
‘ನನ್ನ ಜೀವವನ್ನಾದರೂ ನೀಡುತ್ತೇನೆ. ಆದರೆ ಬಂಧನ ಕೇಂದ್ರಗಳನ್ನು ನಿರ್ಮಿಸಲು ಬಿಡುವುದಿಲ್ಲ’
ವರದಿಗಾರ (ಡಿ.28,19): ‘ಕೇಂದ್ರ ಸರಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬಂಗಾಳದಲ್ಲಿ ಅನುಷ್ಠಾನಗೊಳಿಸುವುದಿಲ್ಲ. ಹಾಗೂ ನಾನು ಸತ್ತರೂ ಇಲ್ಲಿ ಅಕ್ರಮ ವಲಸಿಗರ ಬಂಧನ ಕೇಂದ್ರಗಳನ್ನು ನಿರ್ಮಿಸಲು ಬಿಜೆಪಿಗೆ ಬಿಡುವುದಿಲ್ಲ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ ಸ್ಪಷ್ಟವಾಗಿ ತಿಳಿಸಿದ್ದಾರೆ.
ಅವರು ಇಂಡೊ–ಬಾಂಗ್ಲಾ ಗಡಿಯಲ್ಲಿನ 24 ಉತ್ತರ ಪರಗಣ ಜಿಲ್ಲೆಯಲ್ಲಿ ಮೇಳವೊಂದನ್ನು ಉದ್ಘಾಟಿಸಿ ಮಾತನಾಡುತ್ತಾ, ‘ನಾನು ಎಲ್ಲಿಯವರೆಗೂ ಬದುಕಿರುತ್ತೇನೊ ಅಲ್ಲಿಯವರೆಗೆ ಬಂಗಾಳದಲ್ಲಿ ಸಿಎಎ ಅನುಷ್ಠಾನವಾಗುವುದಿಲ್ಲ. ಯಾರಿಗೂ ಈ ದೇಶವನ್ನು ಮತ್ತು ರಾಜ್ಯವನ್ನು ಬಿಟ್ಟು ಹೋಗುವ ಸ್ಥಿತಿ ಬರುವುದಿಲ್ಲ’ ಎಂದು ಜನತೆಗೆ ಭರವಸೆ ನೀಡಿದ್ದಾರೆ.
‘ಬಂಧನ ಕೇಂದ್ರಗಳನ್ನು ನಿರ್ಮಿಸುವುದಾಗಿ ಅವರು ಹೇಳುತ್ತಿದ್ದಾರೆ. ಇಲ್ಲಿ ಅಧಿಕಾರದಲ್ಲಿರುವುದು ಯಾರು? ನಾವು. ನನ್ನ ಜೀವವನ್ನಾದರೂ ನೀಡುತ್ತೇನೆ ಹೊರತು ಬಂಧನ ಕೇಂದ್ರಗಳನ್ನು ನಿರ್ಮಿಸಲು ಬಿಡುವುದಿಲ್ಲ’ ಎಂದು ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ.
‘ಬಂಧನ ಕೇಂದ್ರಗಳನ್ನು ನಿರ್ಮಿಸುವುದು ರಾಜ್ಯ ಸರ್ಕಾರದ ಕೆಲಸ. ಅವರು ಅಸ್ಸಾಂನಲ್ಲಿ ಅದನ್ನು ಮಾಡಬಹುದು. ಏಕೆಂದರೆ ಅಲ್ಲಿ ಬಿಜೆಪಿ ಸರ್ಕಾರವೇ ಇದೆ. ಅವರು ಚುನಾಯಿತ ಸರ್ಕಾರ ಎಂದರೆ, ನಮ್ಮದೂ ಚುನಾಯಿತ ಸರ್ಕಾರವೇ. ದೆಹಲಿಯಲ್ಲಿ ಅವರಿಗೆ ಹಕ್ಕಿದ್ದರೆ, ಇಲ್ಲಿ ನಮಗೆ ಹಕ್ಕಿದೆ’ ಎಂದು ಹೇಳಿದರು.
‘ಈ ಕಾಯ್ದೆ ಏನು ಹೇಳುತ್ತದೆ ಗೊತ್ತಾ. ನೀವು ಭಾರತೀಯರಾಗಿದ್ದಿರಿ. ಈಗ ನೀವು ಹೊರಗಿನವರು ಮತ್ತು ಭಾರತದ ಪೌರತ್ವ ಪಡೆಯಲು ಅರ್ಜಿ ಸಲ್ಲಿಸಬೇಕು. ಪೌರತ್ವ ನೀಡಬೇಕೆ, ಬೇಡವೇ ಎನ್ನುವುದನ್ನು ಅವರು ನಿರ್ಧರಿಸುತ್ತಾರಂತೆ’ ಎಂದು ಕಾಯ್ದೆ ಬಗ್ಗೆ ತಿಳಿಸಲು ಪ್ರಯತ್ನಿಸಿದ್ದಾರೆ.
