷ್ಕರಿಸುತ್ತೇವೆ ಹಾಗೂ ತಿರಸ್ಕರಿಸುತ್ತೇವೆ. ಈ ಎಲ್ಲಾ ನಿರ್ಧಾರ/ಕಾನೂನುಗಳನ್ನು ಹಿಂಪಡೆಯುವ ತನಕ ನಾಗರಿಕ ಸಮಾಜದ ಹೋರಾಟ ನಿರಂತರವಾಗಿ ಮುಂದುವರಿಯಲಿದೆ.

 

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group